ರಾಜಧಾನಿಯ ಹೃದಯ “ಮೆಜೆಸ್ಟಿಕ್’ ಎಂಬ ಚಕ್ರವ್ಯೂಹ…
ಸುದ್ದಿ ಸುತ್ತಾಟ
Team Udayavani, Aug 26, 2019, 3:10 AM IST
ಚಿತ್ರ: ಫಕ್ರುದ್ದೀನ್ ಎಚ್.
ಮೆಜೆಸ್ಟಿಕ್ ಒಂದು ಚಕ್ರವ್ಯೂಹ. ಹೊಸಬರಿಗೆ ಅದನ್ನು ಭೇದಿಸಿ ಹೊರಬರುವುದು ದೊಡ್ಡ ಸವಾಲು. ಉದ್ಯೋಗಕ್ಕಾಗಿ ಊರು ಬಿಟ್ಟು ಬಂದ ಮಕ್ಕಳನ್ನು ಕಾಣಲು ಬರುವ ಪೋಷಕರು, ಪ್ರವಾಸ, ಸ್ನೇಹಿತರು, ಸಂಬಂಧಿಗಳ ಭೇಟಿ, ಬೀಳ್ಕೊಡಲು ಸೇರಿದಂತೆ ಹತ್ತು ಹಲವು ಕಾರಣಗಳಿಗೆ ನಿತ್ಯ ಸಾವಿರಾರು ಮಂದಿ ಹೊಸಬರು ಇಲ್ಲಿಗೆ ಬರುತ್ತಾರೆ. ಕಣ್ಣಾಡಿಸಿದಲ್ಲೆಲ್ಲಾ ಜನದಟ್ಟಣೆ, ಪಕ್ಕದಲ್ಲಿ ಹಾದು ಹೋಗುವ ನೂರಾರು ಅಪರಿಚಿತರು, ಬಿರುಸಿನ ವಾಹನ ಓಡಾಟ ಇವುಗಳನ್ನು ಕಂಡು ಅಸಹಾಯಕರಂತಾಗುತ್ತಾರೆ. ಮೊಬೈಲ್ ಗುಂಡಿ ಒತ್ತಿದರೆ ಬಂದು ನಿಲ್ಲುವ ಕ್ಯಾಬ್‌ಗಳು, ಕೈಬಿಸಿ ಕರೆದರೆ ಬರುವ ನೂರಾರು ಆಟೋಗಳು ಇದ್ದು, ಹೊಸಬರು ಇಲ್ಲಿ ದಾರಿ ತಪ್ಪಿದ ಮಕ್ಕಳಾಗುತ್ತಾರೆ. ಮೆಜೆಸ್ಟಿಕ್‌ಗೆ ಮೊದಲ ಬಾರಿ ಬಂದಿಳಿಯುವವರು ಎದುರಿಸುತ್ತಿರುವ ಸಮಸ್ಯೆಗಳು, ಕಾಡುವ ಗೊಂದಲಗಳು, ಅವರನ್ನು ಆಹ್ವಾನಿಸುವ ಅವ್ಯವಸ್ಥೆಗಳ ಕುರಿತು ಬೆಳಕು ಚಲ್ಲುವ ಪ್ರಯತ್ನ ಈ ಬಾರಿಯ ಸುದ್ದಿ ಸುತ್ತಾಟ…
ನಿತ್ಯ ಐದಾರು ಲಕ್ಷ ಮಂದಿ ಬಂದು ಹೋಗುವ, ಎಂದೂ ನಿದ್ರಿಸದೆ 24/7 ಚಲನಶೀಲವಾಗಿರುವ ಸ್ಥಳ ಬೆಂಗಳೂರಿನ ಮೆಜೆಸ್ಟಿಕ್. ಬೆಂಗಳೂರು ನಿರಂತರ ಅಭಿವೃದ್ಧಿ ಹೊಂದುತ್ತಿದ್ದರೂ ಇಂದಿಗೂ ಮೆಜೆಸ್ಟಿಕ್‌ನ ಪಾದಾಚಾರಿ ಸುರಂಗ ಮಾರ್ಗಗಳು, ಮೆಲ್ಸೇತುವೆಗಳು, ಬಿಎಂಟಿಸಿ ಪ್ಲಾಟ್‌ಫಾರಂಗಳು, ಕೆಎಸ್‌ಆರ್‌ಟಿಸಿ ಟರ್ಮಿನಲ್‌ಗಳು, ಮೆಟ್ರೋ ನಿಲ್ದಾಣ ಅದರ ಪ್ಲಾಟ್‌ಫಾರಂಗಳು ಗೊಂದಲ ಮೂಡಿಸುವಂತಿವೆ. ಸುತ್ತ ವಾಹನ ನಿಲುಗಡೆ ಸ್ಥಳ ಹುಡುಕಾಡ ಬೇಕು, ಯಾವುದು ನೋ ಪಾರ್ಕಿಂಗ್, ಯಾವುದು ಪಾರ್ಕಿಂಗ್, ಯಾವುದು ಒನ್ ವೇ, ಯಾವ ರಸ್ತೆ ಎಲ್ಲಿ ತಲುಪುತ್ತದೆ ಎಂದು ತಿಳಿಯುವುದೇ ಇಲ್ಲ.
ಮೊದಲ ಬಾರಿ ಬೆಂಗಳೂರಿಗೆ ಹೊರಟು ನಿಂತವರಿಗೆ ಊರಲ್ಲಿಯೇ ಪರಿಚಯಸ್ಥರು ಅಥವಾ ಇಲ್ಲಿನ ನಿವಾಸಿಗಳು ಮೆಜೆಸ್ಟಿಕ್‌ನ ಬಗ್ಗೆ ಹೇಳಿರುತ್ತಾರೆ. ಇಲ್ಲಿನ ಪ್ಲಾಟ್‌ಫಾರಂಗಳು, ಮೆಟ್ರೊ ನಿಲ್ದಾಣ, ಪಾದಚಾರಿಗಳ ಸುರಂಗ ಮಾರ್ಗ, ಸದಾ ಗಿಜಿಗುಡುವ ರಸ್ತೆಗಳ ಬಗ್ಗೆ ತಿಳಿಸಿರುತ್ತಾರೆ. ಬಹುತೇಕ ಹೊಸಬರು ಅಲ್ಲಿಯೇ ಯಾರನ್ನಾದರೂ ಕೇಳಿದರಾಯಿತು ಬಿಡು ಎಂದು ಮೆಜೆಸ್ಟಿಕ್‌ಗೆ ಬಂದಿಳಿಯುತ್ತಾರೆ.
ರೆಪ್ಪೆ ಬಡೆಯುವುದರಲ್ಲಿ ಸಾಗಿ ಹೋಗುವ ವಾಹನಗಳು, ಹೆಜ್ಜೆಗೊಂದು ಬಾರ್, ಸಾಲು ಸಾಲು ಟ್ರಾವೆಲ್ ಏಜೆನ್ಸಿಗಳು, ಲಾಡ್ಜ್, ಹೋಟೆಲ್‌ಗಳು, ಜನರಿಂದ ತುಂಬಿರುವ ಶೌಚಾಲಯಗಳು, ಖರೀದಿಸುವಂತೆ ಕಾಡುವ ಫುಟ್‌ಪಾತ್ ವ್ಯಾಪಾರಿಗಳು, ಓಡಿ ಬಂದು ಲಗೇಜಿಗೆ ಕೈಹಾಕಿ “ಯಾವ ಕಡೆ ಹೋಗಬೇಕು ಬನ್ನಿ’ ಎಂದು ಕಾಡುವ ಆಟೋ ಚಾಲಕರು, ಜೀವನೋಪಾಯಕ್ಕಾಗಿ ನೆರವು ಕೋರುವ ತೃತೀಯ ಲಿಂಗಿಗಳು, ಭಿಕ್ಷುಕರನ್ನು ಕಂಡು ದಿಗಿಲು ಬಡಿದವರಂತೆ ನಿಂತು ಬಿಡುತ್ತಾರೆ.
ರೈಲು, ಬಸ್ಸು ಇಳಿದವರಿಗೆ ತಾವು ತಲುಪಬೇಕಿರುವ ಬಡಾವಣೆಗೆ ಬಸ್ ಎಲ್ಲಿ ಸಿಗುತ್ತವೆ ಎಂದು ಯಾರನ್ನಾದರೂ ಕೇಳ್ಳೋಣ ಎಂದರೆ ಎಲ್ಲರೂ ಅಪರಿಚಿತರೇ. ಆಟೋ ಚಾಲಕರಿಗೆ ಕೇಳಿದರೆ “ಬನ್ನಿ ಸಾರ್ ಕುಳಿತುಕೊಳ್ಳಿ ಕರೆದುಕೊಂಡು ಹೋಗುತ್ತೇನೆ’ ಎನ್ನುತ್ತಾರೆ. ಆಟೋದಲ್ಲಿ ಹೋದರೆ ಹಣ ಎಷ್ಟಾಗುತ್ತದೆಯೋ? ಸುತ್ತಿಸಿ ಎಲ್ಲಾದರೂ ಬಿಟ್ಟು ಹೋದರೆ? ಎಂಬ ಪ್ರಶ್ನೆಗಳು ಮೂಡುತ್ತವೆ. ಆಟೋ ಹತ್ತಬೇಡಿ ಮೋಸ ಮಾಡುತ್ತಾರೆ, ನೇರವಾಗಿ ಇಷ್ಟನೇ ಪ್ಲಾಟ್‌ಫಾರಂಗೆ ಬಂದು ಈ ನಂಬರ್‌ನ ಬಸ್ ಹತ್ತಿ ಎಂದು ಪರಿಚಯಸ್ಥರು ಹೇಳಿರುವುದು ನೆನಪಾಗುತ್ತದೆ. ಕೂಡಲೇ ಪ್ಲಾಟ್‌ಫಾರಂ ಕೇಳಿಕೊಂಡು ಅಲ್ಲಿಂದ ಕಾಲು ಕೀಳುತ್ತಾರೆ. ದಾರಿ ಹೋಕರನ್ನು ಕೇಳಿದರೆ “ಗೊತ್ತಿಲ್ಲ, ತೆರೆಯಾದು, ಮಾಲೂಮ್ ನಹೀ’ ಎಂಬ ಉತ್ತರಗಳೇ ಹೆಚ್ಚು ಬರುತ್ತವೆ.
ಬಿಎಂಟಿಸಿ ಬಸ್ ಡ್ರೈವರ್‌ಗಳನ್ನು ಕೇಳಿದರೆ ಸ್ಪಷ್ಟವಾಗಿ ಹೇಳದೆ ಅತ್ತ-ಇತ್ತ ಎಂದು ಅಲೆದಾಡಿಸುತ್ತಾರೆ, ಬಸ್ಸಿಗೆ ಅಡ್ಡ ಬಂದರೆ ಗದರುತ್ತಾರೆ. ಫುಟ್‌ಪಾತ್ ವ್ಯಾಪಾರಿಗಳನ್ನು ಕೇಳಿದರೆ ತಮ್ಮ ಉತ್ಪನ್ನ ಖರೀದಿ ಮಾಡುವಂತೆ ಕಾಡುತ್ತಾರೆ. ಸರಿ ನೋಡೋಣ ಎಂದು ಎಷ್ಟು ಬೆಲೆ ಎಂದು ಕೇಳಿದರೆ ಅದನ್ನು ಖರೀದಿಸುವವರೆಗೂ ಬಿಡಲ್ಲ. ಕೊನೆಗೆ ಹೇಗೋ ಬಸ್ ಹಿಡಿದು ಹೊರಟ ಜಾಗಕ್ಕೆ ತಲುಪುವಷ್ಟರಲ್ಲಿ ಸಾಕಪ್ಪ ಈ ಮೆಜೆಸ್ಟಿಕ್ ಸಹವಾಸ ಎನ್ನುತ್ತಾರೆ ಹೊಸಬರು.
ಬೆಂಗಳೂರಿನ ಸಮಸ್ಯೆಗಳ ಕಿರು ಚಿತ್ರಣ: ಎಲ್ಲವನ್ನೂ ತನ್ನೊಳಗೆ ಬಚ್ಚಿಟ್ಟುಕೊಂಡು ಸದಾ ಗಿಜಿಗುಡುತ್ತಿರುವ ಮೆಜೆಸ್ಟಿಕ್, ಬೆಂಗಳೂರಿನ ಮೂಲ ಸಮಸ್ಯೆಗಳಿಗೆ ಕೈಗನ್ನಡಿ. ನಿಲ್ದಾಣಗಳಲ್ಲಿ ಮೂಲಸೌಕರ್ಯ ಕೊರತೆ, ಸಂಚಾರದಟ್ಟಣೆ, ಗೋಡೆಗಳಿಗೆ ಮೂತ್ರ ವಿಸರ್ಜನೆ, ಫುಟ್‌ಪಾತ್ ವ್ಯಾಪಾರ, ಪಾದಚಾರಿ ಸುರಂಗ ಹಾಗೂ ಮೇಲ್ಸೇತುವೆಗಳಲ್ಲಿ ಭಿಕ್ಷುಕರು ಹಾಗೂ ತೃತೀಯ ಲಿಂಗಿಗಳು ಸಾಲುಗಟ್ಟಿ ನಿಂತಿರುವುದು, ಸಾರ್ವಜನಿಕ ಶೌಚಾಲಯಗಳ ಅವ್ಯವಸ್ಥೆ, ಮಳಿಗೆಗಳಲ್ಲಿ ಹೆಚ್ಚು ದರ, ಪಾರ್ಕಿಂಗ್ ಸಮಸ್ಯೆ, ಸಂಚಾರ ನಿಯಮ ಉಲ್ಲಂಘನೆ, ಆಟೋ, ಟ್ಯಾಕ್ಸಿ ಚಾಲಕರ ಸುಲಿಗೆ, ಜೇಬು ಕಳ್ಳತನ ಸೇರಿದಂತೆ ನಾನಾ ಸಮಸ್ಯೆಗಳ ಪರಿಚಯವಾಗುತ್ತದೆ.
ಗೊಂದಲದ ಗೂಡು: ಹಸಿರು ಮತ್ತು ನೇರಳೆ ಎರಡೂ ಮಾರ್ಗಗಳನ್ನು ಸಂಧಿಸುವ ಜಂಕ್ಷನ್ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ. ಸೂಕ್ತ ಮಾರ್ಗ ಸೂಚಿಸುವ ನಾಮಫಲಕಗಳು, ಸಹಾಯಕ ಸಿಬ್ಬಂದಿ ಕೊರತೆಯಂತಹ ಕಾರಣಗಳಿಂದ ಪ್ರಯಾಣಿಕರಿಗೆ ವರ್ಷ ಕಳೆದರೂ ಗೊಂದಲದ ಗೂಡಾಗಿಯೇ ಉಳಿದಿದೆ. ನಿಲ್ದಾಣಕ್ಕೆ ಬಂದಿಳಿಯುವವರು ಈಗಲೂ ನಿರ್ಗಮನ ದ್ವಾರ, ಮಾರ್ಗ ಬದಲಾವಣೆಗೆ ತಡಕಾಡಬೇಕು.
ತಡವಾದ ಟೆಂಡರ್ ಶ್ಯೂರ್; ತಪ್ಪದ ತಾಪತ್ರಯ: ಮೆಜೆಸ್ಟಿಕ್ ಸುತ್ತ ಮುತ್ತಲಿನ ಆರು ಮುಖ್ಯ ರಸ್ತೆಗಳು ಹಾಗೂ 17 ಅಡ್ಡ ರಸ್ತೆಗಳಲ್ಲಿ ಟೆಂಡರ್ ಶ್ಯೂರ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಭಾಗದ ಪ್ರಮುಖ ರಸ್ತೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ. ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಬಿಎಂಟಿಸಿ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿರುವುದರಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಟರ್ಮಿನಲ್‌ಗೆ ತೆರಳಲು ವಾಹನಗಳು ಒಂದು ಸುತ್ತು ಹಾಕಿ ಬರಬೇಕಿದೆ.
ಮೂತ್ರ ಉಚಿತ; ವಸೂಲಿ ಖಚಿತ: ಮೆಜೆಸ್ಟಿಕ್ ಸುತ್ತಲು ರೈಲ್ವೆ ನಿಲ್ದಾಣ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿಲ್ದಾಣಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಶೌಚಾಲಯಗಳಿವೆ. ಬೆಳಗ್ಗೆ ಸಂಜೆ ವೇಳೆ ಜನದಟ್ಟಣೆ ಹೆಚ್ಚಿರುತ್ತದೆ. ಈ ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಉಚಿತ ಹಾಗೂ ಮಲ ವಿಸರ್ಜನೆಗೆ 5 ರೂ. ಶುಲ್ಕ ನಿಗದಿಯಾಗಿದೆ. ಆದರೆ, ಗುತ್ತಿಗೆ ಪಡೆದವರು ಮೂತ್ರ ವಿಸರ್ಜನೆಗೆ ಕಡ್ಡಾಯವಾಗಿ ಮೂರು, ಐದು ರೂ. ಪಡೆಯುತ್ತಿದ್ದಾರೆ. ಉಚಿತ ಎಂದು ಪ್ರಶ್ನಿಸಿದರೆ ಗದರುತ್ತಾರೆ ಜತೆಗೆ ಚಿಲ್ಲರೆಯನ್ನೇ ನೀಡಬೇಕು ಎಂದು ಒತ್ತಡ ಹಾಕುತ್ತಾರೆ. ಮಹಿಳಾ ಶೌಚಾಲಯದ ಸುತ್ತ ತೃತೀಯ ಲಿಂಗಿಗಳು, ವೇಶ್ಯಾವಾಟಿಕೆ ನಡೆಸುವ ಮಹಿಳೆಯರೇ ನಿಂತಿರುತ್ತಾರೆ. ಭಯದ ಜತೆ ಮುಜುಗರವಾಗುತ್ತದೆ ಎಂದು ಮಹಿಳಾ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು.
ಖಾಸಗಿ ಬಸ್ ನಿಷಿದ್ಧ; ಮಾಫಿಯಾ ಜೋರು: ಮೆಜೆಸ್ಟಿಕ್ ಸುತ್ತ ಖಾಸಗಿ ವಾಹನಗಳ ಪ್ರವೇಶ ನಿಷಿದ್ಧ. ಸಂಜೆ 8 ಗಂಟೆಯಾದರೆ ಸಾಕು ಸುತ್ತಲೂ ಖಾಸಗಿ ಬಸ್‌ಗಳು ನಿಂತಿರುತ್ತವೆ. ಬಸ್ ಏಜೆಂಟರ್‌ಗಳು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮೂಲಕ ದೂರದೂರಿಗೆ ತೆರಳುವ ಪ್ರಯಾಣಿಕರಿಗೆ ಆಮಿಷವೊಡ್ಡುತ್ತಾರೆ. ಅವರ ಮಾತಿಗೆ ಮರಳಾಗಿ ಅವರು ತೋರಿಸುವ ಬಸ್ಸು ಹತ್ತಿದ ಪ್ರಯಾಣಿಕರು ಹೆಚ್ಚು ಹಣ ಕಟ್ಟು ಟಿಕೆಟ್ ಪಡೆಯುವುದು, ಗಂಟೆಗಟ್ಟಲೆ ಕಾಯುವವುದು ಹಾಗೂ ಊರಿಗೆ ತಡವಾಗಿ ತಲುಪುವುದು ಸೇರಿ ಹಲವು ಸಮಸ್ಯೆ ಅನುಭವಿಸುತ್ತಿದ್ದಾರೆ.
ಚೇತರಿಸಿಕೊಳ್ಳಬೇಕಿದೆ ಇಂದಿರಾ ಕ್ಲಿನಿಕ್: ಪ್ರಯಾಣಿಕರ ನೆರವಿಗಾಗಿ ಆರೋಗ್ಯ ಇಲಾಖೆಯಿಂದ ಇಂದಿರಾ ಚಿಕಿತ್ಸಾಲಯವಿದ್ದರೂ, ಇದು 24/7 ಕಾರ್ಯನಿರ್ವಹಿಸುವುದಿಲ್ಲ. ಪರಿಣಿತ ವೈದ್ಯರು, ಅಗತ್ಯ ಚಿಕಿತ್ಸಾ ಸಲಕರಣೆಗಳು ಲಭ್ಯವಾಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.
ದುಬಾರಿ ದುನಿಯಾ: ಇಲ್ಲಿನ ಮಳಿಗೆಗಳಲ್ಲಿ ವಸ್ತುಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಈ ಕುರಿತು ಪ್ರಶ್ನಿಸಿದರೆ, ಬೇಕಾದರೆ ತಗೋಳಿ, ಇಲ್ಲಾಂದ್ರೆ ನಡೀರಿ ಎಂದು ದರ್ಪದ ಉತ್ತರ ನೀಡುತ್ತಾರೆ. ಈ ಕುರಿತು ಸಾರಿಗೆ ಸಂಸ್ಥೆಯ ಸಹಾಯವಾಣಿಗೆ ಕರೆ ಮಾಡಿದರೆ ಯಾರೂ ಪ್ರತಿಕ್ರಿಯಿಸುವುದಿಲ್ಲ. ಇನ್ನು ರಾತ್ರಿಯಾಗುತ್ತಿದ್ದಂತೆ ಹೋಟೆಲ್‌ಗಳ ತಿಂಡಿಗಳ ಬೆಲೆಯೂ ಏರಿಕೆಯಾಗುತ್ತದೆ. ಕನಿಷ್ಠ 50 ರೂ. ಪಡೆಯದೇ ಯಾವುದೇ ಉಪಹಾರ ಸಿಗುವುದಿಲ್ಲ. ಊಟಕ್ಕೆ 70 ರೂ. ನೀಡಬೇಕು.
ಸುರಂಗ ಸುಳಿಯಲ್ಲಿ ಪ್ರಯಾಣಿಕರಿಗಿಲ್ಲ ಭದ್ರತೆ: ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣ ಸಂಪರ್ಕಿಸಲು ಸುರಂಗ ಮಾರ್ಗವಿದ್ದು, ಅನೈರ್ಮಲ್ಯದಿಂದ ಕೂಡಿದೆ. ಜತೆಗೆ ಬೀದಿ ವ್ಯಾಪಾರ, ವೇಶ್ಯಾವಾಟಿಕೆ ದಂಧೆಯ ಹೆಚ್ಚಿದೆ. ರೈಲ್ವೆ ನಿಲ್ದಾಣದಿಂದ ಮೆಟ್ರೋ ಅಥವಾ ಕೆಎಸ್‌ಆರ್‌ಟಿಸಿ 2ನೇ ಟರ್ಮಿನಲ್ ಕಡೆ ತೆರಳುವಾಗ ಅಲ್ಲಿ ನಿಂತಿರುವ ತೃತೀಯ ಲಿಂಗಿಗಳು, ಮಹಿಳೆಯರು ಸಾಕಷ್ಟು ಮುಜುಗರ ಉಂಟು ಮಾಡುತ್ತಾರೆ. ಕುಟುಂಬಸ್ಥರು, ಮಹಿಳೆಯರು ಅಲ್ಲಿ ತೆರಳುವಂತಿಲ್ಲ ಎಂದು ಪ್ರಯಾಣಿಕರೊಬ್ಬರು ಬೇಸರ ವ್ಯಕ್ತಪಡಿಸಿರು. ಇನ್ನು ಮಳೆ ಬಂದರೆ ಈ ಸುರಂಗದಲ್ಲಿ ಸಂಚರಿಸುವುದೇ ದುಸ್ತರವಾಗಿದೆ.
ಒಂದಿಷ್ಟು ನಿದರ್ಶನಗಳು
ರಾತ್ರಿ ಡಬಲ್ ಚಾರ್ಜ್: ವಿಜಯಪುರದಿಂದ ಮಗನನ್ನು ಕಾಣಲು “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಂದಿಳಿದೆವು. ಅಲ್ಲಿಂದ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣಕ್ಕೆ ಬಿಡಲು ಆಟೋ ಚಾಲಕ 100 ರೂ. ಪಡೆದ. ಏನಾಪ್ಪ ಇಷ್ಟೊಂದು ಹಣಾನಾ ಎಂದರೆ ರಾತ್ರಿ ಡಬಲ್ ಚಾರ್ಜ್ ಎನ್ನುತ್ತಾ ಹಣ ಪಡೆದು ಮುಂದೆ ಸಾಗಿಬಿಟ್ಟ ಎನ್ನುತ್ತಾರೆ ವೃದ್ಧ ದಂಪತಿ.
ಪರ್ಸ್ ಕಳಕೊಂಡು ಕಳೆದುಹೋದೆ: ಮೊದಲ ಬಾರಿ ಮೆಜೆಸ್ಟಿಕ್‌ಗೆ ಬಂದಾಗ ಜನದಟ್ಟಣೆಯಲ್ಲಿ ಬಿಎಂಟಿಸಿ ಬಸ್ ಹತ್ತಿ ನನ್ನ ಪರ್ಸ್ ಕಳೆದುಕೊಂಡಿದ್ದೆ. ಪಿ.ಜಿ. ವ್ಯವಸ್ಥೆಗಾಗಿ ಇಟ್ಟಿದ್ದ ಐದು ಸಾವಿರ ರೂ. ಕಳೆಯಿತು. ಬಸ್ ಕಂಡಕ್ಟರ್ ಕೂಡ ಹಣ ಇಲ್ಲ ಎಂದು ಇಳಿಸಿದರು. ಏನು ಮಾಡಬೇಕು ತಿಳಿಯದೆ ಕಂಗಾಲಗಿದ್ದೆ. ನಂತರ ಗೆಳೆಯರು ಬಂದು ಕರೆದುಕೊಂಡು ಹೋದರು ಮೆಜೆಸ್ಟಿಕ್‌ನ ಮೋಸದ ಜಾಲ ನೆನೆದವರು ವಿದ್ಯಾರ್ಥಿ ಆಕಾಶ್.
ಅಲೆದು ಊರಿಗೆ ಮರಳಿದ್ದ ಅಣ್ಣ: ನಮ್ಮ ಅಣ್ಣ ಮೊದಲ ಬಾರಿ ಮೆಜೆಸ್ಟಿಕ್‌ಗೆ ಬಂದಾಗ ಕಲ್ಯಾಣ ನಗರ ಬಸ್ ಸಿಗದೇ ಪ್ಲಾಟ್‌ಫಾರಂಗಳಿಗೆ ಅಲೆದು ಸಾಕಾಗಿ ನನಗೆ ಕರೆ ಮಾಡಿದ್ದ. ಬೆಳಗಿನ ಸಮಯ ನಾನು ಮಲಗಿದ್ದೆ ಕರೆ ಸ್ವೀಕರಿಸಲಾಗಿರಲಿಲ್ಲ. ಅಣ್ಣ ಮರಳಿ ಚಿತ್ರದುರ್ಗದ ಬಳಿಯ ನಮ್ಮ ಹಳ್ಳಿಗೆ ಹೋಗಿ. ಅಲ್ಲೆ ಏನು ತಿಳಿಯಲಿಲ್ಲ ವಾಪಸ್ ಊರಿಗೆ ಬಂದೆ ಎಂದು ಹೇಳಿದ್ದ ಎಂದು ಅಣ್ಣನ ಅಲೆದಾಟ ಬಿಚ್ಚಿಟ್ಟವರು ಖಾಸಗಿ ಕಂಪನಿ ಉದ್ಯೋಗಿ ಆನಂದ.
ಅದೊಂದು ಚೋರ್ ಬಜಾರ್: ಮೆಜೆಸ್ಟಿಕ್‌ನಲ್ಲಿ ಫುಟ್‌ಪಾತ್ ವ್ಯಾಪಾರಿಗಳ ಕಾಟಕ್ಕೆ ಅನಿವಾರ್ಯವಾಗಿ 50 ರೂ. ಕೂಡ ಬೆಲೆಬಾಳದ ಬೆಲ್ಟ್ ಒಂದಕ್ಕೆ 250 ರೂ. ನೀಡಿದ್ದೇನೆ. ಇಲ್ಲಿ ಖರೀದಿಸಿರುವ ಇಯರ್‌ಫೋನ್, ಚಾರ್ಜರ್ ಊರು ಮುಟ್ಟುವವರೆಗೂ ಬಾಳಿಕೆ ಬರಲಿಲ್ಲ. ಅದಕ್ಕೇ ಅದನ್ನು ಚೋರ್ ಬಜಾರ್ ಎನ್ನುತ್ತಾರೆ ವಿನಯ್.
ಪ್ರತಿ ಪ್ಲಾಟ್‌ಫಾರಂಗೆ ಒಂದರಂತೆ ಇದ್ದ ಸಹಾಯ ಕೇಂದ್ರಗಳನ್ನು ಮೂರು ವರ್ಷಗಳ ಹಿಂದೆ ಈ ತೆರವುಗೊಳಿಸಲಾಯಿತು. ಆದರೀಗ ಪ್ರತಿ ದಿನ 500ಕ್ಕೂ ಅಧಿಕ ಮಂದಿ ವಿಳಾಸ ಮತ್ತು ಬಸ್ ಸಂಖ್ಯೆ ಬಗ್ಗೆ ನಮ್ಮನ್ನು ವಿಚಾರಿಸುತ್ತಾರೆ.
-ನಾಗರಾಜ್, ವ್ಯಾಪಾರಿ
ಮೆಜೆಸ್ಟಿಕ್‌ನಲ್ಲಿರುವ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆ ಉಚಿತ. ಆದರೆ ಹೊಸದಾಗಿ ಬರುವ ಜನರಿಗೆ ಹಣ ಕೊಡಿ ಟೇಬಲ್ ಬಡಿದು ಒತ್ತಾಯಿಸುತ್ತಾರೆ. ಕೆಲವರು ಹಣ ನೀಡುತ್ತಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
-ಎನ್.ಜಯೇಂದ್ರ, ರಾಜಾಜಿನಗರ ನಿವಾಸಿ
ರಾಜ್ಯದ ವಿವಿಧ ಜಿಲ್ಲೆಗಳಿಂದ ಮೊದಲ ಬಾರಿ ಮೆಜೆಸ್ಟಿಕ್‌ಗೆ ಬಂದವರು ಗೊಂದಲಕ್ಕೆ ಸಿಲುಕಿರುತ್ತಾರೆ. ಬಿಎಂಟಿಸಿಯ ವಿಚಾರಣೆ ಕೊಠಡಿ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತದೆ. ಸಾರ್ವಜನಿಕರು ಸಹಾಯವಾಣಿಗೂ ಕೆರೆ ಮಾಡಬಹುದು.
-ಬಿ.ಎಸ್.ನಾರಾಯಣಕರ್, ಸಂಚಾರ ನಿರೀಕ್ಷಕ
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕ್ಷಣ ಕ್ಷಣಕ್ಕೂ ವಿಳಾಸ, ಬಸ್ ನಂಬರ್ ಮಾಹಿತಿ ಕೇಳುವವರು ಸಿಗುತ್ತಾರೆ. ಇವರ ನೆರವಿಗೆ ಅಲ್ಲಲ್ಲಿ ಮಾಹಿತಿ ಫಲಕ ಹಾಕಬೇಕು. ಲಕ್ಷಾಂತರ ಜನ ಬಂದು ಹೋಗುವ ನಿಲ್ದಾಣದಲ್ಲಿ ಒಂದು ಕಡೆ ಮಾತ್ರ ಕುಡಿಯುವ ನೀರಿನ ವ್ಯವಸ್ಥೆ ಇದೆ.
-ಶ್ರೀದೇವಿ, ಯಲಹಂಕ ನಿವಾಸಿ
ಮೆಜೆಸ್ಟಿಕ್‌ನ ವಿಚಾರಣೆ ಕೊಠಡಿಯ ಸಂಪರ್ಕ ಸಂಖ್ಯೆ 77609 91057, 77609 91405, 080-22952314, 080-22952311
* ಜಯಪ್ರಕಾಶ್ ಬಿರಾದಾರ್/ಮಂಜುನಾಥ್ ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.