ವಿಶೇಷ ಚೇತನನ ಕನಸಿಗೆ ಹೈಕೋರ್ಟ್ ಆಸರೆ
Team Udayavani, Jul 27, 2018, 12:16 PM IST
ಬೆಂಗಳೂರು: ಕೀಲುನೋವು ಸಮಸ್ಯೆಗಳಿಗೆ ಬಳಸಬಹುದಾದ ಔಷಧಿಯ ಪರಿಣಾಮಗಳ ಪರೀಕ್ಷಾರ್ಥ “ಸಂಶೋಧನೆ’ ಕನಸು ಮೊಟಕುಗೊಳ್ಳುವ ಆತಂಕ ಎದುರಿಸುತ್ತಿದ್ದ ಕೇರಳ ಮೂಲದ ವಿಶೇಷ ಚೇತನ ಯುವ ವೈದ್ಯನಿಗೆ ಹೈಕೋರ್ಟ್ ಆಸರೆಯಾಗಿದೆ.
ವೃತ್ತಿಜೀವನದ ಕನಸಾಗಿರುವ ಸಂಶೋಧನೆ ನಡೆಸಲು ಅವಕಾಶ ಮಾಡಿಕೊಡಲು ಹಾಗೂ ಖಾಸಗಿ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿಯೇ ಉಳಿದುಕೊಳ್ಳಲು ಅವಕಾಶ ಕೊಡಿಸುವಂತೆ ಕೋರಿ ಡಾ.ಜಫ್ರಿ ಪ್ರದೀಪ್ ರಾಜ್ ಮಾಡಿದ ಮನವಿಗೆ ಸ್ಪಂದಿಸಿರುವ ಹೈಕೋರ್ಟ್, ಸಂಶೋಧನೆ ಮುಂದುವರಿಸಲು ಅವಕಾಶ ಕಲ್ಪಿಸಿ ಮಧ್ಯಂತರ ಆದೇಶ ನೀಡಿದೆ.
ಈ ಅರ್ಜಿ ವಿಚಾರಣೆಯನ್ನು ಗುರುವಾರ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠ, ಅರ್ಜಿ ಸಂಬಂಧ ಸೇಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಸಂಸ್ಥೆ ಹಾಗೂ ರಾಜ್ಯ ವಿಶೇಷಚೇತನರ ಆಯೋಗದ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದೆ.
ಅಲ್ಲದೆ, ಅರ್ಜಿದಾರ ವೈದ್ಯ ತನ್ನ ಸಂಶೋಧನೆಗಾಗಿ ಲ್ಯಾಬ್ ಹಾಗೂ ಸಂಸ್ಥೆಯ ಇ-ಮೇಲ್ ಐಡಿ ಬಳಸಲು ಅವಕಾಶ ನೀಡಬೇಕು. ಜತೆಗೆ ಮುಂದಿನ ಆದೇಶದವರೆಗೆ ಸಂಸ್ಥೆಯಲ್ಲಿ ವಾಸ್ತವ್ಯ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಸೆಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಹೆಲ್ತ್ ಸೈನ್ಸ್ ಸಂಸ್ಥೆಗೆ ಆದೇಶಿಸಿದೆ. ಅರ್ಜಿದಾರರ ಪರ ವಕೀಲ ದೊರೆರಾಜ್ ವಾದಿಸಿದ್ದರು.
ಚಿನ್ನದ ಪದಕ, 34 ಪದಕ ಪಡೆದಿರುವ ಪ್ರದೀಪ್: ಕೇರಳದ ಈರೋಡ್‌ನ ಜಫ್ರಿ ಪ್ರದೀಪ್ ರಾಜ್ ಶೇ.60ರಷ್ಟು ಅಂಗವೈಕಲ್ಯ ಹೊಂದಿದ್ದು, ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ 2007ರಲ್ಲಿ ಚಿನ್ನದ ಪದಕ ಪಡೆದು ಎಂಬಿಬಿಎಸ್ ಉತ್ತೀರ್ಣರಾಗಿದ್ದರು. ಬಳಿಕ ಉನ್ನತ ವ್ಯಾಸಾಂಗದ ಸಲುವಾಗಿ ಎಂಡಿ (ಫಾರ್ಮಾಕಾಲಜಿ) ಮಾಡಲು ಸರ್ಜಾಪುರ ರಸ್ತೆಯಲ್ಲಿರುವ ಸೇಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಸಂಸ್ಥೆ ಸೇರಲು ಆಸಕ್ತಿ ತೋರಿದ್ದರು.
ಆದರೆ, ಬಡತನ ಹಿನ್ನೆಲೆ ಹಾಗೂ ಆರ್ಥಿಕ ಸಂಕಷ್ಟದಿಂದಾಗಿ ಕಾಲೇಜು ಶುಲ್ಕ ಪಾವತಿಸಲು ಪ್ರದೀಪ್ ರಾಜ್‌ಗೆ ಸಾಧ್ಯವಿರಲಿಲ್ಲ. ಹೀಗಾಗಿ, ಸಂಸ್ಥೆಯು ಸದ್ಯಕ್ಕೆ ಶೇ50ರಷ್ಟು ಟ್ಯೂಶನ್ ಶುಲ್ಕ ಪಾವತಿಸಿ ಉಳಿದ ಮೊತ್ತವನ್ನು ಎಂಡಿ ಕೋರ್ಸ್ ಪೂರ್ಣಗೊಳಿಸಿದ ಬಳಿಕ ಒಂದು ವರ್ಷ ಸಂಸ್ಥೆಯಲ್ಲಿಯೇ ಸೇವೆ ಸಲ್ಲಿಸುವ ಮೂಲಕ ತೀರಿಸುವಂತೆ 2016ರಲ್ಲಿ ಒಪ್ಪಂದ ಮಾಡಿಕೊಂಡು ಪ್ರವೇಶ ನೀಡಿತ್ತು.
ಅದರಂತೆ, ವಿದ್ಯಾಭ್ಯಾಸ ಮುಂದುವರಿಸಿದ್ದ ಪ್ರದೀಪ್ ರಾಜ್, ತನ್ನ ಕನಸಾಗಿದ್ದ “ಟರ್ಮಾಸಿನ್’ ಪ್ರಯೋಗಾರ್ಥ ಸಂಶೋಧನೆ ಕೈಗೆತ್ತಿಕೊಂಡಿದ್ದು, ಇದಕ್ಕಾಗಿ ನ್ಯಾಚುರಲ್ ರೆಮಿಡೀಸ್ ಪ್ರೈ.ಲಿ. ಕಂಪನಿ 35 ಲಕ್ಷ ರೂ. ಅನುದಾನ ನೀಡಲು ಇದೇ ಜನವರಿ 11ರಂದು ಒಪ್ಪಿಕೊಂಡಿತ್ತು.
ಈ ಮಧ್ಯೆ ಮೇ ತಿಂಗಳಾಂತ್ಯಕ್ಕೆ ಎಂಡಿ ಕೋರ್ಸ್ ಕೂಡ ಪೂರ್ಣಗೊಂಡಿದ್ದು, ಶೇ.73.05 ಅಂಕಗಳೊಂದಿಗೆ ಪ್ರದೀಪ್ ತೇರ್ಗಡೆಯಾಗಿದ್ದಾರೆ. ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದಂತೆ ಸಂಸ್ಥೆಯಲ್ಲಿಯೇ ಒಂದು ವರ್ಷ ಉಳಿದುಕೊಳ್ಳಲು ಅವಕಾಶ ನೀಡುವಂತೆ ಕೋರಿ ಡೀನ್‌ಗೆ ಪ್ರದೀಪ್ ರಾಜ್ ಮನವಿ ಪತ್ರ ನೀಡಿದ್ದರು.
ಇದನ್ನು ತಿರಸ್ಕರಿಸಿದ್ದ ಡೀನ್, ಸದ್ಯಕ್ಕೆ ಸಂಸ್ಥೆಯಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ. ಸೀನಿಯರ್ ರೆಸಿಡೆಂಟ್ ಆಗಿ ಉಳಿದುಕೊಳ್ಳಲು ಅವಕಾಶವಿಲ್ಲ. ಹೀಗಾಗಿ ಬಾಕಿ ಶುಲ್ಕ ಪಾವತಿಸಿ ಕ್ಯಾಂಪಸ್ ತೊರೆಯುವಂತೆ ಸೂಚಿಸಿ ಜೂನ್ 11ರಂದು ನೋಟಿಸ್ ನೀಡಿತ್ತು. ಅಲ್ಲದೆ, ಪ್ರದೀಪ್ ರಾಜ್ ಬಳಸುತ್ತಿದ್ದ ಸಂಸ್ಥೆಯ ಇ-ಮೇಲ್ ಕೂಡ ಬ್ಲಾಕ್ ಮಾಡಿಸಿತ್ತು.
ಇದರಿಂದ ಕಂಗಾಲಾದ ಪ್ರದೀಪ್ ರಾಜ್, ಸಂಶೋಧನೆ ಸಲುವಾಗಿ ಉಳಿದುಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ಮೈಲಿಗಲ್ಲಾಗಲಿರುವ ಈ ಸಂಶೋಧನೆ ಜು.31ರೊಳಗೆ ಪೂರ್ಣಗೊಳ್ಳುವುದಿಲ್ಲ. ಇನ್ನೂ ನಾಲ್ಕೈದು ತಿಂಗಳ ಕಾಲವಕಾಶ ಬೇಕಿದೆ. ಹೀಗಾಗಿ, ಸಂಸ್ಥೆಯಲ್ಲಿಯೇ ಉಳಿದುಕೊಂಡು ಸಂಶೋಧನೆ ಮುಂದುವರಿಸಲು ಅವಕಾಶ ಕಲ್ಪಿಸುವಂತೆ ಕೋರಿ ಪ್ರದೀಪ್ ರಾಜ್ ಹೈಕೋರ್ಟ್ ಮೊರೆಹೋಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.