ಮಲ್ಲೇಶ್ವರದಲ್ಲಿ ಮೊದಲ ಕಡಲೆಕಾಯಿ ಪರಿಷೆ
Team Udayavani, Nov 6, 2017, 11:55 AM IST
ಬೆಂಗಳೂರು: ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯದ ಆವರಣದಲ್ಲಿ ಭಾನುವಾರ ಥೇಟ್ ಹಳ್ಳಿ ಜಾತ್ರೆಯ ವಾತಾವರಣ ಕಳೆಗಟ್ಟಿತ್ತು. ಅಪ್ಪಟ ದೇಸಿ ವಾದ್ಯದ ತಮಟೆ ವಾದನ, ಲಗು-ಬಗೆಯಿಂದ ಓಡಾಡುತ್ತಿದ್ದ ಭಕ್ತರು… ಪುಟು..ಪುಟು ಹೆಜ್ಜೆಹಾಕುತ್ತಾ ಪೋಷಕರ ಕೈ ಹಿಡಿದು ಕಡೆಲೆಕಾಯಿ ಕೊಡಿಸುವಂತೆ ಕರೆದೊಯ್ಯತ್ತಿದ್ದ ಪುಟಾಣಿಗಳು…
ಈ ಸಂಭ್ರಮಕ್ಕೆ ಸಾಥ್ ನೀಡಿದ ತುಂತುರು ಮಳೆಹನಿಗಳ ಸಿಂಚನ….. ಈ ಚಿತ್ರಣಕ್ಕೆ ಕಾರಣವಾಗಿದ್ದು ಕಾಡುಮಲ್ಲೇಶ್ವರ ಗೆಳೆಯರ ಬಳಗ 100ನೇ ಹುಣ್ಣಿಮೆ ಹಾಡಿನ ಅಂಗವಾಗಿ ಮೊಟ್ಟಮೊದಲ ಬಾರಿಗೆ ಆರಂಭಗೊಂಡ “ಕಡಲೆಕಾಯಿ ಪರಿಷೆ’
ಹೌದು, ಬಸವನಗುಡಿಗೆ ಸೀಮಿತಗೊಂಡಿದ್ದ ಕಡಲೆಕಾಯಿ ಪರಿಷೆ ಭಾನುವಾರ ಮಲ್ಲೇಶ್ವರಂನಲ್ಲೂ ಆರಂಭಗೊಂಡಿತು. ದಕ್ಷಿಣ ಮುಖ ನಂದಿ ತೀರ್ಥ ಕಲ್ಯಾಣಿ ಕ್ಷೇತ್ರದಲ್ಲಿ ಶಿವನಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಆರಂಭಗೊಂಡ ಕಡಲೆಕಾಯಿ ಪರಿಷೆ ಉದ್ಘಾಟನೆಯಲ್ಲೂ ವಿಶೇಷತೆ ಮೆರೆದಿತ್ತು. ಕಡಲೆಕಾಯಿ ಪರಿಷೆ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಸಾಮಾಜಿಕ ಕಾರ್ಯಕರ್ತೆ ಅಕೈ ಪದ್ಮಶಾಲಿ, ಇದೇ ಮೊದಲ ಬಾರಿಗೆ ಕಡಲೇಕಾಯಿ ಪರಿಷೆಗೆ ಬಂದಿದ್ದೇನೆ.
ಜನರು ನನ್ನನ್ನು ಆತ್ಮೀಯತೆಯಿಂದ ಬರಮಾಡಿಕೊಂಡಿರುವುದು ಖುಷಿ ನೀಡಿದೆ. ಈ ಗೌರವ ನಮ್ಮ ಸಮುದಾಯಕ್ಕೂ ಸಿಗುವಂತಾಗಬೇಕು ಎಂದು ಆಯೋಜಕರಿಗೆ ಧನ್ಯವಾದ ಅರ್ಪಿಸಿದರು. ಈ ವೇಳೆ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ, ಜಾನಪದ ಗಾಯಕ ಡಾ.ವೇಮಗಲ್ ನಾರಾಯಣಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮತ್ತೂಂದೆಡೆ ಕಡಲೇಕಾಯಿ ಪರಿಷೆಯ ನಿಮಿತ್ತ ಕಾಡು ಮಲ್ಲಿಕಾರ್ಜುನ ಸ್ವಾಮಿ, ನಂದಿತೀರ್ಥ ಶಿವಲಿಂಗ, ಲಕ್ಷ್ಮಿ ನರಸಿಂಹಸ್ವಾಮಿ, ಗಂಗಮ್ಮ, ಗಣೇಶ, ಬಸವ ಸೇರಿದಂತೆ ವಿವಿಧ ದೇವರಿಗೆ ವಿಶೇಷವಾಗಿ ಕಡಲೇಕಾಯಿ ಅಲಂಕಾರ ಮಾಡಲಾಗಿತ್ತು. ಸಾವಿರಾರು ಮಂದಿ ಭಕ್ತಾದಿಗಳು ಸಾಲುಗಟ್ಟಿ ನಿಂತು ಕಡಲೇಕಾಯಿ ಅಲಂಕಾರದಿಂದ ಕಂಗೊಳಿಸುತ್ತಿದ್ದ ದೇವರ ದರ್ಶನ ಪಡೆದು ಪರಿಷೆಯ ಕಡೆಗೆ ಹೆಜ್ಜೆ ಹಾಕಿದರು.
ಕಡಲೆಕಾಯಿ ಪರಿಷೆಯಲ್ಲಿ ತರೇಹವಾರಿ ಕಡಲೆಕಾಯಿಗಳನ್ನು ಮಾರಾಟ ಮಾಡಲು ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡಿನಿಂದ ಕೆಲ ರೈತರು ಆಗಮಿಸಿದ್ದರು. ನಾಟಿ, ಬಾದಾಮಿ, ಕಲ್ಯಾಣಿ ಫಾರಂ ಕಡಲೆಕಾಯಿಗಳನ್ನು ಪ್ರತಿ ಕೆ.ಜಿಗೆ 40 ರೂ, 50, 60, ರಂತೆ ಮಾರಾಟ ಮಾಡುತ್ತಿದ್ದರು.
ಸಾವಿರಾರು ಮಂದಿ ಸ್ಥಳೀಯರು ತಮ್ಮ ಬಡವಾಣೆಯಲ್ಲಿ ಮೊದಲ ಬಾರಿಗೆ ನಡೆದ ಕಡಲೆಕಾಯಿ ಪರಿಷೆಯನ್ನು ಕಣ್ತುಂಬಿಕೊಂಡಿದ್ದಲ್ಲದೆ. ಸ್ನೇಹಿತರು ಹಾಗೂ ಕುಟುಂಬದವರ ಜೊತೆ ಸುತ್ತಾಡಿ ಸಂಭ್ರಮಪಟ್ಟಿದ್ದಲ್ಲದೆ, ನಾಟಿ, ಬಾದಾಮಿ, ಕಲ್ಯಾಣಿ ಫಾರಂ ಕಡಲೆಕಾಯಿಗಳನ್ನು ಕೊಂಡುಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಈ ಸಂಭ್ರಮದ ನಡುವೆಯೇ ಮಲ್ಲೇಶ್ವರದ ಹಿರಿಯ ಜೀವಗಳು, ಹಳೆಯ ಸ್ನೇಹಿತರು ದೇವಸ್ಥಾನದ ಕಟ್ಟೆ, ಮೆಟ್ಟಿಲುಗಳು, ಮರದ ನೆರಳಿನಲ್ಲಿ ಕುಳಿತು ಗ್ರಾಮೀಣ ಜೀವನದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಿದ್ದರು. ಕೆಲವರು ತಮ್ಮ ಅಮೂಲ್ಯ ಬಾಲ್ಯಜೀವನದ ಘಟನೆಗಳನ್ನು ಹೇಳಿಕೊಂಡು ಸಂಭ್ರಮಿಸುತ್ತಿದ್ದರು. ಪರಿಷೆಯಲ್ಲಿ ಅಪರೂಪದ ಸ್ನೇಹಿತರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿಕೊಂಡು ಬಡವರ ಬಾದಾಮಿಯನ್ನು ಸವಿಯುತ್ತಿದ್ದರು.
ಸುಟ್ಟು ತಿಂದರೆ ಭಾರೀ ಸವಿ
ಸಂಜೆ ನಡೆದ ಹುಣ್ಣಿಮೆ ಹಾಡು ಒಂದು ಅವಲೋಕನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ರಮೇಶ್‌ಕುಮಾರ್, ಬೆಂಗಳೂರಿನ ಯಾಂತ್ರಿಕ ಜೀವನದಿಂದ ಹೊರಬರಲು ಕಡಲೆಕಾಯಿ ಪರಿಷೆಯಂತಹ ಕಾರ್ಯಕ್ರಮಗಳು ಅವಶ್ಯ ಎಂದರಲ್ಲದೆ. ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಹಾಲುಗಟ್ಟಿದ ಕಡಲೇಕಾಯಿ ಬೆಂಕಿಯಲ್ಲಿ ಹಾಕಿ ಸುಟ್ಟು ತಿಂದರೆ ತುಂಬಾ ಚೆನ್ನಾಗಿರುತ್ತದೆ ಎಂದರು.
ಸಾಂಸ್ಕೃತಿಕ ಸೊಬಗಿನ ರಂದು
ದೇವಾಲಯದಲ್ಲಿ ವಿಶೇಷವಾಗಿ ಅಲಂಕಾರಗೊಂಡ ದೇವರದರ್ಶನ ಪಡೆದು ಪುಳಕಿತರಾದ ಸಾರ್ವಜನಿಕರು, ಕೋಲಾರದ “ಈ ಭೂಮಿ’ ಬಳಗದ ತಮಟೆ ವಾದನ ಹಾಗೂ ಸಂಜೆ ನಡೆದ ವಿದ್ವಾನ್ ಕುಮಾರೇಶ್ ಹಾಗೂ ವಿದ್ವಾನ್ ಗಣೇಶ್ ತಂಡ ನಡೆಸಿಕೊಟ್ಟ ವಯೋಲಿನ್ ವಾದನಕ್ಕೆ ಮಾರುಹೋದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.