“ಸಂತೆ’ಗೆ ಸಿದ್ಧವಾದ ಚಿತ್ರಕಲಾ ಪರಿಷತ್ತು
Team Udayavani, Dec 11, 2018, 12:26 PM IST
ಬೆಂಗಳೂರು: ದೇಶದ ಹಲವು ಕಲಾವಿದರ ಪ್ರೀತಿಗೆ ಪಾತ್ರವಾಗಿರುವ ಬೆಂಗಳೂರಿನ “ಚಿತ್ರ ಸಂತೆಗೆ’ ಕರ್ನಾಟಕ ಚಿತ್ರಕಲಾ ಪರಿಷತ್ತು ಅಣಿಯಾಗುತ್ತಿದೆ. ಜ.6ರಂದು ನಡೆಯುವ ಚಿತ್ರ ಸಂತೆಯ ರೂಪುರೇಷೆಗಳು ಈಗಾಗಲೇ ಸಿದ್ಧವಾಗಿವೆ. ಕಳೆದ ಬಾರಿ “ಎಲ್ಲರಿಗೂ ಕಲೆ’ ಶೀರ್ಷಿಕೆಯಡಿ ಇಡೀ ಚಿತ್ರಸಂತೆಯನ್ನು ರೂಪಿಸಲಾಗಿತ್ತು. ಈ ಬಾರಿಯ ಚಿತ್ರಸಂತೆಯನ್ನು ಗಾಂಧೀಜಿಗೆ ಅರ್ಪಿಸಲು ಚಿತ್ರಕಲಾ ಪರಿಷತ್ತು ತೀರ್ಮಾನಿಸಿದೆ.
ದೇಶಿ ಚಿತ್ರಕಲಾವಿದರ ಅಚ್ಚುಮೆಚ್ಚಿನ ಚಿತ್ರಸಂತೆ ಈ ವರ್ಷ ಯಾವ ರೀತಿ ನಡೆಯಬೇಕು ಎಂಬುವುದರ ಕುರಿತು ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷ ಹರೀಶ್ ಪದ್ಮನಾಭನ್ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಗಿದೆ. ಈ ಸಮಿತಿ ಸಂತೆಯ ರೂಪುರೇಷೆ ಸಿದ್ಧಪಡಿಸಿದೆ. ಕಳೆದ ಬಾರಿಯ ಹದಿನೈದನೇ ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದ ಸುಮಾರು 1,300 ಕಲಾವಿದರಿಗೆ ಈಗಾಗಲೇ ಅಂಚೆ ಕಾರ್ಡ್ ಮೂಲಕ ಚಿತ್ರಸಂತೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ಮಹಾತ್ಮ ಗಾಂಧೀಜಿಗೆ ಅರ್ಪಣೆ: ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿ, ಗಾಂಧೀಜಿ ಜೀವನ, ಸಾಬರಮತಿ ಆಶ್ರಮ, ಚರಕ, ಬಾಪುವಿನ ಸರಳ ಜೀವನ ಸೇರಿದಂತೆ ಇನ್ನಿತರ ಪರಿಕಲ್ಪನೆಯಲ್ಲೇ ಈ ಬಾರಿಯ ಚಿತ್ರಸಂತೆ ಮೂಡಿಬರಲಿದೆ. ಈ ಬಗ್ಗೆ ವಿಭಿನ್ನ ರೀತಿಯ ಆಲೋಚನೆ ಮಾಡಲಾಗಿದ್ದು, ಗಾಂಧೀಜಿ ಕುರಿತು ಚಿತ್ರ ರಚನೆ ಮಾಡಲು ಸುಮಾರು 50 ಕಲಾವಿದರ ತಂಡ ರಚಿಸಲಾಗುತ್ತಿದೆ.
ಎರಡು ಸಾವಿರ ಅರ್ಜಿ: ಚಿತ್ರಸಂತೆ ರಾಷ್ಟ್ರಮಟ್ಟದಲ್ಲಿ ಪ್ರಚಾರ ಪಡೆದಿದೆ. ಹೀಗಾಗಿ ಸಾವಿರಾರು ಕಲಾವಿದರು ಸಂತೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿ ಸುಮಾರು 2 ಸಾವಿರ ಕಲಾವಿದರಿಂದ ಅರ್ಜಿಗಳು ಬರುವ ನಿರೀಕ್ಷೆಯಿದೆ. ಆದರೆ ಸಂತೆಗೆ ಒಂದು ಸಾವಿರ ಕಲಾವಿದರನ್ನು ಆಯ್ಕೆ ಮಾಡಲಷ್ಟೇ ಅವಕಾಶವಿದ್ದು, ಅತ್ಯುತ್ತಮ ಕಲಾವಿದರನಷ್ಟೇ ಆಯ್ಕೆ ಮಾಡಲಾಗುವುದು ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರ ಸಂತೆಯಲ್ಲಿ ದೆಹಲಿ, ಅಸ್ಸಾಂ ಮಹಾರಾಷ್ಟ್ರ, ಕೋಲ್ಕತಾ, ಒಡಿಶಾ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ ಸೇರಿದಂತೆ ಸುಮಾರು ಹದಿನಾರು ರಾಜ್ಯಗಳ ಕಲಾವಿದರ ಜತೆ ರಾಜ್ಯದ ಹಲವು ಮೂಲೆಗಳಿಂದ ಆಗಮಿಸಿದ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ದೂರದೂರುಗಳಿಂದ ಕಲಾವಿದರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪರಿಷತ್ತು ಸಿದ್ಧತೆ ಮಾಡಿಕೊಂಡಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರಿಂದ ಪರಿಷತ್ತು 300 ರೂ. ನೋಂದಣಿ ಶುಲ್ಕ ಪಾವತಿಸಿಕೊಂಡು ಆ ನಂತರ ಒಂದು ದಿನ ವಸತಿ ಮತ್ತು ಊಟ ಕಲ್ಪಿಸಲಿದೆ.
ಅರಸು ಹೆಸರಲ್ಲಿ ಪ್ರಶಸ್ತಿ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಸಿಎಂ ಆಗಿದ್ದ ವೇಳೆ ಕುಮಾರ ಕೃಪಾ ರಸ್ತೆಯಲ್ಲಿರುವ ಜಾಗವನ್ನು ಚಿತ್ರಕಲಾ ಪರಿಷತ್ತಿಗೆ ನೀಡಿದ್ದರು. ಹೀಗಾಗಿ ಕಳೆದ ವರ್ಷದಿಂದ ಅರಸು ಹೆಸರಿನಲ್ಲಿ ಚಿತ್ರಕಲಾ ಪರಿಷತ್ತು ಪ್ರಶಸ್ತಿ ಸ್ಥಾಪನೆ ಮಾಡಿದೆ. ಇದರ ಜತಗೆ ಸಂಸ್ಥಾಪಕ ಅಧ್ಯಕ್ಷ ಆರ್ಯ ಮೂರ್ತಿ ಹೆಸರಿನಲ್ಲಿ ಹಾಗೂ ಎಚ್.ಕೆ.ಕೇಜ್ರಿವಾಲ್ ಹೆಸರಿನಲ್ಲಿ ಕಲಾವಿದರಿಗೆ ಪ್ರಶಸ್ತಿ ನೀಡಲಿದೆ.
ಚಿತ್ರಕಲಾ ಪರಿಷತ್ತಿನ ಕಟ್ಟಡ ನಿರ್ಮಾಣಕ್ಕೆ ಎಚ್.ಕೆ.ಕೇಜ್ರಿವಾಲ್ ಅವರ ಕೊಡುಗೆ ಅಪಾರ. 1973-74ರ ಅವಧಿಯಲ್ಲೇ ಸುಮಾರು ಇಪ್ಪತ್ತು ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲೇ ಅವರ ಹೆಸರಿನಲ್ಲಿ ಪರಿಷತ್ತು ಪ್ರಶಸ್ತಿ ನೀಡಲು ಮುಂದಾಗಿದೆ.
ಹದಿನಾರನೇ ಚಿತ್ರ ಸಂತೆಗೆ ಚಿತ್ರಕಲಾ ಪರಿಷತ್ತು ಸಜ್ಜಾಗಿದೆ. ಗಾಂಧೀಜಿಯವರ 150ನೇ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಚಿತ್ರಸಂತೆಯನ್ನು ಗಾಂಧೀಜಿಯವರಿಗೆ ಅರ್ಪಿಸಲು ಚಿತ್ರಕಲಾ ಪರಿಷತ್ತು ತೀರ್ಮಾನಿಸಿದೆ.
-ಬಿ.ಎಲ್.ಶಂಕರ್, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.