ಅನುದಾನ ತಾರತಮ್ಯದ ವಾಗ್ವಾದ
Team Udayavani, Dec 28, 2018, 11:34 AM IST
ಬೆಂಗಳೂರು: ಅನುದಾನ ಹಂಚಿಕೆ ವಿಚಾರದಲ್ಲಿ ಮಹಿಳಾ ಸದಸ್ಯರ ಕ್ಷೇತ್ರಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಗುರುವಾರ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪುರುಷ ಮತ್ತು ಮಹಿಳಾ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.
ಜಿ.ಪಂ ಅಧ್ಯಕ್ಷ ಸಿ.ಮುನಿರಾಜು ನೇತೃತ್ವದಲ್ಲಿ ಬನಶಂಕರಿಯ ನಗರ ಜಿ.ಪಂ ಆವರಣದಲ್ಲಿ ನಡೆದ ವರ್ಷದ ಕೊನೆಯ ಸಾಮಾನ್ಯ ಸಭೆಯಲ್ಲಿ ಸಿಂಗಾನಯಕನಹಳ್ಳಿ ಕ್ಷೇತ್ರದ ಸದಸ್ಯೆ ಸಿ.ಲಾವಣ್ಯ, ಅನುದಾನ ಹಂಚಿಕೆ ವಿಚಾರದಲ್ಲಿ ಮಹಿಳಾ ಸದಸ್ಯರ ಕ್ಷೇತ್ರಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು.
“ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಕೇಳಿದ್ದೆ. ಆದರೆ ಹೆಚ್ಚುವರಿಯಾಗಿ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ನನಗೆ ಮಾತ್ರವಲ್ಲ, ನಗರ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿರುವ ಎಲ್ಲ 27 ಮಹಿಳಾ ಸದಸ್ಯರ ಕ್ಷೇತ್ರಗಳಿಗೂ ಸರಿಯಾಗಿ ಅನುದಾನ ಹಂಚಿಕೆಯಾಗಿಲ್ಲ,’ ಎಂದು ಟೀಕಿಸಿದರು. ಇದಕ್ಕೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದರು.
“ನನಗೆ ಮಾತನಾಡಲು ಅವಕಾಶ ನೀಡಿ, ಇಲ್ಲದಿದ್ದರೆ ಅಧ್ಯಕ್ಷರು ಕುಳಿತಿರುವ ಸಭಾಂಗಣದ ಮುಂದೆ ಕುಳಿತು ಪ್ರತಿಭಟನೆ ಮಾಡಬೇಕಾಗುತ್ತದೆ. ನನ್ನ ಕ್ಷೇತ್ರದಲ್ಲಿ ಬಯಲು ರಂಗ ಮಂದಿರ ನಿರ್ಮಿಸಲು 13 ಲಕ್ಷ ರೂ. ಅನುದಾನ ಕೇಳಿದ್ದೆ. ಅದು ಬಿಡುಗಡೆಯಾಗಿಲ್ಲ. ಆದರೆ ಮತ್ತೂಂದು ಕ್ಷೇತ್ರದ ಸದಸ್ಯರಿಗೆ ಬಯಲು ರಂಗ ಮಂದಿರ ನಿರ್ಮಾಣಕ್ಕಾಗಿ ಅನುದಾನ ನೀಡಲಾಗಿದೆ.
ಇದು ತಾರತಮ್ಯ ಅಲ್ಲವೇ?,’ ಎಂದು ಲಾವಣ್ಯ ಪ್ರಶ್ನಿಸಿದರು. “ಮಧ್ಯೆ ಪ್ರವೇಶಿಸಿದ ಅಧ್ಯಕ್ಷ ಮುನಿರಾಜು, ಯಾರಿಗೂ ಹೆಚ್ಚುವರಿ ಅನುದಾನ ನೀಡಿಲ್ಲ. ಎಲ್ಲರನ್ನೂ ಒಂದೇ ರೀತಿ ನೋಡಲಾಗಿದೆ. ಲಾವಣ್ಯ ಅವರ ಆರೋಪದಲ್ಲಿ ಹುರುಳಿಲ್ಲ,’ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.
25 ನಿವೇಶನ ಪರಭಾರೆ : ಆನೇಕಲ್ ತಾಲೂಕಿನ ಬನ್ನೇರುಘಟ್ಟ ಗ್ರಾಮದಲ್ಲಿ 175 ನಿವೇಶನಗಳನ್ನು ಬಡವರಿಗೆ ವಿತರಿಸಿದ್ದು, ಇದರಲ್ಲಿ 25 ನಿವೇಶನಗಳನ್ನು ಈಗಾಗಲೇ ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಪರಾಭಾರೆಯಲ್ಲಿ ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಶಾಮೀಲಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸದಸ್ಯೆ ಜಯಶ್ರೀ ಅಚ್ಯುತರಾಜು ಒತ್ತಾಯಿಸಿದರು.
ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿದ ನಂತರ 15 ವರ್ಷಗಳವರೆಗೆ ಪರಭಾರೆ ಮಾಡುವ ಹಾಗಿಲ್ಲ. ಒಂದು ವೇಳೆ ನಿವೇಶ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ವರದಿ ನೀಡುವಂತೆ ಅಧ್ಯಕ್ಷ ಮುನಿರಾಜು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ಪಕ್ಕದ ಆಸ್ಪತ್ರೆಗೆ ಹೋಗಿ: ಜಿ.ಪಂ ವ್ಯಾಪ್ತಿಯಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗಳಿದ್ದರೂ, ವೈದ್ಯಾಧಿಕಾರಿಗಳು ಸರಿಯಾದ ವೇಳೆಗೆ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಬಡವರ ಸೇವೆ ಮಾಡಬೇಕೆಂಬ ಕಾಳಜಿ ಅವರಿಗಿಲ್ಲ. ಯಲಹಂಕದ ವೈದ್ಯಾಧಿಕಾರಿಯೊಬ್ಬರು ಸರ್ಕಾರಿ ಆಸ್ಪತ್ರಗೆ ಬರುವ ಬಡ ರೋಗಿಗಳನ್ನು ತಮ್ಮ ಪತ್ನಿಯ ಆಸ್ಪತ್ರೆಗೆ ಕಳುಹಿಸಿ, ಬಡವರ ಸುಲಿಗೆ ಮಾಡುತ್ತಿದ್ದಾರೆ.
ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಚೊಕ್ಕನಹಳ್ಳಿ ವೆಂಕಟೇಶ್ ಆಗ್ರಹಿಸಿದರು. ಹಲವು ಆಸ್ಪತ್ರೆಗಳಲ್ಲಿ ಆ್ಯಂಬುಲೆನ್ಸ್‌ಗಳಿವೆ. ಆದರೆ ಚಾಲಕರೇ ಇಲ್ಲ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಒದಗಿಸಬೇಕು ಎಂದು ವೆಂಕಟೇಶ್ ಮನವಿ ಮಾಡಿದರು.
ಅನಾಹುತವಾದರೆ ಅಧಿಕಾರಿಗಳೇ ಹೊಣೆ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆಲವು ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲ ಸ್ಥಿತಿಯಲಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ, ಅಧಿಕಾರಿಗಳು ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ.
ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಹಲವು ಸದಸ್ಯರು ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಸಿಇಒ ಅರ್ಚನಾ, ಅಧಿಕಾರಿಗಳು ಗಮನಹರಿಸದಿದ್ದರೆ ಅವರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು. ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು
Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್ ನಿವೃತ ಅಧಿಕಾರಿ
Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!
Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ
Bengaluru: ಟೆಕಿಯ 1 ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ