ಕೃಷಿ ಮೇಳಕ್ಕೆ ಹರಿದು ಬಂದ ಜನಸಾಗರ
Team Udayavani, Nov 19, 2017, 11:27 AM IST
ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರ ಸೇರಿದಂತೆ ಜನಸಾಗರವೇ ಹರಿದುಬಂತು. ಇದರಿಂದ ವಾರಾಂತ್ಯಕ್ಕೆ ಮೇಳ ಅಕ್ಷರಶಃ ಜಾತ್ರೆಯ ಸ್ವರೂಪ ಪಡೆದಿತ್ತು.
ಜಾತ್ರೆ ಸ್ವರೂಪ: ಹಾಸನ, ಮಂಡ್ಯ, ಕೋಲಾರ, ರಾಮನಗರ ಜಿಲ್ಲೆಗಳಿಂದ ಕೃಷಿ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು, ರೈತರು ನೂರಾರು ಬಸ್, ಕಾರುಗಳಲ್ಲಿ ಆಗಮಿಸಿದ್ದರು. ಇದರಿಂದಾಗಿ ಮುಖ್ಯದ್ವಾರದ ಒಂದು ಕಿ.ಮೀ. ನಂತರ ಆರಂಭಗೊಂಡು ಮೇಳದ ಮುಖ್ಯ ವೇದಿಕೆ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಕಳೆದ ಎರಡು ದಿನಗಳಿಂದ ಉಂಟಾಗಿದ್ದ ಟ್ರಾಫಿಕ್ ಜಾಮ್ ಕಂಡಿದ್ದ ಸಂಚಾರಿ ಪೊಲೀಸರು, ಆರಂಭದಲ್ಲಿಯೇ ಕಾರುಗಳ ನಿಲುಗಡೆ ವ್ಯವಸ್ಥೆ ಮಾಡಿದ್ದರು. ಬಸ್‌ಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಇದ್ದರೂ, ದಟ್ಟಣೆಯಿಂದ ಪೊಲೀಸರು ಹೈರಾಣಾಗಿದ್ದರು. ಟ್ರಾಫಿಕ್ ಸುಧಾರಣೆಗೆಂದು ನೇಮಕಗೊಂಡಿದ್ದ ಕೃಷಿ ವಿವಿ ಸಂಶೋಧನಾ ವಿದ್ಯಾರ್ಥಿಗಳು ಟ್ರಾಫಿಕ್ ಸಮಸ್ಯೆ ನಿವಾರಿಸಲು ಹರಸಾಹಸ ಪಡುತ್ತಿದ್ದದ್ದು ಕಂಡು ಬಂತು.
ಖರೀದಿ: ಮೇಳದಲ್ಲಿ ಸುಮಾರು 700 ಮಳಿಗೆಗಳಿದ್ದರೂ, ಹೆಚ್ಚಾಗಿ ಯಂತ್ರೋಪಕರಣಗಳ ಪ್ರದರ್ಶನ, ಪಶುಸಂಗೋಪನೆ ವಿಭಾಗದ ಪ್ರದರ್ಶನ ಹಾಗೂ ಫುಡ್ ಕೋರ್ಟ್‌ನಲ್ಲಿ ಹೆಚ್ಚಿನ ದಟ್ಟಣೆ ಇತ್ತು. ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳ ಕುರಿತು ಮಾಹಿತಿ ಪಡೆಯುತ್ತಿದ್ದ ರೈತರು, ಆ ಯಂತ್ರಗಳ ಖರೀದಿಗೆ ಸರ್ಕಾರದಿಂದ ಸಿಗಬಹುದಾದ ಸಬ್ಸಿಡಿ ಕುರಿತು ವಿಚಾರಿಸುತ್ತಿದ್ದರು.
ಚಿಕ್ಕಪುಟ್ಟ ಗೃಹೋಪಯೋಗಿ ಉಪಕರಣಗಳು, ಯಂತ್ರಗಳ ಮಾರಾಟ ಸ್ವಲ್ಪ ಉತ್ತಮವಾಗಿತ್ತು. ಉಳಿದಂತೆ ದೊಡ್ಡ ಯಂತ್ರಗಳ ಖರೀದಿ ಉತ್ತೇಜನಕಾರಿಯಾಗಿ ಇರಲಿಲ್ಲ. ಬಹುತೇಕ ರೈತರು ಯಂತ್ರೋಪಕರಣಗಳನ್ನು ಒಮ್ಮೆ ಕೃಷಿ ಪ್ರದೇಶಕ್ಕೆ ತರುವುದಾದರೆ, ಪ್ರಾಯೋಗಿಕವಾಗಿ ಪರೀಕ್ಷಿಸಿ ನಂತರ ಖರೀದಿ ಮಾಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಭರವಸೆ ನೀಡಿದ್ದು, ವಿಳಾಸ, ಫೋನ್ ನಂಬರ್‌ಗಳನ್ನು ಕೊಟ್ಟು ಹೋಗುತ್ತಿದ್ದಾರೆ.
ಮುದ್ದೆ ಊಟ-ಬಿರಿಯಾನಿ ಸ್ಪೆಷಲ್: ಕೃಷಿ ಮೇಳದಲ್ಲಿ ಹೆಚ್ಚು ಜನರನ್ನು ಆಕರ್ಷಿಸಿದ್ದು, ಫುಡ್‌ಕೋರ್ಟ್ ಮತ್ತು ಮುದ್ದೆ ಊಟ. ಮಧ್ಯಾಹ್ನ 12 ಗಂಟೆಯಿಂದಲೇ ಮುದ್ದೆ ಊಟಕ್ಕೆ ಜನರು ಸಾಲುಗಟ್ಟಿ ನಿಂತಿದ್ದರು. ತಲಾ 50ರೂ.ಗಳಿಗೆ ಮುದ್ದೆ, ಅನ್ನ, ಮೊಸರನ್ನ, ಒಂದು ಪಲ್ಯ,
ಕಡಲೆಕಾಳು, ಹೆಸರುಕಾಳಿನಿಂದ ತಯಾರಿಸಿದ ಸಾರು, ತರಕಾರಿಯ ಸಾಂಬಾರು, ಉಪ್ಪಿನಕಾಯಿ ಊಟಕ್ಕೆ ಹಲವರು ಮಾರುಹೋಗಿದ್ದರು. ಒಂದು ಪಂಕ್ತಿಗೆ ಸುಮಾರು 600ರಿಂದ 800 ಜನರು ಏಕಕಾಲದಲ್ಲಿ ಕುಳಿತು ಊಟ ಮಾಡುವ ವ್ಯವಸ್ಥೆ ಇತ್ತಾದರೂ, ಎಲ್ಲಿಯೂ ಗೊಂದಲ, ಗದ್ದಲ ಇರಲಿಲ್ಲ. ಶಾಂತಿಯುತವಾದ ಭೋಜನ ವ್ಯವಸ್ಥೆ ಜನರ ಮೆಚ್ಚುಗೆ ಗಳಿಸಿತು.
ಇನ್ನೊಂದೆಡೆ ಸುಮಾರು 40 ಮಳಿಗೆಗಳಲ್ಲಿ ತರೇವಾರಿ ತಿಂಡಿ ತಿನಿಸುಗಳು, ವಿವಿಧ ಬಗೆಯ ಬಿರಿಯಾನಿಗಳು, ಕಬಾಬ್, ಚಿಕನ್-ಮಟನ್ ಫ್ರೈ, ಮೊಲದ ಮಾಂಸದ ಕಬಾಬ್, ಮೀನಿನ ಫ್ರೈ, ಚಿಕನ್ ಮಸಾಲ ಫ್ರೈ, ಎಗ್ ಬೋಂಡಾ, ನಾಟಿಕೋಳಿ ಸಾಂಬರ್ ಹಳ್ಳಿಯ ರೈತರನ್ನು ಮುಗಿಬೀಳುವಂತೆ ಮಾಡಿತ್ತು.
ಕೃಷಿ ಮೇಳದಲ್ಲೂ ಸೆಲ್ಫಿ ಆರ್ಭಟ ಜೋರಾಗಿಯೇ ಇತ್ತು. ಕಪ್ಪುರಕ್ತದ ಖಡಕ್‌ನಾಥ್ ಕೋಳಿ, ಮಲೆನಾಡು ಗಿಡ್ಡಿ, ಹಳ್ಳಿಕಾರ್ ತಳಿಯ ಹೋರಿಗಳು, ಅತ್ಯಾಧುನಿಕ ಯಂತ್ರೋಪಕರಣಗಳು, ಅಲಂಕಾರಿಕ ಗಿಡಗಳ ಮುಂದೆ ನಿಂತು ವಿವಿಧ ಭಂಗಿಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದವರಿಗೆ ವಯಸ್ಸಿನ ಮಿತಿ ಇರಲಿಲ್ಲ. ಮಹಿಳೆಯರು, ಮಕ್ಕಳು, ಯುವತಿಯರು, ಯುವಕರು ಎಲ್ಲರೂ ಸೆಲ್ಫಿಗೆ ಮಾರುಹೋಗಿದ್ದರು.
ಕೃಷಿ ಮೇಳದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳು ಪ್ರಮುಖ ಆಕರ್ಷಣೆ. ವಿವಿಧ ತಳಿಗಳ ಬೀಜಗಳು, ಗಿಡಗಳು ಮತ್ತು ಸುಧಾರಿತ ತಳಿಗಳ ಗಿಡಗಳು ಸಿಗುತ್ತವೆ. ಕಳೆದ ಐದಾರು ವರ್ಷಗಳಿಂದ ಮೇಳಕ್ಕೆ ಬರುತ್ತಿದ್ದು, ಮಾವು, ಸಪೋಟಾ, ಹಲಸಿನ ಹಣ್ಣಿನ ತಳಿಗಳನ್ನು ಖರೀದಿ ಮಾಡಿದ್ದು, ಉತ್ತಮವಾಗಿವೆ.
-ಕೆ.ಟಿ.ನಾಗಚಂದ್ರ, ರೈತ, ಮಂಡ್ಯ.
ನಾವು ರೈತರಲ್ಲ. ಆದರೂ ಕೃಷಿಯ ಬಗ್ಗೆ ತುಂಬಾ ಆಸಕ್ತಿ ಇದೆ. ಮೇಳದ ಸಂದರ್ಭದಲ್ಲಿ ಭೇಟಿ ನೀಡಿ, ಹೊಸ ಯಂತ್ರಗಳು, ಸಂಶೋಧಿತ ತಳಿಗಳನ್ನ ನೋಡುತ್ತೇನೆ. ಇಷ್ಟವಾದರೆ ತೆಗೆದುಕೊಂಡು ಹೋಗಿ, ಮಹಡಿಯಲ್ಲಿ ಬೆಳೆಸುವ ಪ್ರಯತ್ನ ಮಾಡುತ್ತಿರುತ್ತೇನೆ. ತುಂಬಾ ಚೆನ್ನಾಗಿ ಕೃಷಿ ಮೇಳ ನಡೆಯುತ್ತದೆ. ಒಂದೇ ಬಾರಿಗೆ ನಾಲ್ಕೈದು ಲಕ್ಷ ಜನರನ್ನು ಕಾಣುವುದೇ ಖುಷಿಯ ವಿಚಾರ.
-ಸುರೇಖಾ ರಾಮನಾಥ್, ಸಾಫ್ಟ್ವೇರ್ ಎಂಜಿನಿಯರ್. ಬೆಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.