ಕಾನೂನು ತಜ್ಞರ ಅಭಿಪ್ರಾಯದಂತೆ ಮುಂದಿನ ನಡೆ
Team Udayavani, Mar 9, 2018, 6:00 AM IST
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರದ ಮುಂದಿನ ನಡೆ ಮತ್ತು ನಿಲುವು ಏನಾಗಿರಬೇಕು ಎಂಬ ಬಗ್ಗೆ “ಕಾನೂನು ತಂಡದ’ ಅಭಿಪ್ರಾಯ ಪಡೆದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಫೆ.16ರಂದು ನೀಡಿದ ತೀರ್ಪಿನ ಬಗ್ಗೆ ಚರ್ಚಿಸಲು ಗುರುವಾರ ವಿಧಾನಸೌಧದಲ್ಲಿ ಕರೆಯಲಾಗಿದ್ದ ವಿಧಾನಮಂಡಲದ ಉಭಯ ಸದನಗಳ ವಿರೋಧ ಪಕ್ಷದ ಮುಖಂಡರು, ಕಾವೇರಿ ಜಲಾನಯನ ಪ್ರದೇಶದ ಶಾಸಕರು ಮತ್ತು ಸಂಸದರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, “ಈ ವಿಚಾರದಲ್ಲಿ ಕಾನೂನು ತಂಡ ಹೇಳಿದಂತೆ ಸರ್ಕಾರ ನಡೆದುಕೊಳ್ಳಲಿದೆ. ಸರ್ಕಾರದ ಮುಂದಿನ ನಡೆ ಕಾನೂನು ತಂಡದ ಅಭಿಪ್ರಾಯದ ಮೇಲೆ ಅವಲಂಬಿತವಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾವೇರಿ ನ್ಯಾಯಾಧಿಕರಣದಲ್ಲಿ ರಾಜ್ಯಕ್ಕೆ 270 ಟಿಎಂಸಿ ನೀರು ಹಂಚಿಕೆ ಆಗಿತ್ತು. ಈಗ ಸುಪ್ರೀಂಕೋರ್ಟ್ 14.75 ಟಿಎಂಸಿ ನೀರು ಹೆಚ್ಚುವರಿಯಾಗಿ ಹಂಚಿಕೆ ಮಾಡಿದೆ. ಅದರಂತೆ, ಬಿಳಿಗುಂಡ್ಲು ಜಲಾಶಯದಿಂದ ತಮಿಳುನಾಡುಗೆ ವರ್ಷಕ್ಕೆ 192 ಟಿಎಂಸಿ ಬದಲು 177 ಟಿಎಂಸಿ ನೀರು ಹರಿಸಬೇಕಾಗುತ್ತದೆ. ಜೊತೆಗೆ 6 ವಾರಗಳಲ್ಲಿ “ನಿರ್ವಹಣಾ ಮಂಡಳಿ’ ರಚಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೊಟ್ಟಿದೆ. ಆದರೆ, ನಿರ್ವಹಣಾ ಮಂಡಳಿ ಬೇಡ ಎಂದು ಪ್ರತಿಪಕ್ಷಗಳು ಹೇಳಿವೆ. ನಿರ್ವಹಣಾ ಮಂಡಳಿ ಹೇಗಿರುತ್ತದೆ ಅನ್ನುವ ಸ್ಪಷ್ಟತೆ ತೀರ್ಪಿನಲ್ಲಿ ಇಲ್ಲ. ಅಂತರರಾಜ್ಯ ಜಲ ವಿವಾದ ಕಾಯ್ದೆಯ ಸೆಕ್ಷನ್ 6 (ಎ) ರಂತೆ “ವ್ಯಾಜ್ಯ ಪರಿಹಾರ ವೇದಿಕೆ’ ರಚಿಸಬೇಕು ಎಂದು ಪದ ಬಳಕೆ ಮಾಡಲಾಗಿದೆ. ಈ ಬಗ್ಗೆ ಕಾನೂನು ತಂಡದ ಜೊತೆಗೆ ಸಮಾಲೋಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಕಾವೇರಿ ವಿವಾದ ಸೇರಿದಂತೆ ರಾಜ್ಯದ ವಿವಿಧ ಜಲ ಮತ್ತು ಗಡಿ ವಿವಾದಗಳಲ್ಲಿ ಸರ್ಕಾರ ಎಲ್ಲ ಸಂದರ್ಭಗಳಲ್ಲೂ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದಿದೆ. ಮುಂದೆಯೂ ಇದೇ ರೀತಿ ಇರಲಿದೆ. ಇಂದಿನ ಸಭೆಯಲ್ಲೂ ಪ್ರತಿಪಕ್ಷಗಳ ಮುಖಂಡರು ತಮ್ಮ ಅಭಿಪ್ರಾಯಗಳ ಜೊತೆಗೆ ತೀರ್ಪಿನ ಹಿನ್ನೆಲೆಯಲ್ಲಿ ಕೆಲವೊಂದು ಆತಂಕ ಹಾಗೂ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕೋ ಬೇಡವೋ ಎಂಬ ಬಗ್ಗೆಯೂ ಚರ್ಚೆ ಆಗಿದೆ.
ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಕಾನೂನು ತಂಡದ ಮುಖ್ಯಸ್ಥರಾದ ಫಾಲಿ ನಾರಿಮನ್, ಶ್ಯಾಮ್ ದಿವಾನ್ ಮತ್ತು ರಾಜ್ಯದ ಅಡ್ವೋಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ ನಿಲುವು ತೆಗೆದುಕೊಳ್ಳಲಾಗುವುದು. ಶುಕ್ರವಾರ (ಮಾ.9) ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆ ಕರೆದಿದ್ದು, ಅಲ್ಲೂ ನಮ್ಮ ನಿಲುವು ಮಂಡಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ವೈ.ಎಸ್.ವಿ. ದತ್ತಾ, ವಿಧಾನಪರಿಷತ್ತಿನ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ, ಉಪನಾಯಕ ಕೆ.ಟಿ. ಶ್ರೀಕಂಠೇಗೌಡ, ಸಂಸದ ಪಿ.ಸಿ. ಮೋಹನ್, ಸಚಿವರಾದ ಎಂ.ಬಿ. ಪಾಟೀಲ್, ಟಿ.ಬಿ. ಜಯಚಂದ್ರ, ಎಂ.ಆರ್. ಸೀತಾರಾಂ, ಎ. ಮಂಜು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ಅಡ್ವೋಕೇಟ್ ಜನರಲ್ ಮಧುಸೂಧನ್ ಆರ್. ನಾಯಕ್ ಮತ್ತಿತರರು ಇದ್ದರು.
“ಕಾವೇರಿ ನಿರ್ವಹಣಾ ಮಂಡಳಿ’ ರಚನೆಗೆ ಬಿಜೆಪಿಯ ವಿರೋಧವಿದೆ. ಒಂದು ವೇಳೆ ನಿರ್ವಹಣಾ ಮಂಡಳಿ “ಶಾಶ್ವತ’ ಮಂಡಳಿಯಾದರೆ ರಾಜ್ಯಕ್ಕೆ ಅನ್ಯಾಯ ಮತ್ತು ಅನಾಹುತ ಆಗಲಿದೆ. 14.75 ಟಿಎಂಸಿ ಹೆಚ್ಚುವರಿ ನೀರು ಸಿಕ್ಕಿದ್ದು ಬಿಟ್ಟರೆ, ಪೂರ್ಣ ಪ್ರಮಾಣದ ಬೇಡಿಕೆ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ನಿರ್ವಹಣಾ ಮಂಡಳಿ ರಚನೆ, ಮರು ಪರಿಶೀಲನಾ ಅರ್ಜಿ ಸಲ್ಲಿಕೆಯ ಸಾಧ್ಯತೆ ಮತ್ತಿತರರ ವಿಚಾರಗಳ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದುಕೊಂಡು ಮುಂದಿನ ನಿರ್ಧಾರಕ್ಕೆ ಬರುವಂತೆ ಸರ್ಕಾರಕ್ಕೆ ಸಲಹೆ ಕೊಡಲಾಗಿದೆ’.
– ಜಗದೀಶ್ ಶೆಟ್ಟರ್, ವಿರೋಧ ಪಕ್ಷದ ನಾಯಕ.
“ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಸುಪ್ರೀಂಕೋರ್ಟ್ ಕೊಟ್ಟಿರುವ ತೀರ್ಪಿನಿಂದ ರಾಜ್ಯಕ್ಕೆ ಸಂಪೂರ್ಣ ನ್ಯಾಯ ಸಿಕ್ಕಿದೆ ಎಂದು ಭಾವಿಸಿದರೆ ಮೂರ್ಖತನವಾಗುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ಒತ್ತಾಯದ ಮೇರೆಗೆ ಶುಕ್ರವಾರ ಕೇಂದ್ರ ಸರ್ಕಾರ ಮುಖ್ಯ ಕಾರ್ಯದರ್ಶಿಗಳ ಸಭೆ ಕರೆದಿದೆ. ಈ ಅವಕಾಶವನ್ನು ರಾಜ್ಯ ಸರ್ಕಾರ ಸದ್ಬಳಕೆ ಮಾಡಿಕೊಳ್ಳಬೇಕು. ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ತೀರ್ಪು ಪ್ರಶ್ನಿಸಿ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ಯೋಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ’.
– ವೈ.ಎಸ್.ವಿ. ದತ್ತಾ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.