ಪುಸ್ತಕೋತ್ಸವಕ್ಕೆ ರಾಜ್ಯದ ಪ್ರಕಾಶಕರ ನಿರಾಸಕ್ತಿ
Team Udayavani, Sep 30, 2018, 12:28 PM IST
ಬೆಂಗಳೂರು: ಬೆಂಗಳೂರು ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಅ.15ರಿಂದ 21ರವರೆಗೆ ಹಮ್ಮಿಕೊಳ್ಳಲಾಗಿರುವ ಬೆಂಗಳೂರು ಪುಸ್ತಕೋತ್ಸವದಲ್ಲಿ ಮಳಿಗೆ ತೆರೆಯಲು ರಾಜ್ಯದ ಪ್ರಕಾಶಕರಿಂದ ಬೇಡಿಕೆಯೇ ಇಲ್ಲ.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಪುಸ್ತಕೋತ್ಸವದಲ್ಲಿ 300 ಮಳಿಗೆಗಳು ತೆರೆಯುವ ಸಾಧ್ಯತೆ ಇದ್ದು, ಇದರಲ್ಲಿ 50 ರಿಂದ 100 ಕನ್ನಡ ಪುಸಕ್ತ ಮಳಿಗೆಗಳಿಗೆ ಸ್ಥಳಾವಕಾಶ ದೊರೆಯಲಿದೆ. ಆದರೆ, ಇಲ್ಲಿಯವರೆಗೂ ಕನ್ನಡದ ಪ್ರಕಾಶಕರು ಮತ್ತು ಲೇಖಕರಿಂದ ಮಳಿಗೆಗಾಗಿ ಕೇವಲ 30 ಅರ್ಜಿಗಳು ಮಾತ್ರ ಬಂದಿವೆ. ಆದರೆ, ಉತ್ತರ ಭಾರತದ ಪ್ರಕಾಶಕರಿಂದ ಹೆಚ್ಚಿನ ಬೇಡಿಕೆ ಉಂಟಾಗಿದೆ.
ಈಗಾಗಲೇ 200 ಮಳಿಗೆಗಳಿಗೆ ಉತ್ತರ ಭಾರತದ ಪ್ರಕಾಶಕರು ಮತ್ತು ಲೇಖಕರಿಂದ ಅರ್ಜಿ ಬಂದಿದೆ. ಎಲ್ಲ ಭಾಷೆಯ ಪುಸ್ತಕಗಳು ಬೆಂಗಳೂರು ಪುಸ್ತಕೋತ್ಸವದಲ್ಲಿ ಲಭಿಸಲಿವೆ. ಅದರಲ್ಲಿ ಕನ್ನಡದ ಕೃತಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುವುದು. ಕೇವಲ ಪ್ರಕಾಶಕರಷ್ಟೇ ಅಲ್ಲದೆ ಲೇಖಕ ಪ್ರಕಾಶಕರು ಬೆಂಗಳೂರು ಪುಸ್ತಕೋತ್ಸವದಲ್ಲಿ ಭಾಗವಹಿಸಬಹುದು ಎಂದು ಅವರು ತಿಳಿಸಿದ್ದಾರೆ.
ರಿಯಾಯಿತಿ ದರ: ಬೆಂಗಳೂರು ಪುಸ್ತಕೋತ್ಸವದಲ್ಲಿ ಹಂಪಿಯ ಕನ್ನಡ ವಿವಿಯ ಹಳೆಗನ್ನಡದ ಕ್ಲಾಸಿಕಲ್ ಪುಸ್ತಕಗಳಿಂದ ಆಧುನಿಕ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳು ಎಲ್ಲ ಸಾಹಿತಿಗಳ ಕೃತಿಗಳು ದೊರೆಯಲಿವೆ. ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳ ಪ್ರತಿಷ್ಠಿತ ಲೇಖಕರ ಕೃತಿಗಳು ರಿಯಾಯಿತಿ ದರದಲ್ಲಿ ಲಭಿಸಲಿವೆ.
ಅಕಾಡೆಮಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಸಾಹಿತ್ಯಕ್ಕೆ ಸಂಬಂಧಿಸಿದ ಸರ್ಕಾರಿ ಸ್ವಾಮ್ಯ ಸಂಸ್ಥೆಗಳು ಶೇ.50ರಷ್ಟು ರಿಯಾಯಿತಿ ದರದಲ್ಲಿ ಕೃತಿಗಳನ್ನು ಮಾರಾಟ ಮಾಡಲಿವೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ, ಸಂಶೋಧಕರಿಗೆ ಹಾಗೂ ಕಾಲೇಜು ಉಪನ್ಯಾಸಕರಿಗೆ ಅಗತ್ಯವಾದ ಕೃತಿಗಳು ಬಹುತೇಕ ಕಡಿಮೆ ಬೆಲೆಯಲ್ಲಿ ದೊರೆಯಲಿದೆ.
ಖಾಸಗಿ ಪ್ರಕಾಶನ ಸಂಸ್ಥೆಗಳು ಶೇ.20 ರಿಂದ 35ರಷ್ಟು ರಿಯಾಯಿತಿ ದರದಲ್ಲಿ ಕೃತಿಗಳನ್ನು ಮಾರಾಟ ಮಾಡಲಿವೆ. ಬೆಂಗಳೂರು ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘ ನಿಗದಿ ಮಾಡುವ ದರಕ್ಕಿಂತ ಅರ್ಧದಷ್ಟು ಕಡಿಮೆ ದರಕ್ಕೆ ಕನ್ನಡ ಪ್ರಕಾಶಕರಿಗೆ ಮಳಿಗೆಗಳನ್ನು ಒದಗಿಸಿ ಆ ಮೊತ್ತವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಭರಿಸಲಿದೆ.
ಹೆಚ್ಚು ಅರ್ಜಿ ಬರದಿರಲು ಕಾರಣ: ಬೆಂಗಳೂರು ಪುಸ್ತಕೋತ್ಸವ ನಡೆಯುವ ಸಂದರ್ಭದಲ್ಲಿಯೇ ದಸರಾ ಮಹೋತ್ಸವ ಇರುವುದರಿಂದ ಬಹುತೇಕ ಕನ್ನಡದ ಪುಸ್ತಕ ಮಳಿಗೆಗಳು ಮೈಸೂರಿನಲ್ಲಿರಲಿವೆ. ಹೀಗಾಗಿ ಪುಸ್ತಕೋತ್ಸವದಲ್ಲಿ ಮಳಿಗೆಗಾಗಿ ಹೆಚ್ಚು ಅರ್ಜಿ ಬಂದಿಲ್ಲ ಕಾರ್ಯಕ್ರಮ ಆಯೋಜಕ ಎ.ಎನ್. ರಾಮಚಂದ್ರ ತಿಳಿಸಿದ್ದಾರೆ.
ಇಂದಿನ ದಿನಗಳಲ್ಲಿ ಪುಸ್ತಕ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಶಾಲಾ ವಿದ್ಯಾರ್ಥಿಗಳು ಮತ್ತು ಯುವ ಜನತೆಯಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವ ಸಲುವಾಗಿ ಪುಸ್ತಕೋತ್ಸವ ನೆರವಾಗಲಿದೆ. ಈ ಪುಸ್ತಕೋತ್ಸವಕ್ಕೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.