ಬೃಹತ್ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಾಲದು
Team Udayavani, Apr 5, 2018, 11:08 AM IST
ಬೆಂಗಳೂರು: ಕನಕಪುರ ರಸ್ತೆಯಿಂದ ಮೈಸೂರು ರಸ್ತೆ, ಮಾಗಡಿ ರಸ್ತೆಯಿಂದ ತುಮಕೂರು ರಸ್ತೆವರೆಗೆ ಹರಡಿರುವ ಹಾಗೂ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವ ಯಶವಂತಪುರ, ಅತಿ ಹೆಚ್ಚು ಮತದಾರರನ್ನು ಹೊಂದಿರುವ ವಿಧಾನಸಭಾ ಕ್ಷೇತ್ರವೂ ಹೌದು. ಹತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು, ಅವುಗಳ ವ್ಯಾಪ್ತಿಗೆ ಬರುವ ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳು, ಐದು ಬಿಬಿಎಂಪಿ ವಾರ್ಡ್‌ಗಳನ್ನು ಹೊಂದಿರುವ ಈ ಕ್ಷೇತ್ರ, ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡನ್ನೂ ಒಳಗೊಂಡಿದ್ದು, ಇಲ್ಲಿ 4.50 ಲಕ್ಷ ಮತದಾರರಿದ್ದಾರೆ.
ನಗರದ ಹೃದಯ ಭಾಗದಲ್ಲಿರುವ ವಿಧಾನಸಭೆ ಕ್ಷೇತ್ರಗಳಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ವ್ಯಾಪ್ತಿ ಹಾಗೂ ಆ ವ್ಯಾಪ್ತಿಗೆ ತಕ್ಕಂತೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಯಶವಂತಪುರ ಕ್ಷೇತ್ರವನ್ನು ಪೂರ್ತಿಯಾಗಿ ಒಂದು ಸುತ್ತು ಹಾಕಲು ಕನಿಷ್ಠ ಎರಡು ಮೂರು ದಿನ ಬೇಕು. ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರು ಹಾಗೂ ಕಂದಾಯ ನಿವೇಶನಗಳಲ್ಲಿ ಕಟ್ಟಡ ಕಟ್ಟಿ ತೊಂದರೆ ಎದುರಿಸುತ್ತಿದ್ದವರಿಗೆ ಹಕ್ಕು ಪತ್ರ ನೀಡಲಾಗಿದೆ.
ಆದರೆ ಕಸ ವಿಲೇವಾರಿ, ಕುಡಿಯುವ ನೀರಿನ ಸಮಸ್ಯೆ ಕ್ಷೇತ್ರದಲ್ಲಿ ಹೆಚ್ಚಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೂ, ಇಲ್ಲಿನ ಜನಸಂಖ್ಯೆಗೆ ಹೋಲಿಸಿದಾಗ ಈ ಘಟಕಗಳು ಏನೇನೂ ಸಾಲದು. ಕ್ಷೇತ್ರದ ಅಭಿವೃದ್ಧಿ ಕೇವಲ ನಗರ ಪ್ರದೇಶಕ್ಕೆ (ಪಾಲಿಕೆ ವ್ಯಾಪ್ತಿ) ಸೀಮಿತವಾಗಿದೆ ಎಂದು ಕ್ಷೇತ್ರಕ್ಕೆ ಸೇರುವ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜನ ಆರೋಪಿಸುತ್ತಾರೆ. ಅದೇ ಬಿಬಿಎಂಪಿ ವ್ಯಾಪ್ತಿಗೆ ಬರುವ
ನಿವಾಸಿಗಳನ್ನು ಕೇಳಿ ದರೆ, ಹಳ್ಳಿಗಳ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಕೊಡಲಾಗಿದೆ ಎನ್ನುತ್ತಾರೆ. ಕ್ಷೇತ್ರ ದೊಡ್ಡ ದಾಗಿರುವುದರಿಂದ ಎಷ್ಟೇ ಅಭಿವೃದ್ಧಿ ಕಾರ್ಯ ಗಳಾದರೂ ಕಾಣಿಸುವುದಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಷ್ಟು ಅನುದಾನ ಬಂದರೂ ಕಡಿ ಮೆಯೇ ಎನ್ನುವುದು ಜನಪ್ರತಿನಿಧಿಗಳ ವಾದ.
ಕಾಂಗ್ರೆಸ್‌ನ ಎಸ್.ಟಿ.ಸೋಮಶೇಖರ್ ಕ್ಷೇತ್ರದ ಶಾಸಕರಾಗಿದ್ದು, ಹತ್ತು ಜಿ.ಪಂ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್, ಎರಡು ಬಿಜೆಪಿ, ಮೂರರಲ್ಲಿ ಜೆಡಿಎಸ್ ಸದಸ್ಯರಿದ್ದಾರೆ. ಪಾಲಿಕೆಯ ಐದು ವಾರ್ಡ್‌ಗಳಲ್ಲಿ ಮೂರು ಕಾಂಗ್ರೆಸ್, 2ರಲ್ಲಿ ಬಿಜೆಪಿ ಸದಸ್ಯರಿದ್ದಾರೆ. ರಾಜಕೀಯವಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳು ಕ್ಷೇತ್ರದಲ್ಲಿ ಹಿಡಿತ ಹೊಂದಿವೆ. ಈ ಬಾರಿ ಕ್ಷೇತ್ರದಿಂದ ಸಂಸದೆ ಶೋಭಾ ಕರಂದ್ಲಾಜೆ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಇವೆ
ಕ್ಷೇತ್ರದ ಬೆಸ್ಟ್ ಏನು?
ಕುಂಬಳಗೋಡು ಗ್ರಾಮದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕೆ ಐಟಿಐ ಸ್ಥಾಪನೆಗೆ ಅನುಮತಿ. ಮಂಚನಬೆಲೆ ಜಲಾಶಯದಿಂದ 32 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಸುವ 29 ಕೋಟಿ ವೆಚ್ಚದ ಯೋಜನೆ. ಅಂಚೆಪಾಳ್ಯ ಕೆರೆ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ. ಮುಖ್ಯಮಂತ್ರಿಯವರ ಬಹುಮಹಡಿ ವಸತಿ ಯೋಜನೆಗೆ 76 ಎಕರೆ ಮೀಸಲು. ಬಡ ಕುಟಂಬಗಳಿಗೆ ಆಶ್ರಯ ನಿರ್ಮಾಣಕ್ಕೆ 122 ಎಕರೆ ಸರ್ಕಾರಿ ಜಮೀನು ಮೀಸಲು, ಸ್ಮಶಾನಕ್ಕೆ 113 ಎಕರೆ ಸರ್ಕಾರಿ ಜಮೀನು ಮೀಸಲು.
ಕ್ಷೇತ್ರದ ದೊಡ್ಡ ಸಮಸ್ಯೆ?
ಮಳೆ ಬಂದಾಗ ನೀರು ಮನೆಗೆ ನುಗ್ಗುವುದು ಕೆಲವೆಡೆ ದೊಡ್ಡ ಸಮಸ್ಯೆ ಸೃಷ್ಟಿಸಿದೆ. ಕೆಂಗೇರಿ ಉಪನಗರ ಹೌಸಿಂಗ್ ಬೋರ್ಡ್ ಲೇ ಔಟ್‌ನ 6ನೇ ಮುಖ್ಯ ರಸ್ತೆಯಲ್ಲಿ ಮನೆಗಳ ಮುಂದೆಲ್ಲಾ ಮನೆಗಳ ಕಾಂಪೌಂಡ್ ಎತ್ತರಕ್ಕೆ ಬಾಕ್ಸ್ ಚರಂಡಿಯ ಜಗುಲಿ ನಿರ್ಮಿಸಲಾಗಿದೆ. ಮಳೆ ನೀರು ಹರಿಯುವ ಮಾರ್ಗ ಬಂದ್ ಮಾಡಿ ಬದಲಿ ಮಾರ್ಗ ಮಾಡಿರುವುದರಿಂದ ಮಳೆ ಬಂದರೆ ನೀರು ನೇರ ಮನೆಗಳಿಗೆ ನುಗ್ಗಿ ಸಮಸ್ಯೆ ಎದುರಾಗುತ್ತದೆ. ಜತೆಗೆ ಬಹುತೇಕ ಕಡೆ ಕಸ ವಿಲೇವಾರಿ ಸಮಸ್ಯೆ ಇದೆ.
ಶಾಸಕರು ಏನಂತಾರೆ?
ನಮ್ಮದು ಅತಿ ದೊಡ್ಡ ಕ್ಷೇತ್ರ. ಎಲ್ಲ ಕಡೆಯಿಂದ ಲಭ್ಯವಾಗಬಹುದಾದ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಗ್ರಾಮೀಣ ಮತ್ತು ನಗರ ಭಾಗ ಎಂಬ ತಾರತಮ್ಯ ತೋರದೆ ಸಮತೋಲಿತ ಅಭಿವೃದ್ಧಿಗೆ ಆದ್ಯತೆ ಕೊಡಲಾಗಿದೆ. ಮೂಲಸೌಕರ್ಯ ಕಲ್ಪಿಸಲು ಒತ್ತು ಕೊಟ್ಟಿದ್ದೇನೆ.
ಎಸ್.ಟಿ. ಸೋಮಶೇಖರ್
ಕ್ಷೇತ್ರ ಮಹಿಮೆ
ಕ್ಷೇತ್ರ ಪುನರ್‌ವಿಂಗಡಣೆಗೆ ಮುನ್ನ ದೇಶದ ಅತಿ ದೊಡ್ಡ ವಿಧಾನಸಭೆ ಕ್ಷೇತ್ರ ಎಂಬ ಖ್ಯಾತಿ ಪಡೆದಿದ್ದ ಉತ್ತರಹಳ್ಳಿ ಯಿಂದ ಬೇರ್ಪಟ್ಟು ಹೊಸದಾಗಿ ರಚನೆಯಾದ ಕ್ಷೇತ್ರಕ್ಕೆ ಯಶವಂತಪುರ ಭಾಗದ ಪ್ರದೇಶಗಳು ಸೇರುವುದಿಲ್ಲವಾದರೂ ಕ್ಷೇತ್ರದ ಹೆಸರು ಮಾತ್ರ ಯಶವಂತಪುರ. ಈ ಕ್ಷೇತ್ರಕ್ಕೆ ಯಶವಂತಪುರ ಪ್ರದೇಶ ಬರುವುದಿಲ್ಲ. ಪ್ರವಾಸಿ ತಾಣವಾಗಿರುವ ದೊಡ್ಡಾಲದ ಮರ, ನಟ ಉಪೇಂದ್ರ ಅವರ ರುಪ್ಪಿಸ್ ರೆಸಾರ್ಟ್ ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಕ್ಷೇತ್ರದಲ್ಲಿ ಅನೇಕ ದೇಗುಲಗಳು, ವಿದ್ಯಾಕೇಂದ್ರಗಳೂ ಇವೆ.
ರಸ್ತೆ, ಕುಡಿವ ನೀರಿನ ವ್ಯವಸ್ಥೆ ಪರವಾಗಿಲ್ಲ. ಆದರೆ, ಕೆಂಗೇರಿ ಸರ್ಕಾರಿ ಆಸ್ಪತ್ರೆಯಲ್ಲಿರುವ ವೈದ್ಯರು ರೋಗಿಗಳಿಗೆ ಸ್ಪಂದಿಸುವುದಿಲ್ಲ. ಬಡವರು ಚಿಕಿತ್ಸೆಗಾಗಿ ಹೋದರೆ ಗಂಟೆಗಟ್ಟಲೆ ಕಾಯಬೇಕಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ.
ಸರ್ವೋತ್ತಮ್
ಯಶವಂತಪುರ ರಸ್ತೆ ಸೇರಿ ಅಗತ್ಯ ಮೂಲಸೌಕರ್ಯಗಳು ಕ್ಷೇತ್ರದಲ್ಲಿವೆ. ಆದರೆ, ರಾತ್ರೋರಾತ್ರಿ ರಸ್ತೆ ಅಗೆಯಲಾಗುತ್ತದೆ. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ನಡುವೆ ಸಮನ್ವಯತೆ ಇಲ್ಲ. ಇದರಿಂದ ಸಾರ್ವಜನಿಕರು ತೊಂದರೆಪಡುವಂತಾಗಿದೆ.
ಲಕ್ಷ್ಮೀ
ಬಿಬಿಎಂಪಿಗೆ ಸೇರುವ ಪ್ರದೇಶಗಳಲ್ಲಿ ಉತ್ತಮ ಅಭಿವೃದ್ಧಿಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಸಮಸ್ಯೆ ಪರಿಹಾರವಾಗಿಲ್ಲ. ಜನರ ಸಮಸ್ಯೆಗಳಿಗೆ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸುತ್ತಾರೆ.
ಕೆ.ಎಂ.ಗಿರೀಶ್
ಚುನಾವಣೆ 6 ತಿಂಗಳು ಇದೆ ಎನ್ನುವಾಗ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ರಸ್ತೆಗಳ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಐದು ವರ್ಷಗಳ ಒಟ್ಟಾರೆ ಅಭಿವೃದ್ಧಿ ಬಗ್ಗೆ ಹೇಳುವುದಾದರೆ ಒಳ್ಳೆಯ ಕೆಲಸ ಆಗಿದೆ.
ವೆಂಕಟೇಶ್
ಕಾಂಗ್ರೆಸ್‌ನ ಪ್ರಜಾಪ್ರಭುತ್ವ ವಿರೋಧಿ ನೀತಿಯಿಂದ ಕಲಾಪಗಳು ಸುಸೂತ್ರವಾಗಿ ನಡೆಯದಂತಾಗಿದೆ. ವಿಚಾರಗಳ ಬಗ್ಗೆ ಚರ್ಚೆಗೆ ಸಿದ್ಧವಿದ್ದರೂ ಕಲಾಪ ನಡೆಸಲು ಬಿಡುತ್ತಿಲ್ಲ.
ಅನಂತಕುಮಾರ್, ಕೇಂದ್ರ ಸಚಿವ
ರಾಜ್ಯ 8165 ಕೋಟಿ ರೂ. ಸಾಲ ಮನ್ನಾ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು 2,41,911 ಕೋಟಿ ಕಾರ್ಪೊರೇಟ್ ಸಾಲವನ್ನು ಕೈ ಬಿಟ್ಟಿವೆ. ಹೀಗಾಗಿ ಪ್ರಧಾನಿಗೆ ರಾಜ್ಯದ ರೈತರ ಸಾಲ ಮನ್ನಾಕ್ಕೆ ಹಣ ಇಲ್ಲ.
ಸಿದ್ದರಾಮಯ್ಯ ಮುಖ್ಯಮಂತ್ರಿ
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.