![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 12, 2021, 9:33 AM IST
ಬೆಂಗಳೂರು: ಗುರುವಾರ ಬೆಳಗ್ಗೆಯಿಂದಲೇ ಆರಂಭವಾದ ಮಳೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ದಲ್ಲಿ ಆರಂಭಗೊಂಡ ಕೃಷಿ ಮೇಳ ಮೊದಲ ದಿನ ತಣ್ಣೀರೆರೆಚಿತು. ಎರಡು ವರ್ಷಗಳ ನಂತರ ತುಂಬಾ ಕುತೂಹಲದಿಂದ ಮತ್ತು ಆಸಕ್ತಿಯಿಂದ ರಾಜ್ಯದ ಹಲವೆಡೆಯಿಂದ ಬಂದಿರುವ ರೈತರಿಗೆ ಏನೇನೂ ನೋಡಲು ಸಾಧ್ಯವಾಗಲಿಲ್ಲ.
ಬೆಳಗ್ಗೆಯಿಂದಲೇ ಮಳೆ ಆರಂಭವಾಗಿದ್ದರಿಂದ ಮತ್ತು ಮಳಿಗೆಗಳು ಇರುವ ಸ್ಥಳ ಜೇಡಿಮಣ್ಣಿನಿಂದ ಕೂಡಿದ್ದು, ಕಾಲು ಇಟ್ಟರೆ ಜಾರುತ್ತಿತ್ತು. ಮೇಳ ನೋಡಲು ಬಂದಿದ್ದ ಹಲವು ಮಂದಿ ಜಾರಿ ಬಿದ್ದ ಪ್ರಸಂಗಗಳು ಕೂಡ ಕಂಡುಬಂದವು. ಕೃಷಿ ಮೇಳದ ಮಳಿಗೆಗಳ ಮುಂಭಾಗ ಗದ್ದೆಗಳಾಗಿ ಪರಿವರ್ತನೆಯಾಗಿದ್ದವು. ಪರಿಣಾಮ, ಮೇಳ ನೋಡಲು ಬಂದಂತಹ ಜನರು ಮಳೆಯಿಂದ ತೋಯ್ದುಕೊಂಡೇ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದರು.
ಇದನ್ನೂ ಓದಿ:- ಒಂದು ಕಡೆ ಬಡತನ, ಇನ್ನೊಂದು ಕಡೆ ಕ್ರೀಡೆ: ಪ್ಯಾರಾ ಅಥ್ಲೀಟ್ ಗೆ ಕಾಡುತ್ತಿದೆ ಭವಿಷ್ಯದ ಚಿಂತೆ
ಕೊಡೆ, ರೈನ್‌ಕೋಟ್ ತಂದಿರುವಂತಹವರು ಮೇಳವನ್ನು ಆರಾಮಾಗಿ ನೋಡುತ್ತಿದ್ದರು. ಬರಿಗೈಯಲ್ಲಿ ಬಂದವರು, ಮಳೆಯಲ್ಲಿ ನೆನೆಯುವ ಜೊತೆಗೆ ಚಳಿಗಾಳಿ ಬೀಸುತ್ತಿದ್ದರಿಂದ ನಡುಗುವಂತಾಗಿತ್ತು. ಹೀಗಾಗಿ, ಮೇಳವನ್ನು ನೋಡುವ ಬದಲು ಒಂದೆಡೆ ಕುಳಿತುಕೊಂಡರೆ ಸಾಕು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಂಕಾದ ವೇದಿಕೆ: ಕೃಷಿ ಮೇಳದ ಮೊದಲ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರಿಂದ ಅಧಿಕೃತ ಚಾಲನೆಗೊಳ್ಳಬೇಕಿತ್ತು. ಆದರೆ, ಸರ್ಕಾರದ ಪರವಾಗಿ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮಾತ್ರ ಬಂದಿದ್ದರಿಂದ ವೇದಿಕೆ ಕಾರ್ಯಕ್ರಮಗಳು ಮಂಕಾಗಿದ್ದವು. ಇದರ ಜೊತೆಗೆ ಮಳೆ ಕೂಡ ಬರುತ್ತಿದ್ದರಿಂದ ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿತು.
ಸಚಿವರ ಗೈರಿಗೆ ನೀತಿ ಸಂಹಿತೆ ಕಾರಣ?: ಮುಖ್ಯಮಂತ್ರಿಗಳ ಬದಲಿಗೆ ಕೃಷಿ ಸಚಿವರಾದರೂ ಕಾರ್ಯಕ್ರಮಕ್ಕೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಡಿ.10ರಂದು ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಎನ್ನಲಾಗಿದೆ.
ಮಳೆಯ ಖುಷಿ: ಇನ್ನು ಕೃಷಿ ವಿವಿ ಆವರಣವು ಗ್ರಾಮೀಣ ಪ್ರದೇಶದ ರೀತಿ ಗದ್ದೆ, ತೋಟದ ಪರಿಸರವಿದೆ. ಇದರ ಜೊತೆಗೆ ಮಳೆ ಬರುತ್ತಿದ್ದರಿಂದ ಮಲೆನಾಡಿನ ರೀತಿಯಲ್ಲಿ ಭಾಸವಾಗುತ್ತಿತ್ತು. ಈ ವಾತಾವರಣವನ್ನು ಕೊಡೆ ಹಿಡಿದು ಫೋಟೋ ಶೂಟ್ ಮಾಡುತ್ತಿದ್ದರು. ರಾಗಿ ಹೊಲ, ಭತ್ತದ ಗದ್ದೆ, ಸೂರ್ಯಕಾಂತಿ ಗಿಡಗಳ ನಡುವೆ ನಿಂತು ಫೋಟೋಗಳನ್ನು ತೆಗೆಸಿಕೊಳ್ಳುವ ಮೂಲಕ ಮಳೆಯನ್ನು “ಎಂಜಾಯ್’ ಮಾಡಿದರು.
You seem to have an Ad Blocker on.
To continue reading, please turn it off or whitelist Udayavani.