ರಂಗಭೂಮಿಯಲ್ಲೀಗ ಮಾಸ್ಟರ್ ಮಾತಿಲ್ಲ
Team Udayavani, May 3, 2019, 10:23 AM IST
ಬೆಂಗಳೂರು: ಒಂದೆಡೆ ವಿಡಂಬಣಾತ್ಮಕ ರಂಗ ಪ್ರಯೋಗಗಳ ಮೂಲಕ ಹರಳು ಹುರಿದಂತೆ ಮಾತನಾಡಿ ಸಮಾಜದ ಹುಳುಕುಗಳನ್ನು ಎತ್ತಿ ತೋರುತ್ತಿದ್ದ ಮಹಾನ್ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ತಮ್ಮ ಪ್ರೀತಿಯ ‘ರಂಗಭೂಮಿ’ ನಿವಾಸದಲ್ಲಿ ಮೌನಿಯಾಗಿ ಚಿರನಿದ್ರೆ ಜಾರಿದ್ದರೆ ಮತ್ತೂಂದೆಡೆ ಗಣ್ಯರು ಆ ಮಹಾನ್ ನಟನ ವ್ಯಕ್ತಿತ್ವದ ನುಡಿನಮನ ಸಾಗಿತ್ತು.
-ಇದು, ಗುರುವಾರ ಮಾಸ್ಟರ್ ಹಿರಣ್ಣಯ್ಯ ಅವರ ಮನೆಯ ಮುಂದೆ ಕಂಡುಬಂದ ದೃಶ್ಯಗಳು.
ಹಿರಣ್ಣಯ್ಯ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಕಷ್ಟು ಮಂದಿ ಬನಶಂಕರಿಯಲ್ಲಿರುವ ಅವರ ನಿವಾಸಕ್ಕೆ ಧಾವಿಸಿದರು. ಆಸ್ಪತ್ರೆಯಿಂದ ಬಂದ ಪಾರ್ಥಿವ ಶರೀರವನ್ನು 11.30ರ ವೇಳೆ ಮನೆಯಲ್ಲಿ ಕೆಲ ವಿಧಿ ವಿಧಾನಗಳನ್ನು ನೆರವೇರಿಸಿ ಅಂತಿಮ ದರ್ಶನಕ್ಕೆ ಇಡಲಾಯಿತು. ಅಂತಿಮ ನಮನ ಸಲ್ಲಿಸಲು ರಂಗಭೂರ್ಮಿ ಕಲಾವಿದರು, ಸಿನಿಮಾ ನಟರು, ರಾಜಕೀಯ ಮುಖಂಡರ ದಂಡೇ ಹರಿದುಬಂತು.
ಅವರ ಗರಡಿಯಲ್ಲಿ ಪಳಗಿದ ಯುವ ಕಲಾವಿದರು ತಮ್ಮ ಗುರುವಿಗೆ ಅಂತಿಮ ನಮನ ಸಲ್ಲಿಸಿ ಕಂಬನಿ ಮಿಡಿದರು. ಅವರೊಟ್ಟಿಗೆ ಕಳೆದ ದಿನಗಳನ್ನು ಅವರು ಕಲಿಸಿದ ಪಾಠಗಳನ್ನು ಮೆಲುಕು ಹಾಕಿದರು. ಪ್ರಮುಖವಾಗಿ ಅವರ ನೇರ ನುಡಿ, ಆಯಾ ಕಾಲದ ರಾಜಕೀಯ ಬೆಳವಣಿಗೆಗಳ ಕುರಿತು ವಿಡಂಬನಾತ್ಮಕ ಮಾತುಗಳು, ಸಮಾಜಕ್ಕೆ ನೀಡುತ್ತಿದ್ದ ಸಂದೇಶಗಳು, ಲಂಚಾವತಾರ ನಾಟಕದ ಸಂಭಾಷಣೆಗಳು, ರಾಜಕಾರಣಿಗಳ ಕುರಿತ ಮಾಡಿದ್ದ ಕಟು ಟೀಕೆಗಳನ್ನು ನೆನೆದರು.
ಅವರ ಅಭಿನಯಿಸಿದ ನಡುಬೀದಿ ನಾರಾಯಣದ ‘ತೀರ್ಥರೂಪು’, ಭ್ರಷ್ಟಾಚಾರದ ದಫೇದಾರ್ ‘ಮುರಾರಿ’, ಸದಾರಮೆಯ ‘ಕಳ್ಳ’ ಆದಿಮೂರ್ತಿ, ಕಪಿಮುಷ್ಠಿಯ ‘ಜಾರ್ಜ್’, ಮಕ್ಮಲ್ ಟೋಪಿಯ ‘ನಾಣಿ’ ಪಾತ್ರಗಳ ಕುರಿತು ಅಭಿಮಾನಿಯೊಬ್ಬರು ನೆನೆದು ಕಣ್ಣಿರು ಹಾಕಿದರು.
ರಾಜಕಾರಣಿಗಳ ಮೆಚ್ಚುಗೆ ನುಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್, ಆರ್.ಅಶೋಕ್, ವಾಟಾಳ್ ನಾಗರಾಜ್ ಸೇರಿದಂತೆ ಸಾಕಷ್ಟು ರಾಜಕಾರಣಿಗಳು ಹಿರಣ್ಣಯ್ಯ ಅವರಿಗೆ ಅಂತಿನ ನಮನ ಸಲ್ಲಿಸಿದರು. ನಾಟಕಗಳ ಮೂಲಕ ನಮ್ಮ ತಪ್ಪು ಎತ್ತಿ ತೋರಿಸುತ್ತಿದ್ದ ಮಾರ್ಗದರ್ಶಕರು ಎಂದು ಬಣ್ಣಿಸಿದರು.
ಸರಳವಾಗಿ ನಡೆದ ಅಂತಿಮ ನಮನ: ಮಾಸ್ಟರ್ ಹಿರಣ್ಣಯ್ಯ ಅವರು ದೊಡ್ಡ ರಂಗಕರ್ಮಿಯಾಗಿದ್ದರು ಕೂಡಾ ಎಂದಿಗೂ ಸರಳತೆಯ ಅಂಶವನ್ನೇ ತಮ್ಮ ಭಾಷಣಗಳಲ್ಲಿ ನಮೂದಿಸುತ್ತಿದ್ದರು. ಅಂತೆಯೇ ಸರಳ ಜೀವನ ಸಾಗಿಸುತ್ತಿದ್ದವರು. ಅವರು ಆರೋಗ್ಯದಿಂದಿರುವಷ್ಟು ಕಾಲ ಸಾಮಾನ್ಯರಂತೆ ಬಿಎಂಟಿಸಿ ಬಸ್‌ನಲ್ಲಿಯೇ ಓಡಾಡುತ್ತಿದ್ದರು. ಇನ್ನು ಅದೇ ರೀತಿ ಅವರ ಅಂತಿಮ ದರ್ಶನ, ಯಾತ್ರೆ, ವಿಧಿ ವಿಧಾನಗಳು ದೊಡ್ಡಮಟ್ಟದಲ್ಲಿ ವಿಜೃಂಭಣೆಯಿಂದ ನಡೆಯಲಿಲ್ಲ. ತೀರ ಸಾಮಾನ್ಯರಂತೆಯೇ ಅವರು ಲೋಕದ ಪಯಣ ಮುಗಿಸಿದರು. ಬೆಳಗ್ಗೆ 11ಗಂಟೆ ಸುಮಾರಿಗೆ ಮನೆಗೆ ಬಂದ ಪಾರ್ಥಿವ ಶರೀರವನ್ನು ನಾಲ್ಕು ತಾಸು ಮನೆಯಲ್ಲಿಯೇ ಸಾರ್ವಜನಿಕರ ದರ್ಶನಕ್ಕಿಡಲಾಗಿತ್ತು. ಆನಂತರ ಆ್ಯಂಬುಲೆನ್ಸ್‌ನಲ್ಲಿ ಬನಶಂಕರಿ ವಿದ್ಯುತ್ ಚಿತಾಗಾರಕ್ಕೆ ತೆಗೆದುಕೊಂಡು ಹೋಗಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.
ಬಹು ಅಂಗಾಂಗ ವೈಫಲ್ಯ: ಹಿರಣ್ಯಯ್ಯ ಅವರಿಗೆ ನೀಡಿದ್ದ ಚಿಕಿತ್ಸೆ ಕುರಿತಂತೆ ಮಾಹಿತಿ ನೀಡಿದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಹಿರಿಯ ಹೆಪಟಾಲಜಿಸ್ಟ್ ಡಾ. ಸಂದೀಪ್ ಸತ್ಸಂಗಿ ಅವರು, ಹಿರಣ್ಣಯ್ಯ ಅವರಿಗೆ ಯಕೃತ್ ಸಿರಾಸಿಸ್ ಕಾಯಿಲೆ ಉಂಟಾಗಿತ್ತು. ಬಳಿಕ ಅದು ಯಕೃತ್ ಕ್ಯಾನ್ಸರ್ ಆಗಿ ಉಲ್ಬಣಗೊಂಡಿದ್ದು, ಇದಕ್ಕಾಗಿ ‘ಟೇಸ್’ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರು ಯಕೃತ್ ಒಳ ಭಾಗದಲ್ಲಿ ಕಿಮೋಥೆರಪಿ ಚಿಕಿತ್ಸೆ ನೀಡಲಾಗುತ್ತು. ವಯೋಸಹಜ ಬೆಳವಣಿಗೆಯಿಂದ ಮತ್ತೂಂದು ಯಕೃತ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಪರಿಣಾಮ ಕಳೆದ ಮೂರು ತಿಂಗಳಿಂದ ಒಂದೊಂದಾಗಿ ಆರೋಗ್ಯ ಸಮಸ್ಯೆ ಆರಂಭವಾದವು. ಮೊದಲು ಜಾಂಡೀಸ್, ಕಾಲುಗಳಲ್ಲಿ ಊತ, ಹೊಟ್ಟೆಯಲ್ಲಿ ನೀರು ತುಂಬಿಕೊಂಡಿತು. ಒಟ್ಟಾರೆ ಕಳೆದ ಮೂರು ತಿಂಗಳಿಂದ ಬಹು ಅಂಗಾಂಗ ವೈಫಲ್ಯದ ಸಮಸ್ಯೆಗಳೊಂದಿಗೆ ಸೆಣಸಾಟ ನಡೆಸಿದ್ದರು ಎಂದು ತಿಳಿಸಿದರು.
ಕಳೆದ 10 ದಿನದಲ್ಲಿ ಎಡಗಾಲಿನಲ್ಲಿ ಚರ್ಮ ಸಂಬಂಧಿ ಸೋಂಕು ಕಾಣಿಸಿಕೊಂಡಿತ್ತು. ರೋಗ ನಿರೋಧಕ ಶಕ್ತಿ ಕಡಿಮೆ ಆಗಿ ಉಂಟಾಗಿದ್ದ ಈ ಸೋಂಕು ರಕ್ತಕ್ಕೂ ವ್ಯಾಪಿಸಿತ್ತು. ಇನ್ನು ಗುರುವಾರ ಬೆಳಗ್ಗೆ ಮತ್ತೂಂದು ಯಕೃತ್ ಕಾರ್ಯ ನಿರ್ವಹಣೆ ಸ್ಥಗಿತಗೊಳಿಸಿತ್ತು. ಬೆಳಗ್ಗೆ ಯಕೃತ್, ಹೃದಯದಿಂದ ರಕ್ತ ಹರಿಯುವಿಕೆ ಕಡಿತವಾಗಿ ಆಗಿ ಮಾಸ್ಟರ್ ಹಿರಣ್ಣಯ್ಯ ಮೃತಪಟ್ಟರು ಎಂದು ಡಾ. ಸಂದೀಪ್ ಸತ್ಸಂಗಿ ಅವರು ಮಾಹಿತಿ ನೀಡಿದರು.
ಮಾಧ್ವ ಮಹಾಸಭಾ ಸಂತಾಪ: ಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರು ನಾಟಕದ ಮೂಲಕ ರಾಜ್ಯದಲ್ಲೇ ಪ್ರಸಿದ್ಧಿ ಗಳಿಸಿದ್ದಾರೆ. ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಅವರು, ಬ್ರಾಹ್ಮಣರ ಸಂಘಟನೆಯ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಖೀಲ ಕರ್ನಾಟಕ ಮಾಧ್ವ ಮಹಾಸಭಾ ಸಂತಾಪ ಸೂಚಿಸಿದೆ.
ಚಿತ್ರರಂಗ, ಅಭಿಮಾನಿ ಬಳಗ ಬಡವಾಗಿದೆ
ಬೆಂಗಳೂರು: ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ನಾನಾ ಕ್ಷೇತ್ರದ ಗಣ್ಯರು, ಬಿಜೆಪಿ ಮುಖಂಡರು ಕಂಬನಿ ಮಿಡಿದಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯ ಅವರ ನಿಧನ ಸುದ್ದಿ ತಿಳಿದು ತೀವ್ರ ದುಃಖವಾಗಿದ್ದು, ಸಂತಾಪ ವ್ಯಕ್ತಪಡಿಸುತ್ತೇನೆ. ‘ಲಂಚಾವತಾರ’ ನಾಟಕದ ಮೂಲಕ ಮನೆ ಮಾತಾಗಿದ್ದ ಹಿರಿಯ ಕಲಾವಿದರು ನಮ್ಮನ್ನು ಅಗಲಿದ್ದು, ಚಿತ್ರರಂಗದಲ್ಲಿ ಮರೆಯಲಾಗದ ಛಾಪು ಬಿಟ್ಟು ಹೋಗಿದ್ದಾರೆ. ಅವರನ್ನು ಕಳೆದುಕೊಂಡ ಚಿತ್ರರಂಗ ಹಾಗೂ ಅಭಿಮಾನಿಗಳ ಬಳಗ ಬಡವಾಗಿದೆ.
ಮಾಸ್ಟರ್ ಹಿರಣ್ಣಯ್ಯ ಅವರಿಗೆ ಹೃತ್ಫೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರ ಕುಟುಂಬ, ಬಂಧುಮಿತ್ರರು ಹಾಗೂ ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಸಂತಾಪ ಸಲ್ಲಿಸಿದ್ದಾರೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಚಿತ್ರರಂಗದ ಹಿರಿಯ ನಟ, ಅಭಿನಯ ಚತುರ, ರಂಗಭೂಮಿ ಹಿರಿಯ ಹಾಸ್ಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಹಾಸ್ಯದಲ್ಲಿ ಅಭಿಮಾನಿಗಳ ಮನರಂಜಿಸಿ ಮನಸ್ಸು ಗೆದ್ದವರು. ಇವರನ್ನು ಕಳೆದುಕೊಂಡು ಇಡೀ ಚಿತ್ರರಂಗ ಹಾಗೂ ಅಭಿಮಾನಿಗಳ ಬಳಗ ಬಡವಾಗಿದೆ. ಅವರ ಕುಟುಂಬ, ಬಂಧುಮಿತ್ರರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ‘ಲಂಚಾವತಾರ’ ನಾಟಕದ ಮೂಲಕ ರಾಜ್ಯದ ಮನೆ ಮಾತಾಗಿದ್ದ ರಂಗಕರ್ಮಿ, ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯ ಅವರು ಅನಾರೋಗ್ಯದ ಕಾರಣ ನಮ್ಮೆಲ್ಲರನ್ನು ಅಗಲಿದ್ದು, ನೋವಿನ ಸಂಗತಿ. ಇವರ ನಿಧನದಿಂದ ರಂಗಭೂಮಿಯ ಅಪೂರ್ವ ರತ್ನವೊಂದು ಕಳಚಿದೆ. ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ’ ಎಂದು ಟ್ವೀಟ್‌ನಲ್ಲಿ ಸಂತಾಪ ಹೇಳಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ, ‘ನಟ ರತ್ನಾಕರ, ಕಲ್ಚರ್ಡ್ ಕಮೆಡಿಯನ್ ಮಾಸ್ಟರ್ ಹಿರಣ್ಣಯ್ಯ ಅವರು ಇನ್ನಿಲ್ಲ. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ’ ಎಂದು ಟ್ವಿಟ್ಟರ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕನ್ನಡ ರಂಗಭೂಮಿ, ಚಿತ್ರರಂಗಕ್ಕೆ ಹೊಸ ಆಯಾಮ ತುಂಬಿದ್ದರು. ರಾಜಕೀಯ ನಾಯಕರಿಗೆ ನೇರವಾಗಿ ತಿವಿಯುತ್ತಿದ್ದರು. ಇನ್ನೊಬ್ಬ ಮಾಸ್ಟರ್ ಹಿರಣ್ಣಯ್ಯ ಹುಟ್ಟಿ ಬರಲು ಸಾಧ್ಯವಿಲ್ಲ. ಪದ್ಮನಾಭ ಕ್ಷೇತ್ರದಲ್ಲಿ ನಿಲ್ಲುವಂತೆ ಮೊದಲು ಅವರೇ ಹೇಳಿದ್ದರು
● ಆರ್. ಅಶೋಕ್, ಬಿಜೆಪಿ ಮುಖಂಡ
ನಾನು ಅವರ ಒಂದು ಚಿತ್ರದಲ್ಲಿ ನಟಿಸಿದ್ದೆ. ಅಂಬರೀಶ್ ಅವರು ಹಿರಣ್ಣಯ್ಯ ಅವರೊಂದಿಗೆ ಮೂರು ಚಿತ್ರಗಳಲ್ಲಿ ನಟಿಸಿದ್ದರು. ಅಂಬರೀಶ್ ಅವರಿಗೆ ಹಿರಣ್ಣಯ್ಯ ಅವರ ಮೇಲೆ
ಅಪಾರ ಗೌರವವಿತ್ತು.
● ಸುಮಲತಾ ಅಂಬರೀಶ್
ನನ್ನನ್ನೂ ಸೇರಿದಂತೆ ಹಲವು ರಾಜಕೀಯ ನಾಯಕರನ್ನು ಟೀಕಿಸಿದ್ದರು. ಅದರಿಂದ ನಮ್ಮ ತಪ್ಪುಗಳನ್ನು ತಿದ್ದುಕೊಂಡಿದ್ದೇವೆ. ಸಮಾಜದಲ್ಲಿನ ತಪ್ಪುಗಳ ಬಗ್ಗೆ ಅವರ ನಾಟಕದಲ್ಲಿ ಉಲ್ಲೇಖೀಸುತ್ತಿದ್ದರು. ಇಡೀ ನಾಟಕ ಅವರ ನಟನೆ ಮೇಲೇ ನಿಂತಿರುತ್ತಿತ್ತು.
● ಡಿ.ಕೆ. ಶಿವಕುಮಾರ್, ಸಚಿವ
ಬದುಕಿಗೆ ಸಂಬಂಧಿಸಿದ ವಿಷಯಗಳನ್ನು ಹಾಸ್ಯಸ್ಪದವಾಗಿ ನಾಟಕಗಳ ಮೂಲಕ ತೋರಿಸುತ್ತಿದ್ದರು. ತಂದೆಗೆ ತೀರ ಆತ್ಮೀಯರಾಗಿದ್ದರು. ಸಣ್ಣವನಾಗಿದ್ದಾಗಲೇ ಅವರ ಲಂಚಾವತಾರ ನಾಟಕ ನೋಡಿದ್ದೆ
● ದಿನೇಶ್ ಗುಂಡುರಾವ್, ಕೆಪಿಸಿಸಿ ಅಧ್ಯಕ್ಷ
ಮಾಸ್ಟರ್ ಹಿರಣ್ಣಯ್ಯ ಅವರು ಯಾವಾಗಲೂ ಆಳುವ ಪಕ್ಷಕ್ಕೆ, ವಿರೋಧ ಪಕ್ಷದ ನಾಯಕನಾಗಿಯೇ ಇರುತ್ತಿದ್ದರು. ತಮ್ಮ ವಿಡಂಬನಾತ್ಮಕ ಮಾತುಗಳ ಮೂಲಕ ಜನರನ್ನು ಜಾಗೃತಗೊಳಿಸುತ್ತಿದ್ದರು.
● ಬಸವಲಿಂಗಯ್ಯ, ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕ
ಮಾಸ್ಟರ್ ಹಿರಣ್ಣಯ್ಯ ಅವರು ಆಳುವ ಸರ್ಕಾರಕ್ಕೆ ರಂಗಭೂಮಿ ಪ್ರತಿಭಟನೆಯ ಸಂಕೇತವಾಗಿದ್ದರು. ತಮ್ಮ ವಿಭಿನ್ನ ಶೈಲಿಯ ಮಾತಿನ ಮೂಲಕ ರಾಜಕಾರಣಿಗಳಿಗೆ ಚಾಟಿ ಬೀಸುತ್ತಿದ್ದರು.
● ಶ್ರೀನಿವಾಸ್ ಜಿ.ಕಪ್ಪಣ್ಣ, ಹಿರಿಯ ರಂಗಕರ್ಮಿ
ರಂಗಭೂಮಿ ಸಮಾಜಕ್ಕೆ ಕನ್ನಡಿ ಹಿಡಿಯುವಂತಹ ಕೆಲಸ ಮಾಡಿದರೆ, ಹಿರಣ್ಣಯ್ಯ ಅವರು ಸಮಾಜದ ಮನಸ್ಸಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದರು.
● ಲೋಕೇಶ್, ನಾಟಕ ಅಕಾಡೆಮಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.