ನಾಪತ್ತೆಯಾದವರ ಸುಳಿವು ಇನ್ನೂ ಇಲ್ಲ
Team Udayavani, Dec 18, 2018, 12:19 PM IST
ಬೆಂಗಳೂರು: ಕೌಟುಂಬಿಕ ಕಲಹ, ಮಾನಸಿಕ ಖನ್ನತೆ, ಪ್ರೇಮ, ಅನಾರೋಗ್ಯ ಸೇರಿದಂತೆ ಹಲವು ಕಾರಣಗಳಿಂದ ಮನೆಬಿಟ್ಟು ಹೋಗುತ್ತಿರುವವರ ಪೈಕಿ ಹಲವರ ಪತ್ತೆ ನಿಗೂಢವಾಗಿಯೇ ಉಳಿದುಕೊಂಡಿದೆ.
ಕಳೆದ ಮೂರು ವರ್ಷಗಳಲ್ಲಿ ದಾಖಲಾದ ನಾಪತ್ತೆ ಪ್ರಕರಣಗಳ ಪೈಕಿ ಇದುವರೆಗೂ 1500ಕ್ಕೂ ಅಧಿಕ ಮಂದಿ ಪತ್ತೆಯೇ ಆಗಿಲ್ಲ ಎಂಬ ಮಾಹಿತಿ ಬಯಲಾಗಿದೆ. ಹಲವು ಕಾರಣಗಳಿಗಾಗಿ ನಾಪತ್ತೆಯಾಗಿರುವವರ ಪತ್ತೆ ಆಗದಿರುವುದರ ಹಿಂದೆ ಪೊಲೀಸರ ಆರಂಭಿಕ ನಿರ್ಲಕ್ಷ್ಯ ಧೋರಣೆಯೂ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
2016ರಲ್ಲಿ ದಾಖಲಾದ 5,342 ಪೈಕಿ 4,890 ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದು 452 ಪ್ರಕರಣಗಳೂ ಇನ್ನೂ ಬಗೆಹರಿದಿಲ್ಲ. ಜತೆಗೆ 2017ರಲ್ಲಿ ದಾಖಲಾದ 5,277 ಕೇಸ್‌ಗಳ ಪೈಕಿ 522 , ಹಾಗೂ ಈ ವರ್ಷ ನವೆಂಬರ್ ಅಂತ್ಯಕ್ಕೆ ದಾಖಲಾದ 4,781 ಕೇಸ್‌ಗಳಲ್ಲಿ 4,030 ಪತ್ತೆಯಾಗಿದ್ದು 751 ಪ್ರಕರಣಗಳು ತನಿಖಾ ಹಂತದಲ್ಲಿವೆ.
ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ನಾಪತ್ತೆ ಕೇಸ್‌ಗಳಲ್ಲಿ ಶೇ 90ರಷ್ಟು ಯಶಸ್ಸು ಪೊಲೀಸರಿಗೆ ದೊರೆತಿದ್ದರೂ, ಶೇ 100ರಷ್ಟು ಯಶಸ್ಸು ಮರೀಚಿಕೆಯೇ ಆಗಿದೆ. ಹೀಗಾಗಿ 1500ಕ್ಕೂ ಅಧಿಕ ಮಂದಿಯ ಮೂಲ ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ.
ನಾಪತ್ತೆ ಸಂಬಂದ ದೂರು ದಾಖಲಾದ ಕೂಡಲೇ ತನಿಖೆ ಚುರುಕುಗೊಳಿಸದಿರುವುದು, ಸಾಮಾನ್ಯರ ಪ್ರಕರಣಗಳಾದರೆ ವಿಳಂಬ ಧೋರಣೆ ಅನುಸರಿಸುವುದು ಜತೆಗೆ ದೂರುದಾರರು ಕೂಡ ನಾಪತ್ತೆಯಾದವರ ಬಗ್ಗೆ ಸರಿಯಾದ ಮಾಹಿತಿ ನೀಡದಿರುವುದು ನಿಗೂಢ ನಾಪತ್ತೆಯಾದವರ ಪತ್ತೆ ಸವಾಲಾಗಿ ಪರಿಣಮಿಸಿದೆ.
ನಾಪತ್ತೆ ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರು ಆರಂಭದ ಕೆಲ ದಿನಗಳು ಹುಡುಕಾಟ ನಡೆಸಿದರೂ ಪತ್ತೆಯಾಗದಿದ್ದಾಗ, ಪೊಲೀಸ್ ಪ್ರಕಟಣೆ, ಮಾಧ್ಯಮ ಜಾಹೀರಾತು ನೀಡಿ ಪತ್ತೆಗೆ ನೆರವು ಕೋರುತ್ತಾರೆ. ಆ ಬಳಿಕವೂ ಯಾವುದೇ ಸುಳಿವು ಸಿಗದಿದ್ದಾಗ ತನಿಖೆಯಲ್ಲಿ ಆಸಕ್ತಿ ಕಳೆದುಕೊಂಡು ಪತ್ತೆ ಕಾರ್ಯದ ಗೋಜಿಗೇ ಹೋಗುವುದಿಲ್ಲ.
ಮತ್ತೂಂದೆಡೆ, ಪ್ರೀತಿ, ಪ್ರೇಮ, ಅಕ್ರಮ ಸಂಬಂಧ ಹಾಗೂ ವೈಯಕ್ತಿಕ ಕಾರಣಗಳಿಗೆ ನಾಪತ್ತೆಯಾಗಿರಬಹುದು ಎಂದು ನಿರ್ಧಾರಕ್ಕೆ ಪೊಲೀಸರು ಬರುತ್ತಾರೆ. ಜತೆಗೆ, ಕೆಲಸದೊತ್ತಡದಲ್ಲಿ ಕೆಲ ಅಧಿಕಾರಿಗಳು ಇಂತಹ ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ತನಿಖೆ ವೇಳೆ ನಾಪತ್ತೆಯಾದ ವ್ಯಕ್ತಿಗಳು ನೆರೆ ರಾಜ್ಯಗಳಲ್ಲಿ ನೆಲೆಸಿದಾಗ, ಪತ್ತೆ ಸಾಧ್ಯವಾಗುವುದಿಲ್ಲ ಎಂದು ಕೈಚೆಲ್ಲಿ ಕೂರುತ್ತಾರೆ.
ಮತ್ತೂಂದೆಡೆ ನಾಪತ್ತೆಯಾದ ವ್ಯಕ್ತಿ ಯಾವ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ಇದ್ದರೂ, ಮರ್ಯಾದೆಗೆ ಅಂಜಿ ಪೋಷಕರು ಪೊಲೀಸರಿಗೆ ಹೆಚ್ಚಿನ ಮಾಹಿತಿ ನೀಡುವುದೇ ಇಲ್ಲ. ಇದು ಕೂಡ ಪೊಲೀಸರ ನಿರ್ಲಕ್ಷ್ಯಕ್ಕೆ ಪರೋಕ್ಷವಾಗಿ ಕಾರಣವಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಮಾನವ ಕಳ್ಳ ಸಾಗಾಣೆ: ಕೆಲ ನಾಪತ್ತೆ ಪ್ರಕರಣಗಳ ಬೆನ್ನತ್ತಿದಾಗ “ಮಾನವ ಕಳ್ಳ ಸಾಗಣೆ’ ಆಗಿರುವುದು ಕಂಡು ಬರುತ್ತದೆ. ಅಂತಹ ಪ್ರಕರಣಗಳ ತನಿಖೆ ಪತ್ತೆ ಕಾರ್ಯ ಬಹಳ ಕಷ್ಟ. ಸ್ಥಳೀಯರು ಹಾಗೂ ನೆರೆ ರಾಜ್ಯಗಳ ದುಷ್ಕರ್ಮಿಗಳು ಅಪಹರಣ ಮಾಡಿ, ನೆರೆ ರಾಜ್ಯಗಳಿಗೆ ಕರೆದೊಯ್ದು, ಅಕ್ರಮ ಚಟುವಟಿಕೆಗಳಿಗೆ ದೂಡುತ್ತಾರೆ ಎಂದು ಅಧಿಕಾರಿ ವಿವರಿಸಿದರು.
ಹೈಕೋರ್ಟ್ ತಪರಾಕಿ!: ನಾಪತ್ತೆ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸುವ ಕುರಿತು ಹೈಕೋರ್ಟ್ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದೆ. ಜತೆಗೆ, ಹೇಬಿಯಸ್ ಕಾರ್ಪಸ್ ಅರ್ಜಿಯೊಂದರ ವಿಚಾರಣೆ ವೇಳೆ ವಿಭಾಗೀಯ ಪೀಠ, ಕಳೆದ ಮೂರು ವರ್ಷಗಳ ನಾಪತ್ತೆ ಪ್ರಕರಣಗಳು ವಸ್ತುಸ್ಥಿತಿ ವರದಿ ನೀಡುವಂತೆಯೂ ಆದೇಶಿಸಿತ್ತು.
ಈ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು,ನಾಪತ್ತೆ ಪ್ರಕರಣಗಳ ಪತ್ತೆಗೆ ಕ್ರಮವಹಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದ್ದರು. ಅಷ್ಟೇ ಅಲ್ಲದೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ನಗರದ ಎಲ್ಲ ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಎಸಿಪಿಗಳ ಜತೆ ಸಭೆ ನಡೆಸಿ ನಾಪತ್ತೆ ಪ್ರಕರಣಗಳ ತನಿಖಾ ಪ್ರಗತಿ ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದ್ದರು.
ಪತ್ತೆಯಾಗದ ಅಜಿತಾಬ್: ಕಳೆದ ವರ್ಷ ನಾಪತ್ತೆಯಾದ ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆ ನಡೆಸಿದ ವೈಟ್‌ಫೀಲ್ಡ್ ಪೊಲೀಸರಿಗೆ ಆತನ ಬಗ್ಗೆ ಸಣ್ಣ ಸುಳಿವು ಕೂಡ ಸಿಗಲಿಲ್ಲ. ಬಳಿಕ ಪ್ರಕರಣವನ್ನು ಸಿಐಡಿಗೆ ವರ್ಗಾಹಿಸಲಾಗಿತ್ತು. ಆದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದೇ, ಇದೀಗ ಪ್ರಕರಣವನ್ನು ಸಿಬಿಐ ನಡೆಸುತ್ತಿದೆ.
ಪ್ರಕರಣಗಳು
ವರ್ಷ ದಾಖಲು ಪತ್ತೆ
2016- 5,342- 4,890
2017- 5,277-4,755
2018-4,781-4,030(ನ.30ರವರೆಗೆ)
ನಾಪತ್ತೆ ಪ್ರಕರಣಗಳಿಗೆ ಪ್ರಮುಖ ಕಾರಣಗಳು!
-ಕೌಟುಂಬಿಕ ವಿಚಾರಗಳು
-ಸಾಲದ ಸುಳಿ
-ಆರ್ಥಿಕ ಅಸ್ಥಿರತೆ
-ಪ್ರೀತಿ, ಪ್ರೇಮ
-ವಿದ್ಯಾಭ್ಯಾಸದಲ್ಲಿ ಹಿಂದುಳಿದಿರುವುದು
-ಸ್ವತಂತ್ರ ಜೀವನದ ಬಯಕೆ
-ಮಾನಸಿಕ ಖಿನ್ನತೆ
-ಮಾನವ ಕಳ್ಳ ಸಾಗಾಣೆ
-ಅಪಹರಣ
-ಪೊಲೀಸರ ಬಂಧನ ಮತ್ತು ವಿಚಾರಣೆಯಿಂದ ತಪ್ಪಿಸಿಕೊಳ್ಳಲು
ಪತ್ತೆಯಾಗದಿರಲು ಮುಖ್ಯ ಕಾರಣಗಳು
-ಪ್ರಕರಣದ ಆರಂಭದಲ್ಲೇ ಪೊಲೀಸರಿಂದ ನಿರ್ಲಕ್ಷ್ಯ
-ಪೊಲೀಸರಿಗೆ ಸಾರ್ವಜನಿಕರ ಅಸಹಕಾರ
-ನಾಪತ್ತೆಯಾದವರಯ ಹೊರರಾಜ್ಯಗಳಲ್ಲಿಯೇ ವಾಸಿಸುವುದು
ನಾಪತ್ತೆ ಪ್ರಕರಣಗಳ ಕುರಿತು ಆಯಾ ಠಾಣಾಧಿಕಾರಿಗಳೇ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರ ಸೂಚನೆ ಮೇರೆಗೆ ಕಳೆದ ಎರಡು ತಿಂಗಳಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳ ತನಿಖಾ ಪ್ರಗತಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಪತ್ತೆಗೆ ಕೆಲ ಸಲಹೆಗಳನ್ನು ಕೊಡಲಾಗಿದೆ.”
-ಅಲೋಕ್ ಕುಮಾರ್, ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರು.
* ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.