ಮಣ್ಣು ಕುಸಿದು ಇಂಜಿನಿಯರ್ ಸಾವು
Team Udayavani, Oct 25, 2018, 10:56 AM IST
ಬೆಂಗಳೂರು: ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಂಜಿನಿಯರ್ ಸ್ಥಳದಲ್ಲೇ ಮೃತಪಟ್ಟಿದ್ದು, ಕೂಲಿ ಕಾರ್ಮಿಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಜಕ್ಕೂರಿನ ನವ್ಯ ಲೇಔಟ್‌ನಲ್ಲಿ ಬುಧವಾರ ಅಪರಾಹ್ನ ನಡೆದಿದೆ. ಶಿಡ್ಲಘಟ್ಟದ ಸೋಮನಹಳ್ಳಿ ಮೂಲದ ಮಧು
ಸೂದನ್ (24) ಮೃತ ಇಂಜಿನಿಯರ್. ರಾಯಚೂರು ಮೂಲದ ನಬೀಸಾಬ್ (55) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಜಕ್ಕೂರಿನ ನವ್ಯ ಲೇಔಟ್‌ನಲ್ಲಿ ಮನೆ ನಿರ್ಮಾಣ ಕಾಮಗಾರಿ ವೇಳೆ ಸಂಪ್ ಹಾಗೂ ಪಿಲ್ಲರ್ ಅಳವಡಿಸುವ ಕುರಿತು ಅಳತೆ ಮಾಡುವಾಗ ದುರ್ಘಟನೆ ನಡೆದಿದೆ. ಈ ಸಂಬಂಧ ನಿವೇಶನ ಮಾಲೀಕ ಚಂದ್ರಶೇಖರ್ ರೆಡ್ಡಿ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಮೃತಹಳ್ಳಿ ಠಾಣೆ ಪೊಲೀಸರು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಸೋಮನಹಳ್ಳಿ ನಿವಾಸಿ ರಾಮಚಂದ್ರ ರೆಡ್ಡಿ ಹಾಗೂ ಪ್ರಭಾವತಿ ದಂಪತಿಯ ದ್ವಿತೀಯ ಪುತ್ರ ಮಧುಸೂದನ್, ಸಿವಿಲ್ ಇಂಜಿನಿಯರಿಂಗ್ ಮುಗಿಸಿ, ಕೆಲಸ ಅರಸಿ ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದು, ಕೋಗಿಲು ಕ್ರಾಸ್ ಬಳಿ ಸ್ನೇಹಿತರ ಜತೆ ವಾಸವಾಗಿದ್ದ. ಈ ವೇಳೆ ಸ್ನೇಹಿತರೊಬ್ಬರ ಮೂಲಕ 25 ದಿನಗಳ ಹಿಂದಷ್ಟೇ ಚಂದ್ರಶೇಖರ್ ರೆಡ್ಡಿ ಅವರ ಮನೆ ನಿರ್ಮಾಣದ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ.
ಕಟ್ಟಡ ನಿರ್ಮಾಣಕ್ಕೆ ಪಿಲ್ಲರ್ ಅಳವಡಿಸಲು ಗುಂಡಿ ತೆಗೆಯಲಾಗಿತ್ತು. ಬುಧವಾರ ಮಧ್ಯಾಹ್ನ 12 ಗಂಟೆಗೆ ಸ್ಥಳಕ್ಕೆ ಬಂದ ಮಧುಸೂದನ್ ಹಾಗೂ ಇತರೆ ನಾಲ್ವರು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಮೂವರು ಕಾರ್ಮಿಕರಿಗೆ ಟೀ ಕುಡಿದು ಬರುವಂತೆ ಸೂಚಿಸಿದ ಮಧುಸೂದನ್, ಕಾರ್ಮಿಕ ನಬೀಸಾಬ್ ಜತೆ ಸೇರಿ ಸಂಪ್ ಹಾಗೂ ಪಿಲ್ಲರ್ ಅಳವಡಿಸುವ ಕುರಿತು ಅಳತೆ ಮಾಡುತ್ತಿದ್ದರು. ಈ ವೇಳೆ ನಿವೇಶನದ ಎಡಭಾಗದ ಸುಮಾರು 10 ಅಡಿ ಎತ್ತರದ ಮಣ್ಣು ಕುಸಿದು ಮಧು ಹಾಗೂ ನಬೀಸಾಬ್ ಮೇಲೆ ಬಿದ್ದಿದೆ. ಇದನ್ನು ಗಮನಿಸಿದ ಮಹಿಳೆಯೊಬ್ಬರು ಜೋರಾಗಿ ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿದ್ದು, ಅಗ್ನಿಶಾಮಕ ದಳಕ್ಕೂ ದೂರು ನೀಡಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಒಂದು ಗಂಟೆ ಕಾರ್ಯಾಚರಣೆ ನಡೆಸಿ ಮಣ್ಣು ತೆಗೆದರು. ಅಷ್ಟರಲ್ಲಿ ಮಧುಸೂದನ್ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ ಅವಶೇಷಗಳಡಿ ಸಿಲುಕಿ ಬೆರಳುಗಳನ್ನು ತೋರಿಸುತ್ತಾ ರಕ್ಷಣೆ ಕೋರುತ್ತಿದ್ದ ನಬೀಸಾಬ್‌ರನ್ನು ರಕ್ಷಿಸಲಾಗಿದ್ದು, ಸೊಂಟ ಹಾಗೂ ಕಾಲು ಮುರಿದಿದೆ ಎಂದು ಪೊಲೀಸರು ಹೇಳಿದರು.
ಇಂಜಿನಿಯರಿಂಗ್ ಓದಲುಶಿಕ್ಷಣ ಸಾಲ ಪಡೆದಿದ್ದ ಮಧು ರೈತಾಪಿ ಕುಟುಂಬದಲ್ಲಿ ಜನಿಸಿದ್ದ ಮಧುಸೂದನ್ ನಾಲ್ಕು ವರ್ಷದ ಇಂಜಿನಿಯರ್ ಪದವಿ ವ್ಯಾಸಂಗ ಮಾಡಲು ಶಿಕ್ಷಣ ಸಾಲ ಪಡೆದುಕೊಂಡಿದ್ದ. ವರ್ಷಕ್ಕೆ 50 ಸಾವಿರ ರೂ. ಎಂಬಂತೆ ನಾಲ್ಕು ವರ್ಷಕ್ಕೆ 2 ಲಕ್ಷ ರೂ. ಸಾಲ ಪಡೆದುಕೊಂಡಿದ್ದ. ಇದನ್ನು ತೀರಿಸುವುದರ ಜತೆಗೆ ಮನೆಯ ಕಷ್ಟಕ್ಕೆ ಸ್ಪಂದಿಸಲು ಕಳೆದ ಕೆಲ ತಿಂಗಳಿಂದ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ. 25 ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ಎಂದು ಅವರ ಸಂಬಂಧಿಕರು ಹೇಳಿದರು.
ಸುರಕ್ಷತಾ ಕ್ರಮ ಕೈಗೊಳ್ಳದ ಮಾಲೀಕ ನಿವೇಶನ ಮಾಲೀಕ ಚಂದ್ರಶೇಖರ್ ರೆಡ್ಡಿ ಮನೆ ನಿರ್ಮಾಣದ ವೇಳೆ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಕೆಲಸ ಮಾಡುವ ಕಾರ್ಮಿಕರಿಗೆ ರಕ್ಷಣಾ ಜಾಕೆಟ್ ಆಗಲಿ, ಇತರೆ ಯಾವುದೇ ಸುರಕ್ಷತಾ ಉಪಕರಣಗಳನ್ನು ಕೊಟ್ಟಿಲ್ಲ. ಅವರ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿದೆ ಎಂದು ಮೃತ ಇಂಜಿನಿಯರ್ ಮಧುಸೂದನ್ ಸಂಬಂಧಿಕರು ಹಾಗೂ ಸ್ನೇಹಿತರು ಆರೋಪಿಸಿದರು.
ಮಕ್ಕಳನ್ನು ಚೆನ್ನಾಗಿ ಓದಿಸೋಕೆ ಬೆಂಗಳೂರಿಗೆ ಬಂದಿದ್ವಿ ರಾಯಚೂರು ಮೂಲದ ನಬೀಸಾಬ್‌ಗ ವಿವಾಹವಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಘಟನೆಯಿಂದ ಇಡೀ ಕುಟುಂಬ ಕಂಗಾಲಾಗಿದ್ದು, ನನ್ನ ಸಹೋದರನ ಸೊಂಟ ಹಾಗೂ ಕಾಲು ಮುರಿದಿದೆ. ಆತನ ಮುಂದಿನ ಜೀವನ ಹೇಗೆ ಎಂಬುದನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ಇಬ್ಬರು ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ನಮ್ಮಂತೆ ಅವರು ಕೂಲಿ ಕಾರ್ಮಿಕರಾಗಬಾರದು ಎಂಬ ಉದ್ದೇಶದಿಂದ ರಾಯಚೂರಿನಿಂದ ಬೆಂಗಳೂರಿಗೆ ಬಂದು ಜಕ್ಕೂರಿನ ಮಸೀದಿ ಬಳಿ ವಾಸವಾಗಿದ್ದೇವೆ. ನನ್ನ ಸಹೋದರನಿಗೆ ನ್ಯಾಯ ಸಿಗಬೇಕು ಎಂದು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಬೀಸಾಬ್ ಸಹೋದರಿ ಮೀರಮ್ಮ ಸಾಬ್ ಒತ್ತಾಯಿಸಿದರು.
12 ಗಂಟೆ ಸುಮಾರಿಗೆ ಕಾಮಗಾರಿ ವೇಳೆ ಹಿಂಭಾಗದಿಂದ ಸುಮಾರು 10 ಅಡಿ ಎತ್ತರದಿಂದ ಮಣ್ಣು ಕುಸಿಯಿತು. ಕೂಡಲೇ ಸ್ಥಳೀಯರು, ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆಯಲ್ಲಿ ತೊಡಗಿದರು. ಆದರೆ, ಭಾರೀ ಮಣ್ಣು ಇಂಜಿನಿಯರ್ ಮೇಲೆ ಬಿದ್ದಿದ್ದರಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಸಾಧ್ಯವಾಗದೆ ಮೃತಪಟ್ಟರು.
ರಾಜು, ಪ್ರತ್ಯಕ್ಷದರ್ಶಿ
ಕೆಲ ದಿನಗಳ ಹಿಂದಷ್ಟೇ ಮೊಹರಂ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದೆವು. ಬುಧವಾರ ಬೆಳಗ್ಗೆ ಎಂದಿನಂತೆ ನಾವೆಲ್ಲರೂ ಕೆಲಸಕ್ಕೆ ಹೋಗಿದ್ದೆವು. ಆದರೆ, ಸಹೋದರ ನಬೀಸಾಬ್ ಕೆಲಸಕ್ಕೆ ಹೋಗುವುದಾಗಿ ನಮಗೆ ಹೇಳಿಯೇ ಇಲ್ಲ. 11 ಗಂಟೆ ಸುಮಾರಿಗೆ ಯಾರೋ ಕರೆದರು ಎಂದು
ಕೆಲಸಕ್ಕೆ ಹೋಗಿದ್ದ.
ಮೀರಮ್ಮ ಸಾಬ್, ನಭೀಸಾಬ್ ಸಹೋದರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.