ರಾಜಕಾಲುವೆಗೆ ಬಿದ್ದು ಮೂರು ವರ್ಷದ ಮಗು ಸಾವು
Team Udayavani, Jan 10, 2018, 12:02 PM IST
ಬೆಂಗಳೂರು: ದೊಡ್ಡಬೊಮ್ಮಸಂದ್ರ ಬಳಿಯಿರುವ ರಾಜಕಾಲುವೆಗೆ ಮೂರು ವರ್ಷದ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಕಲಬುರಗಿ ಮೂಲದ ಸಾಬಣ್ಣ ಹಾಗೂ ಲಕ್ಷ್ಮೀ ದಂಪತಿ ಪುತ್ರಿ ತನುಶ್ರೀ (3) ಮೃತ ಮಗು. ಬೆಳಗ್ಗೆ ಪೋಷಕರು ಕೆಲಸಕ್ಕೆ ತೆರಳಿದ್ದಾಗ ತನುಶ್ರೀ ರಾಜಕಾಲುವೆ ಬಳಿ ಆಟವಾಡುತ್ತಿದ್ದಳು. ಈ ವೇಳೆ ಆಯತಪ್ಪಿ ರಾಜಕಾಲುವೆಗೆ ಬಿದ್ದು ಮೃತಪಟ್ಟಿದ್ದಾಳೆ.
ಕಲಬುರಗಿ ಮೂಲದ ಸಾಬಣ್ಣ ಹಾಗೂ ಲಕ್ಷ್ಮೀ ದಂಪತಿ ಐದಾರು ವರ್ಷಗಳಿಂದ ದೊಡ್ಡಬೊಮ್ಮಸಂದ್ರದ ಬಳಿಯ ರಾಜಕಾಲುವೆ ಪಕ್ಕದಲ್ಲಿ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ದಂಪತಿ ಗಾರೆ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪುತ್ರಿ ತನುಶ್ರೀಯನ್ನು ಶೆಡ್‌ನಲ್ಲಿ ಬಿಟ್ಟು ತೆರಳಿದ್ದರು. ಆಟವಾಡುತ್ತಿದ್ದ ಮಗು ರಾಜಕಾಲುವೆ ಬಳಿ ಬಂದಾಗ ಆಯ ತಪ್ಪಿ ಬಿದ್ದಿದ್ದಾಳೆ.
ಹುಡುಕಾಟ: ಈ ಘಟನೆ ನಡೆದು ಒಂದು ಗಂಟೆ ಬಳಿಕ ಶೆಡ್ ಬಳಿ ಬಂದ ಸಾಬಣ್ಣ ಬಾಮೈದ ಶೆಡ್‌ನಲ್ಲಿ ತನುಶ್ರೀ ಇಲ್ಲದ್ದನ್ನು ಕಂಡು ಗಾಬರಿಯಾಗಿ ರಾಜಕಾಲುವೆ ಬಳಿ ಹುಡುಕಾಟ ನಡೆಸಿದ್ದಾರೆ. ಆಗ ರಾಜಕಾಲುವೆಯಲ್ಲಿ ಬಿದ್ದಿರುವುದು ಕಂಡ ಕೂಡಲೇ ಸ್ಥಳೀಯರ ನೆರವಿನೊಂದಿಗೆ ಮಗುವನ್ನು ಕಾಲುವೆಯಿಂದ ಹೊರ ತೆಗೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ, ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದನ್ನು ದೃಢೀಕರಿಸಿದ್ದಾರೆ. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ತನುಶ್ರೀ ಮರಣೋತ್ತರ ಪರೀಕ್ಷೆ ಮುಗಿಸಿ ಪೋಷಕರಿಗೆ ಮೃತ ದೇಹ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಘಟನೆ ಸಂಬಂಧ ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ಹಾಗೂ ಅಕ್ರಮವಾಗಿ ಶೆಡ್ ನಿರ್ಮಿಸಲು ಅವಕಾಶ ಕೊಟ್ಟಿರುವ ಗೋಪಾಲಕೃಷ್ಣ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ವಿದ್ಯಾರಣ್ಯಪುರ ಠಾಣೆ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಬಿಬಿಎಂಪಿ ಮೇಯರ್ ಸಂಪತ್‌ರಾಜ್ ಹಾಗೂ ಯಲಹಂಕ ಜೋನಲ್ ಎಂಜಿನಿಯರ್ ಪರಮೇಶ್ವರ್ ಭೇಟಿ ನೀಡಿದ್ದಾರೆ. ಇದೇ ವೇಳೆ ಮೃತ ತನುಶ್ರೀ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಘೋಷಿಸಿದ್ದಾರೆ.
ಅಕ್ರಮ ಶೆಡ್‌ಗಳು: ರಾಜಕಾಲುವೆ ಬಳಿ ನೆರೆ ಜಿಲ್ಲೆಗಳಿಂದ ವಲಸೆ ಬಂದಿರುವ ಹತ್ತಾರು ಕುಟುಂಬಗಳು ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸಿಕೊಂಡು ನೆಲೆಸಿದ್ದು, ಎಲ್ಲರೂ ಕಟ್ಟಡ ನಿರ್ಮಾಣ ಹಾಗೂ ಕೂಲಿ ಕಾರ್ಮಿಕರಾಗಿದ್ದಾರೆ. ರಾಜಕಾಲುವೆಗೆ ತಂತಿ ಬೇಲಿ ಇಲ್ಲದ್ದರಿಂದ ರಾಜಕಾಲುವೆಯನ್ನೆ ಶೌಚಾಲಯವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಯಾರು ಕ್ರಮಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹಲಗೆ ದಾಟಲು ಹೋಗಿದ್ದ ತನುಶ್ರೀ: ಸುಮಾರು 8-10 ಅಡಿ ಅಗಲ ಇರುವ ರಾಜಕಾಲುವೆ ದಾಟಲು ಶೆಡ್‌ನಲ್ಲಿ ನೆಲೆಸಿದ್ದ ಕಾರ್ಮಿಕರು ಮರದ ಹಲಗೆ ಇಟ್ಟುಕೊಂಡಿದ್ದರು. ಸಾಬಣ್ಣ ದಂಪತಿ ಕೆಲಸಕ್ಕೆ ಹೋದಾಗ ತನುಶ್ರೀ ಶೆಡ್‌ನಿಂದ ಹೊರಬಂದು ಹಲಗೆ ಮೂಲಕ ಕಾಲುವೆ ದಾಟಲು ಹೋಗಿದ್ದಾಳೆ.
ಈ ವೇಳೆ ಆಯಾ ತಪ್ಪಿ ಬಿದ್ದಿದ್ದಾಳೆ. ಜತೆಗೆ ಜಲಮಂಡಳಿಯಿಂದ ಕೆಲಸ ನಡೆಯುತ್ತಿದ್ದರಿಂದ ಕಾಲುವೆಯಲ್ಲಿ ನೀರು ನಿಂತಿತ್ತು. ಹೀಗಾಗಿ ಕಾಲುವೆಗೆ ಬಿದ್ದ ತನುಶ್ರೀ ಕೊಳಕು ನೀರು ಕುಡಿದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಬಿಬಿಎಂಪಿ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.
ಎಇ ಅಮಾನತು: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಸಂಪತ್‌ರಾಜ್, ಕರ್ತವ್ಯ ಲೋಪದ ಆರೋಪದ ಮೇಲೆ ಸಹಾಯಕ ಎಂಜಿನಿಯರ್ ಬಸವರಾಜು ಅವರನ್ನು ಅಮಾನತುಗೊಳಿಸಿದ್ದಾರೆ. ಜತೆಗೆ ಕೂಡಲೇ ಸರ್ವೇ ನಡೆಸಿ ರಾಜಕಾಲುವೆಗೆ ತಂತಿ ಬೇಲಿ ಅಳವಡಿಸುವಂತೆ ಯಲಹಂಕ ಜೋನಲ್ ಎಂಜಿನಿಯರ್ ಪರಮೇಶ್ವರ್‌ಗೆ ಸೂಚಿಸಿದ್ದಾರೆ.
ಎಚ್ಚೆತ್ತುಕೊಳ್ಳದಿದ್ದರೆ ಇನ್ನಷ್ಟು ಅನಾಹುತ: ಜನವಸತಿ ಪ್ರದೇಶದ ಮಧ್ಯೆ ಹಾದುಹೋಗಿರುವ ಈ ರಾಜಕಾಲುವೆಗೆ ಫೆನ್ಸಿಂಗ್ ಅಳವಡಿಕೆ ಅಥವಾ ಇತರೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಕಾರ್ಪೊರೇಟರ್ ಜಯಲಕ್ಷ್ಮಮ್ಮ ಪಿಳ್ಳಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಗು ಮೃತಪಟ್ಟ ರಾಜಕಾಲುವೆ ಪಕ್ಕದಲ್ಲೇ ಖಾಸಗಿ ಜಮೀನಿನಲ್ಲಿ 10ಕ್ಕೂ ಹೆಚ್ಚು ಕೂಲಿ ಕಾರ್ಮಿಕ ಕುಟುಂಬಗಳು ಟೆಂಟ್, ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಆ ಕುಟುಂಬಗಳಲ್ಲಿ ಇನ್ನೂ ಹತ್ತಾರು ಮಕ್ಕಳಿದ್ದಾರೆ. ಮಳೆಗಾಲದಲ್ಲಿ ರಾಜಕಾಲುವೆ ಹರಿದು ಈ ಗುಡಿಸಲಿಗೆ ನೀರು ತುಂಬಿಕೊಂಡಿತ್ತು.
ಆಗಲೇ ರಾಜಕಾಲುವೆಗೆ ಫೆನ್ಸಿಂಗ್ ಅಥವಾ ಗೋಡೆ ನಿರ್ಮಿಸುವಂತೆ ಮನವಿ ಮಾಡಲಾಗಿತ್ತು. ಆದರೂ, ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದರು. ಈಗಲೂ ಎಚ್ಚೆತ್ತುಕೊಂಡು ಸುರಕ್ಷಾ ಕ್ರಮ ಕೈಗೊಳ್ಳದಿದ್ದರೆ ಮುಂದೆ ಇನ್ನಷ್ಟು ಅನಾಹುತಗಳಾದರೆ ಆಶ್ಚರ್ಯವಿಲ್ಲ ಎಂದು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.