ಡ್ರಂಕ್ ಆ್ಯಂಡ್ ಡ್ರೈವ್ ಕೇಸ್ ಸಂಖ್ಯೆ ಆರು ಪಟ್ಟು ಹೆಚ್ಚಳ
Team Udayavani, Dec 27, 2022, 10:01 AM IST
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸುವವರಿಗೆ ದಂಡ ವಿಧಿಸುವುದೇ ಸಂಚಾರ ವಿಭಾಗದ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಡ್ರಂಕ್ ಆ್ಯಂಡ್ ಡ್ರೈವ್ ಕೇಸ್‌ನ ಪ್ರಮಾಣ ಬರೋಬ್ಬರಿ 6 ಪಟ್ಟು ಹೆಚ್ಚಳವಾಗಿರುವುದು ಅಚ್ಚರಿ ಉಂಟು ಮಾಡಿದೆ. !
ಮದ್ಯಪಾನ ಮಾಡಿ ವಾಹನ ಚಲಾಯಿಸಿ ಸಿಕ್ಕಿಬೀಳುವ ಮದ್ಯಾಸುರರ ವಾಹನ ಜಪ್ತಿ ಮಾಡಿದರೆ ಪೊಲೀಸರ ಜತೆಗೆ ವಾಗ್ವಾದಕ್ಕಿಳಿಯುತ್ತಾರೆ. ಮತ್ತೂಂದೆಡೆ ಪಾನಮತ್ತ ಮಾನಿನಿಯರ ಜತೆ ಜಗಳಕ್ಕಿಳಿದು, ಅವಾಚ್ಯ ಶಬ್ದಗಳಿಂದ ಬೈಗುಳ ತಿಂದೇ ವಾಹನ ಜಪ್ತಿ ಮಾಡುವುದು ಅನಿವಾರ್ಯವಾಗಿದೆ. ಒಟ್ಟಿನಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣಗಳಲ್ಲಿ ಸಿಕ್ಕಿಬಿದ್ದು ನಶೆಯಲ್ಲಿ ತೇಲಾಡುತ್ತಿರುವ ಮದ್ಯಾಸುರರು ಹಾಗೂ ಮಾನಿನಿಯರನ್ನು ನಿಯಂತ್ರಿಸುವುದೇ ಸಂಚಾರ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
2020ರಲ್ಲಿ ದಾಖಲಾಗಿದ್ದ 5,343 ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣವು 2021ರಲ್ಲಿ 4,144ಕ್ಕೆ ಗಣನೀಯವಾಗಿ ಇಳಿಕೆಯಾಗಿತ್ತು. ಇದೀಗ 2022 (ನವೆಂಬರ್)ಕ್ಕೆ ಬರೋಬ್ಬರಿ 26,017ಕ್ಕೆ ಭಾರಿ ಏರಿಕೆಯಾಗಿದೆ. ಸದ್ಯ ಕುಡಿದು ವಾಹನ ಚಲಾಯಿಸುವವರಿಗೆ ಕನಿಷ್ಠ 10 ಸಾವಿರ ರೂ. ದಂಡ ನಿಗಪಡಿಸಲಾಗಿದೆ. ಈ ದಂಡದ ಪ್ರಕಾರ ಲೆಕ್ಕಾಚಾರ ಹಾಕಿದರೆ 2022ರಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ಕೇಸ್ ವೊಂದರಲ್ಲೇ ಬರೋಬ್ಬರಿ 26 ಕೋಟಿ ರೂ.ಗೂ ಅಧಿಕ ದಂಡ ಸಂಗ್ರಹವಾಗಿದ್ದು, ಕಳೆದ ಸಾಲಿಗಿಂತ 6 ಪಟ್ಟು ಹೆಚ್ಚಳವಾಗಿದೆ.
ಡ್ರಂಕ್ ಆ್ಯಂಡ್ ಡ್ರೈವ್ ವಿರುದ್ಧ ಕ್ರಮ ಹೇಗೆ?: ಬಹುತೇಕ ಪ್ರಕರಣಗಳಲ್ಲಿ ನಗರದಲ್ಲಿ ರಾತ್ರಿ ವೇಳೆ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಬಾರ್, ಡ್ಯಾನ್ಸ್‌ಬಾರ್, ಹುಕ್ಕಾ ಬಾರ್, ಪಂಚತಾರಾ ಹೋಟೆಲ್‌ಗಳಲ್ಲಿ ಕಂಠಮಟ್ಟ ಕುಡಿಯುವ ಮದ್ಯಪ್ರಿಯರು ಅಮಲಿನಲ್ಲಿ ತೇಲುತ್ತಾ ವಾಹನ ಚಲಾಯಿಸಿಕೊಂಡು ಮನೆಗೆ ತೆರಳುತ್ತಾರೆ. ಇಂತಹ ವ್ಯಕ್ತಿಗಳು ಹೆಚ್ಚಾಗಿ ಓಡಾಡುವ ಮಾರ್ಗದಲ್ಲೇ ಬೇಟೆಗಾಗಿ ಕಾಯುತ್ತಿರುವ ಟ್ರಾಫಿಕ್ ಪೊಲೀಸರು ಏಕಾಏಕಿ ವಾಹನ ತಡೆದು ಆಲ್ಕೋ ಮೀಟರ್ ಊದುವಂತೆ ಸೂಚಿಸುತ್ತಾರೆ. ಮದ್ಯಪಾನ ಮಾಡಿದ್ದರೆ ಆಲ್ಕೋಮೀಟರ್ ಸೂಚನೆ ನೀಡುತ್ತದೆ. ಕೂಡಲೇ ಅಂತಹವರ ವಾಹನ ಜಪ್ತಿ ಮಾಡಿ ಆಯಾ ಪೊಲೀಸ್ ಠಾಣೆಗಳಲ್ಲಿ ಇಡಲಾಗುತ್ತದೆ. ಇತ್ತ ಸಿಕ್ಕಿಬಿದ್ದ ಮದ್ಯಾಸುರರು ನ್ಯಾಯಾಲಯದಲ್ಲಿ ದಂಡ ಪಾವತಿಸಿ ರಸೀದಿಯನ್ನು ಠಾಣೆಗೆ ತಂದು ಕೊಟ್ಟರೆ ವಾಹನದ ಕೀ ಮಾಲೀಕರಿಗೆ ಹಸ್ತಾಂತರಿಸಲಾಗುತ್ತದೆ.
ಪ್ರಭಾವಕ್ಕೆ ಒಳಗಾಗದಂತೆ ಎಚ್ಚರಿಕೆ: ಈ ಹಿಂದೆ ಕರ್ತವ್ಯ ನಿರತ ಪೊಲೀಸರು ಪ್ರಭಾವಕ್ಕೊಳಗಾಗಿ ಲಂಚ ಪಡೆಯುವ ಆರೋಪ ಕೇಳಿ ಬರುತ್ತಿದ್ದವು. ಕೆಲ ಸಂದರ್ಭಗಳಲ್ಲಿ ತಪಾಸಣೆ ಸಂದರ್ಭದಲ್ಲಿ ಸಿಕ್ಕಿ ಬೀಳುವ ವ್ಯಕ್ತಿಗಳು ತಾವು ಅಧಿಕಾರಿಗಳು, ರಾಜಕಾರಣಿಗಳು, ಪೊಲೀಸರ ಕಡೆಯವರ ಪ್ರಭಾವ ಬಳಸಿಕೊಂಡು ಫೋನ್ ಮಾಡಿಸಿ ಬಿಟ್ಟು ಕಳುಹಿಸುವಂತೆ ಒತ್ತಡಗಳು ಹೇರುತ್ತಿದ್ದರು. ಇದೀಗ ಪ್ರಭಾವಕ್ಕೆ ಒಳಗಾಗದಂತೆ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಟ್ರಾಫಿಕ್ ಪೊಲೀಸರೂ ಅಲರ್ಟ್: ರಕ್ತದಲ್ಲಿ ಇಂತಿಷ್ಟು ಎಂ.ಜಿಗಿಂತ ಹೆಚ್ಚು ಅಲ್ಕೋಹಾಲ್ ಅಂಶ ಕಂಡು ಬಂದರೆ ಅಂತಹ ಸವಾರರ ವಿರುದ್ಧ ಕೇಸ್ ದಾಖಲಿಸಲೇಬೇಕು ಎಂಬ ನಿಯಮಗಳಿವೆ. ಪ್ರತಿ ಅಲ್ಕೋಮೀಟರ್‌ಗಳನ್ನು ಆಯಾ ಠಾಣೆಗಳಿಗೆ ವಿತರಿಸಿರುವ ದಾಖಲೆಗಳು ಹಾಗೂ ಅದರ ಮೇಲೆ ನಂಬರ್‌ಗಳಿರುತ್ತವೆ. ನಿರ್ದಿಷ್ಟ ದಿನಗಳಂದು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುವ ಅಧಿಕಾರಿ ಹಾಗೂ ಸಿಬ್ಬಂದಿ ಮಾಹಿತಿಯೂ ದಾಖಲಾಗಿರುತ್ತದೆ. ಆಡಿಟಿಂಗ್ ವೇಳೆ ತಪ್ಪು ಕಂಡು ಬಂದರೆ ಸಂಬಂಧಿಸಿದ ಸಂಚಾರ ಪೊಲೀಸರೇ ಇದಕ್ಕೆ ಸ್ಪಷ್ಟನೆ ಕೊಡಬೇಕಾಗುತ್ತದೆ. ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದರೆ ಶಿಸ್ತು ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರೂ ಅಲರ್ಟ್ ಆಗಿದ್ದಾರೆ.
ಹೊಸ ವರ್ಷಕ್ಕೆ ಮದ್ಯಪ್ರಿಯರು ಎಚ್ಚರ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಪಾನಮತ್ತರಾಗಿ ವಾಹನ ಚಲಾಯಿಸಿದರೆ ಸಿಕ್ಕಿ ಬೀಳುವುದು ಗ್ಯಾರೆಂಟಿ. ಆ ದಿನ ಸಂಜೆಯಿಂದ ಮುಂಜಾನೆವರೆಗೂ ನಗರದೆಲ್ಲೆಡೆ ಪಾನಮತ್ತ ವಾಹನ ಸವಾರರ ಮೇಲೆ ಹದ್ದಿನ ಕಣ್ಣಿಡಲು ಸಂಚಾರ ವಿಭಾಗದ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಸಂಚಾರ ವಿಭಾಗದ ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ 3 ವರ್ಷಗಳಿಂದ ಹೊಸ ವರ್ಷಾಚರಣೆಯ ಮದ್ಯದ ಪಾರ್ಟಿಗೆ ಕೋವಿಡ್ ಅಡ್ಡಿಯಾಗಿತ್ತು. 2023ರ ಹೊಸ ವರ್ಷಾಚರಣೆಗೆ ಈ ಎಲ್ಲ ಅಡ್ಡಿ, ಆತಂಕ ದೂರವಾಗಿ ಬೆಂಗಳೂರಿಗರು ಸಂಭ್ರಮಿಸಲು ಕಾತರರಾಗಿದ್ದಾರೆ. ಕೆಲ ಐಶಾರಾಮಿ ಹೋಟೆಲ್ ಕೊಠಡಿಗಳು, ಪಬ್, ರೆಸ್ಟೋರೆಂಟ್‌ಗಳ ಟೇಬಲ್‌ಗಳು ಹೊಸ ವರ್ಷಾಚರಣೆಗೆ 10 ದಿನ ಮುಂಗಡವಾಗಿ ಬುಕ್ ಆಗಿವೆ.
ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ವಾರಾಂತ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಿದರೆ ನಡೆಯಬಹುದಾದ ಅಪಘಾತ ತಪ್ಪಿಸಬಹುದು. – ಡಾ.ಎಂ.ಎ.ಸಲೀಂ, ವಿಶೇಷ ಆಯುಕ್ತ, ಬೆಂಗಳೂರು ಸಂಚಾರ ಪೊಲೀಸ್ ವಿಭಾಗ
-ಅವಿನಾಶ್ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.