ಅಂತಿಮ ವರದಿ ಜಾರಿಗೂ ಬದ್ಧ
Team Udayavani, Mar 4, 2018, 11:57 AM IST
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಆರನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಲೂ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಶನಿವಾರ ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಮಹಾ ಸಮ್ಮೇಳನ ಹಾಗೂ ಪ್ರಜಾಸ್ನೇಹಿ ಆಡಳಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಈಗಾಗಲೇ ಮೊದಲ ಕಂತಿನ ವರದಿಯ ಶಿಫಾರಸಿನಂತೆ ನೌಕರರ ಮತ್ತು ಪಿಂಚಣಿದಾರರ ಮೂಲ ವೇತನದ ಮೇಲೆ ಶೇ.30ರಷ್ಟು ವೇತನ ಹೆಚ್ಚಳ ಮಾಡಿದೆ. ಏಪ್ರಿಲ್ ಅಂತ್ಯಕ್ಕೆ 6ನೇ ವೇತನ ಆಯೋಗ ಅಂತಿಮ ವರದಿ ಸಲ್ಲಿಸಲಿದ್ದು, ಈ ಶಿಫಾರಸ್ಸುಗಳನ್ನೂ ಸಹ ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಅಂತಿಮ ವರದಿ ಸಲ್ಲಿಸಲು ಆಯೋಗಕ್ಕೆ 3 ತಿಂಗಳ ಕಾಲಾವಕಾಶ ನೀಡಲಾಗಿದೆ. ಸಮಗ್ರ ಅಧ್ಯಯನ ನಡೆಸಿ, ಅಹವಾಲು ಆಲಿಸಿ ಅಂತಿಮ ವರದಿ ಸಲ್ಲಿಸಲು ಸೂಚಿಸಲಾಗಿದೆ. ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಗೂ ಶಿಫಾರಸು ಜಾರಿಗೂ ಸಂಬಂಧವಿಲ್ಲ. ಅಂತಿಮ ವರದಿಯಲ್ಲಿನ ಶಿಫಾರಸು ತಪ್ಪದೇ ಜಾರಿಗೆ ತರಲಿದ್ದೇವೆ ಎಂದು ಹೇಳಿದರು.
ಸರ್ಕಾರಿ ನೌಕರರೇ ಸರ್ಕಾರದ ಕಾರ್ಯಕ್ರಮಗಳಿಗೆ ರಾಯಭಾರಿಗಳು. ಜನಪ್ರತಿನಿಧಿಗಳು ಘೋಷಿಸುವ ಜನಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ಕಾರ್ಯಾಂಗದ ಕೈಯಲ್ಲಿ ಇರುತ್ತದೆ. ಸರ್ಕಾರ ಜಾರಿಗೆ ತಂದ ಜನೋಪಯೋಗಿ ಯೋಜನೆಗಳು ಒಂದಿಲ್ಲೊಂದು ವಿಧಾನದಲ್ಲಿ ರಾಜ್ಯದ ಶೇ.90ರಷ್ಟು ಜನರಿಗೆ ತಲುಪಿದೆ. ವಿವಿಧ ಭಾಗ್ಯಗಳು, ಸಾಮಾಜಿಕ ಸಮಾನತೆ ಹಾಗೂ ಆರ್ಥಿಕ ಸ್ವಾವಲಂಬನೆಗೆ ತೆಗೆದುಕೊಂಡ ಕ್ರಮದ ಅನುಷ್ಠಾನದಲ್ಲಿ ಸರ್ಕಾರಿ ನೌಕರರ ಪಾತ್ರ ಹಾಗೂ ಶಾಸಕಾಂಗ ವ್ಯವಸ್ಥೆಯ ಜವಾಬ್ದಾರಿ ಹೆಚ್ಚಿದೆ ಎಂದರು.
ಸಿಎಂಗೆ ಸನ್ಮಾನ: 6ನೇ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಶೇ.30ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮ್ಮೇಳನದಲ್ಲಿ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಮೈಸೂರು ಪೇಟ ಧರಿಸಿ, ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನಿಸಿ ನೌಕರರ ಸಂಘದಿಂದ ಕೃತಜ್ಞತೆ ಸಲ್ಲಿಸಲಾಯಿತು.
ಸಚಿವರಾದ ಡಿ.ಕೆ.ಶಿವಕುಮಾರ್, ರಾಮಲಿಂಗಾ ರೆಡ್ಡಿ, ಎಚ್.ಎಂ.ರೇವಣ್ಣ, ಎಚ್.ಆಂಜನೇಯ, ಟಿ.ಬಿ.ಜಯಚಂದ್ರ, ವಿನಯ್ ಕುಲಕರ್ಣಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ, ಗೌರವಾಧ್ಯಕ್ಷ ಎಚ್.ಕೆ.ರಾಮು, ಹಿರಿಯ ಉಪಾಧ್ಯಕ್ಷ ಬಸವರಾಜ ಗುರಿಕಾರ, ಉಪಾಧ್ಯಕ್ಷೆ ದ್ವಿತೀಯಾ, ಪ್ರಧಾನ ಕಾರ್ಯದರ್ಶಿ ಮಾಲತೇಶ ವೈ ಅಣ್ಣಗೇರಿ, ಖಜಾಂಚಿ ಯೋಗಾನಂದ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಶಿಫಾರಸು ಪುನರ್ ಪರಿಶೀಲನೆಗೆ ಮನವಿ: 6ನೇ ವೇತನ ಆಯೋಗದ ವರದಿಯಲ್ಲಿ ಕೆಲವು ನ್ಯೂನತೆಗಳಿದ್ದು, ಅವುಗಳನ್ನು ಸರಿಪಡಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ಕನಿಷ್ಠ ಶೇ.45ರಿಂದ ಶೇ.113ರಷ್ಟು ವ್ಯತ್ಯಾಸವಿದೆ. ಪ್ರಸ್ತುತ ಶೇ.30 ವೇತನ ಹೆಚ್ಚಳ ಮಾಡಿದ್ದರೂ ವೇತನ ವ್ಯತ್ಯಾಸ ಕನಿಷ್ಠ ಶೇ.15ರಿಂದ ಶೇ.83ರಷ್ಟು ಮುಂದುವರಿದಿದೆ.
ಆಯೋಗದ ಶಿಫಾರಸನ್ನು ಮತ್ತೂಮ್ಮೆ ಪರಿಶೀಲಿಸಿ ಕನಿಷ್ಠ ಶೇ.45 ಮತ್ತು ಗರಿಷ್ಠ ಶೇ.113 ವೇತನ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.