ಮೆಟ್ರೋ ಹಾದಿಯಲ್ಲೇ ಎತ್ತರಿಸಿದ ಮಾರ್ಗ?
Team Udayavani, Aug 11, 2018, 11:30 AM IST
ಬೆಂಗಳೂರು: ಬಿಬಿಎಂಪಿ ಬದಲಿಗೆ ಲೋಕೋಪಯೋಗಿ ಇಲಾಖೆ ಮೂಲಕ ಕೈಗೆತ್ತಿಕೊಂಡಿದ್ದರಿಂದ ಚರ್ಚೆಗೆ ಗ್ರಾಸವಾಗಿರುವ ಎಲಿವೇಟೆಡ್ ಕಾರಿಡಾರ್ ಯೋಜನೆ ಹಾದುಹೋಗಲಿರುವ ಮಾರ್ಗಗಳ ಬಗ್ಗೆಯೂ ಅಪಸ್ವರ ಕೇಳಿಬರುತ್ತಿದೆ.
“ನಮ್ಮ ಮೆಟ್ರೋ’ ಎರಡನೇ ಹಂತ ಹಾದುಹೋಗುವ ಮಾರ್ಗದಲ್ಲೇ ಈ ಎಲಿವೇಟೆಡ್ ಕಾರಿಡಾರ್‌ಗಳು ತಲೆಯೆತ್ತಲಿವೆ. ಈಗಾಗಲೇ ಸಾವಿರಾರು ಕೋಟಿ ರೂ. ಸುರಿದು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ನಿರ್ಮಿಸಲಾಗುತ್ತಿದೆ. ಅದೇ ಮಾರ್ಗದಲ್ಲಿ ಪರೋಕ್ಷವಾಗಿ ಖಾಸಗಿ ವಾಹನಗಳನ್ನು ಉತ್ತೇಜಿಸುವ ಎತ್ತರಿಸಿದ ಸೇತುವೆಗಳ ಅಗತ್ಯ ಏನಿದೆ ಎಂಬ ಪ್ರಶ್ನೆ ಕೇಳಿಬರುತ್ತಿದೆ.
“ನಮ್ಮ ಮೆಟ್ರೋ’ 2ಎ ಯೋಜನೆಯಡಿ ಸಿಲ್ಕ್ ಬೋರ್ಡ್-ಕೆ.ಆರ್. ಪುರ-ಹೆಬ್ಟಾಳ ನಡುವೆ ಮೆಟ್ರೋ ಮಾರ್ಗ ನಿರ್ಮಿಸಲು ನಿರ್ಧರಿಸಲಾಗಿದೆ. ಅದೇ ರೀತಿ, ಮೂರನೇ ಹಂತದಲ್ಲಿ ಹೆಬ್ಟಾಳ-ಗೊರಗುಂಟೆಪಾಳ್ಯದವರೆಗೆ ಮೆಟ್ರೋ ಹಾದುಹೋಗಲಿದೆ. ಈ ವರ್ತುಲ ರಸ್ತೆಯಲ್ಲಿನ ಮೆಟ್ರೋ ನಿರ್ಮಾಣಕ್ಕಾಗಿ ವಿನೂತನ ಮಾದರಿಯ ಸಂಪನ್ಮೂಲ ಕ್ರೋಡೀಕರಣಕ್ಕೆ ಸಿದ್ಧತೆಯೂ ನಡೆದಿದೆ.
ಆದರೆ, ಈಗ ಅದೇ ಹೆಬ್ಟಾಳ-ಸಿಲ್ಕ್ ಬೋರ್ಡ್ (18.1 ಕಿ.ಮೀ), ಕೆ.ಆರ್. ಪುರ- ಗೊರಗುಂಟೆಪಾಳ್ಯ (19.70 ಕಿ.ಮೀ) ನಡುವೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಅಂದರೆ, ಒಂದೇ ಕಡೆ ಎರಡೆರಡು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದು ಪುನರಾವರ್ತಿತ ಯೋಜನೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಿರಿದಾದ ರಸ್ತೆಗಳಲ್ಲಿ ಸಂಚಾರ ನರಕ: ಹೀಗೆ ಒಂದೇ ಕಡೆ ಎರಡು ಯೋಜನೆಗಳನ್ನು ನಿರ್ಮಿಸುವುದು ಅನಿವಾರ್ಯ ಮತ್ತು ಅಗತ್ಯ ಎಂದು ವಾದಿಸಬಹುದು. ಆದರೆ, ಇದಕ್ಕಾಗಿ ಸಾಕಷ್ಟು ಭೂಮಿ ಬೇಕಾಗುತ್ತದೆ. ಸಾಮಾನ್ಯವಾಗಿ ಈ ಎರಡೂ ಯೋಜನೆಗಳು ಮುಖ್ಯ ರಸ್ತೆಯಲ್ಲೇ ಹಾದುಹೋಗುತ್ತವೆ.
ತಜ್ಞರ ಪ್ರಕಾರ ಪ್ರಸ್ತುತ ಲಭ್ಯ ಇರುವ ನಗರದ ಆಯ್ದ ಮುಖ್ಯರಸ್ತೆಗಳ ಗರಿಷ್ಠ ಅಗಲವೇ 60 ಅಡಿ. ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಕನಿಷ್ಠ 23ರಿಂದ 24 ಮೀ. ಜಾಗ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಉದ್ದೇಶಿತ ಯೋಜನೆ ಅಕ್ಷರಶಃ ವಾಹನ ಸವಾರರಿಗೆ ನರಕಸದೃಶವಾಗಿ ಪರಿಣಮಿಸಲಿದೆ.
ಈಗಾಗಲೇ ಪ್ರಕಟಗೊಂಡಿರುವ ಪ್ರಕಾರ ಒಂದು ಕಿ.ಮೀ. ಎಲಿವೇಟೆಡ್ ಮಾರ್ಗಕ್ಕೆ 150 ಕೋಟಿ ರೂ. ಖರ್ಚಾಗುತ್ತದೆ ಅಂದಾಜಿಸಲಾಗಿದೆ. ಇದು ಒಂದು ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಸಮವಾಗಿದೆ. ಆದರೆ, ಮೆಟ್ರೋದಲ್ಲಿ ಒಮ್ಮೆಲೆ 800-900 ಜನ (ಆರು ಬೋಗಿಗೆ ದುಪ್ಪಟ್ಟು)ರನ್ನು ಕೊಂಡೊಯ್ಯುತ್ತದೆ. ಜತೆಗೆ ಸಂಚಾರದಟ್ಟಣೆ ಕಿರಿಕಿರಿ, ವಾಯುಮಾಲಿನ್ಯ ಇರುವುದಿಲ್ಲ ಎಂಬುದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ನಿರುಪಯುಕ್ತ ಹೂಡಿಕೆ: ಒಂದೆಡೆ ಮೆಟ್ರೋ ಮೂಲಕ ಸಾರ್ವಜನಿಕ ಸಾರಿಗೆಯನ್ನು ಸರ್ಕಾರ ಉತ್ತೇಜಿಸುತ್ತಿದೆ. ಪಕ್ಕದಲ್ಲೇ ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸುವ ಮೂಲಕ ಖಾಸಗಿ ವಾಹನಗಳನ್ನೂ ಪ್ರೋತ್ಸಾಹಿಸಲು ಮುಂದಾಗಿದೆ. ಹಾಗಿದ್ದರೆ, ಮೆಟ್ರೋದಲ್ಲಿ ಯಾರು ಓಡಾಡುತ್ತಾರೆ? ಇದು ಮೂಲಸೌಕರ್ಯಗಳು ಮತ್ತು ಅವುಗಳ ನಿರ್ಮಾಣಕ್ಕಾಗಿ ಮಾಡುವ ಹೂಡಿಕೆ ಎರಡನ್ನೂ ನಿರುಪಯುಕ್ತಗೊಳಿಸುತ್ತವೆ.
ಇದೆಲ್ಲದರ ನಡುವೆ “ಸಿ-40′ ಅಡಿ ವಾಯುಮಾಲಿನ್ಯ ತಡೆ ಬಗ್ಗೆ ನೇತೃತ್ವ ವಹಿಸುತ್ತದೆ. ಹಾಗಿದ್ದರೆ, ನಮಗೆ ಯಾವ ಅಧಿಕಾರ ಇದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿಯ) ಟ್ರಾನ್ಸ್‌ಪೊàಟೇìಷನ್ ಸಿಸ್ಟ್‌ಮ್ಸ್ ಇಂಜಿನಿಯರಿಂಗ್‌ನ ಸಹ ಪ್ರಾಧ್ಯಾಪಕ ಡಾ.ಆಶಿಶ್ ವರ್ಮ ಕೇಳುತ್ತಾರೆ.
“ಕಳೆದ 15-20 ವರ್ಷಗಳಿಂದ ನಾವು ನಗರದಲ್ಲಿ ಇಂತಹ ಅನೇಕ ಫ್ಲೈಓವರ್‌ಗಳು, ಅಂಡರ್‌ಪಾಸ್‌ಗಳನ್ನು ನಿರ್ಮಿಸಿದ್ದೇವೆ. ಇದರಿಂದ ಸಂಚಾರದಟ್ಟಣೆ ಕಡಿಮೆ ಆಗಿದೆಯೇ? ವಾಹನಗಳ ಸಂಖ್ಯೆ ತಗ್ಗಿದೆಯೇ? ಇಲ್ಲ, ಹೀಗಿರುವಾಗ ಫ್ಲೈಓವರ್‌ಗಳು ಸಂಚಾರದಟ್ಟಣೆಗೆ ಪರಿಹಾರ ಅಲ್ಲ ಎಂಬುದು ಸ್ಪಷ್ಟವಾಯಿತು. ಅಮೆರಿಕದಂತಹ ದೇಶಗಳು ಮಾಡಿದ ತಪ್ಪುಗಳನ್ನೇ ನಾವು ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಆಲೋಚನಾ ಕ್ರಮ ಬದಲಾಗಬೇಕಿದೆ’ ಎಂದೂ ಡಾ.ಆಶಿಶ್ ವರ್ಮ ಅಭಿಪ್ರಾಯಪಡುತ್ತಾರೆ.
ಹೀಗೆ ಮಾಡುವುದರಿಂದ ಸರ್ಕಾರಕ್ಕೇ ನಷ್ಟ ಆಗಲಿದೆ. ಎಲಿವೇಟೆಡ್ ಕಾರಿಡಾರ್ ನಿರ್ಮಿಸಿ, ಟೋಲ್ ರಸ್ತೆ ಎಂದು ಘೋಷಿಸುವ ಸಾಧ್ಯತೆ ಇದೆ. ಆಗ, ಜನ ಹಣ ಕೊಟ್ಟು ಆ ರಸ್ತೆಗಳಲ್ಲಿ ಹೋಗಲು ಇಷ್ಟಪಡುವುದಿಲ್ಲ. ಒಂದು ವೇಳೆ ಆ ರಸ್ತೆಗಳಲ್ಲಿ ಹೋದರೆ, ಮೆಟ್ರೋಗೆ ನಷ್ಟವಾಗುತ್ತದೆ. ಹಾಗಾಗಿ, ಮೆಟ್ರೋ ಇಲ್ಲದ ಕಡೆ ನಿರ್ಮಿಸಬೇಕಿತ್ತು. ಇಲ್ಲಿ ಸಮನ್ವಯ ಮತ್ತು ಯೋಜನೆ ಮಾಡುವವರಲ್ಲಿನ ಅನುಭವದ ಕೊರತೆ ಎದ್ದುಕಾಣುತ್ತಿದೆ ಎಂದು ನಗರ ಮೂಲಸೌಕರ್ಯಗಳ ತಜ್ಞ ಎಂ.ಎನ್. ಶ್ರೀಹರಿ ತಿಳಿಸುತ್ತಾರೆ.
ಕೆಆರ್‌ಡಿಸಿಎಲ್‌ಗೆ ಬಿಎಂಆರ್‌ಸಿ ಪತ್ರ: ಎಲಿವೇಟೆಡ್ ಕಾರಿಡಾರ್ ಯೋಜನೆ ಘೋಷಣೆಯಾದ ಬೆನ್ನಲ್ಲೇ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ವು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್)ಕ್ಕೆ ಪತ್ರ ಬರೆದಿದೆ. ಈಗಾಗಲೇ ಮೆಟ್ರೋ ಯೋಜನೆ ಕೂಡ ನಗರದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಮಧ್ಯೆ ಎಲಿವೇಟೆಡ್ ಕಾರಿಡಾರ್ ಕೂಡ ಹಾದುಹೋಗುತ್ತಿದೆ.
ಆದ್ದರಿಂದ ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಮಾರ್ಗದ ಬಗ್ಗೆ ಮಾಹಿತಿ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಲಿವೇಟೆಡ್ ಕಾರಿಡಾರ್ ಮತ್ತು ಮೆಟ್ರೋ ಒಂದಕ್ಕೊಂದು ಪೂರಕ ಆಗಲಿವೆ ಹೊರತು, ಪುನರಾವರ್ತಿತ ಯೋಜನೆ ಆಗುವುದಿಲ್ಲ ಹಾಗೂ ಹೂಡಿಕೆ ನಿರುಪಯುಕ್ತ ಆಗಲಿಕ್ಕೂ ಅವಕಾಶ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಯೊಂದಿಗೆ ಚರ್ಚಿಸಿ, ನಂತರವೇ ಮಾರ್ಗ ಅಂತಿಮಗೊಳಿಸಲಾಗುವುದು.
ಈ ಮಧ್ಯೆ ಬಿಎಂಆರ್‌ಸಿಯಿಂದ ನಮಗೆ ಪತ್ರವೂ ಬಂದಿದೆ. ಶೀಘ್ರ ಈ ಸಂಬಂಧ ಎರಡೂ ಸಂಸ್ಥೆಗಳ ಅಧಿಕಾರಿಗಳು ಚರ್ಚೆ ನಡೆಸಲಿದ್ದಾರೆ ಎಂದು ಕೆಆರ್‌ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಗಣೇಶ್ “ಉದಯವಾಣಿ’ಗೆ ತಿಳಿಸಿದರು. ಈ ಹಿಂದೆ ಉಪನಗರ ರೈಲು ಯೋಜನೆ ಮಾರ್ಗ ಅಂತಿಮಗೊಳಿಸುವ ಸಂದರ್ಭದಲ್ಲಿ ನೈರುತ್ಯ ರೈಲ್ವೆ ಅಧಿಕಾರಿಗಳು, ಮೆಟ್ರೋ ನಕ್ಷೆ ತರಿಸಿಕೊಂಡು, ಬಿಎಂಆರ್‌ಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಎಲಿವೇಟೆಡ್ ಕಾರಿಡಾರ್ ಎಲ್ಲೆಲ್ಲಿ?
-ಹೆಬ್ಟಾಳ- ಸಿಲ್ಕ್ ಬೋರ್ಡ್ (18.1 ಕಿ.ಮೀ)
-ಕೆ.ಆರ್.ಪುರ-ಗೊರಗುಂಟೆಪಾಳ್ಯ (19.70 ಕಿ.ಮೀ)
-ವರ್ತೂರು ಕೋಡಿ-ಜ್ಞಾನಭಾರತಿ (27.70 ಕಿ.ಮೀ)
ನಮ್ಮ ಮೆಟ್ರೋ ಎಲ್ಲೆಲ್ಲಿ?
-ಸಿಲ್ಕ್ಬೋರ್ಡ್- ಕೆ.ಆರ್. ಪುರ (18 ಕಿ.ಮೀ.)
-ಜೆ.ಪಿ. ನಗರ-ಹೆಬ್ಟಾಳ-ಕೆ.ಆರ್.ಪುರ (42 ಕಿ.ಮೀ.)
-ಹೆಬ್ಟಾಳ-ಗೊರಗುಂಟೆಪಾಳ್ಯ
* ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.