ಹೋರಾಟಗಾರರೇ ಕನ್ನಡ ರಕ್ಷಕರು, ಸಾಹಿತಿಗಳಲ್ಲ: ಸಾ.ರಾ.ಗೋವಿಂದು
Team Udayavani, Dec 25, 2017, 12:35 PM IST
ಆನೇಕಲ್: ಕನ್ನಡ ಉಳಿದಿರುವುದು ಕನ್ನಡ ಹೋರಾಟಗಾರರಿಂದಲೇ ಹೊರತು ಸಾಹಿತಿಗಳಿಂದಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಹಾಗೂ ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದರು.
ತಾಲೂಕಿನ ಚಂದಾಪುರದ ಸ್ವಾಮಿ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಎರಡು ದಿನಗಳ 12ನೇ ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು, ಕಾವೇರಿ, ಮಹದಾಯಿ, ಮಹಾರಾಷ್ಟ್ರ ಗಡಿ ಸಮಸ್ಯೆ ಬಗ್ಗೆ ಮಾತನಾಡುವವರು, ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವವರು ಕನ್ನಡ ಹೋರಾಟಗಾರರೇ ಹೊರೆತು ಸಾಹಿತಿಗಳಲ್ಲ ಎಂದರು.
“ಕನ್ನಡದ ವಿಚಾರದಲ್ಲಿ ಹೋರಾಟಗಾರರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಕನ್ನಡ ಭಾಷೆ ಪರ ನಾಡಿನ ಪರ ಯಾವಾಗಲೂ ಹೋರಾಟ ಮಾಡುತ್ತಾ ಬಂದಿರುವ ನಾನು, ಸಾಹಿತಿಯಾಗಿ ಬರೆದಿಲ್ಲ. ಆದರೆ ಕಲ್ಲು ಹೊಡೆದು ಕನ್ನಡ ಉಳಿಸಿದ್ದೇನೆ’ ಎಂಬ ಹೆಮ್ಮೆ ನನಗಿದೆ ಎಂದರು.
ಈ ಭಾಗದಲ್ಲಿ ಬಂಡಾಯ ಸಮ್ಮೇಳನ ನಡೆದದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ ಸಾ.ರಾ.ಗೋವಿಂದು, “ಕನ್ನಡಿಗರ ಕಾಲನ್ನೇ ಕನ್ನಡಿಗರು ಎಳೆಯುವುದು ವಿಪರ್ಯಾಸದ ಸಂಗತಿ. ಗಡಿನಾಡಿನ ಅಭಿವೃದ್ಧಿ ಕಡೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು. ಗಡಿನಾಡಿನ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ವಿಶೇಷ ನಿಧಿ ಮೀಸಲಿಡಬೇಕು. ಗಡಿನಾಡಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಸದೃಢ ಗೊಳಿಸುವ ಕೆಲಸ ಮಾಡಬೇಕು.
ಗಡಿ ಭಾಗದ ಪ್ರತಿ ಹೋಬಳಿಯಲ್ಲೂ ಕನ್ನಡ ಮಾಧ್ಯಮದ ವಸತಿ ಶಾಲೆಗಳನ್ನು ಪ್ರಾರಂಭಿಸಬೇಕು. ಹೊರ ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರ ವಲಯದಲ್ಲಿ ಕನ್ನಡ ಭಾಷೆ ಉಳಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಹೊರನಾಡಿನಲ್ಲಿ ಕನ್ನಡದ ಸಾಂಸ್ಕೃತಿಕ ಚಟುವಟಿಕೆ ನಡೆಸಬೇಕು,’ ಎಂದು ಆಗ್ರಹಿಸಿದರು.
ಶಾಸಕ ಬಿ.ಶಿವಣ್ಣ ಸ್ವಾಗತಿಸಿದರು, ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ, ಸಾಹಿತಿ ಜರಗನಹಳ್ಳಿ ಶಿವಶಂಕರ್, ಸಾಹಿತಿಗಳಾದ ಡಾ. ಬೈರಮಂಗಲ ರಾಮೇಗೌಡ, ಚಂದಾಪುರ ಪುರಸಭೆ ಅಧ್ಯಕ್ಷ ವಿ.ಶ್ರೀನಿವಾಸ್, ಸದಸ್ಯ ರಾಮಸಾಗರ ಸುಧಾಕರ್, ತಾ.ಪಂ ಮಾಜಿ ಅಧ್ಯಕ್ಷ ಕೆಂಪರಾಜ್, ಮಾಜಿ ಸದಸ್ಯ ಬೊಮ್ಮಸಂದ್ರ ಲಿಂಗಣ್ಣ, ಕಸಾಪ ತಾಲೂಕು ಅಧ್ಯಕ್ಷ ನವೀನ್ ಕುಮಾರ್ ಬಾಬು, ಹೋರಾಟಗಾರ ಬೊಮ್ಮಸಂದ್ರ ನಟರಾಜ್ ಮತ್ತತಿರು ಹಾಜರಿದ್ದರು.
ಸಮಾರಂಭದ ನಂತರ ವಿಚಾರ ಗೋಷ್ಠಿ, ವಿದ್ಯಾರ್ಥಿ ಕವಿಗೋಷ್ಠಿ ನಡೆದವು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮ್ಮೇಳನ ಅಧ್ಯಕ್ಷರಾದ ಸಾ.ರಾ.ಗೋವಿಂದ್ ರವರು ಬೆಳಿಗ್ಗೆ ಡಾ.ರಾಜ್ ಕುಮಾರ್ ಪುಣ್ಯ ಭೂಮಿಯ ಕಂಠೀರವ ಸ್ಟುಡಿಯೋದಿಂದ ಪೂಜೆ ಸಲ್ಲಿಸಿ ತೆರದ ಜೀಪಿನಲ್ಲಿ ಕನ್ನಡ ಜಾಗೃತಿ ಮೆರವಣಿಗೆ ಮಾಡಿಕೊಂಡು ಚಂದಾಪುರಕ್ಕೆ ಆಗಮಿಸಿದರು.
ಕನ್ನಡಿಗರಿಗೆ ಉದ್ಯೋಗ ಮೀಸಲಿಡಿ: “ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಲು ಕನ್ನಡ ಭಾಷೆಯನ್ನು ಕಡ್ಡಾಯ ಗೊಳಿಸಬೇಕು. ಜತೆಗೆ ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಅರ್ಹರಾದವರನ್ನು ಮಾತ್ರ ಕೆಲಸಕ್ಕೆ ಸೇರಿಸಿಕೊಳ್ಳುವ ಕಾನೂನು ರೂಪಿಸಬೇಕು.
ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದು ಆದ್ಯತೆಯಾಗಬೇಕು. ಕೇಂದ್ರ ಸರ್ಕಾರಿ ಕಚೇರಿಗಳಲ್ಲಿನ “ಸಿ’ ಮತ್ತು “ಡಿ’ ದರ್ಜೆ ಹುದ್ದೆಗಳನ್ನು ಆಯಾ ರಾಜ್ಯದವರಿಗೆ ಮೀಸಲಿಡಬೇಕು,’ ಎಂದು ಸಾ.ರಾ.ಗೋವಿಂದು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.