ಪೊಲೀಸ್ ಅಧಿಕಾರಿ ಸೋಗಿನ ನಯವಂಚಕ ಸೆರೆ
Team Udayavani, Jul 28, 2018, 11:43 AM IST
ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಪರಿಚಯವಾದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಆರು ತಿಂಗಳ ಬಳಿಕ ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಬಡಾವಣೆ ನಿವಾಸಿ ಅಬ್ದುಲ್ ಮುಬಾರಕ್ ಆಲಿಯಾಸ್ ವಿನಯ್ ಕುಮಾರ್ ಆಲಿಯಾಸ್ ಮೊಹಮ್ಮದ್ ಹಾಜಿ (40) ಬಂಧಿತ. ಕೆಲ ತಿಂಗಳ ಹಿಂದೆ ಆರೋಪಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್ ಖರೀದಿಸಲು ಪರ್ಸ್ ತೆಗೆದಿದ್ದ.
ಈ ವೇಳೆ ಪೊಲೀಸ್ ಸಮವಸ್ತ್ರದಲ್ಲಿದ್ದ ನಕಲಿ ಗುರುತಿನ ಚೀಟಿಗಳು ಕೆಳಗೆ ಬಿದ್ದಿವೆ. ಆತನ ಪಕ್ಕದಲ್ಲಿ ಕುಳಿತಿದ್ದ ಯುವತಿ ಇದನ್ನು ಗಮನಿಸಿ ನೀವು ಪೊಲೀಸ್ ಇಲಾಖೆಯವರಾ? ಎಂದು ಕೇಳಿದ್ದಾರೆ. ಆರೋಪಿಯು ಹೌದು, ತೆಲಂಗಾಣದ ಪೊಲೀಸ್ ಇಲಾಖೆಯ ಅಬಕಾರಿ ನಿಯಂತ್ರಣ ವಿಭಾಗದಲ್ಲಿ ಸೂಪರಿಂಟೆಂಡ್ ಆಗಿದ್ದೇನೆ ಎಂದು ನಂಬಿಸಿದ್ದಾನೆ.
ನಂತರ ಇಬ್ಬರ ನಡುವೆ ಆತ್ಮೀಯತೆ ಬೆಳೆದು ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಬಳಿಕ ಆಗಾಗ್ಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದು, ಮದುವೆಯಾಗುವುದಾಗಿ ನಂಬಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಇದೇ ಫೆ.10ರಂದು ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ನಾಕೋಡಾ ಜ್ಯುವೆಲ್ಲರಿ ಅಂಗಡಿಗೆ ಚಿನ್ನಾಭರಣ ಖರೀದಿಸಲು ಯುವತಿಯನ್ನು ಕರೆದೊಯ್ದಿದ್ದ ಆರೋಪಿ, ಚಿನ್ನದ ಸರಗಳನ್ನು ನೋಡುವ ನೆಪದಲ್ಲಿ ಸುಮಾರು 30 ಗ್ರಾಂ ತೂಕದ ಒಂದು ಚಿನ್ನದ ಸರವನ್ನು ಹಾಕಿಕೊಂಡಿದ್ದಾನೆ.
ನಂತರ ಪ್ರೇಯಸಿಯ ಐಫೋನ್ ಪಡೆದು ಕರೆ ಮಾಡುವುದಾಗಿ ಹೊರ ಹೋಗಿ ಪರಾರಿಯಾಗಿದ್ದಾನೆ. ಇತ್ತ ಆರೋಪಿಗಾಗಿ ಅಂಗಡಿಯಲ್ಲಿ ಕಾಯುತ್ತಿದ್ದ ಯುವತಿ ಗಾಬರಿಗೊಂಡು ಅಂಗಡಿ ಸಿಬ್ಬಂದಿಯಿಂದ ಕರೆ ಮಾಡಿಸಿದರೂ ಸ್ವೀಕರಿಸಿಲ್ಲ.
ಬಳಿಕ ಅಂಗಡಿ ಸಿಬ್ಬಂದಿ ಪ್ರಕರಣದಲ್ಲಿ ಯುವತಿಯೂ ಪಾಲುದಾರರಳು ಎಂದು ಆರೋಪಿಸಿ ದೂರು ನೀಡಿದ್ದರು. ವಿಚಾರಣೆ ವೇಳೆ ಯುವತಿ ಪಾತ್ರ ಇಲ್ಲ ಎಂದು ತಿಳಿದ ಬಳಿಕ ಬಿಟ್ಟು ಕಳುಹಿಸಲಾಗಿತ್ತು. ಆರೋಪಿ ಪತ್ತೆಯಾಗಿ ಪ್ರತ್ಯೇಕ ತಂಡ ರಚಿಸಿ ಬಂಧಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ ಶರಣಪ್ಪ ತಿಳಿಸಿದ್ದಾರೆ.
ಆರೋಪಿಯಿಂದ 28 ಗ್ರಾಂ ತೂಕದ 1 ಚಿನ್ನದ ಸರ, 1 ಐಪೋನ್, ಪೊಲೀಸ್ ಸಮವಸ್ತ್ರದ ಫೋಟೋಗಳು, ಈತ ಬಳಸುತ್ತಿದ್ದ ಕಾರಿನ ನಂಬರ್ ಪ್ಲೇಟ್‌ನಲ್ಲಿ ಮೂರು ಸ್ಟಾರ್‌ಗಳು, ಅಶೋಕ ಸ್ತಂಭ, ಖಡ್ಗಗಳನ್ನು ನಮೂದಿಸಿರುವ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ವಿರುದ್ಧ ಮುಂಬೈ ಎಪಿಎಂಸಿ ಠಾಣೆಯಲ್ಲಿಯೂ ಇದೇ ರೀತಿಯ ಪ್ರಕರಣ ದಾಖಲಾಗಿದೆ. ಮೆಕಾನಿಕ್ ಕೆಲಸ ಮಾಡುವ ಮುಬಾರಕ್, ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿಗಾಗಿ ತಿಂಗಳುಗಟ್ಟಲೇ ಮನೆ ಬಿಟ್ಟು ಆಂಧ್ರಪ್ರದೇಶ, ಚೆನ್ನೈ ಎಂದು ಹೋಗುತ್ತಿದ್ದ. ಈ ವೇಳೆ ಅಪರಾಧ ಕೃತ್ಯವೆಸಗಿ ಹಣ ಸಂಪಾದಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.