ರಾಜಕೀಯ ಮೇಲಾಟಕ್ಕೆ ಪೊಲೀಸರು ಹೈರಾಣು
Team Udayavani, Jul 15, 2019, 3:07 AM IST
ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ರಾಜಕೀಯ ಪ್ರಹಸನ ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಕಾರ್ಯವೈಖರಿಯ ಮೇಲೆ ತಟಸ್ಥತೆ ಆವರಿಸಲು ಕಾರಣವಾಗಿದೆ. ಜು.12ರಂದು ಪೊಲೀಸ್ ಇಲಾಖೆಯಲ್ಲಿ ನಡೆಸಲಾಗಿದ್ದ 21 ಡಿವೈಎಸ್ಪಿ ಹಾಗೂ 110 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಆದೇಶ, ಕೆಲವೇ ಗಂಟೆಗಳಲ್ಲಿ ರದ್ದಾಗಿದ್ದು ಇದಕ್ಕೆ ತಾಜಾ ಉದಾಹರಣೆ.
ರಾಜಕೀಯ ಮೇಲಾಟಗಳಿಂದ ಉಂಟಾದ ವರ್ಗಾವಣೆ ರದ್ದು ಆದೇಶ ಹಲವು ತಿಂಗಳುಗಳಿಂದ ಸೂಕ್ತ ಸ್ಥಳ ನಿಯೋಜನೆಗೊಳ್ಳದೆ ಉಳಿದಿದ್ದ ಅಧಿಕಾರಿಗಳ ಆಸೆಗೆ ಮತ್ತೆ ತಣ್ಣೀರೆರಚಿದೆ. ಮತ್ತೂಂದೆಡೆ, ವರ್ಗಾವಣೆ ತಲೆ ಬಿಸಿ ಹಾಗೂ ಬಂದೋಬಸ್ತ್ ಸೇರಿದಂತೆ ಇನ್ನಿತರ ಕಾರ್ಯಗಳಲ್ಲಿ ಪೊಲೀಸ್ ಅಧಿಕಾರಿಗಳು ನಿರತರಾಗಿರುವುದರಿಂದ ಅದರ ನೇರ ಪರಿಣಾಮ ಸಾರ್ವಜನಿಕರ ಮೇಲೆ ಉಂಟಾಗುತ್ತಿದೆ.
ರಾಜ್ಯದಲ್ಲಿ ಉಂಟಾಗಿರುವ ರಾಜಕೀಯದ ಕ್ಷಿಪ್ರಕ್ರಾಂತಿಯಿಂದ ಸರ್ಕಾರದ ಬುಡವೇ ಅಲ್ಲಾಡುತ್ತಿದೆ. ಈ ಹಂತದಲ್ಲಿ ವರ್ಗಾವಣೆ, ಆಡಳಿತಕ್ಕೆ ಸಂಬಂಧಿಸಿದಂತೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಗೊಂದಲದಲ್ಲಿ ಉನ್ನತ ಅಧಿಕಾರಿಗಳಿದ್ದಾರೆ. ಕೆಳಹಂತದ ಅಧಿಕಾರಿಗಳು ವರ್ಗಾವಣೆ ನಿರೀಕ್ಷೆ, ಬಂದೋಬಸ್ತ್ನಂತಹ ಕೆಲಸಗಳು ಧುತ್ತನೆ ಬರಲಿವೆಯಲ್ಲ ಎಂಬ ಚಿಂತೆಯಲ್ಲಿದ್ದಾರೆ.
ಅತೃಪ್ತರ ಶಾಸಕರದ್ದೇ ಮೇಲುಗೈ: ವರ್ಗಾವಣೆ ಬಳಿಕ ಹಲವು ತಿಂಗಳಿನಿಂದ ನಿಯುಕ್ತಿ ಸ್ಥಳ ಸಿಗದೆ ಅಥವಾ ಇಚ್ಛಿಸಿದ ಸ್ಥಳ ಪಡೆಯಲು ಕಾದಿದ್ದ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ಗಳು ಜುಲೈ 12ರಂದು ನೀಡಲಾದ ವರ್ಗಾವಣೆ ಆದೇಶದಿಂದ ಕೊಂಚ ನಿರಮ್ಮಳರಾಗಿದ್ದರು.
ಆದರೆ, ವರ್ಗಾವಣೆ ಪಟ್ಟಿಯಲ್ಲಿ ಅತೃಪ್ತ ಶಾಸಕರು ಶಿಫಾರಸು ಮಾಡಿದ್ದ ಕೆಲವು ಅಧಿಕಾರಿಗಳಿಗೆ ಸ್ಥಳಗಳು ಅದಲು ಬದಲಾಗಿದ್ದವು. ಕೆಲವರಿಗೆ ಬಯಸಿದ ಸ್ಥಾನಗಳು ಸಿಕ್ಕಿರಲಿಲ್ಲ. ವರ್ಗಾವಣೆ ಆದೇಶದ ಬಳಿಕ ಕೆಲವೇ ಗಂಟೆಗಳಲ್ಲಿ ಈ ಬಗ್ಗೆ ಅಸಮಾಧಾನ ಹೊರಬಿದ್ದಿತ್ತು. ಕೂಡಲೇ ಎಚ್ಚೆತ್ತುಕೊಂಡ ಸರ್ಕಾರ ವರ್ಗಾವಣೆ ಆದೇಶವನ್ನೇ ರದ್ದುಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಉನ್ನತ ಅಧಿಕಾರಿಗಳಿಗೂ ಟೆನ್ಶನ್: ರಾಜ್ಯ ಸರ್ಕಾರದ ಮೇಲೆ ತೂಗುಕತ್ತಿ ನೇತಾಡುತ್ತಿದೆ. ಹೀಗಾಗಿ, ಮುಂದೆ ಯಾವ ಸರ್ಕಾರ ರಚನೆಯಾಗಲಿದೆ ಎಂಬುದು ಗೊತ್ತಾಗುತ್ತಿಲ್ಲ. ಹೀಗಾಗಿ, ಹಾಲಿ ಸರ್ಕಾರದ ಮಂತ್ರಿಗಳು ಹಾಗೂ ಪ್ರಮುಖರ ಶಿಫಾರಸು ಕೃಪೆಯಿಂದ ಇಲಾಖೆಯ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸಿದ ಹಿರಿಯ ಅಧಿಕಾರಿಗಳಿಗೂ ಟೆನ್ಶನ್ ಶುರುವಾಗಿದೆ. ಕೆಲವೇ ದಿನಗಳ ಹಿಂದೆ ಪಡೆದುಕೊಂಡ ಉನ್ನತ ಸ್ಥಾನವನ್ನು ಹೊಸ ಸರ್ಕಾರ ಬಂದರೆ ಕಳೆದುಕೊಳ್ಳಬಹುದು ಎಂಬ ಆತಂಕದಲ್ಲಿ ಅವರಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪುನಃ ಲಕ್ಷ ಲಕ್ಷ ರೂ. ಎಣಿಸಬೇಕು!: ಬೆಂಗಳೂರು ಪಶ್ಚಿಮ ವಿಭಾಗ, ಕೇಂದ್ರ ವಿಭಾಗ ಸೇರಿದಂತೆ ಹಲವು ಆಯಕಟ್ಟಿನ ಪೊಲೀಸ್ ಠಾಣೆಗಳಲ್ಲಿ ಸ್ಥಳ ನಿಯೋಜನೆ ಸಿಗಬೇಕಾದರೆ ರಾಜಕಾರಣಿಗಳ ಕೃಪಾಕಟಾಕ್ಷವಿರಬೇಕು ಇಲ್ಲವೇ ಲಕ್ಷ ಲಕ್ಷ ರೂ.ದುಡ್ಡು ನೀಡಿ ಪಡೆದುಕೊಳ್ಳಬೇಕು ಎಂಬ ಆರೋಪ ಈ ಹಿಂದಿನಿಂದಲೂ ಇಲಾಖೆಯೊಳಗಿದೆ.
ಇದೀಗ, ಬಯಸಿದ ಸ್ಥಾನಗಳಲ್ಲಿ ಪ್ರತಿಷ್ಠಾಪನೆಗೊಳ್ಳಲು ಹಣ ನೀಡಿರುವ ಅಧಿಕಾರಿಗಳು ವರ್ಗಾವಣೆ ಆದೇಶ ಹೊರಬಿದ್ದ ಕೂಡಲೇ ಕೊಂಚ ನಿರಾಳರಾಗಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ವರ್ಗಾವಣೆ ಆದೇಶ ರದ್ದುಗೊಂಡಿದೆ. ಒಂದು ವೇಳೆ ಸರ್ಕಾರ ಬದಲಾದರೆ ಪುನ: ಹಣ ಖರ್ಚು ಮಾಡಬೇಕಾಗಿದೆ ಎಂಬ ಚಿಂತೆಯಲ್ಲಿ ಅವರಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಗೃಹ ಸಚಿವರಿಗೇ ಗೊತ್ತಿರಲಿಲ್ಲ!: ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್ ವರ್ಗಾವಣೆ ವಿಚಾರ ಖುದ್ದು ಗೃಹ ಸಚಿವ ಎಂ.ಬಿ ಪಾಟೀಲರಿಗೆ ಗೊತ್ತಿರಲಿಲ್ಲ. ವರ್ಗಾವಣೆ ಆದೇಶದ ಬಳಿಕ ಈ ಬಗ್ಗೆ ಸರ್ಕಾರದಲ್ಲಿ ಅಪಸ್ವರ ಎದ್ದಿತ್ತು. ಹೀಗಾಗಿ, ರಾಜ್ಯಪಾಲರ ಸೂಚನೆ ಮುಂದಿಟ್ಟು ವರ್ಗಾವಣೆ ಆದೇಶ ರದ್ದು ಮಾಡಲಾಯಿತು.
ಪೊಲೀಸ್ ಇಲಾಖೆಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ರಾಜಕಾರಣಿಗಳ ಶಿಫಾರಸು ಇರಬಾರದು ಎಂದು ಸುಪ್ರೀಂಕೋರ್ಟ್, ಹೈಕೋರ್ಟ್‌ಗಳ ಸ್ಪಷ್ಟ ಸೂಚನೆಯಿದೆ. ಆದರೆ, ವರ್ಗಾವಣೆ ದಂಧೆ ಮಾತ್ರ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
* ಮಂಜುನಾಥ ಲಘುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.