ಶಿಕ್ಷಕರ ಮೇಲೆ ಸಮಾಜ ನಿರ್ಮಾಣದ ಹೊಣೆ
Team Udayavani, Sep 6, 2017, 12:00 PM IST
ಬೆಂಗಳೂರು: ಬುದ್ಧ, ಬಸವ, ಕನಕ, ಗಾಂಧಿ, ಅಂಬೇಡ್ಕರ್ ಮೊದಲಾದವರ ಕನಸಿನ ಭಾರತ ನಿರ್ಮಾಣದ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಸಮಾನತೆ, ಸಾಮಾಜಿಕ ನ್ಯಾಯ, ಬ್ರಾತೃತ್ವ ಹಾಗೂ ಸಹಬಾಳ್ವೆ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ 31 ಉತ್ತಮ ಶಿಕ್ಷಕ ಸೇರಿ ವಿವಿಧ ವಿಭಾಗದಲ್ಲಿ ಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಿ ಅವರು ಮಾತನಾಡಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಪ್ರತಿ ಶಿಕ್ಷಕನಿಗೆ ರಾಧಾಕೃಷ್ಣನ್ ಸ್ಫೂರ್ತಿಯಾಗಿದ್ದು, ಶಿಕ್ಷಕ ವೃತ್ತಿಯ ಪೂಜ್ಯತೆ ಹಾಗೂ ಶಿಕ್ಷಕ, ವಿದ್ಯಾರ್ಥಿ ನಡುವಿನ ಸಂಬಂಧದ ಪಾವಿತ್ರತೆಯನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಶಾಲಾ ಶಿಕ್ಷಕರ ನಡವಳಿಕೆ, ಗುಣ ಮತ್ತು ಕ್ರಿಯಾಶೀಲತೆ ಮಕ್ಕಳ ಮೇಲೆ ಪ್ರಭಾವ ಬೀರುವಂತಿರಬೇಕು. ದೇಶದ ಅಥವಾ ರಾಜ್ಯದ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರವಾಗಿದೆ. ಮಾನವ ಸಂಪನ್ಮೂಲದಲ್ಲಿ ಅಭಿವೃದ್ಧಿ ಹೊಂದದ ದೇಶ ಸರ್ವಾಂಗೀಣ ವಿಫಲತೆ ಕಾಣುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಯುವ ಸಮುದಾಯವನ್ನು ಸಜ್ಜುಗೊಳಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಕಿವಿ ಮಾತು ಹೇಳಿದರು.
ಶಿಕ್ಷಕರು ಓದು, ಬರಹ ಕಲಿಸುವ ಜತೆಗೆ ಬದುಕಿಗೆ ಸ್ಪಂದಿಸುವ ಮತ್ತು ವ್ಯಕ್ತಿತ್ವ ವಿಕಾಸನದ ಶಿಕ್ಷಣವನ್ನು ನೀಡಬೇಕು. ಉತ್ತಮ, ಅತ್ಯುತ್ತಮ, ಸಾಧಾರಣ ಹಾಗೂ ಕೆಟ್ಟ ಶಿಕ್ಷಕರು ಇದ್ದೇ ಇರುತ್ತಾರೆ. ಎಲ್ಲರೂ ಉತ್ತಮ ಶಿಕ್ಷಕರಾಗಲು ಪ್ರಯತ್ನಿಸಬೇಕು. ಮಕ್ಕಳಲ್ಲಿರುವ ಪ್ರತಿಭೆಯ ಅನಾವರಣ ಮಾಡಿ, ಸರ್ಕಾರಿ ಶಾಲೆಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡಬೇಕು ಎಂಬ ಸಲಹೆ ನೀಡಿದರು.
ಶಿಕ್ಷಕ, ಶಿಕ್ಷಕನಾಗಿ ವಿದ್ಯಾರ್ಥಿಯಾಗಿಯೂ ಇರಬೇಕು. ಚಿಂತನ ಶೀಲರಾಗಿ, ಅಧ್ಯಯನ, ಸಂಶೋಧನೆಯೊಂದಿಗೆ ಆಧುನಿಕ ಬದುಕಿಗೆ ಬೇಕಾದ ಎಲ್ಲ ಜ್ಞಾನ ಪಡೆದು, ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು. 50 ಸಾವಿರ ಶಿಕ್ಷಕರಿಗೆ ಹತ್ತು ದಿನದ ತರಬೇತಿ ನೀಡಲು ಗುರುಚೇತನ ಯೋಜನೆ ಆರಂಭಿಸಿದ್ದು, ಶಿಕ್ಷಕರ ವಿಕಾಸದಿಂದ ವಿದ್ಯಾರ್ಥಿಗಳ ವಿಕಾಸ ಸಾಧ್ಯ. ಶಿಕ್ಷಣ ಒಂದು ಪ್ರೊಫೆಷನ್ ಆಗಿದ್ದು, ಶಿಕ್ಷಕರು ಅನೇಕ ಪ್ರೊಫೆಷನ್ ಸೃಷ್ಟಿಸುತ್ತಾರೆ ಎಂದು ಹೇಳಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ನಾಡಿನ ಏಳಿಗೆಗೆ, ಸಮುದಾಯದ ಬದಲಾವಣೆ ಹಾಗೂ ನಾಗರಿಕ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಶಿಕ್ಷಣ ವ್ಯವಸ್ಥೆಯ ವರ್ಗೀಕರಣದಿಂದ ಬಡವರ ಮಕ್ಕಳು ಸರ್ಕಾರಿ ಶಾಲೆಗೆ, ಮಧ್ಯಮ ವರ್ಗದ ಮಕ್ಕಳು ಅನುದಾನಿತ ಶಾಲೆಗೆ ಹಾಗೂ ಶ್ರೀಮಂತರ ಮಕ್ಕಳು ಖಾಸಗಿ ಶಾಲೆ ಸೇರಿಕೊಳ್ಳುವತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣದಲ್ಲಿ ಸಮಾನತೆ ತರಲು ಸರ್ಕಾರದಿಂದ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಹೇಳಿದರು.
ಈಗಾಗಲೇ 7905 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಮಾಡಿದ್ದೇವೆ, 10 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದ್ದೇವೆ. ಭಾಷಾ ಹಾಗೂ ವಿಷಯ ಶಿಕ್ಷಕರ ನೇಮಕಕ್ಕೂ ಚಾಲನೆ ನೀಡಿದ್ದೇವೆ. ಗ್ರಂಥಪಾಲಕ ಹಾಗೂ ದೈಹಿಕ ಶಿಕ್ಷಕರ ಜತೆಗೆ ಡಿ ದರ್ಜೆ ನೌಕರರ ಭರ್ತಿಗೂ ಚಿಂತನೆ ನಡೆಯುತ್ತಿದೆ. ಶಾಲೆಗಳ ಉನ್ನತೀಕರಣ ಮಾಡುತ್ತಿದ್ದೇವೆ ಎಂದರು.
ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಟಿ.ಎ.ಶರವಣ, ಶರಣಪ್ಪ ಮಟ್ಟೂರ, ರಾಮಚಂದ್ರಗೌಡ, ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಅಜೆಯ ಸೇಠ್, ಇಲಾಖೆ ಆಯುಕ್ತೆ ಸೌಜನ್ಯ, ಪಿಯು ಇಲಾಖೆ ಆಯುಕ್ತೆ ಶಿಖಾ ಮೊದಲಾದವರು ಉಪಸ್ಥಿತರಿದ್ದರು.
ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರ ಶಾಲೆಗೆ ಪ್ರತಿವರ್ಷ ಇಲಾಖೆಯಿಂದ ವಿಶೇಷ ಬಹುಮಾನ ನೀಡಲಾಗುತ್ತದೆ. ಈ ಹಿಂದೆ ಕಂಪ್ಯೂಟರ್, ಪುಸ್ತಕ ಇತ್ಯಾದಿ ನೀಡುತ್ತಿದ್ದೆವು. ಈ ವರ್ಷ ಆ ಶಾಲೆಯ ಅಭಿವೃದ್ಧಿಗೆ 2.50 ಲಕ್ಷ ನೀಡಲಿದ್ದೇವೆ.
-ತನ್ವೀರ್ ಸೇಠ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ
ರಾಜಪ್ಪ ಮೇಸ್ಟ್ರೆ ನಮ್ಮೂರಿಗೆ ಮುಖ್ಯಶಿಕ್ಷಕರಾಗಿ ಬಾರದೇ ಇದ್ದಿದ್ದರೆ, ನಾನು ಓದುತ್ತಿರಲಿಲ್ಲ, ಮಂತ್ರಿ, ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ನೇರವಾಗಿ ನಾಲ್ಕನೇ ತರಗತಿಗೆ ಸೇರಿದ ನಾನು ಕಾಗುಣಿತ, ಮಗ್ಗಿ, ಲೆಕ್ಕವನ್ನು ಮರಳಿನಲ್ಲಿ ಬರೆದು ಅಭ್ಯಾಸ ಮಾಡಿದ್ದೆ. ಅಂದು ಪ್ರೌಢಶಾಲೆಯಲ್ಲಿ ಕಲಿಸಿದ ಕನ್ನಡ ವ್ಯಾಕರಣ ಇಂದಿಗೂ ಮೆದುಳಿನಲ್ಲಿ ಅಚ್ಚಾಗಿ ಉಳಿಸಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.