ಜೆಡಿಎಸ್‌ನಲ್ಲಿ ಸಚಿವಾಕಾಂಕ್ಷಿಗಳ ಲಾಬಿ ಜೋರು
Team Udayavani, Jun 5, 2018, 11:51 AM IST
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಖಾತೆಗಳ ಹಂಚಿಕೆ ಅಂತಿಮಗೊಂಡರೂ ಜೆಡಿಎಸ್‌ನಲ್ಲಿ ಯಾರನ್ನು ಸಚಿವರನ್ನಾಗಿ ಮಾಡಬೇಕು ಮತ್ತು ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಇನ್ನೂ ಇತ್ಯರ್ಥವಾಗಿಲ್ಲ.
ಸೋಮವಾರ ರಾತ್ರಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆದು ಇಬ್ಬರೂ ನಾಯಕರು ಶಾಸಕರ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಆದರೆ, ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳದೆ ಯಾರಿಗೆ ಸಂಪುಟದಲ್ಲಿ ಅವಕಾಶ ಮತ್ತು ಯಾರಿಗೆ ಯಾವ ಖಾತೆ ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
ದಿನ ಕಳೆದಂತೆ ಜೆಡಿಎಸ್‌ನಲ್ಲಿ ಸಚಿವಾಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಪಕ್ಷಕ್ಕೆ ಒಲಿದಿರುವ 12 ಸಚಿವ ಸ್ಥಾನಗಳಿಗೆ ಆಕಾಂಕ್ಷಿಗಳ ಸಂಖ್ಯೆ 20 ದಾಟಿದೆ. ಅದರಲ್ಲೂ ಪ್ರಮುಖ ಖಾತೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಒಬ್ಬರನ್ನು ಸಮಾಧಾನಪಡಿಸಿದರೆ ಇನ್ನೊಬ್ಬರು ಬೇಸರಗೊಳ್ಳುವ ಪರಿಸ್ಥಿತಿ ಕಾಣಿಸಿಕೊಂಡಿದೆ. ಈ ಎಲ್ಲಾ ಕಾರಣಗಳಿಂದಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಮುಂದೆ ತಮ್ಮ ಹಕ್ಕು ಮತ್ತು ಅಭಿಪ್ರಾಯ ಮಂಡಿಸಿರುವ ಶಾಸಕರು ನಿಮ್ಮ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಇಬ್ಬರಿಗೂ ಹೇಳಿದ್ದಾರೆ ಎನ್ನಲಾಗಿದೆ.
ರೇವಣ್ಣ ಪ್ರತ್ಯೇಕ ಚರ್ಚೆ: ಶಾಸಕಾಂಗ ಸಭೆಗೆ ಮುನ್ನವೇ ಎಚ್.ಡಿ.ರೇವಣ್ಣ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಧನ ಮತ್ತು ಲೋಕೋಪಯೋಗಿ ಖಾತೆಗಳೆರಡಕ್ಕೂ ತಾವು ಆಕಾಂಕ್ಷಿಯಾಗಿದ್ದು, ಎರಡು ಖಾತೆಗಳನ್ನು ನಿರ್ವಹಿಸುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಆದರೆ, ರೇವಣ್ಣ ಅವರಿಗೆ ಈ ಎರಡೂ ಖಾತೆಗಳ ಜವಾಬ್ದಾರಿ ವಹಿಸುವುದು ಕೆಲವರಿಗೆ ಇಷ್ಟವಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ಬಂದಿರುವ ಜಿ.ಟಿ.ದೇವೇಗೌಡರಿಗೆ ಈ ಪೈಕಿ ಒಂದು ಖಾತೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿ.ಟಿ.ದೇವೇಗೌಡ ಅವರೂ ಎರಡರಲ್ಲಿ ಒಂದು ಖಾತೆ ಕೊಡಿ ಎಂದು ಕೇಳಿಕೊಂಡಿದ್ದಾರೆ. ಇದನ್ನು ಈಗಾಗಲೇ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಪರಿಶಿಷ್ಟ ಸಮುದಾಯದ ಎಚ್.ಕೆ.ಕುಮಾರಸ್ವಾಮಿ ಅವರೂ ಪ್ರಮುಖ ಖಾತೆ ಮೇಲೆ ಗಮನಹರಿಸಿದ್ದಾರೆ. ಜೆಡಿಎಸ್‌ನಲ್ಲಿ ಹಿರಿಯ ಶಾಸಕರಾಗಿರುವುದರ ಜತೆಗೆ ದಲಿತ ಸಮುದಾಯದ ಪ್ರತಿನಿಧಿಯಾಗಿದ್ದೇನೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತ ಸಮುದಾಯದವರೊಬ್ಬರನ್ನು ಉಪಮುಖ್ಯಮಂತ್ರಿಯಾಗಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಸಮ್ಮಿಶ್ರ ಸರ್ಕಾರವಾಗಿದ್ದರಿಂದ ಅದು ಸಾಧ್ಯವಾಗಿಲ್ಲ. ಹೀಗಾಗಿ ಕನಿಷ್ಟ ಪ್ರಮುಖ ಖಾತೆಯನ್ನಾದರೂ ನೀಡಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಜಾತಿವಾರು ಹಂಚಿಕೆಗೆ ಆಕ್ಷೇಪ: ಈ ಮಧ್ಯೆ ಪಕ್ಷದಲ್ಲಿ ಜಾತಿವಾರು ಮಂತ್ರಿಸ್ಥಾನ ನೀಡುವ ಬಗ್ಗೆ ಪಕ್ಷದಲ್ಲಿ ಅಕ್ಷೇಪ ವ್ಯಕ್ತವಾಗಿದೆ. ಒಟ್ಟು ಆಯ್ಕೆಯಾಗಿರುವ 36 ಮಂದಿಯಲ್ಲಿ ಒಕ್ಕಲಿಗರು 21 ಮಂದಿ ಇದ್ದು, ಸಮುದಾಯಕ್ಕೆ ಹೆಚ್ಚಿನ ಸ್ಥಾನ ನೀಡಬೇಕು ಎಂಬ ಕೋರಿಕೆಯನ್ನು ಒಕ್ಕಲಿಗ ಶಾಸಕರು ದೇವೇಗೌಡರ ಮುಂದೆ ಇಟ್ಟಿದ್ದಾರೆ.
ಅಲ್ಲದೆ, ಅಧಿಕಾರಕ್ಕೆ ಬಂದರೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಹೇಳಿದರೂ ಅಲ್ಪಸಂಖ್ಯಾತರು ಬೆಂಬಲ ನೀಡದೇ ಇರುವ ಕಾರಣ ಆ ಸಮುದಾಯಕ್ಕೆ ಸೇರಿದ ಬಿ.ಎಂ.ಫಾರೂಕ್ ಅವರಿಗೂ ಸಚಿವ ಸ್ಥಾನ ನೀಡುವುದು ಬೇಡ. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಸಚಿವ ಸ್ಥಾನ ನೀಡುತ್ತಿರುವುದರಿಂದ ಮೇಲ್ಮನೆಯಿಂದ ಮತ್ತೂಬ್ಬರಿಗೆ ಅವಕಾಶ ಮಾಡಿಕೊಟ್ಟರೆ ಜನರಿಂದ ನೇರವಾಗಿ ಆಯ್ಕೆಯಾಗಿ ಬಂದಿರುವ ಶಾಸಕರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ವಾದವೂ ಕೇಳಿಬಂದಿದೆ.
ಒಬ್ಬರಿಗೆ ಮಾತ್ರ ಸಾಕು: ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಎಸ್‌ಪಿ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಬಿಎಸ್‌ಪಿ ಶಾಸಕ ಮಹೇಶ್‌ಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರು ದಲಿತ ಸಮುದಾಯಕ್ಕೆ ಸೇರಿರುವುದರಿಂದ ಮಹೇಶ್ ಮತ್ತು ಜೆಡಿಎಸ್‌ನ ಎಚ್.ಕೆ.ಕುಮಾರಸ್ವಾಮಿ ಇಬ್ಬರಿಗೂ ಸಚಿವ ಸ್ಥಾನ ನೀಡುವ ಬದಲು ಪಕ್ಷವನ್ನು ಬಲವಾಗಿ ಬೆಂಬಲಿಸಿದ ಸಮುದಾಯಗಳಿಗೆ ಸೇರಿದವರಿಗೆ ಅವಕಾಶ ಕಲ್ಪಿಸುವಂತೆಯೂ ಕೆಲ ಶಾಸಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಎರಡು-ಮೂರು ಸ್ಥಾನ ಉಳಿಸಿಕೊಳ್ಳಲು ನಿರ್ಧಾರ: ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಪಕ್ಷಕ್ಕೆ ಸಿಕ್ಕಿರುವ 12 ಸಚಿವ ಸ್ಥಾನಗಳ ಪೈಕಿ ಎರಡು ಅಥವಾ ಮೂರು ಸ್ಥಾನಗಳನ್ನು ಉಳಿಸಿಕೊಂಡು ಎಂಟು ಅಥವಾ ಒಂಬತ್ತು ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಜೆಡಿಎಸ್‌ನಲ್ಲಿ ಚಿಂತನೆ ನಡೆದಿದೆ. ಕೆಲ ದಿನಗಳ ಕಾಲ ಈ ಹುದ್ದೆಗಳನ್ನು ಖಾಲಿ ಬಿಟ್ಟು ಆಕಾಂಕ್ಷಿಗಳನ್ನು ಸಮಾಧಾನಪಡಿಸಿ ಬಳಿಕ ಅವುಗಳನ್ನು ಭರ್ತಿ ಮಾಡುವ ಬಗ್ಗೆ ಚಿಂತನೆ ನಡೆದಿದೆ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಚರ್ಚಿಸಿ ಈ ಕುರಿತು ತೀರ್ಮಾನಕ್ಕೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.