ಎರಡನೇ ದಿನವೂ ರವಿ ಬೆಳಗೆರೆ ವಿಚಾರಣೆ
Team Udayavani, Dec 10, 2017, 6:00 AM IST
ಬೆಂಗಳೂರು: ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ಆರೋಪ ಸಂಬಂಧ ಬಂಧಿಸಲ್ಪಟ್ಟಿರುವ “ಹಾಯ್ ಬೆಂಗಳೂರು’ ಪತ್ರಿಕೆ ಸಂಸ್ಥಾಪಕ ಸಂಪಾದಕ ರವಿ ಬೆಳಗೆರೆಯನ್ನು ಸಿಸಿಬಿ ಪೊಲೀಸರ ತಂಡ ಶನಿವಾರವೂ ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿತು. ವಿಚಾರಣೆ ಸಂದರ್ಭದಲ್ಲಿ “ನಾನೇನೂ ತಪ್ಪು ಮಾಡಿಲ್ಲ, ನನಗೇನೂ ಗೊತ್ತಿಲ್ಲ’ ಎಂದು ರವಿ ಬೆಳಗೆರೆ ಹೇಳಿರುವುದಾಗಿ ತಿಳಿದು ಬಂದಿದ್ದು, ಇಡೀ ವಿಚಾರಣೆ ಪ್ರಕ್ರಿಯೆ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸತೀಶ್‌ಕುಮಾರ್, ಡಿಸಿಪಿ ಜಿನೇಂದ್ರ ಕಣಗವಿ, ಎಸಿಪಿ ಸುಬ್ರಹ್ಮಣ್ಯ ಸೇರಿ ಹಿರಿಯ
ಅಧಿಕಾರಿಗಳನ್ನೊಳಗೊಂಡ ತಂಡ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿತು.
ತನಿಖೆಯ ಭಾಗವಾಗಿ ಬೆಳಗೆರೆ ಅವರ ಎರಡನೇ ಪತ್ನಿ ಯಶೋಮತಿ ವಾಸವಿರುವ ರಾಜರಾಜೇಶ್ವರಿ ನಗರದ ಪಟ್ಣಣಗೆರೆ ಲೇಔಟ್‌ನಲ್ಲಿರುವ “ಹಿಮ ಬೆಳಗೆರೆ’ ನಿವಾಸವನ್ನು ಪರೀಶೀಲನೆ ನಡೆಸಿದರು. ಆರಂಭದಲ್ಲಿ ನಿವಾಸದಲ್ಲಿ ಪರಿಶೀಲನೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಬೆಳಗೆರೆಯನ್ನು ಅಧಿಕಾರಿಗಳು ಮನವೊಲಿಸಿ ನಿವಾಸದೊಳಕ್ಕೆ ಕರೆದೊಯ್ದರು. ಸುಮಾರು 25 ನಿಮಿಷಗಳ ಕಾಲ ಇಡೀ ನಿವಾಸವನ್ನು ತಪಾಸಣೆ ನಡೆಸಿದರು. ಇದೇ ವೇಳೆ ಯಶೋಮತಿ ಅವರನ್ನು ಘಟನೆ ಬಗ್ಗೆ ಸಿಸಿಬಿ ಪೊಲೀಸರು ಕೇಳಿದ್ದು, ನನಗೆ ಯಾವುದೇ ವಿಚಾರ ಗೊತ್ತಿಲ್ಲ
ಎಂದಷ್ಟೇ ಉತ್ತರಿಸಿದರು. ಅಗತ್ಯ ಬಿದ್ದರೆ ಅವರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆದುಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ತಪಾಸಣೆ ಬಳಿಕ ತೀವ್ರ ಮಧುಮೇಹ ಕಾಯಿಲೆಯಿಂದ ಬಳಲಿ ಅಸ್ವಸ್ಥರಾದ ಬೆಳಗೆರೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಬಂದು ತಜ್ಞ ವೈದ್ಯರಿಂದ ರಕ್ತದೊತ್ತಡ, ಮಧುಮೇಹ ಸೇರಿ ಆರೋಗ್ಯ ತಪಾಸಣೆ ನಡೆಸಲಾಯಿತು. ಭಾನುವಾರ ಬೆಳಿಗ್ಗೆಯೂ ವಿಚಾರಣೆ ಮುಂದುವರಿಯಲಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಆರೋಪ ನಿರಾಕರಣೆ: ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣ ಹಿನ್ನೆಲೆಯಲ್ಲಿ ತನಿಖಾ ತಂಡ ರವಿ ಬೆಳಗೆರೆಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದೆ. ಪ್ರಕರಣದ ಪ್ರಮುಖ ಆರೋಪಿ ಶಶಿಧರ್, ತಾಹೀರ್, ವಿಜು ಬಡಿಗೇರ್ ಪರಿಚಯ, ಸುನೀಲ್ ಹೆಗ್ಗರವಳ್ಳಿ ನಡುವಿನ ಸಂಬಂಧ, ಯಾವ ಕಾರಣಕ್ಕಾಗಿ ವೈಷಮ್ಯ ಬೆಳೆದಿತ್ತು. ಗನ್ ಡೀಲರ್‌ಗಳ ಜತೆಗಿನ ಸಂಬಂಧವೇನು? ಯಾಕಾಗಿ ಶಶಿಧರ್‌ನನ್ನು ಕರೆಯಿಸಿಕೊಂಡಿದ್ದೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದೆ.
ಕೆಲವು ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿರುವ ಬೆಳಗೆರೆ, ಸುಪಾರಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ
ಎಂದಿದ್ದು, ಆರೋಪ ಸತ್ಯಕ್ಕೆ ದೂರ ಎನ್ನುತ್ತಿದ್ದಾರೆ. ತೀವ್ರ ಮಧುಮೇಹದಿಂದ ಬಳಲುತ್ತಿರುವುದರಿಂದ ಒತ್ತಡದ ವಿಚಾರಣೆ ನಡೆಸ ಗುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ವಿಜು ಬಡಿಗೇರ್ ಬಂಧನಕ್ಕೆ ಕಾರ್ಯಾಚರಣೆ: ಮತ್ತೂಂದೆಡೆ ಹತ್ಯೆಗೆ ಸುಪಾರಿ ಪಡೆದುಕೊಂಡಿದ್ದ ಎನ್ನಲಾದ ಮೂರನೇ
ಆರೋಪಿ ವಿಜುಬಡಿಗೇರ್ ಬಂಧನಕ್ಕೆ ಸಿಸಿಬಿ ಪೊಲೀಸರ ತಂಡ ಕಾರ್ಯಾಚರಣೆ ಮುಂದುವರಿಸಿವೆ. ಹಲವು ತಿಂಗಳಿಂದ ತಲೆ ಮರೆಸಿಕೊಂಡಿರುವ ವಿಜು ಬಡಿಗೇರ್ ಉತ್ತರ ಕರ್ನಾಟಕದಲ್ಲಿರುವ ಮಾಹಿತಿ ಮೇರೆಗೆ ತನಿಖಾ ತಂಡ ಕಳುಹಿಸಿಕೊಡಲಾಗಿದೆ. ವಿಜಯಪುರ, ಬೆಳಗಾವಿ, ಬಾಗಲಕೋಟೆ ಸೇರಿ ಹಲವು ಜಿಲ್ಲೆಗಳಲ್ಲಿ ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಆರೋಪಿ ಶಶಿಧರ್ ಮಂಡಗೋಡಿ ನೀಡಿರುವ ಹೇಳಿಕೆ ಹಿನ್ನೆಯಲ್ಲಿ ವಿಜುಬಡಿಗೇರ್ ಬಂಧನ ಹಾಗೂ ಆತನ ವಿಚಾರಣೆ
ಅತ್ಯಗತ್ಯವಾಗಿದೆ. ಬೆಳಗೆರೆ ಮೇಲಿನ ಆರೋಪದ ಕುರಿತಾಗಿ ಆತನ ವಿಚಾರಣೆ ಬಳಿಕ ಮತ್ತಷ್ಟು ಸ್ಪಷ್ಟತೆ ದೊರೆಯಲಿದೆ. ಜೊತೆಗೆ ಸುನೀಲ್ ಹೆಗ್ಗರವಳ್ಳಿಯ ಹೇಳಿಕೆಗಳು ಪ್ರಕರಣಕ್ಕೆ ಮತ್ತಷ್ಟು ಸುಳಿವು ನೀಡಲಿವೆ ಎಂದು ಸಿಸಿಬಿ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದರು.
ಜಿಂಕೆ ಚರ್ಮ, ಆಮೆ ಚಿಪ್ಪು ತಪಾಸಣೆಗೆ ಪತ್ರ: ರವಿ ಬೆಳಗೆರೆ ನಿವಾಸದಲ್ಲಿ ದೊರೆತ ಜಿಂಕೆ ಚರ್ಮ ಹಾಗೂ ಆಮೆ ಚಿಪ್ಪಿಗೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ಅರಣ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಚರ್ಮ ಹಾಗೂ ಆಮೆ ಚಿಪ್ಪುಗಳ ಬಗ್ಗೆ ಪರಿಶೀಲಿಸುವಂತೆ ಕೋರಲಾಗುತ್ತಿದ್ದು, ಅರಣ್ಯಾಧಿಕಾರಿಗಳ ಪರಿಶೀಲನಾ ವರದಿ ನಂತರ ಈ ಸಂಬಂಧ ತನಿಖೆ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಕಸ್ಟಡಿಯಲ್ಲಿ ಡೈರಿ ಬರೆದ ಬೆಳಗೆರೆ
“ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ಬೆಳಗೆರೆ ಶುಕ್ರವಾರ ರಾತ್ರಿ ಊಟದ ಬಳಿಕ ವಿಶ್ರಾಂತಿ ಪಡೆದರು. ಈ ಮಧ್ಯೆ ಖಾಲಿ ಪೇಪರ್ ಹಾಗೂ ಪೆನ್ನು ಪಡೆದುಕೊಂಡು ದಿನಚರಿ ಬರೆದುಕೊಂಡರು. ಬರವಣಿಗೆ ಅವರಿಷ್ಟಕ್ಕೇ ಬಿಟ್ಟಿದ್ದು, 2 ಗಂಟೆ ಸುಮಾರಿಗೆ ಮಲಗಿಕೊಂಡರು. ಆಗಾಗ್ಗೆ ಸಿಗರೇಟ್ ಸೇದುತ್ತಿದ್ದರು, ಸ್ವಲ್ಪ ಜಾಸ್ತಿಯೇ ಸಿಗರೇಟ್ ಸೇವನೆ
ಮಾಡುತ್ತಿರುತ್ತಾರೆ. ಇದು ಅವರ ವೈಯಕ್ತಿಕ. ನಾವು ಆ ವಿಚಾರದ ಬಗ್ಗೆ ಪ್ರಶ್ನೆ ಮಾಡಲಿಲ್ಲ’ ಎಂದು ಪೊಲೀಸರು ತಿಳಿಸಿದರು. ಈ ನಡುವೆ ರವಿ ಬೆಳಗೆರೆ ಪುತ್ರ ಕರ್ಣ ಹಾಗೂ ಮಗಳು ಚೇತನಾ ಶನಿವಾರ ಇಡೀ ದಿನ ಸಿಸಿಬಿ ಕಚೇರಿ ಬಳಿಯೇ ಮೊಕ್ಕಾಂ ಹೂಡಿದ್ದರು. ಬೆಳಗ್ಗೆ ಮನೆಯಿಂದ ಮುದ್ದೆ, ಸೊಪ್ಪಿನ ಸಾರು, ಅನ್ನ, ಮೊಸರು ತಂದುಕೊಟ್ಟ ಇಬ್ಬರೂ ಕಚೇರಿ ಆವರಣದಲ್ಲೇ ಇದ್ದರು. ರಾಜರಾಜೇಶ್ವರಿ ನಗರ ನಿವಾಸಕ್ಕೆ ತಪಾಸಣೆಗೆ ತೆರಳಿದಾಗಲೂ ಜತೆಯಲ್ಲಿದ್ದರು.
ಇಂದೂ ಹಲವರ ವಿಚಾರಣೆ ಸಾಧ್ಯತೆ?
ಹಲವು ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ತಂಡ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹಾಗೂ
ಇನ್ನಿತರರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಶಶಿಧರ್ ಮುಂಡಗೋಡಿ ಹೇಳಿಕೆ ಆಧರಿಸಿ ಹಲವರ ಮೇಲೆ ಅನುಮಾನವಿದೆ. ಅಲ್ಲದೆ ಸುನೀಲ್ ಮಾಹಿತಿ ಬಳಿಕ ಮತ್ತಷ್ಟು ಖಚಿತತೆ ದೊರೆತರೆ ಕೆಲವರನ್ನು
ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಫಾರ್ಮ್ಹೌಸ್ ಮೇಲೆ ಸಿಸಿಬಿ ದಾಳಿ
ಜೋಯಿಡಾ: ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಜಗಲೇಬೇಟ ಪಕ್ಕದ ಬರಬುಸಾದಲ್ಲಿರುವ ರವಿ ಬೆಳೆಗೆರೆಯ ಫಾರ್ಮ್ಹೌಸ್ ಮೇಲೆ ಬೆಂಗಳೂರಿನ ಸಿಸಿಬಿ ಅಧಿಕಾರಿಗಳು ಶನಿವಾರ ದಾಳಿ ಮಾಡಿ ಪರಿಶೀಲನೆ ನಡೆಸಿದರು. ಶನಿವಾರ ಬೆಳಗ್ಗೆ ಬೆಂಗಳೂರಿನಿಂದ ಬಂದ ಸಿಸಿಬಿ ಅಧಿಕಾರಿ ಪಿ.ಐ.ಕುಲಕರ್ಣಿ ನೇತೃತ್ವದ ಐವರ ತಂಡ ಬೆಳಗೆರೆ ನಿವಾಸದ ತಪಾಸಣೆ ನಡೆಸಿತು.
ಶನಿವಾರ ಮಧ್ಯಾಹ್ನ 12:30ರಿಂದ 2:30ರವರೆಗೂ ತಪಾಸಣೆ ನಡೆಸಿದರು. ಈ ವೇಳೆ ಯಾವುದೇ ಅಕ್ರಮ ವಸ್ತು ದೊರೆತಿಲ್ಲ ಎಂದು ತಿಳಿದು ಬಂದಿದೆ. ಜೋಯಿಡಾ ತಾಲೂಕು ಅತಿ ಹಿಂದುಳಿದಿದ್ದರೂ ರಾಜ್ಯದ ವಿವಿಧ ಭಾಗಗಳ ಶ್ರೀಮಂತರು ಇಲ್ಲಿ ಲಕ್ಷಾಂತರ ರೂ.ಮೌಲ್ಯದ ಭೂಮಿ ಹೊಂದಿದ್ದಾರೆ. ರವಿ ಬೆಳಗೆರೆ ಕೂಡಾ ಇಲ್ಲಿ ಹತ್ತಾರು ಎಕರೆ ಭೂಮಿ ಹೊಂದಿದ್ದು, ಇಲ್ಲಿಗೆ ಆಗಾಗ ಬಂದು ಕಾಲ ಕಳೆಯುತ್ತಿದ್ದರು.
ನಮ್ಮಪ್ಪ ತಪ್ಪು ಮಾಡಿಲ್ಲ: ಭಾವನಾ ಬೆಳಗೆರೆ
ಧಾರವಾಡ: “ನನ್ನ ತಂದೆ ತಪ್ಪು ಮಾಡಿಲ್ಲ. ಈಗ ಅವರ ವಿರುದ್ಧ ಬಂದಿರುವ ಆರೋಪದಿಂದ ಮುಕ್ತರಾಗಿ ಹೊರಬರಲಿದ್ದಾರೆ ಎನ್ನುವ ವಿಶ್ವಾಸ ನನಗೆ ಇದೆ’ ಎಂದು ರವಿ ಬೆಳೆಗೆರೆ ಮಗಳು ಭಾವನಾ ಬೆಳೆಗೆರೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುಪಾರಿ ಕೊಟ್ಟು ಕೊಲೆ ಮಾಡಿಸುವಂತಹ ಕೆಟ್ಟ ಕೆಲಸಕ್ಕೆ ನನ್ನ ತಂದೆ ಹೋಗುವವರಲ್ಲ. ಈ ವಿಚಾರದಲ್ಲಿ ನಾನು ಅವರ ಪರವಾಗಿಯೇ ನಿಲ್ಲುತ್ತೇನೆ. ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ. ವಿಚಾರಣೆ ನಡೆಯುತ್ತಿರುವುದರಿಂದ ಬಹಿರಂಗವಾಗಿ ಕೆಲ ವಿಚಾರಗಳನ್ನು ಹೇಳುವುದಿಲ್ಲ. ಸದ್ಯದಲ್ಲೇ ಈ ವಿವಾದ ಅಂತ್ಯ ಕಾಣಲಿದೆ. ಅವರ ಆರೋಗ್ಯ ಸರಿಯಿಲ್ಲ. ಅವರನ್ನು ನಾವು ಚೆನ್ನಾಗಿ ನೋಡಿಕೊಳ್ಳಬೇಕಿದೆ ಎಂದರು. ಯಶೋಮತಿ ಬೆಳಗೆರೆ ಅವರ ಬಗ್ಗೆ ಮಾತನಾಡಲು ನಿರಾಕರಿಸಿ, ಅವರು ಯಾರೆಂದು ನನಗೆ ಗೊತ್ತಿಲ್ಲ ಎಂದರು.
ಪತ್ರಕರ್ತ ರವಿ ಬೆಳಗೆರೆ ಅವರನ್ನು ಏಕೆ ಬಂಧಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ವಿಷಯದ ಬಗ್ಗೆ ಪೊಲೀಸರ ಜತೆಗೆ ನಾನು ಮಾತನಾಡಿಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ. ಏನೇ ಇದ್ದರೂ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
MUDA CASE: ಮುಖ್ಯಮಂತ್ರಿ ಭಾವಮೈದನ ವಿಚಾರಣೆ
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
MUST WATCH
ಹೊಸ ಸೇರ್ಪಡೆ
Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.