ಸರ್ಕಾರಕ್ಕೆ ಗಣೇಶನೇ ಗತಿ
Team Udayavani, Sep 12, 2018, 6:00 AM IST
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಭವಿಷ್ಯ ಕುರಿತು ಊಹಾಪೂಹಗಳ ಸಾಮ್ರಾಜ್ಯ ಸೃಷ್ಟಿಯಾಗಿದ್ದು, ಇದರ ನಡುವೆ ಹದಿನೈದು ದಿನದಲ್ಲಿ ಏನಾದರೂ ಆಗಬಹುದು. ಸೆ.16 ರವರೆಗೂ ಕಾದು ನೋಡಿ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಇದರ
ಬೆನ್ನಲ್ಲೇ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸಿದರೆ, ಆ ಪಕ್ಷದ ಐವರು ಶಾಸಕರಿಂದ ರಾಜೀನಾಮೆ ಕೊಡಿಸುವುದು ನಮಗೆ ಗೊತ್ತಿಲ್ಲವೇ ಎಂದು ಎಚ್.ಡಿ.ಕುಮಾರಸ್ವಾಮಿ ಕಮಲ ನಾಯಕರಿಗೆ ಸವಾಲು ಹಾಕಿದ್ದಾರೆ.
ಮತ್ತೂಂದೆಡೆ ಗಣೇಶ ಹಬ್ಬದ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ತರ ವಿದ್ಯಮಾನಗಳು ನಡೆಯಲಿದ್ದು, ಹೈದರಾಬಾದ್‌ನಲ್ಲಿ 16 ಕೊಠಡಿ ಕಾಯ್ದಿರಿಸಲಾಗಿದೆ ಎಂದು ಹೇಳಲಾಗಿದೆ. ಇದರಿಂದ ರೆಸಾರ್ಟ್ ರಾಜಕಾರಣ ಪ್ರಾರಂಭವಾಗುವ ಲಕ್ಷಣಗಳು ಕಂಡುಬರುತ್ತಿವೆ. ಏನೇ ಆದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದೇಶ ಪ್ರವಾಸದಿಂದ ವಾಪಸ್ ಬಂದ ಮೇಲೆ ರಾಜಕೀಯ ಬೆಳವಣಿಗೆಗಳು ಗರಿಗೆದರಲಿವೆ ಎಂದು ಹೇಳಲಾಗುತ್ತಿದೆ. ಮಂಗಳವಾರ ಇಡೀ ದಿನ ಬೆಂಗಳೂರಿನಲ್ಲಿ ಸಾಕಷ್ಟು ರಾಜಕೀಯ ವಿದ್ಯಮಾನಗಳು ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಾಸಕರ ಜತೆ ಮಹತ್ವದ ಮಾತುಕತೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ರಮೇಶ್‌ಜಾರಕಿಹೊಳಿ ಹಾಗೂ ಬಿ.ಸಿ.ಪಾಟೀಲ್ ಅವರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದರು.
ಇದರ ನಡುವೆಯೇ, ಮಂಡ್ಯದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿಯ ಐವರು ಶಾಸಕರು ನಮ್ಮ ಸಂಪರ್ಕದಲ್ಲಿದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಕಾದು ನೋಡಿ ಎಂದು ಹೊಸ ಬಾಂಬ್ ಸಿಡಿಸಿದರು. ರಾಜ್ಯ ರಾಜಕಾರಣ ದಲ್ಲಿ ಏನೋ ಆಗುತ್ತಿದೆ ಎಂಬ ಅನುಮಾನಕ್ಕೆ ಈ ಎಲ್ಲ ವಿದ್ಯಮಾನಗಳು ಪುಷ್ಠಿ ನೀಡಿವೆ.
ಕೊಠಡಿ ಬುಕ್ ಆಗಿದೆಯಾ?: ಜಾರಕಿಹೊಳಿ ಸಹೋದರರ ಅಸಮಾಧಾನ ತಣ್ಣಗಾಗಿದೆ ಎಂದು ಹೇಳುತ್ತಿದ್ದರೂ ಹೈದರಾಬಾದ್‌ನಲ್ಲಿ ರೆಡ್ಡಿ ಸಹೋ ದರರ ಸಂಬಂಧಿಕರ ಹೊಟೆಲ್ ನಲ್ಲಿ 16 ವಿಐಪಿ ಕೊಠಡಿ ಕಾಯ್ದಿರಿಸಲಾಗಿದೆ. ತೆಲಂಗಾಣ ರಾಜ ಕಾರಣಿಗಳ ಮೂಲಕ ಕೊಠಡಿ ಕಾಯ್ದಿರಿಸಲಾಗಿದೆ. ಗಣೇಶ ಹಬ್ಬ ನಂತರ 16 ಕ್ಕೂ ಹೆಚ್ಚು ಶಾಸಕರು ಹೈದರಾ ಬಾದ್‌ಗೆ ತೆರಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ, ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್, ಅಫಜಲ್‌ಪುರ ಶಾಸಕ ಎಂ.ವೈ. ಪಾಟೀಲ್, ಹರಿಹರ ಶಾಸಕ ಆರ್.ರಾಮಪ್ಪ ಅವರು ರಮೇಶ್ ಜಾರಕಿಹೊಳಿಯನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಮತ್ತೂಂದೆಡೆ ಸುದ್ದಿಗಾರರ ಜತೆ ಮಾತನಾಡಿದ ಸತೀಶ್ ಜಾರಕಿಹೊಳಿ , ಮುಂದಿನ ಹದಿನೈದು ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಏನಾದರೂ ಆಗಬಹುದು. ಸೆ.16 ರವರೆಗೂ ಕಾದು ನೋಡಿ ಎಂದು ಹೇಳಿದರು. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದು ಸರಿಯಲ್ಲ. ನಾವು ನಮ್ಮ ಜಿಲ್ಲೆಯ ರಾಜಕಾರಣವನ್ನು ಸರಿಪಡಿಸಿಕೊಳ್ಳುತ್ತೇವೆ. ಈ ಬಗ್ಗೆ ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇವೆ. ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಕ್ಷದ ವೇದಿಕೆ ಯಲ್ಲಿ ಸಮಸ್ಯೆ ಬಗೆ ಹರಿಸುವ ವಿಶ್ವಾಸ ಇದೆ ಎಂದರು.
ಪಕ್ಷ ಹಾಗೂ ಸರ್ಕಾರದ ಕೆಲವೊಂದು ವಿಚಾರ ಗಳಲ್ಲಿ ಅಸಮಾಧಾನ ಇರುವುದು ನಿಜ. ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಜಿಲ್ಲೆಯ ಅನೇಕ ವಿಷಯಗಳಲ್ಲಿ ನಮ್ಮನ್ನು ಕಡೆಗಣಿಸಲಾ ಗುತ್ತಿದೆ. ಇದು ಮತಷ್ಟು ಮುಂದುವರೆದರೆ, ಸ್ವಾಭಿಮಾನಕ್ಕೆ ಧಕ್ಕೆ ಮಾಡಿಕೊಂಡು ಸುಮ್ಮನೆ ಕೂರು ವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ಇದೇ ವೇಳೆ, ಬಿಜೆಪಿಯ ಯಾವುದೇ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಶ್ರೀರಾಮುಲು ಕೂಡ ನನ್ನ ಸಂಪರ್ಕಿ ಸಿಲ್ಲ. ನಾನಂತೂ ಯಾರ ಜೊತೆಗೂ ಮಾತನಾಡಿಲ್ಲ. ರಮೇಶ್ ಜಾರಕಿಹೊಳಿ ಮಾತನಾಡಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ನನಗೆ ರಾಜ್ಯ ರಾಜಕಾರಣವೇ ಸಾಕು. ರಮೇಶ್, ವಿವೇಕರಾವ್ ಪಾಟೀಲ್ ಹಾಗೂ ನನ್ನ ಹೆಸರು ಕೊಟ್ಟಿದ್ದೇವೆ. ಜಿಲ್ಲೆಯಿಂದ ಒಬ್ಬರು ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ. ಈ ಬಾರಿ ಎರಡೂ ಕ್ಷೇತ್ರಗಳನ್ನು ಗೆಲ್ಲಬೇಕೆಂದು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಡಿಕೆಶಿ ಸವಾಲು
ನಾನು ಬಿಜೆಪಿಯಿಂದ ಟಾರ್ಗೆಟ್ ಆದರೂ ಪರವಾಗಿಲ್ಲ. ನಾನು ಏನು ಮಾಡಬೇಕೊ ಅದನ್ನು ಮಾಡಿ ತೋರಿಸುತ್ತೇನೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ. ದೆಹಲಿಯಿಂದ ವಾಪಸ್ ಆದ ನಂತರ ಸಂಜೆವರೆಗೂ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಅವರು ಸಂಜೆ ಸುದ್ದಿಗಾರರ ಜತೆ ಮಾತನಾಡಿ, ನಾನು ಚೆಸ್ ಆಡುವವನು ಎಂದು ಈಗಾಗಲೇ ಹೇಳಿದ್ದೇನೆ. ಅವರು ಒಂದು ಪಾನ್ ಮೂವ್ ಮಾಡಲಿ. ಆ ಮೇಲೆ ನಾವು ಯಾವ ಪಾನ್ ಮೂವ್ ಮಾಡಬೇಕೋ ಮಾಡುತ್ತೇವೆ. ಇದು ರಾಜಕೀಯ ಇಲ್ಲಿ ಏನು ಬೇಕಾದರೂ ಆಗಬಹದು. ನಮ್ಮ ಪಕ್ಷದ ಶಾಸಕರನ್ನು ಬಿಜೆಪಿಯವರು ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಆದರೆ, ನಾವೇನಾದರೂ ಬಿಜೆಪಿ ತೊರೆಯುವ ಶಾಸಕರ ಹೆಸರು ಹೇಳಿದರೆ ಗಾಬರಿ
ಯಾಗುತ್ತೀರಾ ಎಂದು ಹೇಳಿದರು. ಬೆಳಗಾವಿ ರಾಜಕಾರಣ ದಲ್ಲಿ ಹಸ್ತಕ್ಷೇಪ ಮಾಡುವ ಜಾರಕಿಹೊಳಿ ಸಹೋದರರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಅವರು ಪಕ್ಷದ ನಿಷ್ಠಾವಂತ ಸ್ವಾಭಿಮಾನಿ ಗಳು. ಪಕ್ಷ ನಿಷ್ಠೆಯ ಬಗ್ಗೆ ಅವರಿಗೂ ಅರಿವಿದೆ. ಅವರು
ಕರೆದಾಗ ಅವರ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಆಗಲೂ ಸಹಾಯ ಮಾಡಿದ್ದೇನೆ. ಈಗಲೂ ಅವರಿಗೆ ಸಹಾಯ ಮಾಡುತ್ತೇನೆ. ಸತೀಶ್ ಜಾರಕಿಹೊಳಿ ನಮ್ಮ ಪಕ್ಷದ ಹಿರಿಯ ನಾಯಕರು. ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗುತ್ತೇನೆ ಎನ್ನುವು ದರಲ್ಲಿ ತಪ್ಪೇನಿದೆ. ರಾಜಕಾರಣಿಯಾದವರಿಗೆ ಆಸೆ ಮತ್ತು ಗುರಿ ಎರಡೂ ಇರಬೇಕು. ಅದೇ ನಿಜವಾದ ರಾಜಕಾರಣ. ಅವರು ಮುಖ್ಯಮಂತ್ರಿಯಾಗುವು ದಾದರೆ ಸಂತೋಷ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಆತುರದಲ್ಲಿದ್ದಾರೆ. ಅವರು ಆದಷ್ಟು ಬೇಗ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿ ಎಂದು ಶುಭ ಹಾರೈಸುವುದಾಗಿ ವ್ಯಂಗ್ಯವಾಡಿದರು.
ಬಿಜೆಪಿ ಸಂಪರ್ಕದಲ್ಲಿರುವ ಶಾಸಕರು?
ಗೋಕಾಕ್‌ನ ರಮೇಶ್‌ಜಾರಕಿಹೊಳಿ, ಯಮಕನಮರಡಿಯ ಸತೀಶ್ ಜಾರಕಿಹೊಳಿ, ಬಳ್ಳಾರಿ ಗ್ರಾಮಾಂತರದ ಬಿ.ನಾಗೇಂದ್ರ, ವಿಜಯನಗರದ ಆನಂದ್ ಸಿಂಗ್, ಮಸ್ಕಿಯ ಪ್ರತಾಪ್‌ಗೌಡ, ಬಸವಕಲ್ಯಾಣದ ಬಿ.ನಾರಾಯಣರಾವ್, ಕಾಗವಾಡದ ಸೀಮಂತ್ ಪಾಟೀಲ್, ಸಂಡೂರಿನ ತುಕಾರಾಂ, ರಾಯಚೂರು ಗ್ರಾ.ದ ಬಸವನಗೌಡ, ಲಿಂಗಸಗೂರಿನ ಡಿ.ಎಸ್.ಹುಲಗೇರಿ, ಅಥಣಿಯ ಮಹೇಶ್ ಕಮಟಹಳ್ಳಿ, ಮುಳಬಾಗಿಲಿನ ನಾಗೇಶ್, ಕುಷ್ಠಗಿಯ ಅಮರೇಗೌಡ ಬಯ್ನಾಪುರ, ಹಿರೇಕೆರೂರಿನ ಬಿ.ಸಿ.ಪಾಟೀಲ್.
ಎಚ್‌ಡಿಕೆ ಜತೆ ಸಂಪರ್ಕದಲ್ಲಿ ಯಾರು?
ರಾಯಚೂರಿನ ಡಾ.ಎಸ್.ಶಿವರಾಜ್‌ಪಾಟೀಲ್, ಹೊಸದುರ್ಗ ಗೂಳಿಹಟ್ಟಿ ಶೇಖರ್, ಸಿರಗುಪ್ಪದ ಎಂ.ಎಸ್.ಸೋಮಲಿಂಗಪ್ಪ, ಹಿರಿಯೂರಿನ ಪೂರ್ಣಿಮಾ, ಆಳಂದದ ಸುಭಾಷ್ ಗುತ್ತೇದಾರ್.
ಬೆಳಗಾವಿ ರಾಜಕೀಯ ವಿಚಾರದಲ್ಲಿ ರಮೇಶ್ ಜಾರಕಿಹೊಳಿಗೆ ನೋವಾಗಿದೆ. ಪಕ್ಷದ ನಾಯಕರು ಅದನ್ನು ಬಗೆ ಹರಿಸುವ ವಿಶ್ವಾಸ ಇದೆ. ನಾವು ರಮೇಶ್ ಜಾರಕಿಹೊಳಿ ಜೊತೆಗಿದ್ದೇವೆ. ಶ್ರೀರಾಮುಲುಗೆ ಡಿಸಿಎಂ ಮಾಡುವುದು ಬಿಜೆಪಿಗೆ ಬಿಟ್ಟ ವಿಚಾರ. ವಾಲ್ಮೀಕಿ ಸಮುದಾಯದ ವಿಚಾರ ಬಂದಾಗ ನಾವೆಲ್ಲರೂ ಒಂದೇ. ಬಳ್ಳಾರಿ ಜಿಲ್ಲೆಗೆ ಒಂದು ಮಂತ್ರಿ ಸ್ಥಾನ ಕೊಡುವ ವಿಶ್ವಾಸ ಇದೆ.
● ಬಿ. ನಾಗೇಂದ್ರ, ಬಳ್ಳಾರಿ ಗ್ರಾಮೀಣ ಶಾಸಕ
ರಮೇಶ್ ಜಾರಕಿಹೊಳಿ ಭೇಟಿ ಮಾಡಿರುವುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಮ್ಮನ್ನು ಯಾವುದೇ ಬಿಜೆಪಿ ನಾಯಕರು ಸಂಪರ್ಕಿಸಿಲ್ಲ. ರಮೇಶ್ ಜಾರಕಿಹೊಳಿ ಜೊತೆ ನಾವಿದ್ದೇವೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ.
● ಪ್ರತಾಪ್‌ಗೌಡ ಪಾಟೀಲ್, ಮಸ್ಕಿ ಶಾಸಕ
ನಮಗೂ ತಿರುಗೇಟು ಕೊಡುವುದು ಗೊತ್ತು. ನಮ್ಮ ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕೆ ಬಿಜೆಪಿ ಐವರು ಶಾಸಕರಿಂದ ರಾಜೀನಾಮೆ ಕೊಡಿಸಿದರೆ ಪರಿಸ್ಥಿತಿ ಏನಾಗಬಹುದೆಂಬ ಬಗ್ಗೆ ಅವರೂ ಲೆಕ್ಕಾಚಾರ ಹಾಕಲಿ.
● ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಪಕ್ಷ ಹಾಗೂ ಸರ್ಕಾರದಲ್ಲಿನ ಗೊಂದಲ ಎಲ್ಲವೂ ಮುಗಿದ ಅಧ್ಯಾಯ.ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ಮಾತು ಕತೆ ನಡೆಸಿದ್ದಾರೆ. ಬಿಜೆಪಿಯಿಂದ ಯಾವುದೇ ರೀತಿಯ ಆಹ್ವಾನ ಬಂದಿಲ್ಲ. ಸತೀಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಪೌರಾಡಳಿತ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.