ಪತಿ ಕೊಂದು ಪ್ರಿಯಕರನ ಜತೆ ಉತ್ತರ ಪ್ರದೇಶದಲ್ಲಿದ್ದ ಪತ್ನಿ ಬಂಧನ
Team Udayavani, Jan 17, 2018, 12:06 PM IST
ಬೆಂಗಳೂರು: ಮದ್ಯ ಸೇವಿಸಿ ನಿತ್ಯ ಕಿರುಕುಳ ನೀಡುತ್ತಾನೆ ಎಂದು ಪ್ರಿಯಕರನ ಜತೆ ಸೇರಿಕೊಂಡು ಪತಿಯನ್ನು ಕೊಲೆಗೈದು ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದ ಪತ್ನಿ ಸೇರಿದಂತೆ ಇಬ್ಬರನ್ನು ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.ಪಾರ್ವತಿ (28) ಮತ್ತು ಈಕೆಯ ಪ್ರಿಯಕರ ಸುರೇಂದ್ರ(34) ಬಂಧಿತರು.
ಡಿ.18ರಂದು ಪಾರ್ವತಿ ತನ್ನ ಪ್ರಿಯಕರನ ಜತೆ ಸೇರಿಕೊಂಡು ಪತಿ ರಾಮಸೇವಕ್‌ನನ್ನು ಮನೆಯಲ್ಲೇ ಕೊಂದು, ಮೃತ ದೇಹವನ್ನು ರಾಜಕಾಲುವೆಗೆ ಎಸೆದು ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದರು. ಆದರೆ, ಯುಪಿಯಲ್ಲಿ ಪತಿ ನಾಪತ್ತೆಯಾಗಿದ್ದಾನೆ ಎಂದು ಠಾಣೆಗೆ ದೂರು ನೀಡಲು ಹೋದಾಗ ಆಕೆಯ ವರ್ತನೆಯಿಂದ ಅನುಮಾನಗೊಂಡ ಅಲ್ಲಿನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಹಿಂದಿನ ರಹಸ್ಯ ಬಾಯಿಬಿಟ್ಟಿದ್ದಾಳೆ.
ಈ ಮಾಹಿತಿಯನ್ನಾಧರಿಸಿ ಬಂಡೆಪಾಳ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಕೊಲೆಯಾದ ರಾಮಸೇವಕ್, ಪತ್ನಿ ಪಾರ್ವತಿ ಮತ್ತು ಈಕೆಯ ಅಕ್ಕನ ಪತಿ ಹಾಗೂ ಪ್ರಿಯಕರ ಸುರೇಂದ್ರ ಒಟ್ಟಿಗೆ ಬೆಂಗಳೂರಿಗೆ ಬಂದಿದ್ದು, ಬಂಡೆಪಾಳ್ಯದಲ್ಲಿ ನೆಲೆಸಿದ್ದರು.
ಮೂವರು ಗಾರೆಕೆಲಸಕ್ಕೆ ಹೋಗುತ್ತಿದ್ದು, ಈ ಮಧ್ಯೆ ಪಾರ್ವತಿ ಮತ್ತು ಸುರೇಂದ್ರನ ನಡುವೆ ಆತ್ಮೀಯತೆ ಬೆಳೆದು ಅಕ್ರಮ ಸಂಬಂಧಕ್ಕೆ ತಿರುಗಿದೆ. ಈ ವಿಚಾರ ತಿಳಿದ ಪತಿ ರಾಮ್‌ಸೇವಕ್ ಇಬ್ಬರಿಗೂ ಎಚ್ಚರಿಕೆ ನೀಡಿದ್ದ. ಆದರೂ ಇಬ್ಬರು ತಮ್ಮ ಅಕ್ರಮ ಸಂಬಂಧ ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ರಾಮ್‌ಸೇವಕ್ ಮದ್ಯ ಸೇವಿಸಿ ನಿತ್ಯ ಪತ್ನಿ ಜತೆ ಜಗಳವಾಡುತ್ತಿದ್ದ.
ಕೊಂದು ಮೋರಿಗೆ ಎಸೆದಿದ್ದರು!: ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ಪಾರ್ವತಿ ಪ್ರಿಯಕರನ ಜತೆ ಸೇರಿಕೊಂಡು ಡಿ.18ರಂದು ಮದ್ಯ ಸೇವಿಸಿ ಮನೆಗೆ ರಾಮ್‌ಸೇವಕ್‌ನನ್ನು ದೊಣ್ಣೆಯಿಂದ ಹೊಡೆದು, ಕತ್ತು ಹಿಸುಕಿ ಕೊಲೆಗೈದಿದ್ದರು. ನಂತರ ಮೃತ ದೇಹವನ್ನು ಹೂಡಿ ಬಳಿಯ ರಾಜಕಾಲುವೆಯಲ್ಲಿ ಎಸೆದು ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದರು.
ಬಳಿಕ ಡಿ.24ರಂದು ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದಕ್ಕೆ ತೆರಳಿ ತನ್ನ ಗಂಡ ರಾಮ್‌ಸೇವಕ್ ಕಾಣೆಯಾಗಿ¨ªಾನೆ ಹುಡುಕಿ ಕೊಡಬೇಕೆಂದು ಪತ್ನಿ ಪಾರ್ವತಿ ದೂರು ನೀಡಿದ್ದಳು. ಗಂಡ ನಾಪತ್ತೆಯಾಗಿದ್ದರೂ ಮುಖದಲ್ಲಿ ಆತಂಕ, ಭಯ ಕಾಣದ ಈಕೆಯ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು, ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ರಹಸ್ಯ ಬಾಯಿಬಿಟ್ಟಿದ್ದಾಳೆ.
ಬಳಿಕ ಬಂಡೆಪಾಳ್ಯ ಪೊಲೀಸರಿಗೆ ಕರೆ ಮಾಡಿದ ಉತ್ತರ ಪ್ರದೇಶ ಪೊಲೀಸರು, ನಿಮ್ಮ ಠಾಣೆ ವ್ಯಾಪ್ತಿಯಲ್ಲಿ ಸಿಕ್ಕ ಅಪರಿಚಿತ ಶವಕ್ಕೂ ನಮ್ಮ ಠಾಣೆಯಲ್ಲಿ ಸಿಕ್ಕ ಮಹಿಳೆಗೂ ಸಂಬಂಧವಿದೆ ಬಂದು ವಿಚಾರಣೆ ನಡೆಸುವಂತೆ ಕೇಳಿಕೊಂಡಿದ್ದರು. ಅದರಂತೆ ಬಂಡೆಪಾಳ್ಯ ಪೊಲೀಸರ ತಂಡ ಆರೋಪಿಗಳನ್ನು ಬಾಡಿವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ. ಇದೀಗ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.