ವಾರ್ಡ್ ಸಮಿತಿ ರಚನೆ ಮಾಹಿತಿಯೇ ಇಲ್ಲ
Team Udayavani, Nov 28, 2018, 12:09 PM IST
ಬೆಂಗಳೂರು: ವಾರ್ಡ್ ಸಮಿತಿ ಯಾಕೆ ಬೇಕು? ಕಳೆದ 20 ವರ್ಷಗಳಲ್ಲಿ ಇಂತಹದ್ದೊಂದು ಸಮಿತಿ ಇರುವ ಬಗ್ಗೆ ನನಗೆ ಮಾಹಿತಿಯೇ ಇಲ್ವಲ್ಲಾ? ನಮ್ಮಲ್ಲಿ ಸಭೆ ನಡೆದಿದ್ದು ಗೊತ್ತೇ ಆಗಿಲ್ಲ? ನಗರದ ಎಸಿಎಂಐ ಸಭಾಂಗಣದಲ್ಲಿ ಮಂಗಳವಾರ ನಡೆದ ದುಂಡುಮೇಜಿನ ಸಭೆಯಲ್ಲಿ ವಾರ್ಡ್ ಸಮಿತಿ ಬಗ್ಗೆ ತೂರಿಬಂದ ಮೂಲಪ್ರಶ್ನೆಗಳಿವು.
ಅಧಿಸೂಚನೆ ಹೊರಡಿಸಿ ಸರಿಸುಮಾರು ಎರಡು ವರ್ಷಗಳಾಗಿವೆ. ಎಲ್ಲ 198 ವಾರ್ಡ್‌ಗಳಿಗೂ ವಾರ್ಡ್ ಸಮಿತಿಗಳು ರಚನೆಗೊಂಡಾಗಿದೆ. ಮುಂದಿನ ತಿಂಗಳು ಮೊದಲ ಬಾರಿಗೆ ವಾರ್ಡ್ ಸಮಿತಿ ಸಭೆ ನಡೆಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಆದರೆ, ಬಹುತೇಕರಿಗೆ ಇಂತಹದ್ದೊಂದು ಸಮಿತಿ ಇದೆ ಹಾಗೂ ಅದರ ಉದ್ದೇಶ ಏನು ಎಂಬ ಮಾಹಿತಿಯೇ ಇಲ್ಲ!
ಸಿಟಿಜನ್ಸ್ ಫಾರ್ ಬೆಂಗಳೂರು ಹಮ್ಮಿಕೊಂಡಿದ್ದ ದುಂಡುಮೇಜಿನ ಸಭೆಯು ಜನರಲ್ಲಿನ ಈ ಗೊಂದಲ ನಿವಾರಣೆಗೆ ಒಂದು ವೇದಿಕೆ ಸೃಷ್ಟಿಸಿತ್ತು. ಅದರಲ್ಲಿ ನೆರೆದವರಿಂದ 60ಕ್ಕೂ ಅಧಿಕ ಪ್ರಶ್ನೆಗಳನ್ನು ಸಂಗ್ರಹಿಸಲಾಯಿತು. ಆ ಪೈಕಿ ಅರ್ಧಕ್ಕರ್ಧ ಪ್ರಶ್ನೆಗಳು ವಾರ್ಡ್ ಸಮಿತಿ ಯಾಕೆ ಬೇಕು ಮತ್ತು ಅದಕ್ಕಿರುವ ಅಧಿಕಾರ ಏನು ಎಂಬುದಾಗಿತ್ತು.
ನೈತಿಕವಾಗಿ ತಪ್ಪು; ನಿಯಮದ ಪ್ರಕಾರ ಇಲ್ಲ!: ಆಗ, “ಒಂದೇ ಕುಟುಂಬದವರು ಅಥವಾ ಮಹಿಳಾ ಸದಸ್ಯರ ಪತಿದೇವರೇ ಸದಸ್ಯರಾಗಿದ್ದಾರೆ ಏನ್ ಮಾಡೋದು’ ಎಂಬ ಪ್ರಶ್ನೆ ಸಭಿಕರಿಂದ ತೂರಿಬಂತು. ಇದಕ್ಕೆ ಪ್ರತಿಕ್ರಿಯಿಸಿದ ಮಂಜುನಾಥ ಪ್ರಸಾದ್, “ಇದು ನೈತಿಕವಾಗಿ ತಪ್ಪು ಎಂದು ನೀವು ಹೇಳಬಹುದು. ಆದರೆ, ನಿಯಮದಲ್ಲಿ ಹೀಗೆ ಒಂದೇ ಕುಟುಂಬದವರು ಇರಬಾರದು ಎಂದು ಎಲ್ಲಿಯೂ ಹೇಳಿಲ್ಲ.
ಹಾಗಾಗಿ, ಈ ಬಗ್ಗೆ ನಾಗರಿಕರು ಮನವಿ ಸಲ್ಲಿಸಿದರೆ, ಅದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಈಗಿರುವ ಕಾಯ್ದೆಯೇ ಅಂತಿಮವಲ್ಲ; ಸರ್ಕಾರ ಮನಸ್ಸು ಮಾಡಿದರೆ, ತಿದ್ದುಪಡಿಗೆ ಅವಕಾಶ ಇದೆ’ ಎಂದು ಸ್ಪಷ್ಟಪಡಿಸಿದರು. ಸಭೆಯಲ್ಲಿ ಸಾಮಾನ್ಯ ಜನ ಕೂಡ ಭಾಗವಹಿಸಬಹುದು. ಆದರೆ, ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ಇರುವುದಿಲ್ಲ. ವಿಶೇಷ ಆಹ್ವಾನಿತರನ್ನಾಗಿ ತಜ್ಞರನ್ನು ಕರೆಸಿ ಸಲಹೆ ಪಡೆಯಲು ಅವಕಾಶ ಇರುತ್ತದೆ ಎಂದರು.
ಈ ವೇಳೆ ವ್ಯಕ್ತಿಯೊಬ್ಬರು, “ಸಮಿತಿ ಸದಸ್ಯರ ಅಧಿಕಾರಾವಧಿ ಐದು ವರ್ಷ ನಿಗದಿಪಡಿಸಲಾಗಿದೆ. ಇದನ್ನು ಒಂದು ವರ್ಷಕ್ಕೆ ಇಳಿಸಬೇಕು. ಆಗ, ಉಳಿದವರಿಗೂ ಅವಕಾಶ ಸಿಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಗ್ಗೆ ಮನವಿ ಸಲ್ಲಿಸುವಂತೆ ಆಯುಕ್ತರು ಹೇಳಿದರು. ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿರ್ದೇಶಕರಿಗೆ ಪತ್ರ: ವಾರ್ಡ್ ಸಮಿತಿ ಸಭೆಯಲ್ಲಿ ಬಿಎಂಟಿಸಿ, ಜಲಮಂಡಳಿ, ಬಿಎಂಆರ್‌ಸಿಯಂತಹ ಸಂಸ್ಥೆಗಳ ಅಧಿಕಾರಿಗಳೂ ಪಾಲ್ಗೊಳ್ಳುವ ಸಂಬಂಧ ಸೂಚನೆ ನೀಡುವಂತೆ ಆಯಾ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.
ಶಶಿಧರ್ ಎಂಬುವರು ನೀಡಿದ ಸಲಹೆಯನ್ನು ಪರಿಗಣಿಸಿದ ಆಯುಕ್ತರು, “ವಾರ್ಡ್ ಸಮಿತಿ ಸಭೆಯಲ್ಲಿನ ನಿರ್ಣಯಗಳು ಇತರೆ ಸ್ಥಳೀಯ ಸಂಸ್ಥೆಗಳಿಗೂ ಸಂಬಂಧಿಸಿದ್ದಾಗಿರಬಹುದು. ಹಾಗಾಗಿ, ನಿರ್ಣಯಗಳ ಅನುಷ್ಠಾನಕ್ಕೆ ಆ ಸಂಸ್ಥೆಗಳ ಅಧಿಕಾರಿಗಳ ಸಹಭಾಗಿತ್ವ ಕೂಡ ಮುಖ್ಯ. ಆ ಹಿನ್ನೆಲೆಯಲ್ಲಿ ಬಿಎಂಟಿಸಿ, ಬಿಎಂಆರ್‌ಸಿ, ಜಲಮಂಡಳಿ, ಬೆಸ್ಕಾಂ ಮತ್ತಿತರ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಸಂಬಂಧ ಪತ್ರ ಬರೆಯಲಾಗುವುದು’ ಎಂದರು.
ಸಮಿತಿ ಅಧಿಸೂಚನೆ: “2016ರಲ್ಲಿ ವಾರ್ಡ್ ಸಮಿತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಡಿಸೆಂಬರ್ ಮೊದಲ ಶನಿವಾರ ಎಲ್ಲ 198 ವಾರ್ಡ್‌ಗಳಲ್ಲಿ ಸಮಿತಿ ಸಭೆ ನಡೆಯಲಿದೆ. ಇದರಲ್ಲಿ ಆಯಾ ವಾರ್ಡ್ ಸದಸ್ಯರೇ ಅಧ್ಯಕ್ಷರಾಗಿರುತ್ತಾರೆ. ಜತೆಗೆ ಮೂವರು ಮಹಿಳೆಯರು, ಇಬ್ಬರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು, ಇಬ್ಬರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರು, ಮೂವರು ನಾಮನಿರ್ದೇಶಿತರು ಇರುತ್ತಾರೆ. ಇದೆಲ್ಲವೂ ಬಿಬಿಎಂಪಿ ವೆಬ್‌ಸೈಟ್‌ನಲ್ಲಿದೆ. ಆದರೆ, ಬಹುತೇಕರು ನೋಡುವುದೇ ಇಲ್ಲ’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್, ಸೂಚ್ಯವಾಗಿ ಹೇಳಿದರು.
ಶ್ವೇತಪತ್ರ ಹೊರಡಿಸಲಿ: ಸಭೆ ನಂತರ ಕೈಗೊಂಡ ನಿರ್ಣಯಗಳು, ಅನುಷ್ಠಾನ, ಖರ್ಚು-ವೆಚ್ಚ ಸೇರಿದಂತೆ ಪ್ರತಿ ತಿಂಗಳು ಸಮಿತಿಯು ವಾರ್ಡ್ ಕಚೇರಿಯ ಸೂಚನಾ ಫಲಕದಲ್ಲಿ ಶ್ವೇತಪತ್ರ ಹೊರಡಿಸಬೇಕು ಎಂದು ಗೀತಾ ಮೆನನ್ ಎಂಬುವರು ಒತ್ತಾಯಿಸಿದರು. “ವೆಬ್‌ಸೈಟ್‌ಗಳಲ್ಲಿ ನಡಾವಳಿ ಮತ್ತು ಪ್ರಗತಿ ಕುರಿತ ಮಾಹಿತಿ ಆಯಾ ತಿಂಗಳು ಅಪ್‌ಲೋಡ್ ಮಾಡಲಾಗುವುದು’ ಎಂದು ಆಯುಕ್ತರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.