ದಾಖಲೆ ಪ್ರಮಾಣದಲ್ಲಿ “ಎಂ ಸ್ಯಾಂಡ್’ ಬಳಕೆ
Team Udayavani, Jan 6, 2018, 6:25 AM IST
ಬೆಂಗಳೂರು: ರಾಜ್ಯದಲ್ಲಿ ವಾರ್ಷಿಕವಾಗಿ 26ರಿಂದ 30 ದಶಲಕ್ಷ ಟನ್ ಮರಳಿಗೆ ಬೇಡಿಕೆಯಿದ್ದು, ಈ ಪೈಕಿ ಮೂರನೇ ಎರಡರಷ್ಟು ಅಂದರೆ 20 ದಶಲಕ್ಷ ಟನ್‌ನಷ್ಟು ಬೇಡಿಕೆಯನ್ನು “ಮ್ಯಾನುಫ್ಯಾಕ್ಚರ್x ಸ್ಯಾಂಡ್’ (ಎಂ ಸ್ಯಾಂಡ್) ಪೂರೈಸುತ್ತಿದೆ! ವರ್ಷದಿಂದ ವರ್ಷಕ್ಕೆ “ಎಂ ಸ್ಯಾಂಡ್’ ಬಳಕೆ ಹೆಚ್ಚಾಗುತ್ತಿದ್ದು, ನದಿ ಮರಳಿನ ಮೇಲಿನ ಒತ್ತಡ ಸ್ವಲ್ಪ ತಗ್ಗಿದಂತಾಗಿದೆ.
ಖಾಸಗಿ ನಿರ್ಮಾಣ ಕಾಮಗಾರಿ ಮಾತ್ರವಲ್ಲದೇ ಸರ್ಕಾರದ ನಾನಾ ಇಲಾಖೆಗಳು ಕೈಗೊಳ್ಳುವ ಸಿವಿಲ್ ಕಾಮಗಾರಿಗಳಲ್ಲೂ ಶೇ.50ರಷ್ಟು ಕೆಲಸಗಳಿಗೆ “ಎಂ ಸ್ಯಾಂಡ್’ ಬಳಕೆಯಾಗುತ್ತಿದೆ. “ಎಂ ಸ್ಯಾಂಡ್’ ಗುಣಮಟ್ಟದ ಖಾತರಿ ಮೂಲಕ ಬಳಕೆಯನ್ನು ಇನ್ನಷ್ಟು ಉತ್ತೇಜಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಎರಡು ಸಂಚಾರಿ ಪ್ರಯೋಗಾಲಯ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ.
ಜನಸಂಖ್ಯೆ, ನಗರೀಕರಣ ಹೆಚ್ಚಾದಂತೆಲ್ಲಾ ಮೂಲ ಸೌಕರ್ಯ ಕಲ್ಪಿಸುವ ಕಾರ್ಯವೂ ವ್ಯಾಪಕವಾಗಿ ನಡೆದಿದೆ. ದಶಕದಿಂದೀಚೆಗೆ ಅಭಿವೃದ್ಧಿ, ಮೂಲ ಸೌಕರ್ಯ ಕಾಮಗಾರಿಗಳ ಜತೆಗೆ ಕಾಂಕ್ರಿಟ್ ಕಟ್ಟಡಗಳ ನಿರ್ಮಾಣವೂ ಹೆಚ್ಚಾಗಿದ್ದು, ಮರಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಆದರೆ ಬೇಡಿಕೆಗೆ ಪೂರಕವಾಗಿ ನದಿ ಮರಳು ಲಭ್ಯವಿಲ್ಲದ ಕಾರಣ ಬೆಲೆ ಗಗನಮುಖೀಯಾಗಿದೆ.
ಮಿತಿಗಿಂತ ಹೆಚ್ಚು ವ್ಯಾಪ್ತಿಯಲ್ಲಿ ನದಿ ಮರಳು ತೆಗೆಯುವುದು, ಅಕ್ರಮ ಸಾಗಣೆ ತೀವ್ರವಾಗಿರುವ ಜತೆಗೆ ಮರಳಿನ ಅಭಾವ, ದುಬಾರಿ ಬೆಲೆಯಿಂದ ಜನ ತೊಂದರೆ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರ ನದಿ ಮರಳಿಗೆ ಪರ್ಯಾಯವಾಗಿ “ಎಂ ಸ್ಯಾಂಡ್’ ಪರಿಚಯಿಸಿತು.
ನಾಲ್ಕು ವರ್ಷಗಳ ಹಿಂದೆ “ಎಂ ಸ್ಯಾಂಡ್’ ಪರಿಚಯಿಸಿದಾಗ ಆರಂಭದಲ್ಲಿ ಹೆಚ್ಚಿನ ಸ್ಪಂದನೆ ಸಿಗಲಿಲ್ಲ. 2013ರಲ್ಲಿ ಸ್ಥಾಪನೆಯಾದ ಏಳು ಘಟಕಗಳಿಂದ 1.47 ದಶಲಕ್ಷ ಟನ್ “ಎಂ ಸ್ಯಾಂಡ್’ ಉತ್ಪಾದನೆಯಾಗಿತ್ತು. ಕ್ರಮೇಣ ಬೇಡಿಕೆ ಸೃಷ್ಟಿಯಾಗಲಾರಂಭಿಸಿತು. 2014-15ನೇ ಸಾಲಿನಲ್ಲಿ ಘಟಕಗಳ ಸಂಖ್ಯೆ 35ಕ್ಕೆ ಏರಿಕೆಯಾಗಿ ಉತ್ಪಾದನೆಯೂ 5.5 ದಶಲಕ್ಷ ಟನ್‌ಗೆ ಹೆಚ್ಚಾಯಿತು. 2015-16ರಲ್ಲಿ ಘಟಕಗಳ ಸಂಖ್ಯೆ 65ಕ್ಕೆ ಏರಿದರೆ ಉತ್ಪಾದನೆಯೂ 8 ದಶಲಕ್ಷ ಟನ್‌ಗೆ ವಿಸ್ತರಣೆಯಾಯಿತು.
ಎರಡು ವರ್ಷಗಳಿಂದ ಬೇಡಿಕೆ ಹೆಚ್ಚಳ
2016ರ ನಂತರ “ಎಂ ಸ್ಯಾಂಡ್’ಗೆ ಬೇಡಿಕೆ ಹೆಚ್ಚಾಯಿತು. ಒಂದು ವರ್ಷದಲ್ಲಿ 99 ಹೊಸ ಘಟಕಗಳು ಸ್ಥಾಪನೆಯಾಗಿ ಘಟಕಗಳ ಸಂಖ್ಯೆ 164ಕ್ಕೆ ಏರಿಕೆಯಾಯಿತು. ಜತೆಗೆ ಉತ್ಪಾದನೆಯೂ ಬರೋಬ್ಬರಿ 20 ದಶಲಕ್ಷ ಟನ್‌ಗೆ ಹೆಚ್ಚಾಯಿತು. ಇದೇ ಪ್ರಮಾಣದಲ್ಲಿ ಈ ವರ್ಷವೂ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರದ ನಾನಾ ಇಲಾಖೆಗಳು ಸಿವಿಲ್ ಕಾಮಗಾರಿಗಳಲ್ಲಿ ಶೇ.50ಕ್ಕೂ ಹೆಚ್ಚು ಕೆಲಸಗಳಿಗೆ “ಎಂ ಸ್ಯಾಂಡ್’ ಬಳಸುತ್ತಿವೆ. ಇದರಿಂದ ಬೇಡಿಕೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ವಾರ್ಷಿಕ 30 ದಶಲಕ್ಷ ಟನ್ ಮರಳಿಗೆ ಬೇಡಿಕೆಯಿದ್ದು, ಇದರಲ್ಲಿ ಮೂರನೇ ಎರಡಷ್ಟು “ಎಂ ಸ್ಯಾಂಡ್’ ಬಳಕೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲೇ 46 ಘಟಕಗಳಿದ್ದು, ವಾರ್ಷಿಕ 38 ಲಕ್ಷ ಟನ್ “ಎಂ ಸ್ಯಾಂಡ್’ ಉತ್ಪಾದನೆಯಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ 19 ಘಟಕಗಳಿದ್ದು, 39 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ರಾಮನಗರ ಜಿಲ್ಲೆಯಲ್ಲಿ 10 ಘಟಕಗಳಿದ್ದು, 28 ಲಕ್ಷ ಟನ್ ತಯಾರಾಗುತ್ತಿದೆ. ದಾವಣಗೆರೆಯಲ್ಲೂ 3 ಘಟಕಗಳಿದ್ದು, 1.68 ಲಕ್ಷ ಟನ್ ಉತ್ಪತ್ತಿಯಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಉತ್ಪತ್ತಿಯಾಗುವ “ಎಂ ಸ್ಯಾಂಡ್’ನಲ್ಲಿ ಬಹುಪಾಲು ಬೆಂಗಳೂರಿನಲ್ಲೇ ಬಳಕೆಯಾಗುತ್ತಿದೆ ಎಂದು ಹೇಳಿವೆ.
ಎರಡು ಸಂಚಾರಿ ಪ್ರಯೋಗಾಲಯ
ಲೋಕೋಪಯೋಗಿ ಇಲಾಖೆಯ ಪ್ರಯೋಗಾಲಯ ಸೇರಿದಂತೆ ಇತರೆಡೆ “ಎಂ ಸ್ಯಾಂಡ್’ ಗುಣಮಟ್ಟ ಪರಿಶೀಲನೆಗೆ ಅವಕಾಶವಿದೆ. ಜತೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ವಿವಿ ವ್ಯಾಪ್ತಿಯ ಕಾಲೇಜುಗಳ ಪ್ರಯೋಗಾಲದಲ್ಲೂ “ಎಂ ಸ್ಯಾಂಡ್’ ಪರೀಕ್ಷೆಗೆ ಅವಕಾಶವಿದೆ. ಬಳಕೆಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಉದ್ದೇಶದಿಂದ ಎರಡು ಸಂಚಾರಿ ಪ್ರಯೋಗಾಲಯ ಆರಂಭಿಸಲು ಇಲಾಖೆ ಸಿದ್ಧತೆ ನಡೆಸಿದೆ.
“ಎಂ ಸ್ಯಾಂಡ್’ಗೆ ಭಾರಿ ಬೇಡಿಕೆ
2016ರಿಂದ ರಾಜ್ಯದಲ್ಲಿ “ಎಂ ಸ್ಯಾಂಡ್’ಗೆ ಉತ್ತಮ ಬೇಡಿಕೆ ಸೃಷ್ಟಿಯಾಗಿದೆ. ವಾರ್ಷಿಕ 20 ದಶಲಕ್ಷ ಟನ್ “ಎಂ ಸ್ಯಾಂಡ್’ ಬಳಕೆಯಾಗುತ್ತಿದ್ದು, ಇಷ್ಟು ಪ್ರಮಾಣದ ನದಿ ಮರಳಿನ ಬಳಕೆ ಕಡಿಮೆಯಾದಂತಾಗಿದೆ. ದಿನ ಕಳೆದಂತೆ ಬೇಡಿಕೆ ಹೆಚ್ಚಾಗುತ್ತಿದೆ. “ಎಂ ಸ್ಯಾಂಡ್’ ಪ್ರಯೋಜನ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಸದ್ಯದಲ್ಲೇ ಎರಡು ಸಂಚಾರಿ ಪ್ರಯೋಗಾಲಯ ಸೇವೆಗೂ ಚಾಲನೆ ನೀಡಲಾಗುವುದು.
– ಎಂ.ಸಿ.ಕುಮಾರ್, ಉಪ ನಿರ್ದೇಶಕ (ಉಪ ಖನಿಜ), ಗಣಿ ಮತ್ತು ಭೂವಿಜ್ಞಾನ ಇಲಾಖೆ
“ಎಂ ಸ್ಯಾಂಡ್’ ಉತ್ಪಾದನೆ ವಿವರ
ವರ್ಷ ಘಟಕ ಸಂಖ್ಯೆ ಪ್ರಮಾಣ (ದಶಲಕ್ಷ ಟನ್)
2013-14 7 1.47
2014-15 35 5.5
2015-16 65 8
2016-17 164 20
– ಎಂ.ಕೀರ್ತಿ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.