ಫ್ಲೆಕ್ಸ್, ಬ್ಯಾನರ್ ಹಾವಳಿಗೆ ಅಧಿಕಾರಿಗಳೇ ನೇರ ಹೊಣೆ
Team Udayavani, Aug 6, 2018, 11:56 AM IST
ಬೆಂಗಳೂರು: ರಾಜಧಾನಿ ಬೆಂಗಳೂರಿನ ಸೌಂದರ್ಯಕ್ಕೆ ಧಕ್ಕೆ ತಂದಿರುವ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್ ಹಾವಳಿಗೆ ಬಿಬಿಎಂಪಿ ಅಧಿಕಾರಿಗಳೇ ಕಾರಣ ಎಂಬ ಅಂಶ ದಾಖಲೆಗಳಿಂದ ಜಗಜ್ಜಾಹೀರವಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮಿಶ್ರಿತ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್ ನಿಷೇಧಿಸುವಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಆಯುಕ್ತರು ಎರಡು ವರ್ಷಗಳ ಹಿಂದೆಯೇ ಆದೇಶ ಹೊರಡಿಸಿದ್ದಾರೆ. ಆದರೆ, ಪಾಲಿಕೆಯ ಅಧಿಕಾರಿಗಳು ಅದನ್ನು ಪಾಲಿಸದೇ ನಗರದಲ್ಲಿ ಫ್ಲೆಕ್ಸ್ ಹಾವಳಿ ಹೆಚ್ಚಾಗಿ, ಅಂತಿಮವಾಗಿ ಹೈಕೋರ್ಟ್ ಆದೇಶವೇ ಕೆಲಸ ಮಾಡುವಂತಾಯಿತು.
ಪರಿಸರ ಹಾಗೂ ಆರೋಗ್ಯದ ಮೇಲೆ ಹಾನಿ ಉಂಟುಮಾಡುವಂತಹ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಿ ರಾಜ್ಯ ಸರ್ಕಾರ 2016ರ ಮಾರ್ಚ್‌ನಲ್ಲಿ ಆದೇಶ ಹೊರಡಿಸಿತ್ತು. ಆ ಹಿನ್ನೆಲೆಯಲ್ಲಿ 2016 ಮೇ 4ರಂದು ಬಿಬಿಎಂಪಿ ಆಯುಕ್ತರು ಪಾಲಿಕೆಯ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆ, ಸರಬರಾಜು ಹಾಗೂ ಬಳಕೆಯನ್ನು ನಿಷೇಧಿಸುವಂತೆ ಆದೇಶ ಹೊರಡಿಸಿ, ನಿಯಮ ಉಲ್ಲಂ ಸುವವರಿಗೆ ದಂಡ ಹಾಕುವಂತೆ ಸೂಚಿಸಿದ್ದರೂ ಅಧಿಕಾರಿಗಳು ಅದನ್ನು ಜಾರಿಗೊಳಿಸಲು ಹೆಚ್ಚಿನ ಆಸಕ್ತಿ ತೋರಲಿಲ್ಲ.
ರಾಜ್ಯ ಸರ್ಕಾರದ ಆದೇಶದಲ್ಲಿ ಉಲ್ಲೇಖೀಸಿರುವ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಪಟ್ಟಿಯಲ್ಲಿ ಪ್ಲಾಸ್ಟಿಕ್ ಮಿಶ್ರಿತ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳನ್ನು ಸೇರಿಸಲಾಗಿದ್ದು, ಅವುಗಳ ಉತ್ಪನ್ನ ಹಾಗೂ ಬಳಕೆ ನಿಷಿದ್ಧವಾಗಿದೆ. ಆದರೆ, ಪಾಲಿಕೆಯ ಅಧಿಕಾರಿಗಳು ಕಳೆದ ಎರಡು ವರ್ಷಗಳಿಂದ ಕ್ಯಾರಿಬ್ಯಾಗ್ ಉತ್ಪನ್ನಗಳ ತಯಾರಿಕಾ ಘಟಕಗಳು, ಮಳಿಗೆಗಳ ಮೇಲೆ ಮಾತ್ರ ದಾಳಿ ನಡೆಸಿದ್ದು, ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳಿಗೆ ವಿನಾಯ್ತಿ ನೀಡಿದ ನಗರದಲ್ಲಿ ಫ್ಲೆಕ್ಸ್ ಹಾವಳಿ ಹೆಚ್ಚುವಂತಾಯಿತು.
ಫ್ಲೆಕ್ಸ್‌ಗೆ ಅವಕಾಶವೇ ಇಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಳವಡಿಸಲಾಗುತ್ತಿರುವ ಫ್ಲೆಕ್ಸ್‌ಗಳನ್ನು ಪಾಲಿ ವಿನೈಲ್ ಕ್ಲೋರೈಡ್‌ನಿಂದ (ಪಿವಿಸಿ) ತಯಾರಿಸಲಾಗುತ್ತದೆ. ಸರ್ಕಾರದಿಂದ ನಿಷೇಧಿಸಲಾಗಿರುವ ಪ್ಲಾಸ್ಟಿಕ್‌ನಲ್ಲಿ ಪಿವಿಸಿಯಿಂದ ತಯಾರಾದ ಉತ್ಪನ್ನಗಳೂ ಇವೆ. ಹೀಗಾಗಿ ನಗರದಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸುವುದು ನಿಯಮಬಾಹಿರವಾಗಿದೆ. ಹೀಗಿದ್ದರೂ ಅಧಿಕಾರಿಗಳು ಎರಡು ವರ್ಷಗಳಿಂದ ಕಣ್ಮುಚ್ಚಿ ಕುಳಿತಿದ್ದಾರೆ.
ಪಾಲಿಕೆ ಅನುಮತಿ ನೀಡುವುದು ಹೇಗೆ?: ನಗರದಲ್ಲಿ ಫ್ಲೆಕ್ಸ್ ಅಳವಡಿಸುವವರು ಆಯಾ ವಾರ್ಡ್‌ನ ಸಹಾಯಕ ಕಂದಾಯ ಅಧಿಕಾರಿಯನ್ನು (ಎಆರ್‌ಒ) ಭೇಟಿ ಮಾಡಿ ಅನುಮತಿ ಪಡೆದುಕೊಳ್ಳಬೇಕು. ಈ ವೇಳೆ ಫ್ಲೆಕ್ಸ್‌ಗಳ ಸಂಖ್ಯೆ, ಅಳತೆಯ ಮಾಹಿತಿ ನೀಡಿ ಪಾಲಿಕೆಗೆ ನಿಗದಿತ ಪ್ರಮಾಣದ ಶುಲ್ಕ ಪಾವತಿಸಬೇಕು. ಇದಾದ ನಂತರ ಅಧಿಕಾರಿಗಳಿಂದ ಅನುಮತಿ ದೊರೆಯಲಿದ್ದು, ಅಧಿಕಾರಿಗಳು ಪರಿಸರ ಸ್ನೇಹಿ ಫ್ಲೆಕ್ಸ್ ಅಳವಡಿಸಲು ಮಾತ್ರ ಅನುಮತಿ ನೀಡುತ್ತಾರೆ. ಆದರೆ, ನಂತರದಲ್ಲಿ ಅವರು ಪರಿಸರ ಸ್ನೇಹಿ ಫ್ಲೆಕ್ಸ್ ಅಳವಡಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಮುಂದಾಗುವುದಿಲ್ಲ.
ಹೋರ್ಡಿಂಗ್ಸ್ ವಿನೈಲ್ ನಿಷಿದ್ಧ: ಹೈಕೋರ್ಟ್ ಸೂಚನೆ ವೇಳೆ ಪಾಲಿಕೆಯ ಅಧಿಕಾರಿಗಳು ಫ್ಲೆಕ್ಸ್ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಫ್ಲೆಕ್ಸ್ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳು ಕೇವಲ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್ ತೆರವುಗೊಳಿಸಲು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ನಗರದಲ್ಲಿನ ಬೃಹತ್ ಜಾಹೀರಾತು ಫಲಕಗಳಲ್ಲಿ ಅಳವಡಿಸಲಾಗಿರುವ ಜಾಹೀರಾತು ವಿನೈಲ್ ಸಹ ನಿಷೇಧಿತ ಪ್ಲಾಸ್ಟಿಕ್ ವ್ಯಾಪ್ತಿಗೆ ಬರಲಿದ್ದು, ಅದನ್ನು ತೆರವುಗೊಳಿಸಲು ಪಾಲಿಕೆಯ ಅಧಿಕಾರಿಗಳು ಆಸಕ್ತಿ ತೋರಿಲ್ಲ.
ನಗರದಲ್ಲಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಗೂ ಅನಧಿಕೃತ ಜಾಹೀರಾತು ಫಲಕಗಳ ವಿಷಯದ ಕುರಿತು ಚರ್ಚೆ ನಡೆಸಲು ಮೇಯರ್ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಮುಂದೆ ಅನಧಿಕೃತ ಜಾಹೀರಾತು ಫಲಕಗಳ ವಿರುದ್ಧ ಕೈಗೊಳ್ಳುವ ಕ್ರಮಗಳ ಕುರಿತು ಸಭೆಯಲ್ಲಿ ಮೇಯರ್ ಘೋಷಿಸಲಿದ್ದಾರೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತರು
ಫಲಕ ತೆರುವಿಗೆ ಧೈರ್ಯ ಮಾಡುವರೇ?: ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಕೋಟ್ಯಂತರ ರೂ. ಆದಾಯ ಖೋತಾ ಮಾಡುತ್ತಿರುವ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಧೈರ್ಯವನ್ನು ಪಾಲಿಕೆ ಅಧಿಕಾರಿಗಳು ಮಾಡುವರೇ ಎಂಬ ಪ್ರಶ್ನೆ ಮೂಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಹೆಚ್ಚು ಜಾಹೀರಾತು ಫಲಕಗಳಿದ್ದರೂ ಅವುಗಳಲ್ಲಿ ಅಧಿಕೃತ ಫಲಕಗಳು 1900 ಮಾತ್ರ. ಉಳಿದೆಲ್ಲವೂ ಅನಧಿಕೃತ ಎಂಬುದು ಈ ಹಿಂದೆ ಪಾಲಿಕೆಯ ಅಧಿಕಾರಿಗಳು ನಡೆಸಿದ ಸರ್ವೆಯಿಂದ ಬಯಲಾಗಿದೆ. ಅನಧಿಕೃತ ಫಲಕಗಳಿಂದ ಪಾಲಿಕೆಗೆ ವಾರ್ಷಿಕ ಕೋಟ್ಯಂತರ ರೂ. ನಷ್ಟವಾಗುತ್ತಿದ್ದರೂ ಪಾಲಿಕೆಯ ಅಧಿಕಾರಿಗಳು ಮಾತ್ರ ಜಾಹೀರಾತು ಮಾಫಿಯಾಗೆ ಬೆದರಿ ಅವುಗಳ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ.
ಸಂಬಂಧಿಕರ ಫಲಕಗಳೂ ಇವೆ: ನಗರದಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳ ಪೈಕಿ ಹೆಚ್ಚಿನ ಸಂಖ್ಯೆ ಫಲಕಗಳು ಹಲವು ಪಾಲಿಕೆ ಸದಸ್ಯರ ಸಂಬಂಧಿಕರಿಗೆ ಸೇರಿದ್ದು, ಈ ಕಾರಣದಿಂದಲೇ ಪಾಲಿಕೆಯ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾಗುತ್ತಿಲ್ಲ ಎಂಬ ಆರೋಪಗಳೂ ಇದೆ.
ಈ ಹಿಂದೆ ಸರ್ವೆ ನಡೆಸಿದ ಪಾಲಿಕೆಯ ಅಧಿಕಾರಿಗಳು ಸುಮಾರು 5 ಸಾವಿರ ಜಾಹೀರಾತು ಫಲಕಗಳ ವಿರುದ್ಧ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ. ಆದರೆ, ತೆರಿಗೆ ಸಂಗ್ರಹಕ್ಕೂ ಮುಂದಾಗದೆ, ಫಲಕಗಳ ತೆರವಿಗೂ ಮುಂದಾಗಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದು, ಸೋಮವಾರ ನಡೆಯಲಿರುವ ಪಾಲಿಕೆಯ ಸಭೆಯಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ನಿರ್ಣಯವನ್ನು ಪಾಲಿಕೆ ಸದಸ್ಯರು ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕು.
* ವೆಂ.ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.