ಸ್ಫೋಟ ಪ್ರಕರಣ ಆರೋಪಿಗಳಿಂದ ತಪ್ಪೊಪ್ಪಿಗೆ ಹೇಳಿಕೆ
Team Udayavani, Jul 5, 2018, 1:12 PM IST
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಎಂಟು ವರ್ಷ ಹಿಂದೆ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಮೂವರು ಆರೋಪಿ ಗಳು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯದಲ್ಲಿ ಬುಧವಾರ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ. ಅಲ್ಲದೆ ಮತ್ತೂಬ್ಬ ಆರೋಪಿಯೂ ಪ್ರಮಾಣಪತ್ರದ ಮೂಲಕ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ಕೇರಳ ಹಾಗೂ ದೆಹಲಿ ಮೂಲದ ಆರೋಪಿಗಳಾದ ಕಮಲ್ ಹಸನ್, ಗೋಹರ್ ಅಜೀಬ್, ಕಪೀಲ್ ಅಖ್ತರ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಮೂವರನ್ನೂ ಪ್ರತ್ಯೇಕವಾಗಿ ಕರೆಸಿದ ಎನ್ ಐಎ ನ್ಯಾಯಾಲಯದ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಅವರು ಲಿಖೀತ ರೂಪದಲ್ಲಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಇದೇ ವೇಳೆ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು, ಮತ್ತೂಬ್ಬ ಆರೋಪಿ ಮೊಹಮ್ಮದ್ ತಾರೀಕ್ ಅಂಜಂ ಕೂಡ ತಪ್ಪೊಪ್ಪಿಗೆ ಹೇಳಿಕೆ ನೀಡಲು ನಿರ್ಧರಿಸಿದ್ದು, ಪ್ರಮಾಣಪತ್ರದ ಮೂಲಕ ನ್ಯಾಯಾಲಯಕ್ಕೆ ಹೇಳಿಕೆ ದಾಖಲಿಸಿದ್ದಾನೆ. ಆದರೆ, ಪ್ರಕರಣ ವೊಂದರಲ್ಲಿ ಹೈದರಾಬಾದ್ ಪೊಲೀಸರು ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ಕರೆದೊಯ್ದಿದ್ದಾರೆ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ಪಡೆಯಬಹುದು ಎಂದರು.
ಆದರೆ, ಇದಕ್ಕೆ ನಿರಾಕರಿಸಿದ ನ್ಯಾಯಾಧೀಶರು, ಆರೋಪಿಯನ್ನು ದೈಹಿಕವಾಗಿ ಹಾಜರು ಪಡಿಸಿದಾಗ ಮಾತ್ರ ಹೇಳಿಕೆ ಪರಿಗಣಿಸುತ್ತೇನೆ. ಹೈದರಾಬಾದ್ ಪೊಲೀಸರ ವಿಚಾರಣೆ ಮುಗಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಎಂದು ಸರ್ಕಾರಿ ಅಭಿಯೋಜಕರಿಗೆ ಸೂಚಿಸಿದರು.
9ರಂದು ಶಿಕ್ಷೆ ತೀರ್ಪು ಪ್ರಕಟ: ಮೂವರು ಆರೋಪಿಗಳ ಹೇಳಿಕೆ ದಾಖಲಿಸಿಕೊಂಡ ಬಳಿಕ ನ್ಯಾಯಾಧೀಶ ಸಿದ್ದಲಿಂಗಪ್ರಭು ಅವರು, ನಿಮ್ಮ ತಪ್ಪೊಪ್ಪಿಗೆ ಹೇಳಿಕೆ ಕುರಿತು ಮತ್ತೂಮ್ಮೆ ಪರಿಶೀಲಿಸಿಕೊಳ್ಳಿ ಎಂದು ಆರೋಪಿಗಳಿಗೆ ಕಾಲವಕಾಶ ನೀಡಿದರು. ಅಲ್ಲದೆ, ಈ ಸಂಬಂಧ ವಾದ-ಪ್ರತಿವಾದ ಆಲಿಸಿದ ಬಳಿಕ ಜುಲೈ 9ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದರು.
ಆರೋಪಿಗಳ ಹೇಳಿಕೆಯಲ್ಲಿ ಏನಿದೆ?: ಸ್ಫೋಟ ಪ್ರಕರಣದಲ್ಲಿ ನಾವು ಭಾಗಿಯಾಗಿಲ್ಲ. ನೇರವಾಗಿ ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಬಾಂಬ್ ಕೂಡ ತಂದು ಇಟ್ಟಿಲ್ಲ. ಒಮ್ಮೆ ಮಾತ್ರ ದೆಹಲಿ ಮತ್ತು ಹೈದರಾಬಾದ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳ್ ಹಾಗೂ ಇತರೆ ಆರೋಪಿಗಳ ಜತೆ ಸ್ಫೋಟಕ್ಕೆ ಒಳಸಂಚು ರೂಪಿಸಿದ್ದೆವು. ಪ್ರಕರಣದಲ್ಲಿ ಇನ್ನುಳಿದ ಆರೋಪಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದೇವೆ ಅಷ್ಟೇ ಎಂದು ಮೂವರೂ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಅಲ್ಲದೆ, ನಮಗೆ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು ಮತ್ತು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿ ದಾಖಲಿಸಿರುವ ಪ್ರಕರಣದಿಂದ ಕೈಬಿಡುವಂತೆ ಮನವಿ ಮಾಡಿದ್ದಾರೆ.
ಯಾಸಿನ್ ಭಟ್ಕಳ್‌ನಿಂದ ಅರ್ಜಿ: ಈ ಮಧ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಉಗ್ರ ಯಾಸಿನ್ ಭಟ್ಕಳ್, ತನ್ನ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿ ದಾಖಲಿಸಿರುವ ಪ್ರಕರಣದಿಂದ ತನ್ನನ್ನು ಹೊರಗಿಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಈ ಹಿಂದೆ ಹೈದರಾಬಾದ್‌ನಲ್ಲಿ ನಡೆದ ಸ್ಫೋಟ ಪ್ರಕರಣವೊಂದರಲ್ಲಿ ಸ್ಥಳೀಯ ನ್ಯಾಯಾಲಯ ಯುಎಪಿಎ ಕಾಯ್ದೆಯಿಂದ ಯಾಸಿನ್ ಭಟ್ಕಳ್ ಹೆಸರನ್ನು ಕೈಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಆತ ಇಲ್ಲಿಯೂ ಅರ್ಜಿ ಸಲ್ಲಿಸಿದ್ದಾನೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಪ್ರಮಾಣಪತ್ರ ಸಲ್ಲಿಕೆ
ಸ್ಫೋಟ ಪ್ರಕರಣದ ಮತ್ತೂಬ್ಬ ಆರೋಪಿ ಮೊಹಮ್ಮದ್ ತಾರೀಕ್ ಅಂಜುಂ ನ್ಯಾಯಾಲಯದಲ್ಲಿ ಪ್ರಮಾಣಪತ್ರದ ಮೂಲಕ ಹೇಳಿಕೆ ದಾಖಲಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇರುವ ಒಟ್ಟು 122 ಸಾಕ್ಷಿಗಳ ಪೈಕಿ ಮೂವರು ಸಾಕ್ಷಿಗಳು ನನ್ನನ್ನು ದೆಹಲಿಯ ಅಪಾರ್ಟ್‌ಮೆಂಟ್‌ನಲ್ಲಿ ನೋಡಿರುವುದಾಗಿ ಹೇಳಿರುವುದನ್ನು ಹೊರತುಪಡಿಸಿ ನನ್ನ ವಿರುದ್ಧ ಬೇರಾವುದೇ ಸಾಕ್ಷಿ ಇಲ್ಲ.
ನನ್ನ ವಿರುದ್ಧ ಯಾವೆಲ್ಲ ಆರೋಪ ಹೊರಿಸಲಾಗಿದೆ ಎಂಬುದೂ ಗೊತ್ತಿಲ್ಲ. ಆರೋಪಿಗಳ ಜತೆ ನೇರವಾಗಿ ಸಂಬಂಧ ಇರುವ ಬಗ್ಗೆಯೂ ಸಾಕ್ಷಿಗಳಿಲ್ಲ. ಘಟನೆ ನಡೆದ 2010ರ ಫೆ.16ರ ಮುನ್ನ ಹಾಗೂ ನಂತರ ಯಾವತ್ತೂ ನಾನು ಬೆಂಗಳೂರಿಗೆ ಬಂದಿಲ್ಲ. ಇತರೆ ಆರೋಪಿಗಳಿಗೆ ಹಣ ಒದಗಿಸಿಲ್ಲ ಹಾಗೂ ಬೇರೆ ಯಾವುದೇ ಸಹಾಯ ಮಾಡಿಲ್ಲ. ಹೀಗಾಗಿ ನನ್ನ ಅರ್ಜಿಯನ್ನು ಪುರಸ್ಕರಿಸಬೇಕು ಎಂದು ಮನವಿ ಮಾಡಿದ್ದಾನೆ. ಆದರೆ, ನ್ಯಾಯಾಧೀಶರು ಇದನ್ನು ತಿರಸ್ಕರಿಸಿದ್ದು, ನ್ಯಾಯಾಲಯದ ಮುಂದೆ ಆರೋಪಿಯನ್ನು ದೈಹಿಕವಾಗಿ ಹಾಜರುಪಡಿಸಲು ತನಿಖಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.