ಕಟ್ಟಡ ನಕ್ಷೆಗೆ ಹಳೇ ವ್ಯವಸ್ಥೆಯೇ ಗತಿ!
Team Udayavani, Aug 11, 2018, 11:30 AM IST
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿಯಲ್ಲಿ ಪಾರದರ್ಶಕತೆ ತರಲು ಜಾರಿಗೊಳಿಸಿದ್ದ “ಆನ್‌ಲೈನ್ ನಕ್ಷೆ ಮಂಜೂರಾತಿ ತಂತ್ರಾಂಶ’ ಕೈಕೊಟ್ಟಿದೆ.
ಪಾಲಿಕೆಯ ಅಧಿಕಾರಿಗಳು ನಕ್ಷೆ ನೀಡದೆ ಅನಗತ್ಯವಾಗಿ ಕಚೇರಿಗಳಿಗೆ ಅಲೆಸುತ್ತಾರೆ, ಲಂಚ ನೀಡದಿದ್ದರೆ ನಕ್ಷೆ ನೀಡುವುದಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದರಿಂದ ಆನ್‌ಲೈನ್ ವ್ಯವಸ್ಥೆಗೆ ಚಾಲನೆ ನೀಡಲಾಗಿತ್ತಾದರೂ ಕೇವಲ ಮೂರು ತಿಂಗಳ ಅವಧಿಯಲ್ಲಿ ತಂತ್ರಾಂಶದಲ್ಲಿ ದೋಷಗಳು ಕಂಡುಬಂದಿದ್ದು, ನಕ್ಷೆ ಪಡೆಯಲಾಗದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಪಾಲಿಕೆಯಿಂದ ಜಾರಿಗೊಳಿಸಿದ ಆನ್‌ಲೈನ್ ನಕ್ಷೆ ಮಂಜೂರಾತಿ ವ್ಯವಸ್ಥೆಯಲ್ಲಿ ಕಳೆದ ಎರಡು ತಿಂಗಳಿಂದ ಉಂಟಾದ ತಾಂತ್ರಿಕ ದೋಷದಿಂದಾಗಿ ಪಾಲಿಕೆಗೆ ಶುಲ್ಕದ ರೂಪದಲ್ಲಿ ಬರಬೇಕಿದ್ದ ಕೋಟ್ಯಂತರ ರೂ. ಸಹ ನಷ್ಟವಾಗಿದೆ. ಜತೆಗೆ ನಕ್ಷೆ ಮಂಜೂರಾತಿ ವ್ಯವಸ್ಥೆ ಆಗ್ಗಾಗ್ಗೆ ಬದಲಾವಣೆಯಿಂದ ಸಾರ್ವಜನಿಕರಲ್ಲೂ ಗೊಂದಲ ಮೂಡಿದೆ.
ಆನ್‌ಲೈನ್ ನಕ್ಷೆ ಮಂಜೂರಾತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಬಿಬಿಎಂಪಿ, ಸಾಫ್ಟ್ಟೆಕ್ ಇಂಜಿನಿಯರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ನೀಡಿದೆ. ಅದರಂತೆ ಸಂಸ್ಥೆ ತಂತ್ರಾಂಶವನ್ನು ಹಲವು ತಿಂಗಳು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿ ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಆನ್‌ಲೈನ್ ವ್ಯವಸ್ಥೆಗೆ ಚಾಲನೆ ನೀಡಿತ್ತು. ಆದರೆ, ತಂತ್ರಾಂಶ ಜಾರಿಯಾದ ಕೆಲವೇ ದಿನಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದೆ.
ಶೀಘ್ರ ನಕ್ಷೆ ಮಂಜೂರು ಮಾಡುವ ಉದ್ದೇಶದಿಂದ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ತಂತ್ರಾಂಶದಲ್ಲಿನ ವೈಫಲ್ಯದಿಂದಾಗಿ ನಿಗದಿತ ಅವಧಿಯಲ್ಲಿ ನಕ್ಷೆ ದೊರೆಯದೆ ನಾವು ಸಮಸ್ಯೆ ಅನುಭವಿಸುತ್ತಿದ್ದೇವೆ. ಈಗಾಗಲೇ ಮನೆ ನಿರ್ಮಿಸಲು ಬ್ಯಾಂಕ್‌ನಿಂದ ಸಾಲ ಪಡೆದಿದ್ದೇವೆ. ಆದರೆ, ನಕ್ಷೆ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೇ ವ್ಯವಸ್ಥೆಗೆ ಮೊರೆ: ಆನ್‌ಲೈನ್ ನಕ್ಷೆ ಮಂಜೂರಾತಿ ವಿಚಾರದಲ್ಲಿ ಪಾಲಿಕೆಯ ನೂತನ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಬಗ್ಗೆ ಸಾರ್ವಜನಿಕರಿಂದ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಹಳೆಯ ವ್ಯವಸ್ಥೆಯಂತೆ ನಕ್ಷೆ ಮಂಜೂರು ಮಾಡಲು ಆಯುಕ್ತರು ಆದೇಶಿಸಿದ್ದಾರೆ. ಮಂಜೂರಾತಿ ಶುಲ್ಕವನ್ನು ಡಿಡಿ ಮೂಲಕ ಪಾಲಿಕೆಯ ಬ್ಯಾಂಕ್ ಖಾತೆಗೆ ಸಂದಾಯ ಮಾಡಿದರೆ, ಕಟ್ಟಡ ಪರವಾನಗಿ ಹಾಗೂ ನಕ್ಷೆಗಳಿಗೆ ಅನುಮೋದನೆ ನೀಡುವಂತೆಯೂ ಸೂಚಿಸಿದ್ದಾರೆ.
ಸಾರ್ವಜನಿಕರು ಅನಗತ್ಯವಾಗಿ ಕಚೇರಿಗಳಿಗೆ ಅಲೆಯುವುದು ಹಾಗೂ ಕಟ್ಟಡ ನಕ್ಷೆ ಮಂಜೂರಾತಿಯಲ್ಲಿ ಪಾರದರ್ಶಕತೆ ತರಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಅದರಂತೆ ನಕ್ಷೆ ಮಂಜೂರಾತಿಯನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಮಾಡಬೇಕೆಂದು ಆಯುಕ್ತರು ತಿಳಿಸಿದ್ದರು. ಆದರೆ, ತಂತ್ರಾಂಶ ದೋಷದಿಂದ ಪಾಲಿಕೆ ರೂಪಿಸಿದ್ದ ವ್ಯವಸ್ಥೆ ವಿಫಲವಾದಂತಾಗಿದೆ.
ಈ ಮಧ್ಯೆ, ಆನ್‌ಲೈನ್ ನಕ್ಷೆ ಮಾದರಿಯಲ್ಲಿ ಜಾರಿಗೊಳಿಸಿದ್ದ ಆನ್‌ಲೈನ್ ಖಾತಾ ವ್ಯವಸ್ಥೆಯಲ್ಲಿಯೂ ಹಲವು ತಾಂತ್ರಿಕ ದೋಷಗಳು ಕಂಡುಬಂದಿದ್ದು, ಜನರು ಖಾತಾ ಪಡೆಯಲು ತೊಂದರೆಯಾಗುತ್ತಿದೆ. ಪಾಲಿಕೆಯ ಕಚೇರಿಗಳು ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸರ್ವರ್ ಡೌನ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ.
ಬೆಂಗಳೂರು ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿಯಾಗಿದ್ದು, ಪಾಲಿಕೆಗೆ ಒಂದು ತಂತ್ರಾಂಶದಲ್ಲಿ ಉಂಟಾಗಿರುವ ದೋಷಗಳನ್ನು ನಾಲ್ಕೈದು ತಿಂಗಳಿನಿಂದ ಸರಿಪಡಿಸಲು ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ. ಆನ್‌ಲೈನ್ ವ್ಯವಸ್ಥೆಯನ್ನು ಮೂಲೆಗುಂಪು ಮಾಡಿ ಮತ್ತೆ ಹಳೆಯ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಭ್ರಷ್ಟಾಚಾರ ನಡೆಸಲು ಕಾಂಗ್ರೆಸ್-ಜೆಡಿಎಸ್ ಆಡಳಿತ ಮುಂದಾಗಿದೆಯೇ ಎಂಬ ಅನುಮಾನ ಬರುತ್ತಿದೆ.
-ಪದ್ಮನಾಭರೆಡ್ಡಿ, ಪ್ರತಿಪಕ್ಷ ನಾಯಕ
ತಂತ್ರಾಂಶದಲ್ಲಿ ಸಣ್ಣ-ಪುಟ್ಟ ದೋಷಗಳು ಕಂಡುಬಂದಿದ್ದು, ಅವುಗಳನ್ನು ಸರಿಪಡಿಸಲು ಸಂಸ್ಥೆಯವರು ಎರಡು ಮೂರು ದಿನಗಳ ಕಾಲಾವಕಾಶವನ್ನು ಕೋರಿದ್ದಾರೆ. ಉಳಿದಂತೆ ಆನ್‌ಲೈನ್‌ನಲ್ಲಿ ತೊಂದರೆಯಾದರೆ ಸಾರ್ವಜನಿಕರಿಗೆ ವಿಳಂಬವಾಗದಂತೆ ಹಳೆಯ ವ್ಯವಸ್ಥೆಯಂತೆ ನಕ್ಷೆ ಮಂಜೂರು ಮಾಡುವಂತೆ ಆಯುಕ್ತರು ಆದೇಶಿದ್ದು, ಆನ್‌ಲೈನ್ ವ್ಯವಸ್ಥೆ ರದ್ದಾಗಿಲ್ಲ.
-ಎಂ.ಶಿವರಾಜು, ಆಡಳಿತ ಪಕ್ಷ
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.