ಅಭಿವೃದ್ಧಿ ನಡುವೆಯೂ ಸಮಸ್ಯೆಗಳಿಗಿಲ್ಲ ಬರ
Team Udayavani, Mar 29, 2018, 2:34 PM IST
ಬೆಂಗಳೂರು: ಅತಿ ಹೆಚ್ಚು ಗಾರ್ಮೆಂಟ್ಸ್, ಸಾಫ್ಟ್ವೇರ್ ಕಂಪನಿಗಳು, ಸಣ್ಣ ಕೈಗಾರಿಕೆಗಳು, ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಮೂಲ ನಿವಾಸಿಗಳಿಗಿಂತ ವಲಸಿಗರೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾಣುತ್ತಿದೆಯಾದರೂ ಸಮಸ್ಯೆಗಳೂ ಬೆಟ್ಟದಷ್ಟಿವೆ.
ಎಚ್‌ಎಸ್‌ಆರ್ ಲೇಔಟ್ ರೀತಿಯ ಪ್ರತಿಷ್ಠಿತ ಬಡಾವಣೆ ಹೊರತುಪಡಿಸಿ ಬಹುತೇಕ ಕಡೆ ಕಸ ವಿಲೇವಾರಿ ಸಮಸ್ಯೆ ಇದೆ. ನೀರು ಪೂರೈಕೆಯಂತೂ ಕ್ಷೇತ್ರವನ್ನು ಅತಿ ಹೆಚ್ಚು ಕಾಡುತ್ತಿರುವ ಆತಂಕ. ಜನ ದುಡ್ಡುಕೊಟ್ಟು ಟ್ಯಾಂಕರ್ ನೀರು ಖರೀದಿಸಬೇಕು. ಆದರೂ ನಾಲ್ಕೈದು ವರ್ಷಕ್ಕಿಂತ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ನೀರು ಪೂರೈಕೆಯಲ್ಲಿ ಸುಧಾರಣೆ ಕಂಡುಬಂದಿದೆಯಾದರೂ ಜನಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕಾರಣ ಪರಿಹಾರವಂತೂ ಕಾಣುತ್ತಿಲ್ಲ.
ಗಾರ್ಮೆಂಟ್ಸ್ ಮತ್ತು ಸಣ್ಣ ಕೈಗಾರಿಕೆಗಳು ಹೆಚ್ಚಾಗಿರುವುದರಿಂದ ಇಲ್ಲಿನ ಜನರಲ್ಲಿ ಬಹುತೇಕರು ಕೆಳ ಮಧ್ಯಮ ವರ್ಗ ಮತ್ತು ಬಡವರು. ಆದರೆ, ವಲಸೆ ಬರುತ್ತಿರುವವರ ಪ್ರಮಾಣ ಹೆಚ್ಚುತ್ತಿರುವುದರಿಂದ ಮನೆ ಬಾಡಿಗೆಯೂ ಏರಿಕೆಯಾಗುತ್ತಿದ್ದು, ಈ ವರ್ಗದ ಪಾಲಿಗೆ ನುಂಗಲಾರದ ತುತ್ತಾಗಿದೆ. ಬಹುತೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲಾಟ್‌ಗಳು ಖಾಲಿ ಇವೆ ಎಂಬ ಮಾತು ಕೇಳಿಬರುತ್ತಿದೆಯಾದರೂ ಕ್ಷೇತ್ರದಲ್ಲಿ ತಲೆ ಎತ್ತುತ್ತಿರುವ ಹೊಸ ಅಪಾರ್ಟ್‌ಮೆಂಟ್‌ಗಳಿಗೇನೂ ಕಮ್ಮಿಯಿಲ್ಲ.
ಟ್ರಾಫಿಕ್ ಜಾಮ್ ಎಂಬುದು ದಿನ ನಿತ್ಯದ ನರಕ. ಅದರಲ್ಲೂ ಬೆಂಗಳೂರು-ಚೆನ್ನೈ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಬೇಗೂರು ಮುಖ್ಯರಸ್ತೆಯಲ್ಲಿ ಹಾದು ಹೋಗಲು ಹರಸಾಹಸ ಪಡಬೇಕು. ಇದಕ್ಕೆ ಕಾರಣ ಕಿರಿದಾದ ರಸ್ತೆ. ಈ ರಸ್ತೆ ವಿಸ್ತರಿಸಲು ಕೆಲ ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆಯಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಇದರ ನಡುವೆ ಮಳೆ ಬಂದಾಗ ಮುಳುಗಡೆಯಾಗುವ ಪ್ರದೇಶಗಳಿಗೂ ಕ್ಷೇತ್ರದಲ್ಲಿ ಕೊರತೆ ಇಲ್ಲ. ಮಂಗಮ್ಮನಪಾಳ್ಯ, ಎಚ್‌ಎಸ್‌ಆರ್ ಲೇಔಟ್‌ನ ಕೆಲ ಪ್ರದೇಶಗಳಲ್ಲಿ ಈ ಸಮಸ್ಯೆ ಹೆಚ್ಚು. ಇದೀಗ ಮಳೆ ನೀರು ಮನೆಗಳಿಗೆ ನುಗ್ಗದಂತೆ ತಡೆಯುವ ಕಾಮಗಾರಿ ನಡೆಯುತ್ತಿದ್ದು, ಶೇ.70ರಷ್ಟು ಕೆಲಸ ಪೂರ್ಣಗೊಂಡಿದೆ.
ರಾಜ ಕಾಲುವೆಗಳ ಪುನರುಜ್ಜೀವನ ಕಂಡಿದ್ದು, ಪುಟ್ಟೇನಹಳ್ಳಿ ಕೆರೆಯಲ್ಲಿ “ನೊರೆ’ ಹಾವಳಿ ಮಾಯವಾಗಿದೆ. ಕೆರೆಗಳ ಅಭಿವೃದ್ಧಿಯಾಗಿದೆ. ಒತ್ತುವರಿ ತೆರವುಗೊಳಿಸಿ 500 ಕೋಟಿ ರೂ. ಆಸ್ತಿ ಸರಕಾರದ ವಶಕ್ಕೆ ಪಡೆದಿರುವುದು ಮಹತ್ತರ ಸಾಧನೆ. ಇದರ ಮಧ್ಯೆ ಕಳೆದ ಒಂದು ವರ್ಷದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ನೀರಿನ ಸಮಸ್ಯೆ ಬಗೆಹರಿಸಲು ಹಲವಾರು ಶುದ್ಧ ಕುಡಿಯುವ ನೀರಿನ ಘಟಕಗಳು ತಲೆ ಎತ್ತಿವೆ. ಸಾರ್ವಜನಿಕ ಶೌಚಾಲಯಗಳು ನಿರ್ಮಾಣವಾಗಿದೆ.
ಎಚ್‌ಎಸ್‌ಆರ್ ಲೇಒಟ್, ಬೊಮ್ಮನಹಳ್ಳಿ, ಜಗರನಹಳ್ಳಿ, ಪುಟ್ಟೇನಹಳ್ಳಿ, ಬಿಳೇಕಹಳ್ಳಿ, ಹೊಂಗಸಂದ್ರ, ಮಂಗಮ್ಮನಪಾಳ್ಯ, ಸಿಂಗಸಂದ್ರ ಮತ್ತು ಅರಕೆರೆ ಎಂಬ ಒಂಬತ್ತು ವಾರ್ಡ್‌ಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಎಂಟು ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರಿದ್ದು, ಒಂದರಲ್ಲಿ ಕಾಂಗ್ರೆಸ್ ಸದಸ್ಯರಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಹೇಳುವುದಾದರೆ ರೆಡ್ಡಿ ಸಮುದಾಯದ 30 ಸಾವಿರ, ಒಕ್ಕಲಿಗ 55 ಸಾವಿರ, ಬ್ರಾಹ್ಮಣರು 40 ಸಾವಿರ, ಲಿಂಗಾಯತರು 20 ಸಾವಿರ, ಪರಿಶಿಷ್ಟ ಜಾತಿ ಮತ್ತು ಪಂಗಡದ 30 ಸಾವಿರ, ತಿಗಳರು 15 ಸಾವಿರ, ಹಿಂದಿ ಮಾತನಾಡುವವರು 60 ಸಾವಿರ, ತೆಲುಗು 40 ಸಾವಿರ, ತಮಿಳು 20 ಸಾವಿರ, ಮುಸ್ಲಿಂ ಸಮುದಾಯದ 30 ಸಾವಿರ ಮತದಾರರಿದ್ದಾರೆ.
ಕ್ಷೇತ್ರದ ಬೆಸ್ಟ್ ಏನು?: ರಾಜಕಾಲುವೆ ಮತ್ತು ಕೆರೆಗಳ ಅಭಿವೃದ್ಧಿ ಸಾಕಷ್ಟಾಗಿದೆ. ಅಗರ ಮತ್ತು ಪುಟ್ಟೇನಹಳ್ಳಿ ಕೆರೆ ಅಭಿವೃದ್ಧಿಯಾಗಿದ್ದು, ಇಬ್ಬಲೂರು, ಸಾರಕ್ಕಿ ಮತ್ತು ಸೋಮಸುಂದರಪಾಳ್ಯ ಕೆರೆಗಳು ಅಭಿವೃದ್ಧಿಯಾಗುತ್ತಿವೆ. ಕ್ಷೇತ್ರದ ಜನರ ಬಹು ವರ್ಷಗಳ ಬೇಡಿಕೆಯಂತೆ ವಾರಕ್ಕೆರಡು ದಿನ ಮನೆ ಮನೆಗಳಿಗೆ ಕಾವೇರಿ ನೀರು ಪೂರೈಕೆಯಾಗುತ್ತಿದೆ.
ಕ್ಷೇತ್ರದ ದೊಡ್ಡ ಸಮಸ್ಯೆ: ಉದ್ಯಾನವನಗಳ ಕೊರತೆ ಕ್ಷೇತ್ರದ ಬಹುದೊಡ್ಡ ಸಮಸ್ಯೆ. ಅದರಲ್ಲೂ ಹಳೇ ಬಡಾವಣೆಗಳಲ್ಲಿ ಉದ್ಯಾನವನಗಳೇ ಇಲ್ಲ, ಅಭಿವೃದ್ಧಿಪಡಿಸಲು ಅಗತ್ಯ ಜಾಗವೂ ಇಲ್ಲ. ಉಳಿದಂತೆ ಕಸ ವಿಲೇವಾರಿ ಸಮಸ್ಯೆ ಹಾಗೆಯೇ ಉಳಿದಿದೆ. ಕಾವೇರಿ ನೀರು ಬರುತ್ತಿದೆಯಾದರೂ ಸಮಸ್ಯೆ ಇನ್ನೂ ಸಾಕಷ್ಟಿದೆ. ರಾಜ ಕಾಲುವೆಗಳನ್ನು ಸ್ವತ್ಛಗೊಳಿಸಲಾಗಿದೆಯಾದರೂ ಕಸ ಮತ್ತೆ ಸುರಿಯಲಾಗುತ್ತಿದೆ. ಒಳಚರಂಡಿ ವ್ಯವಸ್ಥೆಯೂ ಹೇಳಿಕೊಳ್ಳುವಂತಿಲ್ಲ.
ಕ್ಷೇತ್ರದ ಹೈಲೈಟ್: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ, ದೇಶದ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ಬೊಮ್ಮನಹಳ್ಳಿ ಕ್ಷೇತ್ರದ ಹೈಲೈಟ್. ನೊರೆಯಿಂದ ತುಂಬಿದ್ದ ಪುಟ್ಟೇನಹಳ್ಳಿ ಕೆರೆ ಇದೀಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಬೆಂಗಳೂರು-ಚೆನ್ನೈ ರಸ್ತೆಯ ಎಲೆಕ್ಟ್ರಾನಿಕ್ ಸಿಟಿವರೆಗಿನ ಫ್ಲೈಓವರ್ ನಗರದ ಅತಿ ದೊಡ್ಡ ಮತ್ತು ಅತಿ ಹೆಚ್ಚು ವಾಹನ ಸಂಚಾರವಿರುವ ಫ್ಲೈಓವರ್.
ಕಳೆದ ಚುನಾವಣೆ ಫಲಿತಾಂಶ
-ಎಂ.ಸತೀಶ್ ರೆಡ್ಡಿ (ಬಿಜೆಪಿ)- 86552
-ಸಿ.ನಾಗಭೂಷಣ್ (ಕಾಂಗ್ರೆಸ್)- 60700
-ಡಾ. ಅಶ್ವಿನ್ ಮಹೇಶ್ (ಲೋಕಸತ್ತಾ ಪಾರ್ಟಿ)- 11915
ಆಕಾಂಕ್ಷಿಗಳು
-ಬಿಜೆಪಿ- ಸತೀಶ್ ರೆಡ್ಡಿ
-ಕಾಂಗ್ರೆಸ್- ಕವಿತಾ ರೆಡ್ಡಿ, ಸಿ.ನಾಗಭೂಷಣ್
-ಜೆಡಿಎಸ್- ಅಭ್ಯರ್ಥಿಗಳ ಹುಡುಕಾಟದಲ್ಲಿದೆ
ಶಾಸಕರು ಏನಂತಾರೆ?
ಅನುದಾನ ವಿತರಣೆಯಲ್ಲಿ ಸಾಕಷ್ಟು ತಾರತಮ್ಯ ಮಾಡುತ್ತಿದ್ದರೂ ಜಗಳವಾಡಿ ಹಣ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕಾವೇರಿ ನೀರು ಮನೆ ಮನೆಗೆ ತಲುಪಿಸಿದ್ದು, ಹಾಳಾಗಿದ್ದ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇನೆ.
-ಸತೀಶ್ ರೆಡ್ಡಿ
ನೀರಿನ ಸಮಸ್ಯೆ ಬಹುತೇಕ ಬಗೆಹರಿದಿದೆ. ಆದರೆ, ಮಳೆ ಬಂದಾಗ ನೀರು ಮನೆಗಳಿಗೆ ನುಗ್ಗುತ್ತಿದ್ದು, ಚರಂಡಿಗಳನ್ನು ಸ್ವತ್ಛಗೊಳಿಸಿದರೂ ಮತ್ತೆ ಕಸ ತುಂಬುತ್ತಿದ್ದಾರೆ. ಹೀಗಾಗಿ ಸಮಸ್ಯೆ ಬಗೆಹರಿಯುತ್ತಲೇ ಇಲ್ಲ.
-ಗಾಯತ್ರಿ
ಉದ್ಯಾನವನಗಳಿಲ್ಲದೆ ಮಕ್ಕಳ ಆಟ, ವಾಯುವಿಹಾರಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ ಉದ್ಯಾನಗಳ ಅವಶ್ಯಕತೆ ಇದೆ. ಮಳೆನೀರು ಸರಾಗವಾಗಿ ಹರಿದುಹೋಗಲು ಚರಂಡಿ ನಿರ್ಮಾಣವಾಗಬೇಕಾಗಿದೆ.
-ಶಶಿಕಲಾ
ಮೊದಲೆಲ್ಲಾ ಮಳೆ ಬಂದಾಗ ಮನೆಗೆ ನೀರು ನುಗ್ಗುತ್ತಿತ್ತು. ಈಗ ಸಮಸ್ಯೆ ಬಗೆಹರಿದಿದೆ. ವಾರಕ್ಕೆರಡು ದಿನ ಕುಡಿಯುವ ನೀರೂ ಬರುತ್ತಿದೆ. ಸಣ್ಣ ಪುಟ್ಟ ಸಮಸ್ಯೆಗಳ ಕುರಿತು ಶಾಸಕರು ಸ್ಪಂದಿಸುತ್ತಿದ್ದಾರೆ.
-ಮಣಿ
ವಲಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಮನೆ ಬಾಡಿಗೆ ವಿಪರೀತ ಏರುತ್ತಿದ್ದು, ಕೆಳ ಮಧ್ಯಮ ಮತ್ತು ಬಡವರು ಭರಿಸಲು ಸಾಧ್ಯವಾಗುತ್ತಿಲ್ಲ. ವಸತಿ ರಹಿತರಿಗೆ ಮನೆ ಸೌಲಭ್ಯ ಅಗತ್ಯವಿದೆ.
-ರಾಜೇಂದ್ರ
* ಪ್ರದೀಪ್‌ಕುಮಾರ್ ಎಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.