ವೈಎಎನ್ ಕೈ ಹಿಡಿದ ಶಿಕ್ಷಕರ ಕ್ಷೇತ್ರ
Team Udayavani, Jun 13, 2018, 11:55 AM IST
ಬೆಂಗಳೂರು: ರಾಜ್ಯ ವಿಧಾನಪರಿಷತ್ತಿನ ಆಗ್ನೇಯ ಶಿಕ್ಷಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಜಯಭೇರಿ ಬಾರಿಸಿದ್ದು, ಕ್ಷೇತ್ರವನ್ನು ಬಿಜೆಪಿ ಮರಳಿ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ 2 ಸಾವಿರ ಮತಗಳ ಅಂತರದಿಂದ ನಾರಾಯಣಸ್ವಾಮಿ ಗೆಲುವು ಸಾಧಿಸಿದರೆ, ಇವರಿಗೆ ಪೈಪೋಟಿ ನೀಡಿದ್ದ ಜೆಡಿಎಸ್‌ನ ರಮೇಶ್‌ಬಾಬು ಪರಾಭವಗೊಂಡಿದ್ದಾರೆ.
ಈ ಕ್ಷೇತ್ರವನ್ನು ನಾರಾಯಣಸ್ವಾಮಿ ಪ್ರತಿನಿಧಿಸುತ್ತಿದ್ದರು. 2016ರಲ್ಲಿ ಹೆಬ್ಟಾಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮೇಲ್ಮನೆ ಸದಸ್ಯ ಸ್ಥಾನ ತೆರವುಗೊಂಡಿತ್ತು. ಈ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ನ ರಮೇಶ್‌ಬಾಬು ಆಯ್ಕೆಯಾಗಿದ್ದರು.
ಇದೀಗ 2018ರ ವಿಧಾನಸಭೆ ಚುನಾವಣೆಯಲ್ಲಿ ಹೆಬ್ಟಾಳ ಕ್ಷೇತ್ರದಲ್ಲಿ ಪರಾಭವಗೊಂಡ ಬಳಿಕ ನಾರಾಯಣಸ್ವಾಮಿ ಅವರನ್ನು ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು. ಆರಂಭದಲ್ಲಿ ಲೇಪಾಕ್ಷಿ ನಾರಾಯಣಸ್ವಾಮಿಯವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಆದರೆ, ಕೊನೆ ಕ್ಷಣದಲ್ಲಿ ಲೇಪಾಕ್ಷಿಯವರನ್ನು ಕಣದಿಂದ ಹಿಂದಕ್ಕೆ ಸರಿಸಿ ವೈ.ಎ. ನಾರಾಯಣಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು.
ಬೆಂಬಲಿಗರ ಸಂಭ್ರಮ: ಫಲಿತಾಂಶ ಹೊರ ಬೀಳುತ್ತಿದ್ದಂತೆ ಮತ ಎಣಿಕೆ ನಡೆಯುತ್ತಿದ್ದ ಆರ್.ಸಿ. ಕಾಲೇಜು ಮುಂಭಾಗದಲ್ಲಿ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ನಾರಾಯಣಸ್ವಾಮಿ ಅವರನ್ನು ಹೊತ್ತು ಕುಣಿದಾಡಿದರು. ಜಯ ಘೋಷ ಕೂಗಿ ವಿಜಯೋತ್ಸವ ಆಚರಿಸಿದರು.
ಮಾತಿನ ಚಕಮಕಿ: ಈ ಮಧ್ಯೆ ಮತ ಎಣಿಕೆ ಕೇಂದ್ರ ಕೊಠಡಿಯಲ್ಲಿ ಜಾಗ ಕಡಿಮೆ ಇದ್ದು, ನಿಂತುಕೊಂಡೇ ಕೆಲಸ ಮಾಡಬೇಕಾಗಿದೆ ಅಭ್ಯರ್ಥಿಗಳ ಪರ ಏಜೆಂಟರುಗಳು ಆರ್.ಸಿ. ಕಾಲೇಜಿನ ಮತ ಎಣಿಕೆ ಕೇಂದ್ರದ ಬಳಿ ಪ್ರತಿಭಟನೆ ನಡೆಸಿದರು. ಮನವೋಲಿಸಲು ಮುಂದಾದ ಪೊಲೀಸರು, ಅಧಿಕಾರಿಗಳ ಜೊತೆಗೆ ಮಾತಿನ ಚಕಮಕಿ ನಡೆದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
“ಇದು ಶಿಕ್ಷಕರ ಸಮುದಾಯಕ್ಕೆ ಸಂದ ಗೆಲುವು. ಕೊನೆ ಕ್ಷಣದಲ್ಲಿ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಕ್ಕೆ ಕೋರ್ ಕಮಿಟಿ, ಪಕ್ಷದ ಮುಖಂಡರಿಗೆ, ಗೆಲುವಿಗೆ ಶ್ರಮಿಸಿದ ನಾಯಕರು ಮತ್ತು ಕಾರ್ಯಕರ್ತರಿಗೆ ಹಾಗೂ ಮತ ಹಾಕಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷ ಹಾಗೂ ಶಿಕ್ಷಕ ಸಮುದಾಯ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತೇನೆ’.
-ವೈ.ಎ. ನಾರಾಯಣಸ್ವಾಮಿ, ವಿಜೆತ ಅಭ್ಯರ್ಥಿ.
ಪದವೀಧರ ಕ್ಷೇತ್ರ: ಬಿಜೆಪಿ ಮುನ್ನಡೆ
ಬೆಂಗಳೂರು: ಈ ಮಧ್ಯೆ ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅ. ದೇವೇಗೌಡ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಅವರು 1,700 ಮುನ್ನಡೆಯನ್ನು ಕಾಯ್ದುಕೊಂಡಿದ್ದರು. ಈ ಕ್ಷೇತ್ರವನ್ನು ಹಿಂದೆ ಬಿಜೆಪಿಯ ರಾಮಚಂದ್ರಗೌಡ ಪ್ರತಿನಿಧಿಸುತ್ತಿದ್ದರು.
ಈ ಬಾರಿಗೆ ಅವರ ಪುತ್ರನಿಗೆ ಟಿಕೆಟ್ ಕೊಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಅ. ದೇವೇಗೌಡರಿಗೆ ಟಿಕೆಟ್ ನೀಡಲಾಯಿತು. ಎರಡನೇ ಸುತ್ತಿನಲ್ಲಿ ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅಚ್ಚೇಗೌಡ ಶಿವಣ್ಣ ವಿರುದ್ಧ ದೇವೇಗೌಡ ಮುನ್ನಡೆ ಕಾಯ್ದುಕೊಂಡಿದ್ದರು. ಮತ ಎಣಿಕೆ ಕಾರ್ಯ ಮುಂದುವರಿದಿದ್ದು ತಡರಾತ್ರಿಗೆ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.
ನಾರಾಯಣಸ್ವಾವಿಗೆ 8479 ಮತ: ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಒಟ್ಟು 8,479 ಮತಗಳನ್ನು ಪಡೆದು ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಎರಡನೇ ಸ್ಥಾನ ಪಡೆದ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಅವರಿಗಿಂತ 1,872 ಮತಗಳನ್ನು ನಾರಾಯಣಸ್ವಾಮಿ ಹೆಚ್ಚಿಗೆ ಪಡೆದುಕೊಂಡು ಗೆಲವಿನ ದಡ ಸೇರಿದರು.
ಚಲಾವಣೆಯಾದ ಮತದಾನದ ಪ್ರಮಾಣದ ಆಧಾರದಲ್ಲಿ ಗೆಲುವಿಗೆ 8,441.5 ಮತಗಳ ಗುರಿ ನಿಗದಿಪಡಿಸಲಾಗಿತ್ತು. ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಸುತ್ತಿನಲ್ಲಿ ಯಾವ ಅಭ್ಯರ್ಥಿ ಕೂಡ ಗುರಿ ಮುಟ್ಟದ ಕಾರಣ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಮಾಡಲಾಯಿತು.ಇದರಲ್ಲಿ ಬಿಜೆಪಿ ಅಭ್ಯರ್ಥಿ ನಿಗದಿತ ಪ್ರಮಾಣದ ಮತಗಳನ್ನು ಪಡೆಯುವ ಮೂಲಕ ಆಗ್ನೇಯ ಜಯಗಳಿಸಿದರು.
ಅಭ್ಯರ್ಥಿಗಳು ಪಡೆದ ಮತಗಳ ವಿವರ
-ವೈ.ಎ ನಾರಾಯಣಸ್ವಾಮಿ-ಬಿಜೆಪಿ- 8,479 ಮತಗಳು
-ರಮೇಶ್ ಬಾಬು-6,607 ಮತಗಳು
-ರಾಮಪ್ಪ-ಕಾಂಗ್ರೆಸ್-1,652 ಮತಗಳು
ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಮೊದಲು ಎಲ್.ಆರ್. ಶಿವರಾಮೇಗೌಡ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು. ಆದರೆ, ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಶಿವರಾಮೇಗೌಡ ಸ್ಪರ್ಧಿಸಲು ಹಿಂದೇಟು ಹಾಕಿದರು. ಆ ಕಾರಣಕ್ಕೆ ಅಚ್ಚೇಗೌಡ ಶಿವಣ್ಣ ಅವರನ್ನು ಜೆಡಿಎಸ್ ಕಣಕ್ಕಿಳಿಸಿತ್ತು. ಈ ಮಧ್ಯೆ ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿದ್ದ ಅ. ದೇವೇಗೌಡ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವಿನ ಹೊಸ್ತಿಲಲ್ಲಿ ನಿಂತಿದ್ದಾರೆ.
ಶಿಕ್ಷಕರ ಋಣ ತೀರಿಸುವೆ: ವೈಎಎನ್
ಮತ ಎಣಿಕೆ ನಡೆದ ಬೆಂಗಳೂರಿನ ಆರ್‌ವಿ ಕಾಲೇಜು ಮುಂಭಾಗ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ವೈ.ಎ.ನಾರಾಯಣಸ್ವಾಮಿ, ಮೂರನೇ ಬಾರಿಯೂ ತಮ್ಮನ್ನು ಗೆಲ್ಲಿಸುವ ಮೂಲಕ ಗುರುವೃಂದ ಆಶೀರ್ವಾದ ಮಾಡಿದೆ. ಶಿಕ್ಷಕರ ಋಣ ತೀರಿಸಲು ಶಕ್ತಿಮೀರಿ ಶ್ರಮಿಸುತ್ತೇನೆ. ಶಿಕ್ಷಕ ಸಮುದಾಯದ ದೀರ್ಘ ಕಾಲದ ಸಮಸ್ಯೆಗಳಾದ ವೇತನ ತಾರತಮ್ಯ ನಿವಾರಣೆ,
ಕಾಲ್ಪನಿಕ ವೇತನ ಬಡ್ತಿ, ಕುಮಾರನಾಯಕ್ ವರದಿ ಜಾರಿಗಾಗಿ ಸದನದಲ್ಲಿ ಗುರುಗಳ ಧ್ವನಿಯಾಗಲು ನನ್ನನ್ನು ಬೆಂಬಲಿಸಿದ್ದರ ಋಣ ತೀರಿಸುತ್ತೇನೆ. ಸಹ ಶಿಕ್ಷಕರು, ಉಪನ್ಯಾಸಕರ ಸಮಸ್ಯೆಗಳು ಕಾಡುತ್ತಿವೆ. ಜೆಒಸಿಗಳಿಂದ ವಿಲೀನವಾದ ವೃತ್ತಿ ಶಿಕ್ಷಕರಿಗೂ ವೇತನ ತಾರತಮ್ಯವಿದ್ದು, ಅದನ್ನು ಸರಿಪಡಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ರಾಜಕೀಯ ಜೀವನ ನೀಡಿದ ಕ್ಷೇತ್ರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಳಚಹಳ್ಳಿಯ ವೈಎಎನ್‌ಗೆ ರಾಜಕೀಯ ಜೀವನ ನೀಡಿದ್ದೇ ಶಿಕ್ಷಕರ ಕ್ಷೇತ್ರ. ಇಲ್ಲಿನ ಶಿಕ್ಷಕರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಅವರನ್ನು ಸೋಲಿಸಲು ಅಷ್ಟು ಸುಲಭವಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ಒಮ್ಮೆ ಪಕ್ಷೇತರರಾಗಿ, ಮತ್ತೂಮ್ಮೆ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ವೈಎಎನ್,
ಪಕ್ಷದ ಅಣತಿಯಂತೆ ಹೆಬ್ಟಾಳ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಶಾಸಕರಾಗುತ್ತಿದ್ದಂತೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ವೈ.ಎಎನ್ ಅಭಿಮಾನಿಗಳೇ ಒಟ್ಟಾಗಿ ಜೆಡಿಎಸ್‌ನ ರಮೇಶ್ ಬಾಬು ಪರ ಕೆಲಸ ಮಾಡಿದ್ದರಿಂದಾಗಿ ಅವರ ಗೆಲುವು ಸುಲಭವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.