ಪಾಪದ ಕಣಿವೆಯಾದ ಬೆಂಗಳೂರು!
Team Udayavani, May 4, 2018, 11:45 AM IST
ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಕಳೆದ ಐದು ವರ್ಷಗಳಲ್ಲಿ ರಾಜಧಾನಿ ಬೆಂಗಳೂರನ್ನು ಕೈಂ ಸಿಟಿ ಹಾಗೂ ಗಾರ್ಬೇಜ್ ಸಿಟಿಯನ್ನಾಗಿಸಿ ಜನರ ನೆಮ್ಮದಿಯನ್ನೇ ಕೆಡಿಸಿದೆ. ಬೆಂಗಳೂರಿನ ಪುನರ್ ನಿರ್ಮಾಣಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುರುವಾರ ಕೆಂಗೇರಿಯಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಐದು ವರ್ಷದ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಕಥೆ ಕೇಳಿದ ತಕ್ಷಣವೇ ಕೋಪ, ಆಕ್ರೋಶ ಬರುತ್ತದೆ. ಕಾಂಗ್ರೆಸ್ ಸರ್ಕಾರ ಐದು ವರ್ಷದಲ್ಲಿ ಜನರಿಗೆ ಐದು ಗಿಫ್ಟ್ ನೀಡಿದೆ ಎಂದು ಲೇವಡಿ ಮಾಡಿದರು.
ಯುವ ಶಕ್ತಿಯ ಪರಿಶ್ರಮದಿಂದ ಸೃಷ್ಟಿಯಾಗಿದ್ದ ಸಿಲಿಕಾನ್ ಸಿಟಿಯನ್ನು ಕಾಂಗ್ರೆಸ್ ಸರ್ಕಾರ ಪಾಪದ ಕಣಿವೆಯಾಗಿ ಪರಿವರ್ತಿಸಿದೆ. ಸಜ್ಜನ ನಾಗರಿಕರ ಫಲದಿಂದ ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರನ್ನು ಗಾರ್ಬೇಜ್ ಸಿಟಿ ಮಾಡಿದೆ. ಐಟಿ, ಬಿಟಿ ಸಿಟಿಯನ್ನು ಅಪರಾಧಗಳ ರಾಜಧಾನಿಯಾಗಿಸಿದ್ದಾರೆ. ಉದ್ದಿಮೆಶೀಲ ಯುವ ಜನತೆಯಿಂದ ನಿರ್ಮಾಣವಾಗಿದ್ದ ಸ್ಟಾರ್ಟ್‌ಅಪ್ ಹಬ್ ಬೆಂಗಳೂರನ್ನು ಗುಂಡಿಗಳ ಕ್ಲಬ್ ಆಗಿ ಪರಿವರ್ತಿಸಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಗುಂಡಿ, ಟ್ರಾಫಿಕ್ ಸಂಕಷ್ಟ: ಬೆಂಗಳೂರಿನ ರಸ್ತೆಯಲ್ಲಿನ ಗುಂಡಿಗಳು, ಟ್ರಾಫಿಕ್ ಜಾಮ್ ಸಮಸ್ಯೆ ಜನರನ್ನು ಸಂಕಷ್ಟಕ್ಕೆ ಸಲುಕಿಸಿದೆ. ಇದು ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರ ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ. ಬೆಂಗಳೂರಿನ ಜನತೆಗೆ ಉತ್ತಮ ರಸ್ತೆ, ಒಳ್ಳೆಯ ಬದುಕು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ಮೇ 12ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವ ಮೂಲಕ ಇಲ್ಲಿನ ದುರಾಡಳಿತ, ಭ್ರಷ್ಟಾಚಾರ ಕೊನೆಗೊಳಿಸಿ, ನವ ಕರ್ನಾಟಕ ನಿರ್ಮಾಣಕ್ಕೆ ಭವಿಷ್ಯ ಬರೆಯಿರಿ ಎಂದು ಹೇಳಿದರು.
ಅಧಿಕಾರದ ಮದ: ತಮ್ಮ ಭಾಷಣದಲ್ಲಿ ಶಾಸಕ ಹ್ಯಾರಿಸ್ ಪುತ್ರನ ಪ್ರಕರಣ ಪರೋಕ್ಷವಾಗಿ ಪ್ರಸ್ತಾಪಿಸಿದ ಮೋದಿ, ಬೆಂಗಳೂರಿನಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ರಾಜಕೀಯ ನಾಯಕರ ಕುಮ್ಮಕ್ಕು ಇದೆ. ಕಾಂಗ್ರೆಸ್ ಶಾಸಕನ ಮಗ ಬೀದಿಯಲ್ಲಿ ಹೋಗಿದ್ದವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಪರಾಧಿಯ ಪರವಾಗಿಯೇ ನಿಂತಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಬಿಎಂಪಿ ಕಚೇರಿಯೊಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ವಿಕಲಚೇತನ ವ್ಯಕ್ತಿಯೊಬ್ಬ ಸಚಿವರನ್ನು ಭೇಟಿಯಾಗಲು ಹೋಗಿದ್ದಾಗ ಲಿಫ್ಟ್ನಿಂದ ಹೊರ ಹಾಕಿದ್ದರು. ಕಾಂಗ್ರೆಸ್‌ಗೆ ಅಧಿಕಾರದ ಮದ ಎಷ್ಟಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಟೀಕಿಸಿದರು.
ಬೆಳ್ಳಂದೂರು ಕೆರೆ ನೊರೆ ಹಾಗೂ ಬೆಂಕಿ ಪ್ರಕರಣ ಪ್ರಸ್ತಾಪಿಸಿದ ಪ್ರಧಾನಿ, ಬೆಂಗಳೂರು ಕೆರೆಗಳಿಗೆ ಖ್ಯಾತಿಯಾಗಿತ್ತು. ಕಾಂಗ್ರೆಸ್ ಸರ್ಕಾರ ಕೆರೆಗಳ ಮಹಾನಗರವನ್ನು ಬೆಂಕಿ ಹತ್ತುವ ಕೆರೆಗಳ ನಗರವಾಗಿ ಪರಿರ್ತಿಸಿದೆ. ಬೆಳ್ಳಂದೂರು ಕೆರೆಯ ಆ ಬೆಂಕಿ ಹೊಗೆ ಮತ್ತು ಕೆಮಿಕಲ್, ರೂಪದಲ್ಲಿ ಹೊತ್ತಿ ಉರಿಯುತ್ತಿದೆ. ಇದು ಕಾಂಗ್ರೆಸ್ ದುರಾಡಳಿತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ದೂರಿದರು.
ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ: ಕರ್ನಾಟಕ ಸುಸಂಸ್ಕೃತರ ನಾಡು. ಇಲ್ಲಿನ ಜನರು ಸಭ್ಯರಾಗಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದರು. ಕಾಂಗ್ರೆಸ್ ದುರಾಡಳಿತದಿಂದ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲದಾಗಿದೆ. ಹೊಸ ವರ್ಷದ ಆಚರಣೆಗೆ ಬೆಂಗಳೂರಿಗೆ ಬರುವವರು ಹೆದರುತ್ತಿದ್ದಾರೆ.
ಎಲ್ಲರ ಸ್ಥಿತಿಯೂ ಚಿಂತಾಜನಕವಾಗಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತೆಡೆಗೆ ಕೇಂದ್ರ ಸರ್ಕಾರ ಹೊಸ ಕಾಯ್ದೆಯನ್ನು ರೂಪಿಸಿದೆ. ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಲಾಗುತ್ತದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ಬರುತ್ತಿದ್ದಂತೆ ಈ ಕಾಯ್ದೆ ಕರ್ನಾಟಕದಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಲಿದೆ ಎಂದು ಹೇಳಿದರು.
ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಪಿ.ಸಿಮೋಹನ್, ಯಶವಂತಪುರ ಅಭ್ಯರ್ಥಿ ಜಗ್ಗೇಶ್, ದಾಸರಹಳ್ಳಿಯ ಮುನಿರಾಜು, ಹೆಬ್ಟಾಳದ ವೈ.ಎ.ನಾರಾಯಣಸ್ವಾಮಿ, ರಾಜರಾಜೇಶ್ವರಿನಗರ ಕ್ಷೇತ್ರದ ತುಳಸಿಮುನಿರಾಜುಗೌಡ ಸೇರಿದಂತೆ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳು ಉಪಸ್ಥಿತರಿದ್ದರು.
ಅಧಿಕಾರಿ, ಮಂತ್ರಿಗಳ ನಡುವೆ ಭ್ರಷ್ಟಾಚಾರದ ಸ್ಪರ್ಧೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ, ಒಬ್ಬ ಮಂತ್ರಿಯಿಂದ ಇನ್ನೊಬ್ಬ ಮಂತ್ರಿಗೆ ಭ್ರಷ್ಟಾಚಾರದ ಸ್ಪರ್ಧೆ ನಿರ್ಮಾಣವಾಗಿದೆ. ಭ್ರಷ್ಟಾಚಾರದಲ್ಲಿ ದಾಖಲೆ ಮಾಡಲು ಸ್ಪರ್ಧೆಗೆ ನಿಂತಿದ್ದಾರೆ. ಸ್ಟೀಲ್‌ಬ್ರಿಡ್ಜ್ ಯೋಜನೆ ಜಾರಿಗೆ ಮುಂದಾಗಿದ್ದರು.
ಅದು ಕಾರ್ಯಗತವಾಗಿದ್ದರೆ ಹಣದ ಗಂಗೆ ಸಚಿವರ ಮನೆಗಳಿಗೆ ಹರಿಯುತ್ತಿತ್ತು. ಬೆಂಗಳೂರಿನ ನಾಗರಿಕರ ಹಾಗೂ ಬಿಜೆಪಿ ಕಾರ್ಯಕರ್ತರ ಹೋರಾಟದ ಫಲವಾಗಿ ಸ್ಟೀಲ್ ಬ್ರಿಡ್ಜ್ ಸರಕಾರ ಕೈಬಿಟ್ಟಿದ್ದು, ಇದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ. ಕಾಂಗ್ರೆಸ್‌ನವರ ಯೋಜನೆ ಸ್ಟೀಲ್ (steel) ಬ್ರಿಡ್ಜ್ ಅಲ್ಲ, ಬದಲಾಗಿ ಸ್ಟಿಯಿಲ್ (steel) ಬ್ರಿಡ್ಜ್ ಎಂದು ವ್ಯಂಗ್ಯವಾಡಿದರು.
ಕರ್ನಾಟಕ ಉದ್ದಾರವಾಗಬೇಕು, ಅಭಿವೃದ್ಧಿಯಲ್ಲಿ ಮುಂದೆ ಸಾಗಬೇಕಾದರೆ ಭ್ರಷ್ಟಾಚಾರದಲ್ಲಿ ಬಂಗಾರದ ಪದಕ ಹಾಕಿಕೊಂಡಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೂಗೆಯಬೇಕು. ವ್ಯಾಪಾರ ವಹಿವಾಟಿನಲ್ಲಿ ದೇಶ 42 ಸ್ಥಾನಗಳಷ್ಟು ಮುಂದೆ ಬಂದಿದೆ. ಆದರೆ, ಕರ್ನಾಟಕದ ಜನತೆಗೆ ಇದರ ಲಾಭ ಸಿಕ್ಕಿಲ್ಲ. ಇಲ್ಲಿ ವ್ಯಾಪಾರಿಗಳಿಗೆ ಸೂಕ್ತವಾದ ವ್ಯವಸ್ಥೆ ಇಲ್ಲ. ಕೊಲೆ, ಹತ್ಯೆಯಲ್ಲಿ ಕಾಂಗ್ರೆಸ್ ಸರ್ಕಾರ ಚಾಣಕ್ಯವಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.