ಲಿಂಗಧೀರನಹಳ್ಳಿ ಘಟಕಕ್ಕೆ ಅಸ್ತಿತ್ವದ ಪ್ರಶ್ನೆ
Team Udayavani, Apr 26, 2017, 12:10 PM IST
ಬೆಂಗಳೂರು: ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಕಾರಣಕ್ಕೆ ಮಂಡೂರು ಘಟಕ ಮುಚ್ಚಿದ ಬಳಿಕ ವೈಜ್ಞಾನಿಕ ಕಸ ಸಂಸ್ಕರಣೆಗೆ ಹೈಕೋರ್ಟ್ ಸೂಚನೆ ಮೇರೆಗೆ ಬಿಬಿಎಂಪಿ ನಿರ್ಮಿಸಿದ ತ್ಯಾಜ್ಯ ಸಂಸ್ಕರಣಾ ಘಟಕದ ವಿರುದ್ಧವೇ ಮತ್ತೆ ಕೆಲವರು ನ್ಯಾಯಾಲಯದ ಮೊರೆ ಹೋಗಿರುವುದರಿಂದ “ಲಿಂಗಧೀರನಹಳ್ಳಿ ಘಟಕ’ದ ಅಸ್ತಿತ್ವವೂ ಡೋಲಾಯಮಾನವಾಗಿದೆ.
ಬನಶಂಕರಿ 6ನೇ ಹಂತದ ಬಿಡಿಎ ಬಡಾವಣೆ ವ್ಯಾಪ್ತಿಯಲ್ಲಿ ಲಿಂಗಧೀರನಹಳ್ಳಿ ಘಟಕ ಪ್ರಾರಂಭವಾಗಿರುವುದೇ ವಿರೋಧಕ್ಕೆ ಪ್ರಮುಖ ಕಾರಣ. ಸುತ್ತಮುತ್ತ ವಸತಿ ಬಡಾವಣೆಗಳು ಇರುವುದರಿಂದ ಇಲ್ಲಿ ಕಸ ಘಟಕ ಬೇಡ ಎಂಬುದು ಸ್ಥಳೀಯರ ಆಗ್ರಹ. ಇದರಿಂದಾಗಿ ಪ್ರತಿ ನಿತ್ಯ 200 ಟನ್ ಕಸ ಸಂಸ್ಕರಣೆ ಸಾಮರ್ಥ್ಯ ಹೊಂದಿರುವ ಘಟಕದಲ್ಲಿ ಸದ್ಯ ಶೇ.10ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಕಸ ಸಂಸ್ಕರಣೆಯಾಗುತ್ತಿದೆ.
ವಸತಿ ಪ್ರದೇಶದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಪಡೆಯದೇ ನಿಯಮ ಉಲ್ಲಂ ಸಲಾಗಿದೆ ಎಂದು ಆರೋಪಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದು, ಘಟಕದ ಅಸ್ತಿತ್ವ ಹೈಕೋರ್ಟ್ ಆದೇಶದ ಮೇಲೆ ಅವಲಂಬಿತವಾಗಿದೆ.
ಮಂಡೂರು ಘಟಕ ಸ್ಥಗಿತಗೊಂಡು ತ್ಯಾಜ್ಯ ಸಮಸ್ಯೆ ಭುಗಿಲೆದ್ದ ಬಳಿಕ ಹೈಕೋರ್ಟ್ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ನಿರ್ಮಿಸಿದ ಆರು ಘಟಕಗಳಲ್ಲಿ ಲಿಂಗಧೀರನಹಳ್ಳಿ ಘಟಕ ಕೂಡ ಒಂದು. ಘಟಕದ ಸುತ್ತ ಬೆರಳೆಣಿಕೆ ಕಟ್ಟಡಗಳಷ್ಟೇ ಇವೆ. ಹಾಗಿದ್ದರೂ ಘಟಕಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರು ಯಾರು ಎಂಬ ಪ್ರಶ್ನೆಗೆ ಅಲ್ಲಿನ ನಿವಾಸಿಗಳಿಂದ ಉತ್ತರವಿಲ್ಲ. ಘಟಕದ ಸಮೀಪದಲ್ಲೇ ಬಿಡಿಎ ಅಭಿವೃದ್ಧಿಪಡಿಸಿರುವ ಬನಶಂಕರಿ 6ನೇ ಹಂತದ ಬಡಾವಣೆ ಇದೆ. ಹಾಗೇ “ನೈಸ್’ ರಸ್ತೆಗೂ ಹೊಂದಿಕೊಂಡಂತೆ ಈ ಪ್ರದೇಶದಲ್ಲಿ ಗಗನಚುಂಬಿ ಅಪಾರ್ಟ್‌ಮೆಂಟ್‌ಗಳು, ಬಡಾವಣೆಗಳು ನಿರ್ಮಾಣಗೊಳ್ಳುತ್ತಿವೆ.
ಇದಕ್ಕೆ ಪುಷ್ಠಿ ನೀಡುವಂತೆ ಹೆಜ್ಜೆ ಹೆಜ್ಜೆಗೂ ರಿಯಲ್ ಎಸ್ಟೇಟ್ ಕಚೇರಿಗಳು ಆರಂಭವಾಗಿವೆ. ಘಟಕ ಮುಂದುವರಿದರೆ ನಿವೇಶನಗಳ ಮಾರುಕಟ್ಟೆ ದರ ಇಳಿಕೆಯಾಗಿ ಆರ್ಥಿಕ ನಷ್ಟ ಉಂಟಾಗುವ ಭೀತಿ ಹಿನ್ನೆಲೆಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ವಿರೋಧ ವ್ಯಕ್ತಪಡಿಸುತ್ತಿರುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿದೆ. ಇನ್ನೊಂದೆಡೆ ಸಾವಿರಾರು ನಿವೇಶನಗಳಿರುವ ವಸತಿ ಪ್ರದೇಶದ ಮಧ್ಯಭಾಗದಲ್ಲಿ ಘಟಕ ನಿರ್ಮಿಸಿರುವುದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ ತ್ಯಾಜ್ಯ ಸಂಸ್ಕರಣೆ ಆಮೆಗತಿಯಲ್ಲಿ ಸಾಗಿದೆ.
ಪಶ್ಚಿಮ ವಿಭಾಗದ ಕಸ
ಲಿಂಗಧೀರನಹಳ್ಳಿ ಘಟಕದಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆಗೆ ಅಗತ್ಯವಾದ ಯಂತ್ರಗಳಿದ್ದು, ನಿತ್ಯ ಗರಿಷ್ಠ 200 ಟನ್ ಕಸ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಸ್ಥಳೀಯರ ವಿರೋಧ ಮತ್ತು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಘಟಕ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಪಶ್ಚಿಮ ವಲಯದ ಮಲ್ಲೇಶ್ವರ, ರಾಜಾಜಿನಗರ, ಜಾಲಹಳ್ಳಿ, ಮತ್ತಿಕೆರೆ, ಯಶವಂತಪುರ, ನಂದಿನಿ ಲೇಔಟ್, ಆರ್.ಎಂ.ವಿ.ಲೇಔಟ್, ಮಾರಪ್ಪನಪಾಳ್ಯ, ಗಂಗಾನಗರ, ಹೆಬ್ಟಾಳ, ಎಚ್‌ಎಂಟಿ ಪ್ರದೇಶ, ವಿಜಯನಗರ ಸೇರಿದಂತೆ ವಿವಿಧ ಪ್ರದೇಶಗಳಿಂದ ಸಂಗ್ರಹವಾಗುವ 18ರಿಂದ 21 ಟನ್ ಹಸಿ ಕಸವನ್ನಷ್ಟೇ ಸಂಸ್ಕರಿಸಲಾಗುತ್ತಿದೆ.
ಸುಸಜ್ಜಿತ ಘಟಕವಿದ್ದರೂ ಗುಮಾನಿ!
ಸಂಪೂರ್ಣ ಮುಚ್ಚಲ್ಪಟ್ಟ ಲಾರಿಗಳಲ್ಲಿ ಈ ಘಟಕಕ್ಕೆ ತ್ಯಾಜ್ಯ ತರುತ್ತಿದ್ದು, ದುರ್ವಾಸನೆ ಬರದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಜತೆಗೆ ಘಟಕ ಕೂಡ ಅತ್ಯಾಧುನಿಕವಾಗಿದ್ದು, ದುರ್ವಾಸನೆ ಬಾರದಂತೆ ಛಾವಣಿಸಹಿತ ಶೆಡ್‌ನಡಿ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ. ಆಗಾಗ್ಗೆ ಘಟಕ ಸ್ಥಗಿತಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸಾರ್ವಜನಿಕರ ಘಟಕ ಪ್ರವೇಶ ನಿರ್ಬಂಧಿಸಲಾಗಿದೆ. ತ್ಯಾಜ್ಯ ಸಾಗಣೆ ವಾಹನಗಳಿಗಷ್ಟೇ ಪ್ರವೇಶವಿದ್ದು, ಇತರ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಸಂಶಯ ಹೆಚ್ಚಿ, ಮತ್ತಷ್ಟು ವಿರೋಧ ವ್ಯಕ್ತವಾಗಲು ಕಾರಣವಾಗಿದೆ.
ಹೈಕೋರ್ಟ್‌ನಲ್ಲಿದೆ ಪ್ರಕರಣ
ಘನತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಗೊಂಡು ಉದ್ಘಾಟನೆಯಾಗುವಾಗ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ (ಎನ್‌ಜಿಟಿ) ದಾವೆ ಹೂಡಿದ ಪರಿಣಾಮ ಉದ್ಘಾಟನೆಗೂ ತಡೆಯಾಜ್ಞೆ ತರಲಾಗಿತ್ತು. ನಂತರ ಎನ್‌ಜಿಟಿಯಲ್ಲಿ ಅರ್ಜಿದಾರರಿಗೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ವಿಚಾರವನ್ನು ಸ್ಥಳೀಯ ಹೈಕೋರ್ಟ್ ನಲ್ಲೇ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಕರಣ ವಿಚಾರಣೆಯಲ್ಲಿದೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥದ ನಂತರ ಮುಂದಿನ ಕ್ರಮ ಕೈಗೊಳ್ಳಲು ಪಾಲಿಕೆ ನಿರ್ಧರಿಸಿದೆ.
ಬನಶಂಕರಿ 6ನೇ ಹಂತದ “ವಿ’ ಬ್ಲಾಕ್ ವಸತಿ ಬಡಾವಣೆಯ ಹೃದಯ ಭಾಗದಲ್ಲಿ ಘಟಕ ಸ್ಥಾಪಿಸುವಾಗ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿರಲಿಲ್ಲ. ಇದು ಪರಿಸರದ ಮೇಲಿನ ಪರಿಣಾಮ ಮೌಲ್ಯಮಾಪನ ಅಧಿಸೂಚನೆಯ (ಎನ್ವಿರಾನ್‌ಮೆಂಟಲ್ ಇಂಪ್ಯಾಕ್ಟ್ ಅಸೆಸ್‌ಮೆಂಟ್ ನೋಟಿಫಿಕೇಷನ್ 2006- ಎಐಎ)’ ಸ್ಪಷ್ಟ ಉಲ್ಲಂಘನೆಯಾಗಿದೆ.
-ಜಯರಾಮೇಗೌಡ, ಸ್ಥಳೀಯ ನಿವಾಸಿ
ಸಂಸ್ಕರಣೆ ವೇಳೆ ದುರ್ವಾಸನೆ ಬಾರದಂತೆ ಕ್ರಮಕೈಗೊಳ್ಳಲಾಗಿದೆ. ಪ್ರಸ್ತುತ ಘಟಕದ ಸುತ್ತ ಮುತ್ತ ಯಾವುದೇ ಮನೆಗಳು ಇಲ್ಲ. ಘಟಕ ನಡೆಯಲು ಯಾವ ಸಮಸ್ಯೆ ಇಲ್ಲದಿ ದ್ದರೂ, ಕಾಣದ ಕೈಗಳು ಘಟಕ ನಡೆಯದಂತೆ ವಿರೋಧಿಸುತ್ತಿವೆ. ಎಲ್ಲೆಡೆಯೂ ಘಟಕ ಬೇಡ ಎನ್ನುವುದಾದರೆ ತ್ಯಾಜ್ಯವನ್ನು ಸುರಿಯುವುದಾದರೂ ಎಲ್ಲಿ?
-ಸಫ್ರಾಜ್ ಖಾನ್, ಜಂಟಿ ಆಯುಕ್ತ, ಬಿಬಿಎಂಪಿ
* ಸಂಪತ್ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.