ಗಾಜಿನಮನೆಯಲ್ಲಿ ಅರಳಿದ ಅರಮನೆ
ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ | ಸಸ್ಯಕಾಶಿ ಲಾಲ್ಬಾಗ್‌ನಲ್ಲಿ ಒಡೆಯರ್ ದರ್ಬಾರ್
Team Udayavani, Aug 10, 2019, 3:55 PM IST
ಮೊದಲ ದಿನ ಪ್ರದರ್ಶನ ನೋಡಲು ಬಂದಿದ್ದ ವಿದೇಶಿ ಪ್ರವಾಸಿಗರೊಂದಿಗೆ ಸೆಲ್ಫೀ.
ಬೆಂಗಳೂರು: ಹೂವು-ಹಣ್ಣುಗಳಿಂದ ಸಿಂಗಾರಗೊಂಡಿರುವ ಸಸ್ಯಕಾಶಿ, ಅದರೊಳಗೊಂದು ಅರಮನೆ. ಅರಮನೆ ತುಂಬೆಲ್ಲಾ ಜಯಚಾಮರಾಜ ಒಡೆಯರ್ ಅವರದ್ದೇ ದರ್ಬಾರ್. ಉದ್ಯಾನದಲ್ಲಿ ಎತ್ತ ಕಣ್ಣಾಡಿಸಿದರೂ ರಾಶಿ ಹೂವುಗಳಿಂದ ನಿರ್ಮಾಣಗೊಂಡ ಹತ್ತಾರು ಕಲಾಕೃತಿಗಳಿದ್ದು, ಎಲ್ಲವೂ ಒಡೆಯರ್ ಸಾಧನೆ-ಕೊಡುಗೆಗಳ ಕಥೆ ಹೇಳುತ್ತಿವೆ. ಸಸ್ಯಕಾಶಿ ಸೊಬಗಿನ ಜತೆಗೆ ಒಡೆಯರ್ ದರ್ಬಾರ್ ಅನ್ನು ಕಣ್ತುಂಬಿಕೊಳ್ಳಲು ಉದ್ಯಾನಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ.
ಲಾಲ್ಬಾಗ್‌ನಲ್ಲಿ ಆ.9ರಿಂದ 18ರವೆಗೆ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಜಯಚಾಮರಾಜ ಒಡೆಯರ್ ಅವರ ಜನ್ಮಶತಮಾನೋತ್ಸವ ಹಿನ್ನೆಲೆ ಈ ಬಾರಿಯ ಅವರ ಸಾಧನೆ ಹಾಗೂ ಕೊಡುಗೆಗಳಿಗೆ ಅಕ್ಷರಶಃ ಪುಷ್ಪ ನಮನ ಸಲ್ಲಿಸಲಾಗುತ್ತಿದೆ.
ಗಾಜಿನ ಮನೆಯಲ್ಲಿ ಸಂಪೂರ್ಣವಾಗಿ ಮೈಸೂರು ಅರಮನೆ ವಾತಾವರಣ ಸೃಷ್ಟಿಯಾಗಿದೆ. ಗಾಜಿನ ಮನೆಯಲ್ಲಿ ಕೇಂದ್ರ ಬಿಂದುವಿನಂತೆ ಮೈಸೂರಿನ ಜಯಚಾಮರಾಜ ವೃತ್ತ ಮಾದರಿ ಯನ್ನು ಎರಡೂವರೆ ಲಕ್ಷ ಹೂವುಗಳನ್ನು ಬಳಸಿ ನಿರ್ಮಿಸಲಾಗಿದೆ. ಇದರ ಮಧ್ಯದಲ್ಲಿ ಒಡೆಯರ್ ಪ್ರತಿಮೆಯನ್ನು ಇಡಲಾಗಿದೆ. ವಿಶೇಷವೆಂದರೆ ಈ ವೃತ್ತವು ನೈಜ ವೃತ್ತದ ಅಳತೆಯಲ್ಲೇ ಇದ್ದು, ಕೆಂಪು, ಬಿಳಿ, ಕಿತ್ತಳೆ ಬಣ್ಣದಲ್ಲಿ ಸೊಗಸಾಗಿ ಕಾಣುತ್ತಿದೆ. ಸುತ್ತಲೂ ಒಡೆಯರ್ ಅವರ ಸಾಧನೆಗಳನ್ನು ಚಿತ್ರಪಟಗಳ ಮೂಲಕ ಬಿತ್ತರಿಸಲಾಗಿದೆ. ಇನ್ನು ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆ ಇಂಡೋ- ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಆಕರ್ಷಕ ಪುಷ್ಪ ಜೋಡಣೆ ಆಕರ್ಷಿಸುತ್ತದೆ.
ಗಾಜಿನ ಮನೆಯ ಬಲಭಾಗದಲ್ಲಿ ಹೂವಿನನಿಂದ ನಿರ್ಮಿಸಿದ ದೊಡ್ಡ ಗಾತ್ರದ ವೀಣೆ, ಪಿಯಾನೋ, ತಬಲ ಸೇರಿದಂತೆ ವಿವಿಧ ವಾದನಗಳು ಒಡೆಯರ್ ಅವರ ಸಂಗೀತ ಪ್ರೀತಿಯನ್ನು ಸಾಕ್ಷೀಕರಿಸುವಂತಿವೆ. ವೃತ್ತ ಮಾದರಿಯ ಪ್ರತಿಕೃತಿಯಲ್ಲಿರುವ ಒಡೆಯರ್ ಪ್ರತಿಮೆ ಜತೆಗೆ ಇನ್ನು 5 ಪ್ರತಿಮೆಗಳು ಗಾಜಿನ ಮನೆಯಲಿದ್ದು, ಇವುಗಳು ಜಯಚಾಮರಾಜ ಒಡೆಯರ್ ಆಳ್ವಿಕೆ, ಪದವಿ ಸ್ವೀಕಾರ, ರಾಜಪಾಲ ರಾಗಿದ್ದ ಸಂದರ್ಭಗಳನ್ನು ನೆನಪಿಸುತ್ತವೆ. ಹಿಂಬದಿ ಒಡೆಯರ ಸಿಂಹಾಸನ, ಅಂಬಾರಿ ಹೊತ್ತ ಎರಡು ಆನೆಗಳು, ಸೈನಿಕರು ಪ್ರತಿಕೃತಿ ಇದ್ದು, ದರ್ಬಾರ್ ಪರಿಕಲ್ಪನೆ ಕಟ್ಟಿಕೊಡುತ್ತವೆ. ಜತೆಗೆ ಮೃಗಾಲಯದ ಮಾದರಿಯು ಉತ್ತಮವಾಗಿ ರೂಪುಗೊಂಡಿದೆ.
ವಿವಿಧ ವೇಷಗಳ ಒಡೆಯರ್ ಪ್ರತಿಮೆ ಕೆಳಭಾಗ ದಲ್ಲಿ ಜಯಚಾಮರಾಜ ಒಡೆಯರ್ ಕೊಡುಗೆ ಬಿಂಬಿಸುವ ಕಣ್ವ ಜಲಾಶಯ ಮಾದರಿ, ಆಕಾಶವಾಣಿ ಕಟ್ಟಡ ಹಾಗೂ ಟವರ್, ಪಂಚವಾರ್ಷಿಕ ಯೋಜನೆ ಮಾದರಿ, ಬೆಂಗಳೂರು ನಗರಕ್ಕೆ ಸಂಬಂಧಿಸಿದ ಅಭಿವೃದ್ಧಿ ಕುರಿತ ಪ್ರತಿಕೃತಿಗಳನ್ನು ಪ್ರದರ್ಶಿಸಲಾಗಿದೆ.
ಗಾಜಿನ ಮನೆಯಲ್ಲಿ ಧೂಳು ಬಾರದಂತೆ ಹಾಗೂ ಹೂವು ಬಾಡದಂತೆ ಕೃತಕ ಮಂಜಿನ ವಾತಾವರಣ ಸೃಷ್ಠಿಸಲಾಗಿದೆ. ಇನ್ನು ಗಾಜಿನ ಮನೆ ಹೊರಭಾಗದಲ್ಲಿ ರೋಟರಿ ಕ್ಲಬ್ ಪ್ರಯೋಜಿತ ಎಂಸ್ಯಾಂಡ್‌ನಲ್ಲಿ ಕಲಾವಿದರೊಬ್ಬರು ಒಡೆಯರ್ ಭಾವಚಿತ್ರವನ್ನು ಚಿತ್ರಿಸಿದ್ದಾರೆ. ಇವುಗಳ ಜತೆಗೆ ವಿವಿಧ ವಿನ್ಯಾಸದ ಪರಿಸರ ಸ್ನೇಹಿ, ವರ್ಟಿಕಲ್ ಮಾದರಿ ಪ್ರದರ್ಶನ ಇದೆ. ಗಾಜಿನ ಮನೆ ಹೊರಾಂಗಣದಲ್ಲಿ ಹೂವಿನ ಜಲಪಾತ, ನವಿಲು, ಹೃದಯಾಕಾರದ ಕಮಾನುಗಳು, ವಿಶೇಷ ಹೂವು ಕುಂಡಗಳು, ಮನೆಯಂಗಳದಲ್ಲಿ ಉದ್ಯಾನ ಪರಿಕಲ್ಪನೆಗಳ ಪ್ರದರ್ಶನ ಎಲ್ಲರನ್ನು ಸೆಳೆಯುವಂತಿವೆ. ಲಾಲ್ಬಾಗ್ ತರಬೇತಿ ಕೇಂದ್ರದಿಂದ ತರಕಾರಿ ಮತ್ತು ಮನೆಯಂಗಳದಲ್ಲಿ ಭೂದೃಶ್ಯ ಪ್ರಾತ್ಯಕ್ಷಿಕೆಗಳು, ವಾರ್ತಾ ಇಲಾಖೆಯಿಂದ ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನಗಳಿವೆ.
ಆಕರ್ಷಿಸುತ್ತಿರುವ ಕೀಟ ಭಕ್ಷಕ ಗಿಡಗಳು: ದೇಶದಲ್ಲಿಯೇ ಅತ್ಯಂತ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಕೀಟ ಭಕ್ಷಕ ಗಿಡಗಳ ಪ್ರದರ್ಶನಕ್ಕೆ ಗಾಜಿನಮನೆಯಲ್ಲಿ ವೇದಿಕೆ ಕಲ್ಪಿಸಲಾಗಿದ್ದು, ಈ ಸಸಿಗಳು ಪ್ರೇಕ್ಷಕರ ಪ್ರಮುಖ ಆಕರ್ಷಣೆಯಾಗಿವೆ. ವಿವಿಧ ದೇಶಗಳಿಂದ ಸಂಗ್ರಹಿಸಿರುವ ಕೀಟ ಭಕ್ಷಕ ಸಸಿಗಳು ತನ್ನ ಬಳಿ ಬರುವ ಕೀಟಗಳನ್ನು ಹಿಡಿದಿಡಲಿವೆ. ಬಳಿಕ ಅವುಗಳನ್ನು ತಿಂದು ಜೀರ್ಣಿಸಿಕೊಳ್ಳಲಿವೆ ಎಂದು ಸಸಿಗಳ ಪ್ರದರ್ಶನ ಆಯೋಜಿಸಿರು ಚಂದನ್ ಗೌಡ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.