ಇಂಜಿನಿಯರ್‌ಗಿಂತ ಗಾರೆ ಕೆಲಸದವರೇ ಮೇಲು
Team Udayavani, Oct 2, 2018, 12:42 PM IST
ಬೆಂಗಳೂರು: “ಬಿಬಿಎಂಪಿ ಇಂಜಿನಿಯರ್‌ಗಳಿಗಿಂತ ಗಾರೆ ಕೆಲಸದವರೇ ಎಷ್ಟೋ ಚೆನ್ನಾಗಿ ಕೆಲಸ ಮಾಡ್ತಾರೆ…’ ರಸ್ತೆಗುಂಡಿ ದುರಸ್ತಿಯನ್ನು ಸಮರ್ಪಕವಾಗಿ ನಿರ್ವಹಿಸದ ಪಾಲಿಕೆಯ ಇಂಜಿನಿಯರ್‌ಗಳನ್ನು ನೂತನ ಮೇಯರ್ ಗಂಗಾಂಬಿಕೆ ಅವರು ತರಾಟೆಗೆ ತೆಗೆದುಕೊಂಡ ಪರಿಯಿದು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಸೋಮವಾರ ಅಧಿಕೃತವಾಗಿ ಪದಗ್ರಹಣ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಾಲಿಕೆಯ ಇಂಜಿನಿಯರ್‌ಗಳು ಕೇವಲ ಸರ್ಟಿಫಿಕೇಟ್ ತೆಗೆದುಕೊಂಡಿದ್ದಾರೆ. ಆದರೆ, ಅವರಿಗಿಂತ ಚೆನ್ನಾಗಿ ಗಾರೆ ಕೆಲಸದವರು ಗುಂಡಿಗಳನ್ನು ಮುಚ್ಚುತ್ತಾರೆ’ ಎಂದು ಚಾಟಿ ಬೀಸಿದರು.
“ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗುಂಡಿ ದುರಸ್ತಿ ಕಾಮಗಾರಿ ನೋಡಿದರೆ ಬೇಸರವಾಗುತ್ತದೆ. ತಮ್ಮ ಅವಧಿಯಲ್ಲಿ ಕಳಪೆ ಕಾಮಗಾರಿಗಳಿಗೆ ಅವಕಾಶ ನೀಡುವುದಿಲ್ಲ. ಗುಣಮಟ್ಟದ ಕಾಮಗಾರಿ ನಡೆಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಆದ್ಯತೆ ಮೇರೆಗೆ ಪರಿಶೀಲನೆ: ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಹೈಕೋರ್ಟ್ ಆದೇಶ ನೀಡಿದೆ. ಅದರಂತೆ ನಗರದಾದ್ಯಂತ ಕಾಮಗಾರಿ ನಡೆಯುತ್ತಿದೆ. ಆದರೆ, ಅಧಿಕಾರಿಗಳು ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುತ್ತಿಲ್ಲ. ಈ ನಿಟ್ಟಿನಲ್ಲಿ ಗುಂಡಿ ದುರಸ್ತಿ ಕಾಮಗಾರಿಯನ್ನು ಆದ್ಯತೆ ಮೇರೆಗೆ ಪರಿಶೀಲಿಸಲಾಗುವುದು. ಒಂದೊಮ್ಮೆ ಕಳಪೆ ಕಾಮಗಾರಿ ನಡೆದಿರುವುದು ಕಂಡುಬಂದರೆ ಅಂತಹ ಸ್ಥಳದಲ್ಲಿ ಈಗಾಗಲೇ ಹಾಕಿರುವ ಟಾರ್ ತೆಗೆಸಿ, ಮತ್ತೂಮ್ಮೆ ರಸ್ತೆ ಗುಂಡಿ ದುರಸ್ತಿ ಮಾಡಿಸಲಾಗುವುದು ಎಂದು ಹೇಳಿದರು.
ನಗರದಲ್ಲಿನ ತ್ಯಾಜ್ಯ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ಅಗತ್ಯವಿದ್ದು, ಶೀಘ್ರವೇ ತ್ಯಾಜ್ಯ ವಿಲೇವಾರಿಗೆ ಹೊಸ ಟೆಂಡರ್ ಕರೆಯಲಾಗುವುದು. ಜತೆಗೆ ನಗರದಲ್ಲಿನ ತ್ಯಾಜ್ಯ ವಿಲೇವಾರಿಗಾಗಿ ಹಲವು ಹೊಸ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಬ್ಲಾಕ್‌ಸ್ಪಾಟ್‌ಗಳ ತೆರವಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪದಗ್ರಹಣ ಮಾಡಿದ ಮೇಯರ್‌ಗೆ, ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಸೇರಿ ಎಲ್ಲ ಸದಸ್ಯರು ಪಕ್ಷಾತೀತವಾಗಿ ಶುಭಕೋರಿದರು.
ದಯವಿಟ್ಟು ಹಾರ, ತುರಾಯಿ ತರಬೇಡಿ: ಪದಗ್ರಹಣ ಕಾರ್ಯಕ್ರಮಕ್ಕೆ ಪ್ರಮುಖರು, ಬೆಂಬಲಿಗರು ಹಾಗೂ ಅಧಿಕಾರಿಗಳನ್ನು ಆಹ್ವಾನಿಸಿದ್ದ ಮೇಯರ್ ಗಂಗಾಂಬಿಕೆ ಅವರು, ಆಹ್ವಾನ ಪತ್ರಿಕೆಯಲ್ಲಿ ಪರಿಸರದ ಹಿತದೃಷ್ಟಿಯಿಂದ ಹೂವಿನ ಬೊಕ್ಕೆ ಹಾಗೂ ಹಾರಗಳನ್ನು ತರದಂತೆ ಕೋರಿದ್ದರು. ಇದರ ಹೊರತಾಗಿಯೂ ಅಧಿಕಾರಿಗಳು, ಬೆಂಬಲಿಗರು ಹೆಚ್ಚಿನ ಪ್ರಮಾಣದಲ್ಲಿ ಬೊಕ್ಕೆ ಹಾಗೂ ಹಾರಗಳನ್ನು ತಂದಿದ್ದರಿಂದ ಮೇಯರ್ ಗರಂ ಆದರು. ಇನ್ಮೆàಲೆ ದಯವಿಟ್ಟು ಈ ರೀತಿ ಹಾರ, ತುರಾಯಿ ತರಬೇಡಿ ಎಂದು ಹೇಳಿದರು.
ಬಸವೇಶ್ವರರಿಗೆ ಪೂಜೆ ಸಲ್ಲಿಸಿ ಪದಗ್ರಹಣ: ಪದಗ್ರಹಣದ ಹಿನ್ನೆಲೆಯಲ್ಲಿ ಸೋಮವಾರ ಮೇಯರ್ ಕಚೇರಿಯಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದ ಗಂಗಾಂಬಿಕೆ ಅವರು, ಮೇಯರ್ ಖರ್ಚಿಯಲ್ಲಿ ಬಸವೇಶ್ವರರ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಿದರು. ಬಳಿಕ ಮೇಯರ್ ಖುರ್ಚಿಗೂ ಪೂಜೆ ಸಲ್ಲಿಸಿ ಅದರಲ್ಲಿ ಆಸೀನರಾದರು. ಬಿಬಿಎಂಪಿ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.