ಸನ್ನಡತೆ ತೋರಿದ 92 ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ
Team Udayavani, Mar 8, 2018, 12:12 PM IST
ಬೆಂಗಳೂರು: ಸನ್ನಡತೆ ಆಧಾರದಲ್ಲಿ ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯದಿನಾಚರಣೆ ವೇಳೆ ಆಯಾ ಜಿಲ್ಲಾ ಬಂಧಿಖಾನೆಯಲ್ಲಿ ಬಿಡುಗಡೆ ಮಾಡುತ್ತಿದ್ದ ಕೈದಿಗಳನ್ನು ಇದೇ ಮೊದಲ ಬಾರಿಗೆ 92 ಮಂದಿಯನ್ನು ಬೆಂಗಳೂರು ಕೇಂದ್ರ ಪರಪ್ಪನ ಅಗ್ರಹಾರ ಕಾರಾಗೃಹದಲ್ಲೇ ಬಿಡುಗಡೆ ಮಾಡಲಾಯಿತು.
ಬುಧವಾರ ಕಾರಾಗೃಹ ಆವರಣದಲ್ಲಿ ಶಿûಾ ಬಂಧಿಗಳ ಅವಧಿ ಪೂರ್ವ ಬಿಡುಗಡೆ ಸಮಾರಂಭದಲ್ಲಿ ಬೆಂಗಳೂರಿನಲ್ಲಿ 31, ಮೈಸೂರು 16 ಬೆಳಗಾವಿ 9, ಕಲಬುರಗಿ 14, ವಿಜಯಪುರ 9, ಬಳ್ಳಾರಿ 6 ಮತ್ತು ಧಾರವಾಡ ಕಾರಾಗೃಹದ 7 ಒಟ್ಟು 92 ಮಂದಿ ಕೈದಿಗಳಿಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಬಿಡುಗಡೆ ಪ್ರಮಾಣ ಪತ್ರ ವಿತರಿಸಿದರು.
ನಂತರ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 1,255 ಮಂದಿಯನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. ಕಾರಾಗೃಹಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, 1,070 ಕಾರಾಗೃಹದ ವಿವಿಧ ಹುದ್ದೆಗಳು ಹಾಗೂ 32 ಜೈಲರ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದರು. ಎಡಿಜಿಪಿ ಮೇಘರಿಕ್, ಡಿಐಜಿ ರೇವಣ್ಣ, ಐಡಿಜಿಪಿ ವೀರಭದ್ರಯ್ಯ, ಮುಖ್ಯ ಅಧೀಕ್ಷಕ ಸೋಮಶೇಖರ್, ಎಸ್ಪಿ ರಮೇಶ್, ಡಿಸಿಪಿ ಬೋರಲಿಂಗಯ್ಯ 0ಹಾಗೂ ಕಾರಾಗೃಹದ ಸಿಬ್ಬಂದಿ ಇದ್ದರು.
ಪ್ರಿಸನ್ ಕಾಲ್ ಸಿಸ್ಟಮ್‌ಗೆ ಚಾಲನೆ: ಕಾರಾಗೃಹದಲ್ಲಿರುವ ಕೈದಿಗಳು ತಮ್ಮ ಕುಟುಂಬದ ಸದಸ್ಯರು, ಸಂಬಂಧಿಕರು ಹಾಗೂ ವಕೀಲರ ಜತೆ ಸಂಪರ್ಕಿಸಲು ಅವಕಾಶ ಮಾಡಿಕೊಡಲು ಕಾರಾಗೃಹದ ಆವರಣದಲ್ಲಿ 29.98 ಲಕ್ಷ ರೂ.ಗಳ ವೆಚ್ಚದಲ್ಲಿ 8 ಪ್ರಿಸನ್ ಕಾಲ್ ಸಿಸ್ಟಮ್’ ಅಳವಡಿಸಲಾಗಿದೆ.
ಒಂದು ತಿಂಗಳಲ್ಲಿ ಒಬ್ಬ ಕೈದಿ ಎರಡು ಬಾರಿ ಮಾತನಾಡಲು ಅವಕಾಶವಿದ್ದು, ಪ್ರತಿ ಬಾರಿ 9 ನಿಮಿಷ ಮಾತನಾಡಬಹದು. ಇದಕ್ಕೆ ಮಾಸಿಕ 80 ರೂ. ನಿಗದಿ ಮಡಲಾಗಿದೆ. ಈ ಫೋನ್ ಮೇಲೆ ಕೈದಿಯ ಬೆರಳಚ್ಚು ದಾಖಲಾಗುತ್ತದೆ. ಅಲ್ಲದೇ ಯಾರೊಂದಿಗೆ ಮಾತನಾಡಿದ್ದಾನೆ ಎಂಬೆಲ್ಲ ಮಾಹಿತಿಯನ್ನು ಸಂಗ್ರಹಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷೆಯಿಂದ ಶಿಕ್ಷಣ ಪಡೆದೆ: ಯಲ್ಲಪ್ಪ: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದೊಡ್ಡಬಳ್ಳಾಪುರದ ಯಲ್ಲಪ್ಪ ಜೈಲಿನಲ್ಲಿದ್ದುಕೊಂಡೆ ಎರಡು ಸ್ನಾತಕೋತ್ತರ ಪದವಿ ಹಾಗೂ ಅಂಬೇಡ್ಕರ್ ಜೀವನ ಕುರಿತ ಪಿಎಚ್‌ಡಿ ಮಾಡಿದ್ದಾರೆ. ಅಲ್ಲದೇ ರಾಜ್ಯದ ವಿವಿಧ ಕಾರಾಗೃಹಗಳಿಗೆ ಭೇಟಿ ನೀಡಿ ವಿಚಾರಣಾಧೀನ ಹಾಗೂ ಸಜಾಕೈದಿಗಳ ಕುರಿತು ಪುಸ್ತಕವೊಂದನ್ನು ಬರೆದಿದ್ದಾರೆ. 7ನೇ ತರಗತಿ ಅನುತ್ತೀರ್ಣಗೊಂಡಿದ್ದ ಯಲ್ಲಪ್ಪ ಸಮಯ ಕಳೆಯಲು ಗ್ರಂಥಾಲಯಕ್ಕೆ ಹೋಗುತ್ತಿದ್ದರು.
ಬಳಿಕ ದೂರ ಶಿಕ್ಷಣದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತೀರ್ಣಗೊಂಡು, ಬಿಎ ಮುಗಿಸಿ ಕೊನೆಗೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನೂ ಮುಗಿಸಿದ್ದಾರೆ. ಇನ್ನೂ ಓದಿನ ದಾಹ ತಣಿಯದಿದ್ದಾಗ ಎಂ.ಎಸ್.ಡಬ್ಲ್ಯುನಲ್ಲಿ ಮತ್ತೂಂದು ಸ್ನಾತಕೋತ್ತರ ಪದವಿ ಪಡೆದಿದ್ದಲ್ಲದೆ, ಅಂಬೇಡ್ಕರ್ ಬದುಕಿನ ಸಂಘರ್ಷಗಳ ಬಗ್ಗೆ ಪಿಹೆಚ್‌ಡಿ ಪಡೆದಿದ್ದಾರೆ. ಮುಂದಿನ ಜೀವನವನ್ನು ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿದ್ದೇನೆ ಎಂದು ಉದಯವಾಣಿ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ರೂಪಾ ವಿರುದ್ಧ ಪತ್ರ: ಡಿ ರೂಪಾ ಕಾರಾಗೃಹ ಇಲಾಖೆ ಕುರಿತ ಕೆಲವೊಂದು ಮಾಹಿತಿಗಳನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಬಹಿರಂಗ ಪಡಿಸುತ್ತಿದ್ದಾರೆ ಎಂದು ಆರೋಪಿಸಿ ಕಾರಾಗೃಹ ಇಲಾಖೆ ಎಡಿಜಿಪಿ ಎನ್.ಎಸ್.ಮೇಘರಿಕ್ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಕೊಲೆ ಪ್ರಕರಣದಲ್ಲಿ 2006 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದೆ. ಜೈಲಿನಲ್ಲೇ ಶಿಕ್ಷಣ ಕಲಿತು ಬಿಎ ಪದವಿ ಪಡೆದಿದ್ದೇನೆ. ನನಗೀಗ 50 ವರ್ಷ. ಕಂಪ್ಯೂಟರ್‌ನಲ್ಲಿ ಪರಿಣಿತನಾಗಿದ್ದೇನೆ. ಇದೆಲ್ಲವನ್ನೂ ನನಗೆ ಕಲಿಸಿದ್ದು ಜೈಲು. ಕಾರಾಗೃಹ ಜೀವನ ಕಲಿಸಿದೆ.
-ಹನುಮಂತಪ್ಪ, ಭದ್ರಾವತಿಯ ಅರೆಬಿಳಚಿ ಗ್ರಾಮದವರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.