ಸಮಸ್ಯೆ ಇರುವಲ್ಲಿಗೆ ಉಚಿತ ನೀರು
Team Udayavani, Mar 16, 2019, 6:33 AM IST
ಬೆಂಗಳೂರು: ನೀರಿನ ಸಮಸ್ಯೆ ಎದುರಾಗಿರುವ ನಗರದ ವಿವಿಧ ಭಾಗಗಳಿಗೆ ಟ್ಯಾಂಕರ್‌ಗಳ ಮೂಲಕ ಉಚಿತವಾಗಿ ನೀರು ಪೂರೈಸಲು ಬಿಬಿಎಂಪಿ ಹಾಗೂ ಜಲಮಂಡಳಿ ಮುಂದಾಗಿವೆ.
ಬೇಸಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚುತ್ತಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕುರಿತಂತೆ ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು ಸಭೆ ನಡೆಸಿದರು. ಈ ವೇಳೆ ಸಮಸ್ಯೆಯಿರುವ ಭಾಗಗಳಿಗೆ ಉಚಿತವಾಗಿ ನೀರು ಪೂರೈಕೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲು ನಗರವನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಅದರಂತೆ ಪಾಲಿಕೆಯ ಹಳೆಯ ವಾರ್ಡ್‌ಗಳು ಹಾಗೂ ಹೊಸದಾಗಿ ಸೇರ್ಪಡೆಯಾಗಿರುವ 7 ಪುರಸಭೆ ಮತ್ತು 1 ನಗರಸಭೆಯಲ್ಲಿ ಜಲಮಂಡಳಿ ನೀರು ಪೂರೈಸಲಿದೆ. ಉಳಿದಂತೆ 230 ಚದರ ಕಿ.ಮೀ. ವ್ಯಾಪ್ತಿಯ 110 ಹಳ್ಳಿಗಳಿಗೆ ಬಿಬಿಎಂಪಿ ನೀರು ಪೂರೈಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಪಾಲಿಕೆಯ ವ್ಯಾಪ್ತಿಯ 570 ಚದರ ಕಿ.ಮೀ. ವ್ಯಾಪ್ತಿಯಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ಅಲ್ಲಿಗೆ ಜಲಮಂಡಳಿಯಿಂದ ಕಾವೇರಿ ನೀರು ಪೂರೈಸಲಾಗುತ್ತದೆ. ಒಂದು ವೇಳೆ ಪಂಪಿಂಗ್ ಸ್ಟೇಷನ್‌ಗಳಲ್ಲಿ ವ್ಯತ್ಯಯ ಸೇರಿ ಇತರೆ ಸಮಸ್ಯೆಗಳು ಉಂಟಾದ ಸಂದರ್ಭದಲ್ಲಿ ಜಲಮಂಡಳಿಯ 68 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತದೆ ಎಂದರು.
ಉಳಿದಂತೆ 110 ಹಳ್ಳಿಗಳಿಗೆ ಜಲಮಂಡಳಿಯ 1,286 ಕೊಳವೆಬಾವಿಗಳು ಹಾಗೂ 41 ನೆಲಮಟ್ಟದ ಜಲಾಗಾರಗಳಿಂದ ನೀರು ಪಡೆದು ಪಾಲಿಕೆಯ 267 ಟ್ಯಾಂಕರ್‌ಗಳ ಮೂಲಕ ನೀರನ್ನು ಉಚಿತವಾಗಿ ನೀಡಲಾಗುತ್ತದೆ. ಜತೆಗೆ ತೀವ್ರ ನೀರಿನ ಸಮಸ್ಯೆಯಿರುವ ಕಡೆಗಳಿಗೆ ನೀರು ಪೂರೈಕೆ ಮಾಡಲು ಅಲ್ಪಾವಧಿ ಟೆಂಡರ್ ಮೂಲಕ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಾಮಗಾರಿ ಪ್ರಗತಿಯಲ್ಲಿ: ಪಾಲಿಕೆ ವ್ಯಾಪ್ತಿಗೆ ಸೇರಿದ 110 ಹಳ್ಳಿಗಳಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿದೆ. ಆದರೂ 29 ಹಳ್ಳಿಗಳಿಗೆ ಪೈಪ್‌ಲೈನ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಜನರಿಂದ ಅರ್ಜಿ ಆಹ್ವಾನಿಸಲಾಗಿದೆ. 29 ಹಳ್ಳಿಗಳಲ್ಲಿ 35 ಸಾವಿರ ಮನೆಗಳಿದ್ದು, ಕೇವಲ 6 ಸಾವಿರ ಮನೆಗಳಿಂದ ಅರ್ಜಿ ಬಂದಿವೆ. ಅದರಲ್ಲಿಯೂ 1 ಸಾವಿರ ಮನೆಯವರು ನಿಗದಿತ ಶುಲ್ಕ ಪಾವತಿಸಿವೆ. ಹೀಗಾಗಿ ಉಳಿದ ಮನೆಗಳಿಗೆ ನೀರು ಹಾಗೂ ಒಳಚರಂಡಿ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ಜಲಮಂಡಳಿ ಪ್ರಧಾನ ಎಂಜಿನಿಯರ್ ಕೆಂಪರಾಮಯ್ಯ ಮಾಹಿತಿ ನೀಡಿದರು.
ನೀರಿನ ಅಭಾವವಾಗುವುದಿಲ್ಲ – ಕೆಂಪರಾಮಯ್ಯ: ಜಲಮಂಡಳಿಯು ನಿತ್ಯ 1400 ಎಂಎಲ್‌ಡಿ ನೀರು ಪೂರೈಸುತ್ತಿದ್ದು, ಬೇಸಿಗೆ ಮುಗಿಯುವವರೆಗೆ ಬೆಂಗಳೂರಿಗೆ 10 ಟಿಎಂಸಿ ನೀರಿನ ಅಗತ್ಯವಿದೆ. ಇದೇ ವೇಳೆ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಲ್ಲಿ 28.5 ಟಿಎಂಸಿ ನೀರು ಶೇಖರಣೆಯಾಗಿದೆ. ಹೀಗಾಗಿ ಈ ಬಾರಿಯ ಬೇಸಿಗೆಯಲ್ಲಿ ಬೆಂಗಳೂರಿಗೆ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಜಲಮಂಡಳಿ ಪ್ರಧಾನ ಎಂಜಿನಿಯರ್ ಕೆಂಪರಾಮಯ್ಯ ಭರವಸೆ ನೀಡಿದರು.
ಬೇಸಿಗೆ ಹಿನ್ನೆಲೆಯಲ್ಲಿ ಕಾವೇರಿ, ಕಬಿನಿಯೊಂದಿಗೆ ಕೊಳವೆ ಬಾವಿಗಳ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಅದರಂತೆ ಪಾಲಿಕೆ ಹಾಗೂ ಜಲಮಂಡಳಿಗೆ ಸೇರಿರುವ 9,213 ಕೊಳವೆಬಾವಿಗಳಿಂದ ನೀರು ಪಡೆಯಲಾಗುವುದು. ಜತೆಗೆ ಖಾಸಗಿಯವರ 3.60 ಲಕ್ಷ ಕೊಳವೆಬಾವಿಗಳಿದ್ದು, ಅಗತ್ಯಬಿದ್ದರೆ ಅವುಗಳಿಂದಲೂ ನೀರು ಪಡೆದು ಜನರಿಗೆ ಪೂರೈಸಲಾಗುವುದು ಎಂದು ಹೇಳಿದರು.
ಕುಡಿಯುವ ನೀರು ಪೂರೈಕೆಗೆ ಪಾಲಿಕೆಯ ಹಳೆಯ 135 ವಾರ್ಡ್‌ಗಳಿಗೆ ತಲಾ 20 ಲಕ್ಷ ರೂ. ಹಾಗೂ 63 ಹೊಸ ವಾರ್ಡ್‌ಗಳಿಗೆ ತಲಾ 40 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ. ಒಟ್ಟು 50 ಕೋಟಿ ರೂ. ಅನುದಾನ ನಿಗದಿ ಮಾಡಲಾಗಿದ್ದು, ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.