ವಿದ್ಯುತ್ ತಗುಲಿ ಬಾಲಕ ಸಾವು
Team Udayavani, Feb 26, 2019, 6:29 AM IST
ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ತಂತಿ ತಗುಲಿ ಅಮಾಯಕ ಬಾಲಕ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಬಾಣಸವಾಡಿ ವಾರ್ಡ್‌ನ ಕಮ್ಮನಹಳ್ಳಿಯ ಡಾ.ರಾಜ್‌ಕುಮಾರ್ ಉದ್ಯಾನದಲ್ಲಿ ಭಾನುವಾರ ಸಂಜೆ ಸ್ನೇಹಿತರೊಂದಿಗೆ ಆಟವಾಡುವ ವೇಳೆ ವಿದ್ಯುತ್ ತಂತಿ ತಗುಲಿ ಗ್ರೇಪ್ ಗಾರ್ಡನ್‌ನ ನಾಗರಾಜ್ ಮತ್ತು ಗೌರಿ ದಂಪತಿಯ ಎರಡನೇ ಪುತ್ರ ಉದಯ್ ಕುಮಾರ್ (08) ಅಸ್ವಸ್ಥಗೊಂಡಿದ್ದು, ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಮೃತ ಬಾಲಕ ಉದಯ್ ಕುಮಾರ್ ತಂದೆ ನಾಗರಾಜ್ ಅವರು ಬಾಣಸವಾಡಿ ಠಾಣೆಯಲ್ಲಿ ಬಿಬಿಎಂಪಿ, ಬಿಡಿಎ, ಬೆಸ್ಕಾಂ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ರಾಜ್‌ಕುಮಾರ್ ಉದ್ಯಾನದಲ್ಲಿ ವಾಕಿಂಗ್ ಟ್ರ್ಯಾಕ್‌ನ ಎರಡೂ ಬದಿಯಲ್ಲಿ ಕಬ್ಬಿಣದ ಸರಳುಗಳನ್ನು ಅಳವಡಿಸಲಾಗಿದ್ದು, ಹಲವೆಡೆ ವೆಲ್ಡಿಂಗ್ ಮಾಡಲು ವಿದ್ಯುತ್ ತಂತಿ ಹೊರಗೆಳೆಯಲಾಗಿದೆ. ಆದರೆ, ಕಾಮಗಾರಿ ಮುಗಿಸಿದ ನಂತರ ವಿದ್ಯುತ್ ತಂತಿಗಳನ್ನು ಸಾರ್ವಜನಿಕರು ಮುಟ್ಟದಂತೆ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ.
ಅಲ್ಲದೆ ಕನಿಷ್ಠ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕಾರ್ಯವನನೂ ಮಾಡಿಲ್ಲ. ಈ ನಡುವೆ ಭಾನುವಾರ ಸಂಜೆ ಉದಯ್ ಆಟವಾಡಲೆಂದು ಉದ್ಯಾನವನಕ್ಕೆ ತೆರಳಿದ್ದಾನೆ. ಆಟವಾಡುವಾಗ ವಿದ್ಯುತ್ ತಂತಿ ಉದಯ್ ಕಾಲಿಗೆ ಸುತ್ತಿಕೊಂಡು, ಬಲವಾದ ವಿದ್ಯುತ್ ಶಾಕ್ ಹೊಡೆದಿದೆ.
ಉದಯ್ ಕಾಲಿಗೆ ವಿದ್ಯುತ್ ತಂತಿ ಸುತ್ತಿಕೊಂಡಾಗ ಆತನ ಸಹೋದರ ಅವಿನಾಶ್ ಸಹಾಯಕ್ಕೆ ಬಂದಿದ್ದು, ಆತನಿಗೂ ವಿದ್ಯುತ್ ಶಾಕ್ ಹೊಡೆದಿದೆ. ವಿದ್ಯುತ್ ಶಾಕ್‌ನಿಂದ ಉದಯ್ ತೀವ್ರ ಅಸ್ವಸ್ಥಗೊಂಡು ವಾಂತಿ ಮಾಡಿಕೊಂಡಿದ್ದು, ಸ್ಥಳೀಯರ ಸಹಾಯದೊಂದಿಗೆ ಸಮೀಪದ ಕ್ಲೀನಿಕ್‌ಗೆ ದಾಖಲಿಸಿದ ಕೇಲವೇ ನಿಮಿಷಗಳಲ್ಲಿ ಉದಯ್ ಮೃತಪಟ್ಟಿದ್ದಾನೆ.
ವಿದ್ಯುತ್ ಶಾಕ್‌ನಿಂದ ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದರೂ ಪಾಲಿಕೆ ಅಧಿಕಾರಿಗಳಾಗಲಿ, ಸ್ಥಳೀಯ ಪಾಲಿಕೆ ಸದಸ್ಯರಾಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಇದರಿಂದ ಕೆರಳಿದ ಸ್ಥಳೀಯರು, ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರ ಜತೆಗೂಡಿ ಉದ್ಯಾನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಸಚಿವ ಕೆ.ಜೆ.ಜಾರ್ಜ್, ಮೇಯರ್ ಗಂಗಾಂಬಿಕೆ, ಪಾಲಿಕೆ ಸದಸ್ಯರ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ಮಧ್ಯಾಹ್ನ ಆರ್.ಟಿ.ನಗರದ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಉದಯ್ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದ್ದು, ಅಂತಿಮ ವಿಧಿ-ವಿಧಾನವನ್ನು ಸ್ವಂತ ಊರಾದ ಮುಳಬಾಗಿಲಿನಲ್ಲಿ ನೆರವೇರಿಸಲಾಗಿದೆ.
ತನಿಖೆ ಬಳಿಕ ಸೂಕ್ತ ಕ್ರಮ – ಕೆ.ಜೆ.ಜಾರ್ಜ್: ಮೃತ ಉದಯ್ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಯಾರಿಂದ ತಪ್ಪಾಗಿದೆ? ಯಾರು ಹೊಣೆ? ಎಂದು ಸುಮ್ಮನೇ ದೂರಲು ಸಾಧ್ಯವಿಲ್ಲ. ನಿರ್ಲಕ್ಷ್ಯ ಬಿಬಿಎಂಪಿ, ಬಿಡಿಎ ಅಥವಾ ಬೆಸ್ಕಾಂ ನಿಂದ ಆಗಿದೆ ಎಂದು ಈ ಕ್ಷಣಕ್ಕೇ ಹೇಳಲಾಗುವುದಿಲ್ಲ. ಆದರೆ, ಘಟನೆಯಿಂದಾಗ ಅಮಾಯಕ ಬಾಲಕ ಮೃತಪಟ್ಟಿದ್ದು, ಮೇಲ್ನೋಟಕ್ಕೆ ಎಲೆಕ್ಟ್ರಿಕಲ್ ಕಂಬ ಹಳೆಯದಾಗಿದೆ ಎಂದು ಕಾಣುತ್ತದೆ. ತನಿಖೆಯಿಂದ ಯಾರು ತಪ್ಪು ಮಾಡಿದ್ದಾರೆ ಎಂಬುದು ತಿಳಿಯಲಿದ್ದು, ನಂತರದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
10 ಲಕ್ಷ ರೂ. ಪರಿಹಾರ – ಮೇಯರ್: ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಉದಯ್ ಪೋಷಕರಿಗೆ ಸಾಂತ್ವಾನ ಹೇಳಿದದರು. ಬಳಿಕ ಮಾತನಾಡಿ, ಬಾಲಕ ಮೃತಪಟ್ಟಿರುವುದು ತೀವ್ರ ನೋವುಂಟು ಮಾಡಿದೆ. ಮಗುವಿನ ಪ್ರಾಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೂ, ಮೃತರ ಕುಟುಂಬಕ್ಕೆ ಪಾಲಿಕೆಯಿಂದ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಉದ್ಯಾನವನ್ನು 2016ರಲ್ಲಿ ನಿರ್ವಹಣೆಗಾಗಿ ಬಿಡಿಎಗೆ ನೀಡಲಾಗಿತ್ತು. ಇತ್ತೀಚೆಗೆ ಉದ್ಯಾನವನ್ನು ಪಾಲಿಕೆಗೆ ಹಸ್ತಾಂತರಿಸಿದ್ದು, ಈ ವೇಳೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಹಳೆಯ ಸಂಪರ್ಕಗಳನ್ನು ಕಡಿತಗೊಳಿಸಿಲ್ಲ. ಈ ಕುರಿತು ಬಿಡಿಎ ಗಮನ ಹರಿಸಬೇಕಿತ್ತು. ಇಲ್ಲವೆ ಪಾಲಿಕೆ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಬೇಕಾಗಿತ್ತು ಆದರೆ, ಆ ಕಾರ್ಯ ಆಗಿಲ್ಲ. ಪ್ರಕರಣ ಸಂಬಂಧ ತನಿಖೆ ನಡೆಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.
ಬಾಣಸವಾಡಿ ಘಟನೆಗೆ ಸಂಬಂಧಿಸಿದಂತೆ ಮೃತ ಬಾಲಕ ಉದಯ್ ಕುಮಾರ್ ತಂದೆ ನಾಗರಾಜ್ ಅವರು ಬಾಣಸವಾಡಿ ಠಾಣೆಯಲ್ಲಿ ಬಿಬಿಎಂಪಿ, ಬಿಡಿಎ, ಬೆಸ್ಕಾಂ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.
-ರಾಹುಲ್ ಕುಮಾರ್ ಶಹಪುರ್‌ವಾದ್, ಪೂರ್ವ ವಲಯ ಡಿಸಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.