ಕೈಗಾರಿಕೆಯಲ್ಲಿ ರಾಜ್ಯವನ್ನು ನಂ.1 ಆಗಿಸುವ ಗುರಿ
Team Udayavani, Sep 7, 2019, 3:05 AM IST
ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನಾ ಹಾಗೂ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ರಾಜ್ಯವನ್ನು ಕೈಗಾರಿಕೆ ಅಭಿವೃದ್ಧಿಯಲ್ಲಿ ನಂಬರ್ ಒನ್ ಮಾಡುವುದು ನಮ್ಮ ಗುರಿ ಎಂದು ತಿಳಿಸಿದರು.
ಕರ್ನಾಟಕ ರಾಜ್ಯವು ಮೊದಲಿನಿಂದಲೂ ಕೈಗಾರಿಕೆಗಳ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಸರಕು ಕ್ಷೇತ್ರ, ಉದ್ಯಮ, ಕೈಗಾರಿಕೆ ಹಾಗೂ ಐಟಿ -ಬಿಟಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಬೆಂಗಳೂರು ಉತ್ತಮ ಹೆಸರು ಪಡೆದಿದೆ. ಈ ನಗರದಿಂದಲೇ ಚಂದ್ರಯಾನ ನಿರ್ವಹಣೆಯನ್ನು ಮಾಡಲಾಗುತ್ತಿರುವುದು ಬಹಳ ಸಂತಸದ ವಿಷಯ ಎಂದು ಹೇಳಿದರು.
ದೇಶದ ಆರ್ಥಿಕತೆಯ ಅಭಿವೃದ್ದಿಗೆ ಕೈಗಾರಿಕಾ ಕ್ಷೇತ್ರದ ಕೊಡುಗೆ ಅಪಾರ. ಕೈಗಾರಿಕಾ ನೀತಿಯನ್ನು ರೂಪಿಸಿದ ಮೊದಲ ರಾಜ್ಯ ನಮ್ಮದು ಎನ್ನುವ ಹೆಗ್ಗಳಿಕೆಯೂ ಇದೆ. ಕೈಗಾರಿಕಾ ನೀತಿಯಲ್ಲಿ ಆಗಬೇಕಾಗಿರುವ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಕೈಗಾರಿಕಾ ಸಂಸ್ಥೆಗಳು ಹಾಗೂ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ, ಹೊಸ ಕೈಗಾರಿಕಾ ನೀತಿ-2019 ರೂಪಿಸಲಾಗುವುದು ಎಂದರು.
ಈಗಾಗಲೇ ಕೈಮಗ್ಗ ನೇಕಾರರ ಸಾಲವನ್ನು ಮನ್ನಾ ಮಾಡಿದ್ದೇವೆ. ಈ ಕ್ಷೇತ್ರಕ್ಕೆ ಹೆಚ್ಚಿನ ಬಲ ನೀಡುವ ನಿಟ್ಟಿನಲ್ಲಿ ಹೊಸ ಜವಳಿ ನೀತಿಯನ್ನೂ ಜಾರಿಗೊಳಿಸಲಾಗುತ್ತಿದೆ. ಮುಂದಿನ 15 – 20 ದಿನಗಳಲ್ಲಿ ಕಲಬುರಗಿ ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಕೈಗಾರಿಕೆಗಳಿಗೆ ಹಾಗೂ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ದೇಶದ ವಾಣಿಜ್ಯ ಮತ್ತು ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದ್ದು, ಇದಕ್ಕೆ ಅಗತ್ಯವಾದ ನೀತಿ ನಿರೂಪಣೆ ಮಾಡುತ್ತಾ ಬಂದಿದ್ದು, ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವ ರಫ್ತುದಾರ ಕಂಪನಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ಕಾಲಕಾಲಕ್ಕೆ ತಕ್ಕಂತೆ ಹೊಸ, ಹೊಸ ಕೈಗಾರಿಕಾ ನೀತಿಗಳನ್ನು ಪ್ರಕಟಿಸುವ ಮೂಲಕ ಕೈಗಾರಿಕಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಸರ್ಕಾರ ರೂಪಿಸುತ್ತಾ ಬಂದಿದೆ. ಈ ಮೂಲಕ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸಾಲಿನಲ್ಲಿ ನಿಂತಿದೆ ಎಂದರು.
ಕರ್ನಾಟಕವು ರಫ್ತಿನಲ್ಲಿ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. 2018-19ನೇ ಸಾಲಿನಲ್ಲಿ ಕರ್ನಾಟಕವು 95,180 ದಶಲಕ್ಷ ಯುಎಸ್ ಡಾಲರ್‌ನಷ್ಟು ರಫ್ತು ಮಾಡಿದ್ದು, ದೇಶದ ಒಟ್ಟಾರೆ ರಫ್ತಿನ ಶೇ.17.8 ರಷ್ಟು ಪಾಲು ಹೊಂದಿದೆ ಎಂದು ಹೇಳಿದರು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ, ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ಸರ್ಕಾರದ ಕಾರ್ಯದರ್ಶಿ ಎಂ ಮಹೇಶ್ವರ್‌ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ 63 ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿ ಹಾಗೂ 47 ಉದ್ಯಮಿಗಳಿಗೆ ಸರ್.ಎಂ.ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.