ಜಿಎಸ್‌ಟಿ ಪಾವತಿದಾರರ ಸಂಖ್ಯೆ ಕ್ರಮೇಣ ಇಳಿಕೆ
Team Udayavani, Oct 28, 2017, 4:16 PM IST
ಬೆಂಗಳೂರು: ದೇಶಾದ್ಯಂತ ಜಿಎಸ್‌ಟಿಯಡಿ ಜುಲೈ ತಿಂಗಳ ವಹಿವಾಟಿನ ತೆರಿಗೆಯನ್ನು 56 ಲಕ್ಷ ಮಂದಿ ಪಾವತಿಸಿದ್ದರೆ ಸೆಪ್ಟೆಂಬರ್ ತಿಂಗಳ ತೆರಿಗೆಯನ್ನು 42 ಲಕ್ಷ ವ್ಯಾಪಾರ- ವ್ಯವಹಾರಸ್ಥರಷ್ಟೇ ಪಾವತಿಸಿದ್ದು, ತೆರಿಗೆ ಪಾವತಿಸಿದವರ ಸಂಖ್ಯೆ 14 ಲಕ್ಷ ಇಳಿಕೆಯಾಗಿದೆ. ಜಿಎಸ್‌ಟಿ ಪ್ರಕ್ರಿಯೆಯಲ್ಲಿನ ಸಮಸ್ಯೆ, ಗೊಂದಲ ನಿವಾರಿಸಿ ಸುಗಮ, ಸರಳ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ಜಿಎಸ್‌ಟಿ ಸದಸ್ಯರೂ ಆದ ಕೇಂದ್ರ ವಿಶೇಷ ಕಾರ್ಯದರ್ಶಿ ಮಹೇಂದ್ರ ಸಿಂಗ್ ಹೇಳಿದರು.
ಕೇಂದ್ರ ಹಣಕಾಸು ಸಚಿವಾಲಯದ ಕೇಂದ್ರ ಅಬಕಾರಿ ಮತ್ತು ಸುಂಕ ಮಂಡಳಿ (ಸಿಬಿಇಎಸ್) ಎಫ್ಕೆಸಿಸಿಐ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಜಿಎಸ್‌ಟಿ ಕಾನೂನು ಮತ್ತು ನಿಯಮಾವಳಿ’ ಕುರಿತ ಸಂವಾದ ಉದ್ಘಾಟಿಸಿ ಮಾತನಾಡಿದ ಅವರು, ಜಿಎಸ್‌ಟಿ ಜಾರಿಯಾದ ಜುಲೈ ತಿಂಗಳ ವಹಿವಾಟಿಗೆ ಸಂಬಂಧಪಟ್ಟಂತೆ 56 ಲಕ್ಷ ವ್ಯಾಪಾರ, ವ್ಯವಹಾರಸ್ಥರು “ಆರ್3ಬಿ’ ಅಡಿ ತೆರಿಗೆ ಪಾವತಿಸಿದ್ದಾರೆ.
ಆಗಸ್ಟ್ ತಿಂಗಳ ವಹಿವಾಟಿನ ಸಂಬಂಧ 52 ಲಕ್ಷ ಮಂದಿ ತೆರಿಗೆ ಪಾವತಿಸಿದ್ದಾರೆ. ಆದರೆ ಸೆಪ್ಟೆಂಬರ್ ತಿಂಗಳ ವ್ಯವಹಾರಕ್ಕೆ ಪೂರಕವಾಗಿ 42 ಲಕ್ಷ ಮಂದಿಯಷ್ಟೇ ತೆರಿಗೆ ಪಾವತಿಸಿದ್ದು, ಗಣನೀಯ ಇಳಿಕೆಯಾಗಿದೆ. ಅದೇ ರೀತಿ ಮಾಸಿಕ ವಹಿವಾಟು ವಿವರ ಸಲ್ಲಿಸುವ “ಆರ್1′, “ಆರ್2′ ವಿವರ ಸಲ್ಲಿಕೆಯಲ್ಲೂ ವ್ಯತ್ಯಯವಿರುವುದು ಕಂಡುಬಂದಿದೆ ಎಂದು ತಿಳಿಸಿದರು.
ಜಿಎಸ್‌ಟಿಯು ದೇಶದ ಆರ್ಥಿಕತೆಗೆ ಮಹತ್ವದ ತಿರುವ ನೀಡುವ ತೆರಿಗೆ ವ್ಯವಸ್ಥೆ ಎನಿಸಿದೆ. ಈಗಾಗಲೇ 4 ತಿಂಗಳು ಬಹುತೇಕ ಪೂರೈಸಿದ್ದು, ಸವಾಲಿನ ಹಾದಿ ಕ್ರಮಿಸಿದಂತಾಗಿದೆ. ಉತ್ಪಾದಕರು, ಡೀಲರ್‌ಗಳು, ವ್ಯಾಪಾರಿಗಳು, ಅಧಿಕಾರಿಗಳಿಗೂ ಹೊಸ ವ್ಯವಸ್ಥೆಯಾಗಿದ್ದರಿಂದ ಸವಾಲುಗಳು ಸಾಕಷ್ಟಿದ್ದವು. ಪತ್ರ, ಟ್ವಿಟರ್, ಇ-ಮೇಲ್ ಇತರೆ ಮಾಧ್ಯಮದ ಮೂಲಕ ನೂರಾರು ದೂರು ಸಲ್ಲಿಕೆಯಾಗುತ್ತಿದ್ದು, ಅವುಗಳಿಗೆ ಸ್ಪಂದಿಸುವ ಕೆಲಸ ಆದ್ಯತೆ ಮೇರೆಗೆ ನಡೆಯುತ್ತಿದೆ ಎಂದರು.
ಜಿಎಸ್‌ಟಿಗೆ ಸಂಬಂಧಪಟ್ಟಂತೆ ಮಾಹಿತಿ ತಂತ್ರಜ್ಞಾನ ಸೇವೆ, ನಿಯಮಾವಳಿಗಳ ಅರ್ಥೈಸುವಿಕೆ, ವಹಿವಾಟಿನ ವಿವರ, ತೆರಿಗೆ ಪಾವತಿ, ತೆರಿಗೆ ದರಗಳ ಬಗ್ಗೆ ಗೊಂದಲವಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸಂಬಂಧಪಟ್ಟ ಸಮಿತಿಗಳಲ್ಲಿ ಸಚಿವರು, ಹಿರಿಯ ಅಧಿಕಾರಿಗಳು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸಂವಹನ- ಮಾಹಿತಿ ಕೊರತೆ: ಹೊಸ ಜಿಎಸ್‌ಟಿ ವ್ಯವಸ್ಥೆ ಬಗ್ಗೆ ಸಂವಹನ, ಮಾಹಿತಿ ಕೊರತೆಯೂ ಗೊಂದಲ ಹೆಚ್ಚಳಕ್ಕೆ ಕಾರಣವಾಗಿರಬಹುದು. ಅ.6ರಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಒಂದಿಷ್ಟು ರಿಯಾಯ್ತಿ ಸಿಕ್ಕಿದ್ದು, ನವೆಂಬರ್‌ನ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಇನ್ನಷ್ಟು ಸೌಲಭ್ಯ ಪ್ರಕಟವಾಗುವ ಸಾಧ್ಯತೆ ಇದೆ. ಒಟ್ಟಾರೆ ಸರಳ, ಸುಗಮವಾಗಿ ತೆರಿಗೆ ಹಾಗೂ ವಿವರ ಸಲ್ಲಿಕೆ ವ್ಯವಸ್ಥೆ ಕಲ್ಪಿಸಲು ನಿರಂತರವಾಗಿ ಆದ್ಯತೆ ನೀಡಲಾಗುತ್ತಿದೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲೂ ತೆರಿಗೆ ಪಾವತಿ ಇಳಿಕೆ: ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್.ಶ್ರೀಕರ್, ರಾಜ್ಯದಲ್ಲೂ ಜಿಎಸ್‌ಟಿಯಡಿ ಜುಲೈ ತಿಂಗಳ ವಹಿವಾಟಿಗೆ ಸಂಬಂಧಪಟ್ಟಂತೆ 4.14 ಲಕ್ಷ ಮಂದಿ ತೆರಿಗೆ ಪಾವತಿಸಿದ್ದರೆ, ಆಗಸ್ಟ್‌ನಲ್ಲಿ 3.70 ಲಕ್ಷ ಹಾಗೂ ಸೆಪ್ಟೆಂಬರ್ ತಿಂಗಳ ವ್ಯವಹಾರಕ್ಕೆ ಸಂಬಂಧಪಟ್ಟಂತೆ 3.40 ಲಕ್ಷ ಮಂದಿಯಷ್ಟೇ ತೆರಿಗೆ ಪಾವತಿಸಿದ್ದು, ನಿರಂತರ ಇಳಿಕೆಯಾಗಿರುವುದು ಕಂಡುಬಂದಿದೆ.
ಇದಕ್ಕೆ ಕಾರಣಗಳನ್ನು ಪತ್ತೆ ಹಚ್ಚಿ ಸಮಸ್ಯೆ ನಿವಾರಿಸುವ ಕಾರ್ಯ ನಡೆದಿದೆ ಎಂದು ಹೇಳಿದರು. ಜಿಎಸ್‌ಟಿ ಜಾರಿಯಾದ ಬಳಿಕ ಸುಮಾರು 120 ಅಧಿಸೂಚನೆಗಳು ಹೊರಬಿದ್ದಿವೆ. ಹೊಸ ವ್ಯವಸ್ಥೆ ಜಾರಿಯು ಸವಾಲೆನಿಸಿದ್ದು, ವ್ಯಾಪಾರ- ವ್ಯವಹಾರಸ್ಥರಿಂದ ವ್ಯಕ್ತವಾಗುವ ಪ್ರತಿಕ್ರಿಯೆ ಆಧರಿಸಿ ಬದಲಾವಣೆಗಳಾಗುತ್ತಿವೆ. ಇಲಾಖೆ ಹಾಗೂ ವ್ಯಾಪಾರ ವರ್ಗದ ನಡುವೆ ಪರಿಣಾಮಕಾರಿ ಮಾಹಿತಿ ವಿನಿಮಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ, “ಎಲ್ಲ ವ್ಯವಹಾರಸ್ಥರು ಸರಳವಾಗಿ ನಿರ್ವಹಿಸಬಹುದಾದ ವ್ಯವಸ್ಥೆ ಜಾರಿಗೊಳಿಸಬೇಕು. ಸಾಫ್ಟ್ವೇರ್ ಬಳಕೆಯಲ್ಲಿನ ಅಡಚಣೆ, ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು. ವ್ಯಾಪಾರ- ವ್ಯವಹಾರಸ್ಥರು ಪ್ರಸ್ತಾಪಿಸುವ ಸಮಸ್ಯೆ, ಮನವಿಗೆ ಸೂಕ್ತ ಸ್ಪಂದನೆ ನೀಡಿ ಪರಿಹರಿಸಲು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದ ಜಿಎಸ್‌ಟಿ ಸಮಿತಿ ಸದಸ್ಯ ಬಿ.ಟಿ.ಮನೋಹರ್, ದೇಶದಲ್ಲೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಸಂವಾದ ನಡೆಸಿರುವುದು ಉತ್ತಮವಾಗಿದ್ದು, ಇದರಿಂದ ಉದ್ದಿಮೆದಾರರಲ್ಲಿ ಸಮಸ್ಯೆಗಳು ತ್ವರಿತವಾಗಿ ಬಗೆಹರಿಯುವ ವಿಶ್ವಾಸ ಮೂಡಿದಂತಾಗಿದೆ ಎಂದು ಹೇಳಿದರು. ಕೇಂದ್ರ ತೆರಿಗೆ ಇಲಾಖೆ ಬೆಂಗಳೂರು ವಲಯದ ಪ್ರಧಾನ ಮುಖ್ಯ ಆಯುಕ್ತ ಎಂ.ವಿನೋದ್ ಕುಮಾರ್, ಡಿಜಿ (ಜಿಎಸ್‌ಟಿ- ಆಡಿಟ್) ಪಿ.ಕೆ.ಜೈನ್, ಜಿಎಸ್‌ಟಿ ಗುಪ್ತಚರ ವಿಭಾಗದ ನಾಗೇಂದ್ರ ಕುಮಾರ್, ಎಡಿಜಿ (ಜಿಎಸ್‌ಟಿ) ಯೋಗೇಂದ್ರ ಗರ್ಗ್ ಇತರರು ಉಪಸ್ಥಿತರಿದ್ದರು.
ಬೆಂಗಳೂರಿನಲ್ಲೇ ಪ್ರಥಮ ಸಂವಾದ
ಜಿಎಸ್‌ಟಿ ಕುರಿತಂತೆ ವ್ಯಾಪಾರ- ವ್ಯವಹಾರಸ್ಥರಲ್ಲಿನ ಗೊಂದಲ, ಸಮಸ್ಯೆಗಳನ್ನು ಆಲಿಸಲು, ಸದ್ಯದ ವ್ಯವಸ್ಥೆಯ ಸುಧಾರಣೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ಪಡೆಯಲು ಮುಕ್ತ ಸಂವಾದ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಅದರಂತೆ ಮೊದಲ ಸಂವಾದವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು, ನಿಮ್ಮ (ವ್ಯಾಪಾರಸ್ಥರು) ಸಮಸ್ಯೆಗಳನ್ನು ಆಲಿಸಲು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಇತರೆ ಭಾಗಗಳಲ್ಲೂ ನಡೆಸಲಾಗುವುದು. ಸಂವಾದಗಳಲ್ಲಿ ವ್ಯಕ್ತವಾಗುವ ಸಲಹೆಗಳು, ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ.
-ಮಹೇಂದ್ರ ಸಿಂಗ್, ಜಿಎಸ್‌ಟಿ ಸದಸ್ಯ, ಸಿಬಿಇಎಸ್ ಮತ್ತು ಕೇಂದ್ರ ವಿಶೇಷ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!
Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.