ಮಳೆ, ಗಾಳಿಗೆ ಹೆದರಿ ನಿಲ್ಲದು ಹೋರಾಟ
Team Udayavani, Sep 8, 2017, 11:00 AM IST
ಬೆಂಗಳೂರು: “ದಿಢೀರ್ ಮಳೆ ಸುರಿದರೇ ಏನು ಮಾಡುವುದು ಎಂಬ ಆತಂಕ! ಆಕಾಶವೇ ಹೊದಿಕೆ… ರಸ್ತೆ ಫುಟ್‌ಪಾತ್ ಹಾಸಿಗೆ..ಅಮ್ಮಂದಿರ ಮಗ್ಗುಲಲ್ಲಿ ಅವುಚಿ ಮಲಗಿಕೊಂಡ ಪುಟ್ಟ ಕಂದಮ್ಮಗಳು…ನಾಳೆ ಬೇಡಿಕೆ ಈಡೇರಿತೆಂಬ ಭರವಸೆಯಲ್ಲಿಯೇ ನಿದ್ರೆಕಳೆದ ಸಾವಿರಾರು ಮಹಿಳೆಯರು.ಗುರುವಾರ ರಾತ್ರಿ ಫ್ರೀಡಂ ಪಾರ್ಕ್‌ನಲ್ಲಿ ಕಂಡು ಬಂದ ದೃಶ್ಯವಿದು.
ಇದಕ್ಕೂ ಮೊದಲು ಆರೋಗ್ಯ ಸಚಿವ ರಮೇಶ್‌ಕುಮಾರ್ ಖುದ್ದು ಸ್ಥಳಕ್ಕೆ ಭೇಟಿ ನೀಡಿ ವೇತನ ಹೆಚ್ಚಳದ ಪರಿಷ್ಕತ ಆದೇಶ ಶುಕ್ರವಾರ ಹೊರಡಿಸಲಾಗುವುದು ಎಂದು ನೀಡಿದ ಭರವಸೆಗೆ ಬಗ್ಗದ ಪ್ರತಿಭಟನಾನಿರತರು ಆದೇಶ ಹೊರಡಿಸಿದ ಮೇಲೆಯೇ ಧರಣಿ ವಾಪಾಸ್ ಪಡೆಯುತ್ತೇವೆ ಎಂದು ತಿಳಿಸಿ, ಧರಣಿ ಮುಂದುವರಿಸಿದರು.
ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದ ಸಾವಿರಾರು ಮಂದಿ ಆಶಾಕಾರ್ಯಕರ್ತೆಯರು, ಗುರುವಾರ ಫ್ರೀಡಂಪಾರ್ಕ್‌ನಲ್ಲಿಯೇ ರಾತ್ರಿ ಕಳೆದರು. ಪುಟ್ಟ ಪುಟ್ಟ ಮಕ್ಕಳನ್ನು ಕರೆದುಕೊಂಡು ಕೆಲ ಕಾರ್ಯಕರ್ತೆಯರು ಪ್ರತಿಭಟನಾ ವೇದಿಕೆ, ರಸ್ತೆ ಮೇಲೆಯೇ ಮಲಗಿದ್ದ ದೃಶ್ಯಗಳು ಮನಕಲುಕುತ್ತಿತ್ತು.
ಆಕಾಶವೇ ಹೊದಿಕೆ ಭೂಮಿಯೇ ಹಾಸಿಗೆ ಎಂಬಂತೆ ಭಾವಿಸಿದ್ದ ಪ್ರತಿಭಟನಾ ನಿರತರು ತಾವು ತಂದಿದ ಬೆಡ್‌ಶೀಟ್‌ಗಳನ್ನು ಹೊದ್ದು ಮಲಗಿದರೆ, ಕೆಲವರು ಚಳಿ ಹಾಗೂ ಸೊಳ್ಳೆಗಳ ಕಾಟದಿಂದ ನಿದ್ದೆಬಾರದೇ ನಿದ್ದೆಗೆಟ್ಟರು. ಏನಾದರಾಗಲೀ ಬೇಡಿಕೆ ಪಟ್ಟಿನಿಂದ ಹಿಂದೆ ಸರಿಯಬಾರದು ಧೃಡನಿರ್ಧಾರ ಅವರದಾಗಿತ್ತು.
ಇದಕ್ಕೂ ಮುನ್ನ ಉತ್ತರ ಕರ್ನಾಟಕದ ಕಾರ್ಯಕರ್ತೆಯರು ತಾವು ತಂದಿದ್ದ ರೊಟ್ಟಿ, ಪಲ್ಯ ಹಂಚಿ ತಿನ್ನುತ್ತಿದ್ದ ನೋಟ ಒಗ್ಗಟ್ಟಿನ ಐಕ್ಯತೆಗೆ ಸೂಚ್ಯವಾಗಿತ್ತು.ಮತ್ತೆ ಕೆಲವರು ಎಐಯುಟಿಯುಸಿ ಹಾಗೂ ಆಶಾಕಾರ್ಯಕರ್ತೆಯರ ಸಂಘ ಕೊಟ್ಟ ಊಟದ ಪ್ಯಾಕೇಟ್‌ಗಳನ್ನು ಸ್ವೀಕರಿಸಿದರು. ಊಟ ಸಿಗದವರು ಮಂಡಕ್ಕಿ, ಬಾಳೆಹಣ್ಣು, ಸೇರಿದಂತೆ ಇನ್ನಿತರೆ ತಿನಿಸುಗಳನ್ನು ತಿಂದು ಹಸಿವು ನೀಗಿಸಿಕೊಂಡರು.
ಇನ್ನುಸುಮಾರು 10 ಸಾವಿರಕ್ಕೂ ಅಧಿಕ ಆಶಾಕಾರ್ಯಕರ್ತೆಯರ ರಕ್ಷಣೆಗೆ 200 ಮಂದಿ ಎಐಯುಟಿಯುಸಿ ಕಾರ್ಯಕರ್ತರು ಹಾಗೂ ಪೊಲೀಸರು ಕಾವಲಿದ್ದರು. ಜೊತೆಗೆ ಗಸ್ತುವಾಹನಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು.
ನಮಗೆ ನಾವೇ ಚಿಕಿತ್ಸೆ ಕೊಟ್ಕೊತೀವಿ!
ಇನ್ನು ರಾಜಧಾನಿಯ ವಾತಾವರಣಕ್ಕೆ ಜ್ವರ,ಶೀತ, ಡೆಂಗ್ಯೂ ಹರಸದಿರಲಿ ಎಂಬ ಮುಂಜಾಗ್ರತಾ ಕ್ರಮವಾಗಿ ತಾವೇ ತಂದಿದ್ದ ಔಷಧಿಗಳನ್ನು ಸುಮಾರು 3000 ಸಾವಿರಕ್ಕೂ ಅಧಿಕ ಮಂದಿಗೆಕೊಟ್ಟಿದ್ದು ವಿಶೇಷವಾಗಿತ್ತು.ಎಲ್ಲಾ ಕಾರ್ಯಕರ್ತೆಯ ಊಟದ ಒದಗಿಸುವ ಉಸ್ತುವಾರಿಯನ್ನು ರಾಜ್ಯ ಆಶಾಕಾರ್ಯಕರ್ತೆಯರ ಸಂಘಟನೆ ಹಾಗೂ ಎಐಯುಟಿಯುಸಿ ಕಲ್ಪಿಸಿದೆ.
ಇದಲ್ಲದೆ ಮುಂಜಾನೆ ಶೌಚಾಲಯ, ಫ್ರೆಶ್ ಅಪ್ ಆಗಲು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ 25ಕ್ಕೂ ಹೆಚ್ಚು ಕಲ್ಯಾಣಮಂಟಪಗಳನ್ನು ಬುಕ್ ಮಾಡಿದ್ದಾರೆ. ಕೆಲವೆಡೆ ಸುಲಭ್ ಶೌಚಾಲಯಗಳನ್ನು ಬುಕ್ ಮಾಡಲಾಗಿದೆ. ಕುಡಿಯುವ ನೀರಿಗಾಗಿ 2 ಟ್ಯಾಂಕರ್ ಹಾಗೂ ಅಲ್ಲಲ್ಲಿ ನೀರಿನ ಬಾಟಲ್‌ಗಳನ್ನು ಇಡಲಾಗಿದೆ ಎಂದು ಸಂಘದ ಮುಖಂಡರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.