ತಾಪ ಏರಿದರೆ ತಣ್ಣಗಾಗಲ್ಲ ವೈರಸ್
Team Udayavani, Mar 16, 2020, 3:09 AM IST
ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಸುಲಭವಾಗಿ ಕೊರೊನಾ ಸೋಂಕನ್ನು ಕಟ್ಟಿಹಾಕಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿದೆಯೇ? ಹಾಗೆಂದು ಪ್ರಶ್ನೆ ಈಗ ಉದ್ಭವವಾಗಿದೆ. ತಾಪಮಾನ ಹೆಚ್ಚಾಗುವುದರಿಂದ ಕೊರೊನಾಗೆ ಕಡಿವಾಣ ಬೀಳಲಿದೆ ಎಂದು ವೈದ್ಯರು ಅಂದಾಜಿಸಿದ್ದರು. ಆದರೆ, ಈ ವಾದವನ್ನು ವೈದ್ಯರು ತಳ್ಳಿ ಹಾಕಿದ್ದಾರೆ.
ಬಿಸಿಲು ಇರುವೆಡೆ ಈ ಸೋಂಕು ಬರುವುದಿಲ್ಲ ಎಂದು ಉದಾಸೀನತೆ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಗರಿಷ್ಠ ತಾಪಮಾನ ದಾಖಲಾಗುವ ಜಿಲ್ಲೆಗಳಲ್ಲೇ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಸದ್ಯ ಕಲಬುರಗಿಯಲ್ಲಿ ಗರಿಷ್ಠ 37.5 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಈ ಭಾಗದಲ್ಲೂ ಮುಂಜಾ ಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಈ ಸಂಬಂಧ “ಉದಯವಾಣಿ’ ಜತೆ ಮಾತನಾಡಿದ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯ ನಿರ್ದೇಶಕ ಡಾ. ನಾಗ ರಾಜ ಅವರು, ಕೊರೊನಾ ಸೋಂಕು ಉಳಿದ ಸೋಂಕುಗಳಿಗಿಂತ ಭಿನ್ನವಾಗಿದೆ. ತಾಪಮಾನ ಹೆಚ್ಚಿರುವ ಸಿಂಗಾಪುರ, ಇಟಲಿ, ಇರಾನ್ ದೇಶಗಳಲ್ಲೂ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರು ವುದೇ ಇದಕ್ಕೆ ನಿದರ್ಶನ. ಹೀಗಾಗಿ, ಬಿಸಿಲಿದೆ ಎಂದು ನಿರ್ಲಕ್ಷ್ಯ ಮಾಡುವುದು ಬೇಡ ಎಂದು ಸಲಹೆ ನೀಡಿದರು.
ರಾಜ್ಯದ ಒಳನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ವಾಡಿಕೆಗಿಂತ 0.5 ಡಿಗ್ರಿ ಸೆಲ್ಸಿಯಸ್ ನಿಂದ 1.0 ಡಿಗ್ರಿ ಸೆಲ್ಸಿಯಸ್‌ನವರೆಗೆ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವಾಡಿಕೆಗಿಂತ 0.5 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ಉಷ್ಠಾಂಶ ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ. ಕೊರೊನಾ ಸೋಂಕು ಗಾಳಿಯಲ್ಲಿ ಹರಡುವುದಕ್ಕಿಂತ ಹೆಚ್ಚಾಗಿ ವಸ್ತುಗಳ ಮೂಲಕ ಹರಡುತ್ತಿದೆ ಎನ್ನುತ್ತಾರೆ ವೈದ್ಯರು.
ರಾಜ್ಯದಲ್ಲಿ ತಾಪಮಾನ ಹೆಚ್ಚಳ ಸಾಧ್ಯತೆ: ರಾಜ್ಯದಲ್ಲಿ 2019ರ ಅ.15ರ ನಂತರ ಮಳೆಯಾಗಿಲ್ಲ. ಅಲ್ಲದೆ, ರಾಜ್ಯದಲ್ಲಿ ಈ ಬಾರಿ ತಾಪಮಾನ ಹೆಚ್ಚಾಗಲಿದೆ. ತೇವಾಂಶ ಪ್ರಮಾಣ ಕಡಿಮೆ ಇರುವುದೂ ಇದಕ್ಕೆ ಕಾರಣ ಎಂದು ಹವಾಮಾನ ತಜ್ಞ ಡಾ.ಎಂ.ಬಿ.ರಾಜೇಗೌಡ ಅವರು ತಿಳಿಸಿದ್ದಾರೆ. ಮಾರ್ಚ್ ಕೊನೆಯಲ್ಲಿ ಬೆಂಗಳೂರಿನಲ್ಲಿ 36ರಿಂದ 37 ಡಿಗ್ರಿ ಸೆಲ್ಸಿಯಸ್, ಮೈಸೂರು, ಚಾಮರಾಜನಗರದಲ್ಲಿ 37ರಿಂದ 38 ಡಿಗ್ರಿ ಸೆಲ್ಸಿಯಸ್, ಕಲಬುರಗಿ,
ಬೀದರ್, ಬಿಜಾಪುರ, ಬಾಗಲಕೋಟೆ ಸೇರಿ ಉತ್ತರ ಕರ್ನಾಟಕದ ವಿವಿಧೆಡೆ 42ರಿಂದ 43ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಸದ್ಯ ಭೂಮಿಯ ಮೇಲ್ಪದರದಲ್ಲಿ ತೇವಾಂಶ ಕಡಿಮೆಯಾಗಿದೆ. ಹೀಗಾಗಿ, ವಾತಾವರಣ ತಂಪಾಗುವ ಸಾಧ್ಯತೆ ಕಡಿಮೆ. ಬಿಸಿಲು ಗರಿಷ್ಠ ಪ್ರಮಾಣ ತಲುಪಿದಾಗ ಮಳೆಯಾಗಲಿದೆ. ಒಳನಾಡಿನ ವಾತಾವರಣದಲ್ಲಿ ಆಗುವ ಬದಲಾವಣೆಗೆ ಹೋಲಿಸಿದರೆ, ಕರಾವಳಿಯಲ್ಲಿ ಹೆಚ್ಚು ಬದಲಾವಣೆ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಬಿಎಂಟಿಸಿಯಿಂದ ಕೊರೊನಾ ಕುರಿತು ಕಾರ್ಯಾಗಾರ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಡಿಪೋ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗೆ ಕೊರೊನಾ ವೈರಸ್ ಹರಡುವ ವಿಧಾನ, ರೋಗ ಲಕ್ಷಣಗಳ ಜತೆಗೆ ತಡೆಗಟ್ಟಲು ಪಾಲಿಸಲೇಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳುವಳಿಕೆ ಮೂಡಿಸಲು ಮಾಹಿತಿ ಕಾರ್ಯಾಗಾರ ನಡೆಸುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಕೊರೊನಾ ಹರಡಿದ ಮಹಿಳೆ, ಆಕೆಯ ತಂದೆ ವಿರುದ್ಧ ಕೇಸ್: ಕೊರೊನಾ ವೈರಸ್ ಸೋಂಕನ್ನು ವಿವಿಧೆಡೆ ಹರಡಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಗೂಗಲ್ ಸಂಸ್ಥೆಯ ಸಿಬ್ಬಂದಿಯ ಪತ್ನಿ ಹಾಗೂ ಮಾವನ (ಪತ್ನಿಯ ತಂದೆ) ವಿರುದ್ಧ “1897ರ ಸಾಂಕ್ರಾಮಿಕ ಕಾಯಿಲೆ ಕಾಯ್ದೆ’ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೇ ತಿಂಗಳ ಮೊದಲ ವಾರದಲ್ಲಿ, ಗ್ರೀಕ್ ಪ್ರವಾಸ ಮುಗಿಸಿ ಬಂದಿದ್ದ ಗೂಗಲ್ ಸಂಸ್ಥೆಯ ಸಿಬ್ಬಂದಿ ಹಾಗೂ ಆತನ ಪತ್ನಿಗೆ ಕೊರೊನಾ ಸೋಂಕು ತಗುಲಿತ್ತು.
ತನ್ನ ಸೋಂಕನ್ನು ಯಾರಿಗೂ ತಿಳಿಸಿದ ಆಕೆ, ಆಗ್ರಾದಲ್ಲಿರುವ ತನ್ನ ತವರು ಮನೆಗೆ ತೆರಳಿದ್ದರು. ಅಲ್ಲಿಗೆ ಹೋದ ನಂತರ ಸೋಂಕು ಉಲ್ಬಣಿಸಿದ್ದರಿಂದ ಅಲ್ಲಿ ರೈಲ್ವೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆಕೆಯ ಪರೀಕ್ಷಾ ಫಲಿತಾಂಶ ವೈದ್ಯರ ಕೈ ಸೇರುವ ಮುನ್ನವೇ ಆಸ್ಪತ್ರೆಯಿಂದ ಕಾಲ್ಕಿತ್ತು, ತನ್ನ ತವರು ಮನೆಯಲ್ಲೇ ಬಚ್ಚಿಟ್ಟುಕೊಂಡಿದ್ದರು. ಅಧಿಕಾರಿಗಳು ಮಗಳನ್ನು ಹುಡುಕಿಕೊಂಡು ಮನೆಗೆ ಬಂದಾಗ, ಆಕೆಯ ತಂದೆ ತಮ್ಮ ಮಗಳು ಬೆಂಗಳೂರಿಗೆ ಹೊರಟು ಹೋಗಿದ್ದಾಗಿ ಸುಳ್ಳು ಹೇಳಿದ್ದರು. ಹೀಗಾಗಿ, ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ
ಎಂದು ಮೂಲಗಳು ತಿಳಿಸಿವೆ.
ಈಜುಕೊಳ ಬಳಸದಂತೆ ಸೂಚನೆ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಶಾಲೆಗಳಿಗೆ ಅವಧಿಗೆ ಮುನ್ನವೇ ಬೇಸಿಗೆ ರಜೆ ಘೋಷಿಸಲಾಗಿದೆ. ಹೀಗಾಗಿ, ಮಕ್ಕಳು ಈಜುಕೊಳಗಳತ್ತ ಸುಳಿಯದಂತೆ ಎಚ್ಚರಿಕೆ ವಹಿಸುವಂತೆ ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಅವರು ಸೂಚನೆ ನೀಡಿದ್ದಾರೆ. ನಗರದ ಹಲವು ವಸತಿ ಸಮುತ್ಛಯಗಳಲ್ಲಿ ಈಜುಕೊಳಗಳಿದ್ದು, ಬೇಸಿಗೆಯ ಸಂದರ್ಭದಲ್ಲಿ ಇವನ್ನು ಮಕ್ಕಳು ಬಳಸುವ ಸಾಧ್ಯತೆ ಇದೆ. ಇದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದ್ದು, ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸುವಂತೆ ವಸತಿ ಸಮುತ್ಛಯಗಳಿಗೆ ನಿರ್ದೇಶ ಮಾಡಿದ್ದಾರೆ.
ಉಳಿದ ಸೋಂಕು- ಕೊರೊನಾಗೆ ಇರುವ ವ್ಯತ್ಯಾಸ (ಡಾ.ನಾಗರಾಜ ಪ್ರಕಾರ)
-ಬೇರೆ ಸೋಂಕುಗಳು ವಾತಾವರಣದಲ್ಲಿ ಹೆಚ್ಚು ಇರುತ್ತವೆ. ಹೀಗಾಗಿ, ಬಿಸಿಲು ಹೆಚ್ಚಿರುವಾಗ ಉಲ್ಬಣ ಸಾಧ್ಯತೆ ಕಡಿಮೆ.
-ಕೊರೊನಾ ಸೋಂಕು ಗಾಳಿಯಲ್ಲಿ ಶೇ.20 ಪ್ರಮಾಣ ಮಾತ್ರ. ಶೇ.80 ವೈರಸ್‌ಗಳು ಮನುಷ್ಯರ ದೇಹದ ಮೇಲೆ, ಒಳಗೆ ಹಾಗೂ ಮೊಬೈಲ್, ಟೇಬಲ್ ಸೇರಿ ಸಾಮಾನ್ಯವಾಗಿ ಬಳಸುವ ವಸ್ತುಗಳ ಮೇಲೆ ಇರುತ್ತವೆ.
-ಬೇರೆ ಸೋಂಕುಗಳನ್ನು ಶೀಘ್ರವಾಗಿ ಪತ್ತೆ ಮಾಡಬಹುದು.
-ಕೊರೊನಾ ದೇಹದ ಒಳಗೆ ಹರಡುವುದರಿಂದ ಇದರ ಪತ್ತೆ ಕಷ್ಟ.
-ಕೊರೊನಾ ಸ್ಪರ್ಶದಿಂದ ಹರಡುತ್ತದೆ. ನೆಲ, ವಸ್ತುಗಳ ಮೇಲೆ ಕೊರೊನಾ ವೈರಾಣು ಕುಳಿತುಕೊಳ್ಳುವ ಸಾಧ್ಯತೆ ಹೆಚ್ಚು.
* ಹಿತೇಶ್ ವೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.