ಕಾಯಂ ಉಪನ್ಯಾಸಕರಿಲ್ಲ, ಅತಿಥಿಗಳೇ ಎಲ್ಲ
Team Udayavani, Sep 9, 2018, 12:08 PM IST
ಬೆಂಗಳೂರು: ಪ್ರಸಕ್ತ ಸಾಲಿನಿಂದ ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿವಿಧ ಕೋರ್ಸ್‌ಗಳನ್ನು ಆರಂಭಿಸಿದ್ದರೂ, ಪೂರ್ಣಾವಧಿ ಬೋಧಕರಿಲ್ಲ. ಅತಿಥಿ ಉಪನ್ಯಾಸಕರಿಂದಲೇ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಆಡಳಿತ ನಿರ್ವಹಣೆ ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಭಾಗ ಮಾಡಲಾಗಿತ್ತು. ಎರಡು ಹೊಸ ವಿವಿ ಆರಂಭವಾಗಿ ವರ್ಷ ಸಮೀಪಿಸಿದರೂ, ಸರ್ಕಾರದಿಂದ ಅಭಿವೃದ್ಧಿಗೆ ನಯಾಪೈಸೆ ನೀಡಿಲ್ಲ. ಅಷ್ಟು ಮಾತ್ರವಲ್ಲದೇ ಬೋಧಕ, ಬೋಧಕೇತರ ಸಿಬ್ಬಂದಿ ನಿಯೋಜನೆಯೂ ಮಾಡಿಲ್ಲ, ನೇಮಕಾತಿಯೂ ಆಗಿಲ್ಲ. ಇಷ್ಟೆಲ್ಲ ಅನನುಕೂಲದ ನಡುವೆ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ಹೇಗೆ ನೀಡಲು ಸಾಧ್ಯ ಎಂಬುದು ಹೊಸ ವಿವಿ ಅಧಿಕಾರಿಗಳ ಆರೋಪವಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಿರುವ ತಲಾ 15 ಕೋಟಿ ರೂ. ಅನುದಾನದಲ್ಲಿ ತುರ್ತು ಅಗತ್ಯಗಳನ್ನು ಹೊಸ ವಿವಿಗಳು ಪೂರೈಸಿಕೊಳ್ಳುತ್ತಿವೆ. ಬೆಂಗಳೂರು ವಿಶ್ವವಿದ್ಯಾಲಯದ ಕೇಂದ್ರ ಕಚೇರಿ ಜ್ಞಾನಭಾರತಿ ಆವರಣದಲ್ಲಿದ್ದು, ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಎಲ್ಲ ಕೋರ್ಸ್‌ಗಳು ಇವೆ. ಹಾಗೇ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೂಡ ಇದ್ದಾರೆ. ಕಟ್ಟಡಗಳ ತುರ್ತು ಅಗತ್ಯವೂ ಇಲ್ಲ.
ಆದರೆ, ಎರಡು ಹೊಸ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಬೆಂಗಳೂರು ಕೇಂದ್ರ ವಿವಿಯಲ್ಲಿ ತುರ್ತಾಗಿ ತರಗತಿ ನಡೆಸಲು ಕಟ್ಟಡದ ಕೊರತೆ ಇಲ್ಲದಿದ್ದರೂ, ಭವಿಷ್ಯದಲ್ಲಿ ಕಟ್ಟಡದ ಅಗತ್ಯವಂತೂ ಎದುರಾಗಿಯೇ ಆಗುತ್ತದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಕಟ್ಟಡದ ಕೊರತೆ ಇದೆ. ವಿದ್ಯಾರ್ಥಿಗಳನ್ನು ಆಡಳಿತ ಕಚೇರಿ ಕೊಠಡಿಯಲ್ಲಿ ಕೂರಿಸಿ ಪಾಠ ಹೇಳಿಕೊಡುವ ಸ್ಥಿತಿ ಬಂದಿದೆ.
ಬೋಧಕ, ಬೋಧಕೇತರರ ಕೊರತೆ: ಬೆಂಗಳೂರು ಕೇಂದ್ರ ಮತ್ತು ಉತ್ತರ ವಿವಿಯಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಇಲ್ಲ. ಯುಜಿಸಿ ನಿಯಮಾನುಸಾರ ಒಂದು ವಿಭಾಗ ಹೊಂದಿರಬೇಕಾದ ಕನಿಷ್ಠ ಸಂಖ್ಯೆಯ ಬೋಧಕರೂ ಇಲ್ಲಿಲ್ಲ. ಕೇಂದ್ರ ವಿವಿಯು ಈ ವರ್ಷ 50ಕ್ಕೂ ಅಧಿಕ ಅತಿಥಿ ಉಪನ್ಯಾಸಕರನ್ನು ನೇಮಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇದೇ ಪರಿಸ್ಥಿತಿ ಉತ್ತರ ವಿವಿಯಲ್ಲೂ ಇದೆ. ಇಂಗ್ಲಿಷ್, ಪತ್ರಿಕೋದ್ಯಮ, ಗ್ರಂಥಾಲಯ ವಿಜ್ಞಾನ ಸೇರಿ ಹಲವು ಹೊಸ ಕೋರ್ಸ್ ಆರಂಭಿಸಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಲಭ್ಯವಿರುವ ಸೀಟುಗಳಿಗಿಂತ ಅಧಿಕ ಅರ್ಜಿ ಬಂದಿವೆ. ಇಂಗ್ಲಿಷ್ ಹೊರತುಪಡಿಸಿ ಬಹುತೇಕ ಎಲ್ಲ ಕೋರ್ಸ್‌ಗಳಲ್ಲೂ ಇನ್‌ಟೇಕ್ ಭರ್ತಿಯಾಗಿದೆ. ಆದರೆ, ಕಾಯಂ ಪ್ರಾಧ್ಯಾಪಕರೇ ಇಲ್ಲ.
ನಿಯೋಜನೆಯೂ ಆಗಿಲ್ಲ: ಮೂರು ವಿವಿಗಳಿಗೂ ಬೋಧಕ, ಬೋಧಕೇತರ ಸಿಬ್ಬಂದಿ ಬೆಂಗಳೂರು ವಿವಿಯಿಂದ ಹಂಚಿಕೆಯಾಗಬೇಕು. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಸ್ವಯಂ ಪ್ರೇರಿತ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಕೋಲಾರ ಸ್ನಾತಕೋತ್ತರ ಕೇಂದ್ರ, ಸೆಂಟ್ರಲ್ ಕಾಲೇಜುಗಳಲ್ಲಿನ ಬೋಧಕರಲ್ಲಿ ಕೆಲವರಷ್ಟೇ ಜ್ಞಾನಭಾರತಿಗೆ ಹೋಗಿದ್ದಾರೆ. ಆದರೆ, ಜ್ಞಾನಭಾರತಿಯಿಂದ ಯಾರೂ ನಿಯೋಜನೆ ಮೇಲೆ ಹೊಸ ವಿವಿಗೆ ಬಂದಿಲ್ಲ. ನಿಯೋಜನೆಗೆ ಸಂಬಂಧಿಸಿದ ಕಡತ ಸರ್ಕಾರದ ಮಟ್ಟದಲ್ಲೇ ಪೆಂಡಿಂಗ್ ಆಗಿದೆ.
ಕಲ್ಪನೆಯಿದೆ, ಅನುದಾನವಿಲ್ಲ: ಕೇಂದ್ರ ವಿವಿಯನ್ನು ನಗರ ಕೇಂದ್ರೀತ ವಿಶ್ವವಿದ್ಯಾಲಯವಾಗಿ ರೂಪಿಸಲು 600 ಕೋಟಿ ರೂ.ಗಳ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸ್ಥಳೀಯ ವಿಷಯಕ್ಕೆ ಆದ್ಯತೆ ನೀಡಿ, ವಿಶ್ವದರ್ಜೆಯ ವಿವಿಯಾಗಿ ರೂಪಿಸಲು ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಆದರೆ, ವಿವಿ ಅಭಿವೃದ್ಧಿಗೆ ಸರ್ಕಾರದಿಂದ ನಯಾಪೈಸೆ ಬಂದಿಲ್ಲ. ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಕ್ಕೆ ಸಲ್ಲಿಸಿದ ಪ್ರಸ್ತಾವನೆಗೂ ಹಸಿರು ನಿಶಾನೆ ಸಿಕ್ಕಿಲ್ಲ.
150 ಕೋಟಿ ತುರ್ತು ಅಗತ್ಯ: ಉತ್ತರ ವಿವಿ ಅಭಿವೃದ್ಧಿಗೆ 150 ಕೋಟಿ ರೂ. ತುರ್ತು ಅಗತ್ಯವಿದೆ ಎಂದು ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಅನುದಾನ ಬಿಡುಗಡೆ ಮಾಡಿದರೆ, ಆದಷ್ಟು ಬೇಗ ಹೊಸ ತರಗತಿ ಕೊಠಡಿಗಳನ್ನು ತೆರೆಲು ಸಾಧ್ಯವಾಗುತ್ತದೆ. ಕಾಯಂ ಬೋಧಕರು, ಬೋಧಕೇತರ ಸಿಬ್ಬಂದಿ ಇಲ್ಲ. ವಿವಿ ಆಡಳಿತ ನಡೆಸಲು ಬೇಕಾದ ಕನಿಷ್ಠ ಸೌಲಭ್ಯಗಳನ್ನಾದರೂ ಸರ್ಕಾರ ನೀಡಬೇಕು ಎಂದು ಅಧಿಕಾರಿಗಳು ಒತ್ತಾಯಿಸಿದ್ದಾರೆ.
ವಿಶ್ವವಿದ್ಯಾಲಯಗಳ ವ್ಯಾಪ್ತಿ: ಶಾಂತಿನಗರ, ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರ, ಹೆಬ್ಟಾಳ, ಶಿವಾಜಿನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಬಸವನಗುಡಿ, ಬಿಟಿಎಂ ಲೇಔಟ್, ಜಯನಗರ ಮತ್ತು ರಾಜಾಜಿನಗರ ಸೇರಿದಂತೆ 13 ವಿಧಾನಸಭಾ ಕ್ಷೇತ್ರ ಹೊಂದಿರುವ ಕೇಂದ್ರ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 12 ಸರ್ಕಾರಿ, 43 ಅನುದಾನಿತ ಸೇರಿ 239 ಕಾಲೇಜುಗಳಿವೆ.
ಜಯನಗರ, ಪದ್ಮನಾಭನಗರ, ಬೊಮ್ಮನಹಳ್ಳಿ, ಆನೇಕಲ್, ಬೆಂಗಳೂರು ದಕ್ಷಿಣ, ಯಶವಂತಪುರ, ರಾಜರಾಜೇಶ್ವರಿನಗರ, ದಾರಸರಹಳ್ಳಿ, ಮಹಾಲಕ್ಷ್ಮೀ ಬಡಾವಣೆ, ಗೋವಿಂದರಾಜನಗರ, ನೆಲಮಂಗಲ, ರಾಮನಗರ ಜಿಲ್ಲೆಯ ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ವ್ಯಾಪ್ತಿಯ ಬೆಂಗಳೂರು ವಿವಿಯಲ್ಲಿ 18 ಸರ್ಕಾರಿ ಹಾಗೂ 10 ಅನುದಾನಿತ ಸೇರಿ 255 ಕಾಲೇಜುಗಳಿವೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರ, ಸಿ.ವಿ.ರಾಮನ್ ನಗರ, ಕೆ.ಆರ್.ಪುರ, ಮಹದೇವಪುರ, ಪುಲಿಕೇಶಿನಗರ, ಸರ್ವಜ್ಞನಗರ, ಹೊಸಕೋಟೆ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ಉತ್ತರ ವಿವಿಯಲ್ಲಿ 26 ಸರ್ಕಾರಿ, 9 ಅನುದಾನಿತ ಸೇರಿ 224 ಕಾಲೇಜುಗಳಿವೆ. ಇದಲ್ಲದೇ, 2018-19ನೇ ಸಾಲಿನಲ್ಲಿ ಹೊಸದಾಗಿ ನವೀಕರಣಗೊಂಡಿರುವ ಕಾಲೇಜುಗಳು ಆಯಾ ವಿವಿ ವ್ಯಾಪ್ತಿಗೆ ಸೇರಿಕೊಳ್ಳಲಿದೆ.
ವಿದ್ಯಾರ್ಥಿಗಳಿಗೆ ಕನಿಷ್ಠ ಸೌಲಭ್ಯ ಒದಗಿಸಲು 150 ಕೋಟಿ ರೂ.ಗಳ ತುರ್ತು ಅಗತ್ಯವಿದೆ. ಸದ್ಯ ಆಡಳಿತ ಕಚೇರಿ ಕಟ್ಟಡದಲ್ಲೇ ಬೋಧನೆ ಮುಂದುವರಿಯಲಿದೆ. ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಬೋಧಕ, ಬೋಧಕೇತರ ಸಿಬ್ಬಂದಿ ಇಲ್ಲ.
-ಡಾ.ಟಿ.ಡಿ.ಕೆಂಪರಾಜು, ಉತ್ತರ ವಿವಿ ಕುಲಪತಿ
ಬೋಧಕ, ಬೋಧಕೇತರ ಸಿಬ್ಬಂದಿ ನಿಯೋಜನೆ ಇನ್ನು ಆಗಿಲ್ಲ. ಬೆಂಗಳೂರು ವಿವಿಯಿಂದ ಬರಬೇಕಿದ್ದ ಹಣವೂ ಸರಿಯಾಗಿ ಬಂದಿಲ್ಲ. ಈಗಾಗಲೇ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸಕರು ಮತ್ತು ಸಂದರ್ಶಕ ಪ್ರಾಧ್ಯಾಪಕರ ಮೂಲಕ ಶಿಕ್ಷಣ ನೀಡುತ್ತೇವೆ.
-ಪ್ರೊ.ಎಸ್.ಜಾಫೆಟ್, ಕೇಂದ್ರ ವಿವಿ ಕುಲಪತಿ
ಎರಡು ಹೊಸ ವಿವಿಗೆ ತಲಾ 100 ಬೋಧಕೇತರ ಸಿಬ್ಬಂದಿ ನೀಡುವ ಸಂಬಮಧ ಸರ್ಕಾರಕ್ಕೆ ಕಡತ ಸಲ್ಲಿಸಿದ್ದೇವೆ. ಈ ವರ್ಷ ಮೂರು ವಿವಿಗಳಿಗೂ ವಿದ್ಯಾರ್ಥಿಗಳು ಹಂಚಿ ಹೋಗಿದ್ದಾರೆ. ಹೀಗಾಗಿ ದಾಖಲಾತಿ ಸ್ವಲ್ಪ ಕಡಿಮೆ ಎನಿಸಿದರೂ, ಒಟ್ಟಾರೆ ವೃದ್ಧಿಸಿದೆ.
-ಪ್ರೊ.ಕೆ.ಆರ್.ವೇಣುಗೋಪಾಲ್, ಬೆಂಗಳೂರು ವಿವಿ ಕುಲಪತಿ
* ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.