ಉಕ್ಕಿನ ನಿರ್ಧಾರ ವಾಪಸ್; ಸರ್ಕಾರದ ದಿಢೀರ್ ತೀರ್ಮಾನ
Team Udayavani, Mar 3, 2017, 10:16 AM IST
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲೇ ರಾಜ್ಯದ ಬಹು ವಿವಾದಿತ ಯೋಜನೆ ಎಂದೇ ಹೇಳಲಾಗುತ್ತಿದ್ದ ನಗರದ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಯೋಜನೆಗೆ ಸರ್ಕಾರ ದಿಢೀರಾಗಿ ಇತಿಶ್ರೀ ಹಾಡಿದೆ.
ಆರಂಭದಿಂದಲೂ ಯೋಜನೆ ಕುರಿತು ಸಾಕಷ್ಟು ವಿರೋಧ, ಟೀಕೆ ವ್ಯಕ್ತವಾದಾಗಲೂ “ಉಕ್ಕಿನ ನಿರ್ಧಾರ’ಕ್ಕೆ ಬದ್ಧವಾಗಿದ್ದ ಸರ್ಕಾರ, ಮುಖ್ಯಮಂತ್ರಿ ಕುಟುಂಬದ ಮೇಲೆ ಕಿಕ್ ಬ್ಯಾಕ್ ಆರೋಪ ಬಂದ ಬೆನ್ನಲ್ಲೇ ಏಕಾಏಕಿ ಯೋಜನೆಯಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದೆ. ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗೆ 1800 ಕೋಟಿ ರೂ. ವೆಚ್ಚದಲ್ಲಿ ಉಕ್ಕಿನ ಸೇತುವೆ ನಿರ್ಮಿಸಲು ರಾಜ್ಯ ಸರ್ಕಾರ ಎಲ್ಲಾ ತಯಾರಿ ನಡೆಸಿತ್ತು.
ವಿಧಾನಸೌಧದಲ್ಲಿ ಗುರುವಾರ ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಕರೆಯಲಾಗಿದ್ದ ಬೆಂಗಳೂರು ನಗರದ ಶಾಸಕರು-ಸಂಸದರು ಹಾಗೂ ಸಚಿವರ ಸಭೆಯಲ್ಲಿ ಇದ್ದಕ್ಕಿದ್ದಂತೆ ಸ್ಟೀಲ್ ಬ್ರಿಡ್ಜ್ ಕುರಿತಂತೆ ವಾದ-ಪ್ರತಿವಾದ ನಡೆದಾಗ ನಾಟಕೀಯವಾಗಿ ಮಧ್ಯಪ್ರವೇಶಿಸಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಯೋಜನೆಯನ್ನೇ ರದ್ದುಪಡಿಸಿರುವುದಾಗಿ ಘೋಷಿಸಿದರು.
ಒಂದು ಹಂತದಲ್ಲಿ ಸಭೆಯಲ್ಲಿ ವಾಗ್ವಾದ ತಾರಕಕ್ಕೇರಿದಾಗ ತೀವ್ರ ಆವೇಶಕ್ಕೊಳಗಾದ ಸಚಿವ ಜಾರ್ಜ್ ಅಲ್ಲಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ ಅವರ ಅನುಮತಿಯನ್ನೂ ಪಡೆದು ಬಳಿಕ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಉಕ್ಕಿನ ಸೇತುವೆ ಯೋಜನೆ ಕೈ ಬಿಡುವ ನಿರ್ಧಾರ ಪ್ರಕಟಿಸಿದರು.
ಆ ಭಾಗದ ಸಂಚಾರ ದಟ್ಟಣೆ ನಿವಾರಣೆಗೆ ಉಕ್ಕಿನ ಸೇತುವೆ ಅಗತ್ಯವಿತ್ತು ಎಂಬುದನ್ನು ಪುನರುಚ್ಚರಿಸಿದ ಜಾರ್ಜ್, ಆದರೂ ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ಕೈ ಬಿಡುವ ನಿರ್ಧಾರ ಮಾಡಲಾಗಿದೆ. ಈ ಯೋಜನೆಯಲ್ಲಿ ಕಿಕಬ್ಯಾಕ್ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದ್ದು ನೋವು ತಂದಿದೆ. ಭ್ರಷ್ಟಾಚಾರ ನಡೆದಿಲ್ಲ ಎಂದು ಎಷ್ಟೇ ಬಾರಿ ಹೇಳಿದರೂ ಪ್ರತಿಪಕ್ಷಗಳು, ಸೇವಾ ಸಂಸ್ಥೆಗಳು, ಮಾಧ್ಯಮಗಳು ಮನವರಿಕೆ ಮಾಡಿಕೊಳ್ಳದ ಕಾರಣ ನೋವಿನಿಂದಲೇ ಯೋಜನೆ ಕೈ ಬಿಡುತ್ತಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಜತೆಗೂ ಚರ್ಚಿಸಲಾಗಿದ್ದು, ಸಚಿವ ಸಂಪುಟ ಸಭೆಯಲ್ಲೂ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದರಿಂದಾಗಿ, ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಕಳೆದ ಒಂದು ವರ್ಷದಿಂದ ಗುದ್ದಾಟಕ್ಕೆ ಕಾರಣವಾಗಿದ್ದ 1800 ಕೋಟಿ ರೂ. ಮೊತ್ತದ ಉಕ್ಕಿನ ಸೇತುವೆ ಯೋಜನೆ ರದ್ದುಪಡಿಸುವ ಮೂಲಕ ಸದ್ಯ ತಾರ್ಕಿಕ ಅಂತ್ಯ ಕಂಡಂತಾಗಿದೆ.
ಜಾರ್ಜ್ ಹೇಳಿದ್ದೇನು?
1. ಯೋಜನೆ ರೂಪುಗೊಂಡಿದ್ದು 2010ರಲ್ಲೇ. ಆಗ ಬಿಜೆಪಿ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸಮಗ್ರ ವರದಿ ಪಡೆದು, 2014ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆ ಘೋಷಣೆ ಮಾಡಿದ್ದರು. ಆದರೂ ತರಾತುರಿಯಲ್ಲಿ, ಗುಟ್ಟಾಗಿ ಯೋಜನೆ ಕೈಗೊಳ್ಳಲಾಗುತ್ತಿದೆ ಎಂಬ ಆರೋಪ ಮಾಡಿದ್ದು ಸರಿಯೇ?
2. ಆರಂಭದಲ್ಲಿ ಯೋಜನಾ ವೆಚ್ಚ 1,350 ಕೋಟಿ ರೂ. ಇದ್ದದ್ದು ಹೌದು. ಆದರೆ 2 ವರ್ಷಗಳಲ್ಲಿ ಕಾಮಗಾರಿ ಮೊತ್ತ ಹೆಚ್ಚಳ ಹಾಗೂ ಉಕ್ಕಿನ ಮೇಲೆ ವ್ಯಾಟ್ ಪ್ರಮಾಣ ಏರಿಕೆ ಹಿನ್ನೆಲೆಯಲ್ಲಿ ಇದು 400 ಕೋಟಿ ರೂ.ನಷ್ಟು ಹೆಚ್ಚಳವಾಯಿತು. ಈ ಮಾಹಿತಿಯನ್ನು ಮಾಧ್ಯಮಗಳು, ಸಂಸದರು, ಶಾಸಕರಿಗೂ ನೀಡಲಾಗಿತ್ತು. ಆದರೂ ಯೋಜನೆ ವಿರುದ್ಧ ರಾಜಕೀಯ ಪಿತೂರಿ ಆರಂಭವಾಯಿತು.
3. ಯೋಜನೆಗೆ ವಿರುದ್ಧ ಪಿತೂರಿ ಆರಂಭಿಸಿದವರಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರಮುಖರು. ಯೋಜನೆಯಿಂದ 400 ಕೋಟಿ ರೂ. ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂದು ಆರೋಪ ಮಾಡಿದರು. ಆಗ ನಾನು ಕೇಂದ್ರ ಸರ್ಕಾರದ ಸಂಸ್ಥೆ ವತಿಯಿಂದ 400 ಕೋಟಿ ರೂ. ಕಡಿಮೆ ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಿ ಎಂದು ತಿಳಿಸಿದೆ. ಆದರೆ ಯಾರೊಬ್ಬರು ಮುಂದೆ ಬರಲಿಲ್ಲ.
4. ಯೋಜನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಇಲ್ಲಸಲ್ಲದ ಆರೋಪ ಮಾಡುತ್ತಲೇ ಇದ್ದಾರೆ. ಒಮ್ಮೆ 400 ಕೋಟಿ ರೂ. ಕಿಕ್‌ಬ್ಯಾಕ್ ಪಡೆಯಲಾಗಿದೆ ಎನ್ನುವ ಅವರು ಮತ್ತೂಮ್ಮೆ ಗುತ್ತಿಗೆ ಪಡೆದ ಎಲ್ ಅಂಡ್ ಟಿ ಸಂಸ್ಥೆ ಹಣ ನೀಡಿರುವುದನ್ನು ಐಟಿಯವರು ದಾಖಲಿಸಿದ್ದಾರೆ ಎನ್ನುತ್ತಾರೆ. ಇನ್ನೊಮ್ಮೆ ಹಣ ನೀಡಿರುವುದಾಗಿ ಡೈರಿಯಲ್ಲಿ ದಾಖಲಾಗಿದೆ ಎಂದು ಹೇಳುತ್ತಾರೆ. ಮಗದೊಮ್ಮೆ 160 ಕೋಟಿ ರೂ. ಲಂಚದ ಹಣದಲ್ಲಿ 65 ಕೋಟಿ ರೂ. ಮುಂಗಡ ಪಡೆಯಲಾಗಿದೆ ಎನ್ನುತ್ತಾರೆ. ಒಮ್ಮೆ ಸಚಿವರು ಲಂಚ ಪಡೆದಿದ್ದಾರೆ ಎನ್ನುವ ಅವರು ಇನ್ನೊಮ್ಮೆ ಮುಖ್ಯಮಂತ್ರಿಗಳ ಕುಟುಂಬದವರಿಗೆ ಹಣ ಸಂದಾಯವಾಗಿದೆ ಎನ್ನುತ್ತಾರೆ. ಅವರಿಗೆ ಏನು ಹೇಳಬೇಕು?
5. ದಾಖಲೆಗಳಿಲ್ಲದೆ “ಹಿಟ್ ಅಂಡ್ ರನ್’ ಎಂಬಂತೆ ಆರೋಪ ಮಾಡಲಾಗುತ್ತಿದೆ. ಇಡಿ, ಐಟಿಯವರು ಮೂವರು ಸಚಿವರನ್ನು ಜೈಲಿಗೆ ಹಾಕುತ್ತಾರೆ ಎಂದ ಅವರು ನಂತರ ಯಾವ ದಾಖಲೆಯನ್ನೂ ನೀಡಲಿಲ್ಲ. ಬಿಬಿಎಂಪಿಯಲ್ಲಿ 3,500 ಕೋಟಿ ರೂ. ಅವ್ಯಹಾರ ನಡೆದಿದೆ ಎಂದವರು ದಾಖಲೆ ನೀಡಲಿಲ್ಲ.
6. ಆರೋಪ ಮಾಡುವಾಗ ಸೂಕ್ತ ದಾಖಲೆಗಳನ್ನು ನೀಡಬೇಕು. ಸುಳ್ಳು ಆರೋಪಗಳನ್ನು ಸಹಿಸಲು ಸಾಧ್ಯವಿಲ್ಲ. ಲಂಚಕ್ಕಾಗಿ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಕೆಲ ಎನ್‌ಜಿಒಗಳು ಆರೋಪಿಸುತ್ತವೆ. ಇನ್ನೊಂದೆಡೆ ಎನ್‌ಜಿಟಿಯಲ್ಲೂ ಆದೇಶ ಸಿಗುತ್ತಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಭ್ರಷ್ಟಾಚಾರದ ಆರೋಪ ಹೊತ್ತುಕೊಳ್ಳಲು ಸಾಧ್ಯವಿಲ್ಲದ ಕಾರಣ ಬಹುಜನರ ಅಭಿಪ್ರಾಯದಂತೆ ಜನಹಿತದ ಯೋಜನೆಯನ್ನು ಕೈಬಿಡುವ ನಿರ್ಧಾರಕ್ಕೆ ಬಂದಿದ್ದೇವೆ.
7. ಬೆಂಗಳೂರಿನ ಅಭಿವೃದ್ಧಿಯನ್ನು ಕೆಲವರು ಸಹಿಸುತ್ತಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ದರ್ಜೆಯ ಸ್ಥಾನಮಾನವನ್ನು ಮರಳಿ ಪಡೆಯುತ್ತಿರುವುದನ್ನು ತಡೆಯಲು ಹಾಗೂ ರಾಜಕೀಯ, ಚುನಾವಣೆ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವ ಯತ್ನ ನಡೆಯುತ್ತಿದೆ. ಕೇಂದ್ರ ಸಚಿವರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಸಂಭಾಷಣೆಯಿರುವ ಸಿ.ಡಿಯಲ್ಲಿ ತಾವು ಹೈಕಮಾಂಡ್‌ಗೆ ಹಣ ನೀಡಿರುವುದು, ಚುನಾವಣೆವರೆಗೆ ಈ ವಿಚಾರ ಜೀವಂತವಿಡಬೇಕೆಂಬ ಮಾತುಗಳನ್ನಾಡಿರುವುದು ಬಯಲಾಗಿದೆ.
8. ರಾಜ್ಯದಲ್ಲಿ ಸಾಕಷ್ಟು ಬಂಡವಾಳ ಹೂಡಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಅಡ್ಡಿಪಡಿಸಿ ಹೂಡಿಕೆದಾರರನ್ನು ಪಕ್ಕದ ರಾಜ್ಯಗಳತ್ತ ಸೆಳೆಯುವ ಷಡ್ಯಂತ್ರ ನಡೆದಿರುವ ಶಂಕೆ ಮೂಡಿದೆ. ಕೆಲವರು ಪಕ್ಕದ ರಾಜ್ಯದವರೊಂದಿಗೆ ಸೇರಿ ಕುತಂತ್ರ ನಡೆಸುತ್ತಿರುವ ಅನುಮಾನ ಮೂಡಿದೆ. ಯಾವುದೇ ಯೋಜನೆಯನ್ನು ವಿರೋಧ ಬಂದ ಕೂಡಲೇ ಕೈಬಿಡುವುದಿಲ್ಲ. ಆದರೆ ಉಕ್ಕಿನ ಸೇತುವೆ ಯೋಜನೆ ಬಗ್ಗೆ ಸುಳ್ಳಿನ ಆರೋಪ ಮಾಡುತ್ತಿರುವುದಕ್ಕೆ ನೋವಿನಿಂದ ಯೋಜನೆ ಕೈಬಿಡುತ್ತಿದ್ದೇವೆ. ಎಲ್ಲ ಯೋಜನೆಗೆ ಇದೇ ರೀತಿ ಆಧಾರರಹಿತ ಆರೋಪ ಮಾಡಲು ಮುಂದಾದರೆ ಜನ ಬುದ್ದಿ ಕಲಿಸಲಿದ್ದಾರೆ.
ರಾಜೀವ್ ಚಂದ್ರಶೇಖರ್
ವಿರುದ್ಧ ಜಾರ್ಜ್ ಕಿಡಿ
ನಾನು ಈ ಮಾತುಗಳನ್ನು ನೋವಿನಿಂದ ಹೇಳುತ್ತಿದ್ದೇನೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಬಿಡುತ್ತಿಲ್ಲ. ಬಿಜೆಪಿ ಅಧಿಕಾರದಲ್ಲೇ ರೂಪುಗೊಂಡಿದ್ದ “ಅಕ್ರಮ- ಸಕ್ರಮ’ ಯೋಜನೆ ಜಾರಿಗೆ ಮುಂದಾದರೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಸಂಸ್ಥೆ ನ್ಯಾಯಾಲಯದ ಮೊರೆ ಹೊಗಿ ತಡೆಯಾಜ್ಞೆ ತಂದಿದೆ ಎಂದು ನೇರ ವಾಗ್ಧಾಳಿ ನಡೆಸಿದ್ದಾರೆ.
ಇದೇ ಸಂಸ್ಥೆ ರಾಷ್ಟ್ರೀಯ ಹಸಿರು ನ್ಯಾಯಪೀಠದಿಂದ ಕೆರೆಗಳ ಸುತ್ತ 75 ಮೀಟರ್ ಬಫರ್ ಪ್ರದೇಶ ಕಾಯ್ದುಕೊಳ್ಳಬೇಕೆಂಬ ಆದೇಶ ಪಡೆದಿದೆ. ಈ ವ್ಯಕ್ತಿ ರಾಜ್ಯ ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಬಿಜೆಪಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರು ಬೆಂಬಲ ನೀಡುತ್ತಿದ್ದಾರೆ. ಬೆಂಗಳೂರು ಅಭಿವೃದ್ಧಿಯಾಗುವುದು ಬಿಜೆಪಿಗೆ ಬೇಕಿಲ್ಲ. ಹಾಗೆಯೇ ಕೆಲ ಎನ್‌ಜಿಓಗಳಿಗೂ ಬೇಕಾಗಿಲ್ಲ. ಒಟ್ಟಾರೆ ಇದಕ್ಕೆಲ್ಲಾ ಕೆಲ ಎನ್‌ಜಿಒಗಳು, ಬಿಜೆಪಿಯೇ ಕಾರಣ. ರಾಜೀವ್ ಚಂದ್ರಶೇಖರ್ ಅವರು ರಾಜ್ಯದ ಪ್ರತಿನಿಧಿಯಾಗಿದ್ದುಕೊಂಡು ರಾಜ್ಯದ ಹಿತಕ್ಕೆ ವಿರುದ್ಧವಾದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಗ್ನಿಪರೀಕ್ಷೆ ಮಾಡಬೇಕೆ?
ಯೋಜನೆ ಕೈಬಿಟ್ಟಿರುವುದರಿಂದ ಸರ್ಕಾರಕ್ಕೆ ಹಿನ್ನಡೆಯೇ ಎಂಬ ಪ್ರಶ್ನೆಗೆ ಕೋಪಗೊಂಡ ಜಾರ್ಜ್, ಯೋಜನೆ ಜಾರಿಗೊಳಿಸಲು ಮುಂದಾದರೆ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡಲಾಗುತ್ತದೆ. ಯೋಜನೆ ಕೈಬಿಟ್ಟರೆ ಹಿನ್ನಡೆಯೇ ಎಂದು ಪ್ರಶ್ನಿಸಲಾಗುತ್ತದೆ. ಹಾಗಿದ್ದರೆ ನಾವೇನು ಮಾಡಬೇಕು. ಸೀತೆಯಂತೆ ಅಗ್ನಿ ಪ್ರವೇಶ ಮಾಡಬೇಕೆ ಎಂದು ಪ್ರಶ್ನಿಸಿದರು.
ಜಾರ್ಜ್ ಸವಾಲು
ಬಿಜೆಪಿ ಬಿಡುಗಡೆ ಮಾಡಿರುವ ಡೈರಿ ನಕಲಿಯಾಗಿದ್ದು, ಈಗಾಗಲೇ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ದೂರು ನೀಡಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಸಿ.ಡಿಯಲ್ಲಿ ಬಿಜೆಪಿ ನಾಯಕರ ಸಂಭಾಷಣೆಯಲ್ಲಿ ಏನೆಲ್ಲಾ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಪ ಬಂದ ಕೂಡಲೇ ಯೋಜನೆ ಕೈಬಿಡುತ್ತಿಲ್ಲ. ಜನಾಭಿಪ್ರಾಯಕ್ಕೆ ಮಣಿದು ಯೋಜನೆ ರದ್ದುಪಡಿಸಲಾಗುತ್ತದೆ. ಈಗಲೂ ಸವಾಲು ಹಾಕುತ್ತೇನೆ. ಯೋಜನೆಯಲ್ಲಿ ಲಂಚ ತೆಗೆದುಕೊಂಡಿರುವ ಬಗ್ಗೆ ದಾಖಲೆ ನೀಡಿದರೆ ಎಂತಹ ಪರಿಣಾಮ ಎದುರಿಸಲು ಸಿದ್ಧ ಎಂದು ಜಾರ್ಜ್ ಸವಾಲು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.