ನಟಿಯ ಕನ್ಯತ್ವ ಪರೀಕ್ಷೆ ಮಾಡಿಸುತ್ತೇನೆ ಎಂದ ಸಹ ನಿರ್ಮಾಪಕನ ಬಂಧನ
Team Udayavani, Dec 31, 2017, 12:32 PM IST
ಬೆಂಗಳೂರು: “ನಿರ್ದೇಶಕನ ಜತೆ ನೀನು ಅಕ್ರಮ ಸಂಬಂಧ ಹೊಂದಿದ್ದು, ನಿನ್ನ ಕನ್ಯತ್ವ ಪರೀಕ್ಷೆ ಮಾಡಿಸುತ್ತೇನೆ’ ಎಂದು ಅಸಭ್ಯವಾಗಿ ವರ್ತಿಸಿದ ಪೋಷಕ ನಟ ಹಾಗೂ ಸಹ ನಿರ್ಮಾಪಕನ ವಿರುದ್ಧ ಅದೇ ಚಿತ್ರದ ಸಹನಟಿ ದೂರು ನೀಡಿದ್ದಾರೆ.
ಅದರಂತೆ ಮಾಗಡಿ ರಸ್ತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ರಾಜಶೇಖರ್ ಬಂಧನಕ್ಕೊಳಗಾಗಿ ಬಿಡುಗಡೆಯಾದ ಆರೋಪಿ. ಈತನ ವಿರುದ್ಧ ಸಹನಟಿ ಕೀರ್ತಿ ಭಟ್ (23) ದೂರು ನೀಡಿದ್ದರು.
ಕಿಶೋರ್ ಸಿ. ನಾಯಕ್ ನಿರ್ದೇಶಿಸುತ್ತಿರುವ “ಐಸ್ ಮಹಲ್’ ಹೆಸರಿನ ಸಿನಿಮಾದಲ್ಲಿ ಕೀರ್ತಿಭಟ್ ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಚಿತ್ರದ ಸಹ ನಿರ್ಮಾಪಕರಾಗಿರುವ ರಾಜಶೇಖರ್, ನಾಯಕಿಯ ತಂದೆ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ಜನವರಿಯಿಂದ 11 ತಿಂಗಳ ಕಾಲ ಚಿತ್ರದ ಚಿತ್ರೀಕರಣ ನಡೆದಿದೆ.
ಈ ನಡುವೆ ಡಿ.25ರಂದು ನಿರ್ದೇಶಕ ಕಿಶೋರ್ ಸಿ.ನಾಯಕ್ಗೆ ಕರೆ ಮಾಡಿದ ಆರೋಪಿ ರಾಜಶೇಖರ್, “ನಾಯಕಿ ಕೀರ್ತಿ ಜತೆ ನಿನಗೆ ಅಕ್ರಮ ಸಂಬಂಧವಿದೆ. ಶೂಟಿಂಗ್ ಸಮಯದಲ್ಲಿ ಇಬ್ಬರೂ ಜತೆಯಲ್ಲೇ ಮಲಗಿದ್ದೀರಿ. ಆಕೆಯ ಕನ್ಯತ್ವ ಪರೀಕ್ಷೆ ಮಾಡಿಸುತ್ತೇನೆ’ ಎಂದು ಹೇಳಿದ್ದಲ್ಲದೆ, ಸಂದೇಶ ಕೂಡ ಕಳುಹಿಸಿದ್ದರು. ಈ ವಿಚಾರವನ್ನು ಕಿಶೋರ್ ಅವರು ನಟಿಗೆ ತಿಳಿಸಿದ್ದರು.
ಇದರಿಂದ ಕೋಪಗೊಂಡ ನಟಿ ಕೀರ್ತಿಭಟ್, ಕೂಡಲೇ ಆರೋಪಿ ರಾಜಶೇಖರ್ಗೆ ಕರೆ ಮಾಡಿ ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿ ಅವ್ಯಾಚ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಕೀರ್ತಿಭಟ್ ಡಿ.26ರಂದು ಮಾಗಡಿ ರಸ್ತೆ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ರಾಜಶೇಖರ್ ವಿರುದ್ಧ ಲೈಂಗಿಕ ಕಿರುಕುಳ, ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ ಮತ್ತು ಪ್ರಾಣ ಬೆದರಿಕೆ ಒಡ್ಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ ಆರೋಪಿ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ರಾಜಶೇಖರ್ ತಮ್ಮ ಮೊಬೈಲ್ಗೂ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ. ರಾಜಶೇಖರ್ ಆರೋಪಿಸದಂತೆ ನಿರ್ದೇಶಕರು ಹಾಗೂ ನನ್ನ ನಡುವೆ ಯಾವುದೇ ಸಂಬಂಧ ಇಲ್ಲ’ ಎಂದು ನಟಿ ಕೀರ್ತಿಭಟ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.