ಎಫ್ಐಆರ್ ರದ್ದುಗೊಳಿಸಿದ ಹೈಕೋರ್ಟ್
Team Udayavani, Jan 11, 2019, 6:40 AM IST
ಬೆಂಗಳೂರು: ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣದ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ಮಾಧ್ಯಮ ಗೋಷ್ಠಿ ನಡೆಸಿ “ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ’ಪಡಿಸಲಾಗಿದೆ ಎಂದು ಆರೋಪಿಸಿ ಉದ್ಯಮಿ ವಿಜಯ್ ಟಾಟಾ ವಿರುದ್ಧ ದಾಖಲಿಸಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.
ತಮ್ಮ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ವಿಜಯ್ ಟಾಟಾ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಎಫ್ಐಆರ್ ರದ್ದುಗೊಳಿಸಿ ಆದೇಶಿಸಿತು. ಈ ಮೂಲಕ ಮಾಧ್ಯಮಗೋಷ್ಠಿ ನಡೆಸಲು ಸಹಕರಿಸಿದ ಹಾಗೂ ಪತ್ರಿಕಾ ಪ್ರಕಟಣೆ ಬರೆದುಕೊಟ್ಟ ಆರೋಪ ಹೊತ್ತಿದ್ದ ಪತ್ರಕರ್ತ ಅಶೋಕ್ ಸೇರಿ ಎಲ್ಲರ ವಿರುದ್ಧದ ಎಫ್ಐಆರ್ ರದ್ದುಗೊಂಡಂತಾಗಿದೆ.
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಕರ್ತವ್ಯನಿರತ ಸರ್ಕಾರಿ ನೌಕರರ ಮೇಲೆ ದೈಹಿಕವಾಗಿ ಹಲ್ಲೆ ಅಥವಾ ಬಲವಂತ ಮಾಡಿದ್ದರೆ ಮಾತ್ರ ಈ ಕಲಂ ಅನ್ವಯ ಆಗುತ್ತದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಪತ್ರಿಕಾಗೋಷ್ಠಿ ನಡೆಸಿದ್ದಾರೆಯೇ ಹೊರತು ಪೊಲೀಸರ ಮೇಲೆ ಯಾವುದೇ ರೀತಿ ಹಲ್ಲೆ ನಡೆಸಿಲ್ಲ ಅಥವಾ ಕರ್ತವ್ಯಕ್ಕೆ ಅಡ್ಡಿಪಡಿಸಿಲ್ಲ. ದುರುದ್ದೇಶದಿಂದ ಈ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ ಎಫ್ಐಆರ್ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಆರೋಪಿ ವಿರುದ್ಧ ಪೊಲೀಸರು ದಾಖಲಿಸಿರುವ ಕಲಂಗಳು ಸಮರ್ಪಕವಾಗಿಲ್ಲ ಮತ್ತು ಇಂತಹ ಪ್ರಕರಣ ದಾಖಲಿಸಿರುವುದು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟು ಎಫ್ಐಆರ್ ರದ್ದುಪಡಿಸಿದೆ. ಅಲ್ಲದೇ ಆರೋಪಿಗಳಿಂದ ವಶಪಡಿಸಿಕೊಂಡಿರುವ ಲ್ಯಾಪ್‌ಟಾಪ್, ಕಂಪ್ಯೂಟರ್, ಪುಸ್ತಕಗಳು ಹಾಗೂ ಇತರೆ ವಸ್ತುಗಳನ್ನು ಕೂಡಲೇ ಹಿಂದಿರುಗಿಸಬೇಕು ಎಂದೂ ಆದೇಶಿಸಲಾಗಿದೆ.
ಪ್ರಕರಣವೇನು?: ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ಅಲೋಕ್ ಕುಮಾರ್, ಆ್ಯಂಬಿಡೆಂಟ್ ಕಂಪನಿಯ ಫರೀದ್ ರಕ್ಷಣೆಗೆ ನಿಂತಿದ್ದಾರೆ ಎಂದು 2018ರ ಡಿಸೆಂಬರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಲಾಗಿತ್ತು. ಇದು ಸರ್ಕಾರಿ ನೌಕರರ (ಪೊಲೀಸರ) ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣವಾಗಿದೆ ಎಂಬ ಆಧಾರದಲ್ಲಿ ವಿಜಯ್ ಟಾಟಾ, ಜಯೀದ್ ಖಾನ್ ಹಾಗೂ ಸಿರಾಜುದ್ದೀನ್ ವಿರುದ್ಧ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ನಂತರ ಇದನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.