ಪರಿಸರದ ಕತೆ ಹೇಳಿದ ಗೋಡೆಗಳು…!
Team Udayavani, Jun 6, 2019, 3:06 AM IST
ಬೆಂಗಳೂರು: ನಗರದ ಅಭಿವೃದ್ಧಿಯ ಸಂಕೇತ ಆ ಸ್ಥಳ. ಅಲ್ಲಿ ನಿತ್ಯ ನೂರಾರು ಜನ ಹಾದುಹೋಗುತ್ತಾರೆ. ಬುಧವಾರ ಮಾತ್ರ ಆ ಮಾರ್ಗ ಎಂದಿನಂತಿರಲಿಲ್ಲ. ಅಲ್ಲಿನ ಗೋಡೆಗಳು ದಾರಿಹೋಕರಿಗೆ ಪರಿಸರದ ಕತೆಗಳನ್ನು ಹೇಳುತ್ತಿದ್ದವು. ಜನರ ಜವಾಬ್ದಾರಿಯನ್ನು ನೆನಪಿಸುತ್ತಿದ್ದವು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ರಂಗೋಲಿ ಮೆಟ್ರೋದಲ್ಲಿ ಹಮ್ಮಿಕೊಂಡಿದ್ದ ಚಿತ್ರ ಪ್ರದರ್ಶನದ ಮೂಲಕ ನಾಗರಿಕರಲ್ಲಿ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸುವ ಪ್ರಯತ್ನ ನಡೆಯಿತು.
ಮೆಟ್ರೋ ರಂಗೋಲಿಗೆ ಭೇಟಿ ನೀಡುವ ವಿದ್ಯಾರ್ಥಿಗಳು, ಯುವಕ-ಯುವತಿಯರು ಕೆಲಹೊತ್ತು ನಿಂತು ಗೋಡೆ ಮೇಲೆ ಮೂಡಿದ ಚಿತ್ರಗಳನ್ನು ನೋಡುತ್ತಿದ್ದರು. ನಂತರ ಕೆಲವೇ ಕ್ಷಣಗಳಲ್ಲಿ ತಾವೂ ಕುಂಚಗಳನ್ನು ಹಿಡಿದು ಪರಿಸರದ ಬಗ್ಗೆ ತಮ್ಮ ಮನಸಿನಲ್ಲಿ ಮೂಡಿದ ಕಲ್ಪನೆಯನ್ನು ಗೋಡೆಯ ಮೇಲೆ ಗೀಚುತ್ತಿದ್ದರು. ಅವು ನಂತರದಲ್ಲಿ ಅರ್ಥಪೂರ್ಣ ಸಂದೇಶಗಳಾಗಿ ಹೊರಹೊಮ್ಮುತ್ತಿದ್ದವು.
ಈ ಪೈಕಿ ಕೆಲವರು ಚಿತ್ರಗಳ ಮೂಲಕ ಹಾಗೂ ಹಲವರು ನುಡಿಗಟ್ಟುಗಳಿಂದ ಪರಿಸರದ ಬಗ್ಗೆ ಸಂದೇಶ ರವಾನಿಸಿದರು. ಅದರಲ್ಲಿ “ಮರಗಳನ್ನು ಕಡಿದು ನಿನ್ನ ಸಮಾಧಿಯನ್ನು ನೀನೇ ತೋಡುತ್ತಿರುವೆ’, ಹಸಿರೇ ಉಸಿರು, ವಾಯುಮಾಲಿನ್ಯ ತಗ್ಗಿಸಿ-ಸಾವಿನ ಪ್ರಮಾಣ ತಗ್ಗಿಸಿ, “ಪ್ರಕೃತಿ ನಿನ್ನದಲ್ಲ; ನನ್ನದೂ ಅಲ್ಲ.
ನಮ್ಮದು’, ಕಾಡು ಬೆಳೆಸಿ-ನಾಡು ಉಳಿಸಿ ಎನ್ನುವುದು ಸೇರಿದಂತೆ ಮತ್ತಿತರ ಸಂದೇಶಗಳು ಗಮನಸೆಳೆದವು. ಅಡಿಕೆ ತಟ್ಟೆಗಳಲ್ಲಿ, ಬಟ್ಟೆಗಳ ಮೇಲೆಯೂ ಚಿತ್ರಬಿಡಿಸಿರುವುದು ಕಂಡುಬಂತು. ಇನ್ನು ಕೆಲವರು ಪರಿಸರ ಸಂರಕ್ಷಣೆಗೆ ಕೈಜೋಡಿಸೋಣ ಎಂಬ ಸಂದೇಶದ ಕೆಳಗೆ ಬಣ್ಣ ಬಳಿದ ಹಸ್ತವನಿಟ್ಟು ಬೆಂಬಲ ಸೂಚಿಸಿದ್ದರು.
ಈ ಮಧ್ಯೆ ವಿದ್ಯಾರ್ಥಿಗಳ ಸಂಘಟನೆ ಎಸ್‌ಎಫ್ಡಿ ಸೀಡ್ ಬಾಲ್‌ಗಳನ್ನು ತಯಾರಿಸಿ, ವಿತರಣೆ ಮಾಡುತ್ತಿರುವುದು ವಿಶೇಷವಾಗಿತ್ತು. ಇಡೀ ದಿನ ವಿವಿಧ ಕಾಲೇಜುಗಳ ಸುಮಾರು 25 ವಿದ್ಯಾರ್ಥಿಗಳು 500 ಬೀಜದ ಉಂಡೆಗಳನ್ನು ತಯಾರಿಸಿ, ರಂಗೋಲಿ ಮೆಟ್ರೋದಲ್ಲಿ ಹಾದುಹೋಗುವವರಿಗೆಲ್ಲಾ ವಿತರಿಸುತ್ತಿದ್ದರು. ನಂತರ ಅವರಿಗೆ ಸೂಕ್ತ ಜಾಗದಲ್ಲಿ ಬಿಸಾಕಿ ಎಂದು ಮನವಿ ಮಾಡುತ್ತಿರುವುದು ಕಂಡುಬಂತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.