ಇಬ್ಬರು ಯುವಕರ ಕೊಲೆ
Team Udayavani, Jul 23, 2018, 12:06 PM IST
ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಇಬ್ಬರು ಯುವಕರನ್ನು ಹತ್ಯೆ ಮಾಡಲಾಗಿದೆ. ವಿಜಯನಗರದ ಕುವೆಂಪು ಸರ್ಕಲ್‌ನ ಮಾರುತಿ ಬಾರ್‌ನ ಮುಂಭಾಗ ರಾತ್ರಿ 9.30ರ ಸುಮಾರಿಗೆ ಲತೀಶ್ ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.
ಈ ಸಂಬಂಧ ಆರೋಪಿ ಸತೀಶ್ ಎಂಬಾತನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತೂಂದೆಡೆ ಕಾಟನ್‌ಪೇಟೆಯ ಛಲವಾದಿ ಪಾಳ್ಯದ ನಿವಾಸಿ ಗೋವಿಂದರಾಜು ಎಂಬಾತನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಗುಂಡೇಟು ಪ್ರಕರಣ: ವಿಜಯನಗರ ನಿವಾಸಿಯಾಗಿರುವ ಲತೀಶ್ ಆಟೋಚಾಲಕನಾಗಿದ್ದು, ಭಾನುವಾರ ರಾತ್ರಿ ಮಾರುತಿ ಬಾರ್ ಮುಂಭಾಗ ಸ್ನೇಹಿತರ ಜತೆ ಮಾತನಾಡುತ್ತಾ ನಿಂತಿದ್ದ.
ಈ ವೇಳೆ ಆಗಮಿಸಿದ ಆರೋಪಿ ಸತೀಶ್, ಏಕಾಏಕಿ ತನ್ನ ಬಳಿಯಿದ್ದ ಪಿಸ್ತೂಲ್‌ನಿಂದ ಲತೀಶ್ ಎದೆಗೆ ಗುಂಡು ಹಾರಿಸಿದ್ದಾನೆ. ಲತೀಶ್ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗುಂಡೇಟು ಸದ್ದಿಗೆ ಬಾರ್ ಸುತ್ತಮುತ್ತಲ ಪ್ರದೇಶ ಸ್ತಬ್ಧªವಾಗಿದ್ದು, ಜನರು ಆತಂಕದಿಂದ ದಿಕ್ಕಾಪಾಲಾಗಿದ್ದಾರೆ. ಸತೀಶ್ ಕೂಡ ಪರಾರಿಯಾಗಿದ್ದಾನೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆರೋಪಿ ಸತೀಶ್‌ನನ್ನು ಬಂಧಿಸಿದ್ದಾರೆ. ಹಳೆಯ ವೈಷಮ್ಯದ ಕಾರಣ ಕೊಲೆ ಮಾಡಿರುವ ಶಂಕೆಯಿದ್ದು, ವಿಜಯನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನೃತ್ಯ ಮಾಡುವ ವಿಚಾರಕ್ಕೆ ಕೊಲೆ: ಮತ್ತೂಂದೆಡೆ ಜಾತ್ರೆಯಲ್ಲಿ ನೃತ್ಯ ಮಾಡುವ ವಿಚಾರವಾಗಿ ಕೂಲಿ ಕಾರ್ಮಿಕನನ್ನು ಹತ್ಯೆಗೈದ ಘಟನೆ ಕಾಟನ್‌ಪೇಟೆಯಲ್ಲಿ ನಡೆದಿದೆ. ಕೂಲಿ ಕಾರ್ಮಿಕ ಗೋವಿಂದರಾಜು ಮೃತನು.
ಕಾಟನ್‌ಪೇಟೆಯಲ್ಲಿ ನಡೆಯುತ್ತಿದ್ದ ಮಾರಮ್ಮ ಜಾತ್ರೆಯಲ್ಲಿ ಭಾನುವಾರ ರಾತ್ರಿ ನೃತ್ಯ ಮಾಡುವ ವಿಚಾರಕ್ಕೆ ಪಪ್ಪು ಅಲಿಯಾಸ್ ಶಂಕರ್ ಹಾಗೂ ಸ್ಥಳೀಯರ ಜತೆ ಗೋವಿಂದರಾಜು ಜಗಳ ಮಾಡಿಕೊಂಡಿದ್ದಾನೆ.
ಈ ವೇಳೆ ಶಂಕರ್ ಚಾಕುವಿನಿಂದ ಗೋವಿಂದರಾಜು ಎದೆಗೆ ಇರಿದು ಪರಾರಿಯಾಗಿದ್ದಾನೆ. ರಕ್ತಸ್ರಾವದಿಂದ ಕುಸಿದು ಬಿದ್ದ ಗೋವಿಂದರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪ್ರಕರಣ ಸಂಬಂಧ ಕಾಟನ್ ಪೇಟೆ ಪೊಲೀಸರು ಆರೋಪಿ ಶಂಕರ್‌ನನ್ನು ಬಂಧಿಸಿದ್ದಾರೆ.
ಎರಡೂ ಪ್ರಕರಣಗಳ ಸಂಬಂಧ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಲಾಗಿದೆ. ಯಾವ ಕಾರಣಕ್ಕೆ ಆರೋಪಿಗಳು ಕೊಲೆ ಮಾಡಿದ್ದಾರೆ ಎಂಬುದು ನಿಖರವಾಗಿ ಗೊತ್ತಾಗಿಲ್ಲ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ತಿಳಿಸಿದರು.