ಸರ್ವರ್ ಸಮಸ್ಯೆ ಇದೆ, ನಾಳೆ ಬನ್ನಿ
ಸುದ್ದಿ ಸುತ್ತಾಟ
Team Udayavani, Jan 13, 2020, 3:10 AM IST
ವಿದ್ಯುತ್ ಬಿಲ್‌ನಿಂದ ಹಿಡಿದು ಸಂಚಾರ ನಿಯಮ ಉಲ್ಲಂಘನೆ ದಂಡದವರೆಗಿನ ಎಲ್ಲ ರೀತಿಯ ಶುಲ್ಕಗಳು, ಆಧಾರ್, ಆರೋಗ್ಯ ಕಾರ್ಡ್ ಸೇರಿ ಸುಮಾರು 57 ನಾಗರಿಕ ಸೇವೆಗಳನ್ನು ಒದಗಿಸುವ ಬೆಂಗಳೂರು ಒನ್, ಒಂದು “ಸಮಗ್ರ ನಾಗರಿಕ ಸೇವಾ ಕೇಂದ್ರ’. ಆದರೆ ಆರಂಭದಲ್ಲಿದ್ದ ಚಾಕಚಕ್ಯತೆ, “ಸಮಗ್ರ ಸೇವೆ’ ಈಗ ಈ ಕೇಂದ್ರಗಳಲ್ಲಿ ಸಿಗುತ್ತಿಲ್ಲ. ಕಾರಣ ಸರ್ವರ್ ಡೌನ್! ಈ ತಾಂತ್ರಿಕ ಸಮಸ್ಯೆಯಿಂದಾಗಿ ಕೇಂದ್ರಗಳ ಸಿಬ್ಬಂದಿ ಜತೆ ವಾಗ್ವಾದ ನಡೆಸುವುದರಲ್ಲೇ ಸಾರ್ವಜನಿಕರ ಸಮಯ ಹೆಚ್ಚು ವ್ಯರ್ಥವಾಗುತ್ತಿದೆ. ಈ ಕೇಂದ್ರಗಳ ಸಮಸ್ಯೆಗಳ ಸುತ್ತ ಒಂದು ನೋಟ ಈ ಬಾರಿಯ ಸುದ್ದಿ ಸುತ್ತಾಟ…
ಪ‹ತಿಯೊಂದು ಸೇವೆಗಳಿಗೂ ಒಂದೊಂದು ಇಲಾಖೆ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಒಂದೇ ಸೂರಿನಡಿ ಸೌಲಭ್ಯಗಳನ್ನು ಕಲ್ಪಿಸುವ “ಬೆಂಗಳೂರು ಒನ್’ ಪರಿಕಲ್ಪನೆ ಅಸ್ತಿತ್ವಕ್ಕೆ ಬಂದಿತು. ಇದರ ಪರಿಣಾಮವಾಗಿ ವಿವಿಧ ಇಲಾಖೆಗಳ ಬಾಗಿಲು ತಟ್ಟುವುದಂತೂ ನಿಂತಿತು. ಆದರೆ, ನಾಗರಿಕರ ಅಲೆದಾಟ ತಪ್ಪಿದೆಯೇ? ಉತ್ತರ- ಇಲ್ಲ. ಇದರಿಂದ ಅಲೆದಾಟದ ಸ್ವರೂಪ ಬದಲಾಗಿದೆ ಅಷ್ಟೇ. ಸೇವೆಗಳಿಗಾಗಿ ಈ ಹಿಂದೆ ವಿವಿಧ ಇಲಾಖೆಗಳ ಕಚೇರಿಗಳಿಗೆ ತೆರಳ ಬೇಕಿತ್ತು. ಆದರೆ, ಈಗ ಒಂದೊಂದು ಸೇವೆಗೂ ಒಂದೇ ಕಡೆ ಹಲವು ಬಾರಿ ಹೋಗಬೇಕಾಗಿದೆ. ಹಾಗಾಗಿ, ಚಪ್ಪಲಿ ಸವೆಯುವುದು ಮಾತ್ರ ತಪ್ಪಿಲ್ಲ ಎನ್ನುತ್ತಾರೆ ನಾಗರಿಕರು.
“ಬೆಂಗಳೂರು ಒನ್’ನಲ್ಲಿ ಸುಮಾರು 57 ಸೇವೆಗಳನ್ನು ಕಲ್ಪಿಸಲಾಗಿದೆ. ಇಲ್ಲಿಗೆ ಭೇಟಿ ನೀಡಿದರೆ, ಬೆರಳತುದಿಯಲ್ಲಿ ಕೆಲಸಗಳು ಆಗುತ್ತವೆ ಎಂದು ಸರ್ಕಾರ ಬಿಂಬಿಸುತ್ತಿದೆ. ಇದಕ್ಕೆ ಮೆಚ್ಚುಗೆಯ ಮಹಾಪೂರವೂ ಹರಿದುಬರುತ್ತಿರ ಬಹುದು. ಆದರೆ, ಮೂಲದಲ್ಲಿ ವಾಸ್ತವ ಭಿನ್ನವಾಗಿದೆ. ಬೆರಳೆಣಿಕೆ ಯಷ್ಟು ಸೇವೆಗಳೂ ಇಲ್ಲಿ ಸಿಗುತ್ತಿಲ್ಲ. ಸಿಕ್ಕರೂ ಅದಕ್ಕಾಗಿ ಮೂರ್‍ನಾಲ್ಕು ಬಾರಿ ಅಲೆದಾಡಬೇಕು. ಕನಿಷ್ಠ ಮೂಲ ಸೌಕರ್ಯಗಳೂ ಈ ಕೇಂದ್ರಗಳಲ್ಲಿ ಕಾಣುವುದಿಲ್ಲ. ಮಾಹಿತಿಗಳು ಮರೀಚಿಕೆಯಾಗಿವೆ.
ಹಾಗಾಗಿ, ಜನ ಇಲ್ಲಿಗೆ ಬರಲಿಕ್ಕೂ ಹಿಂದೇಟು ಹಾಕುತ್ತಿದ್ದಾರೆ. “ಸರ್ವರ್ ಸಮಸ್ಯೆ ಇದೆ. ನಾಳೆ ಬನ್ನಿ’ ಎಂಬ ಮಾತು ಬಹುತೇಕ ಬೆಂಗಳೂರು ಒನ್ ಕೇಂದ್ರಗಳಲ್ಲಿ ಕೇಳಿ ಬರುತ್ತದೆ. ಅನೇಕ ಕೇಂದ್ರಗಳು ನೆಲಮಹಡಿಯಲ್ಲಿದ್ದು, ಇಂಟರ್‌ನೆಟ್ ಸಮಸ್ಯೆಯಾಗುತ್ತಿದೆ. ಜತೆಗೆ ಸರ್ಕಾರದ ವಿವಿಧ ಇಲಾಖೆಗಳ ವೆಬ್‌ಸೈಟ್‌ಗಳು ಉನ್ನತೀಕರಣ ಆಗದಿರುವುದರಿಂದ ತಾಂತ್ರಿಕ ಸಮಸ್ಯೆಯೂ ಎದುರಾ ಗುತ್ತಿದೆ. ಇದು ಗ್ರಾಹಕರು ಹಾಗೂ ಸಿಬ್ಬಂದಿ ನಡುವೆ ವಾಗ್ವಾದಕ್ಕೆ ಎಡೆಮಾಡಿಕೊಡುತ್ತಿದೆ.
ಬೆರಳೆಣಿಕೆ ಸೇವೆಗಳಿಗೆ ಸೀಮಿತ?: ನಗರದಲ್ಲಿ 154 ಬೆಂಗಳೂರು ಒನ್ ಕೇಂದ್ರಗಳಿವೆ. ಅಲ್ಲೆಲ್ಲಾ ಬೆಸ್ಕಾಂ, ಜಲಮಂಡಳಿ, ಬಿಎಸ್‌ಎನ್‌ಎಲ್, ಪೊಲೀಸ್ ಇಲಾಖೆ, ಗೃಹ ಕಚೇರಿ, ಧಾರ್ಮಿಕ ದತ್ತಿ ಇಲಾಖೆ, ಶಿಕ್ಷಣ ಇಲಾಖೆ, ಕೆಎಸ್‌ಆರ್‌ಟಿಸಿ, ಕಂದಾಯ ಇಲಾಖೆ, ನಾಡ ಕಚೇರಿಯ ಪ್ರಮಾಣ ಪತ್ರಗಳ ಸೇವೆ, ಬೆಂಗಳೂರು ವಿವಿ ಅರ್ಜಿಗಳು ಸೇರಿದಂತೆ 57ಕ್ಕೂ ಹೆಚ್ಚು ಸೇವೆಗಳು ಲಭ್ಯವಿದೆ ಎಂದು ವೆಬ್‌ಸೈಟ್ ಹೇಳುತ್ತದೆ. ಆದರೆ, ಇದನ್ನು ನಂಬಿ ಕೇಂದ್ರಕ್ಕೆ ಹೋದರೆ ನಿರಾಸೆಯಾಗುವುದು ಖಚಿತ. ಏಕೆಂದರೆ, ಬಹುತೇಕ ಕೇಂದ್ರಗಳು ಕೇವಲ ಆಧಾರ್ ನೋಂದಣಿ ಮತ್ತು ತಿದ್ದುಪಡಿ, ಆರೋಗ್ಯ ಕಾರ್ಡ್, ವಿದ್ಯುತ್ ಹಾಗೂ ನೀರಿನ ಶುಲ್ಕ ಪಾವತಿಗೆ ಮಾತ್ರ ಸೀಮಿತವಾಗಿವೆ.
ಈ ಬಗ್ಗೆ ಪ್ರಶ್ನಿಸಿದರೆ, “ನಮ್ಮಲ್ಲಿ ಶುಲ್ಕ ಪಾವತಿ ಸೌಲಭ್ಯ ಮಾತ್ರ ಇದೆ. ಹೆಚ್ಚುವರಿ ಸೇವೆಗೆ ಮುಖ್ಯ ಕೇಂದ್ರಕ್ಕೆ ತೆರಳಿ’ ಎನ್ನುವ ಸಿದ್ಧ ಉತ್ತರ ಬರುತ್ತದೆ. ಇನ್ನು ಹೊಸ ಸೇವೆಗಳಾದ ಎಲ್‌ಇಡಿ ದೀಪಗಳ ವಿತರಣೆ, ಪ್ಯಾನ್ ಕಾರ್ಡ್ ವಿತರಣೆ, ಸಾರಿಗೆ ಇಲಾಖೆ ಎಲ್‌ಎಲ್‌ಆರ್, ಹಿರಿಯ ನಾಗರಿಕರ ಗುರುತಿನ ಚೀಟಿ, ವಿವಿಧ ಬ್ಯಾಂಕ್‌ಗಳ ಸಾಲ ಅರ್ಜಿ ಗಳು ಸೇವೆಗಳಂತೂ ದೂರದ ಮಾತು. ಬಹುತೇಕ ಕೇಂದ್ರಗಳಲ್ಲಿ ಯಾವ ಇಲಾಖೆಯ ಸೇವೆ ಸಿಗುತ್ತದೆ. ನಿರ್ದಿಷ್ಟ ಸೇವೆ ಪಡೆದುಕೊಳ್ಳಲು ಯಾವ ದಾಖಲೆ ಗಳನ್ನು ಸಲ್ಲಿಸಬೇಕು ಎನ್ನುವ ಮಾಹಿತಿ ಫಲಕಗಳು ಅಳವಡಿಸಿಲ್ಲ.
ಕೇಂದ್ರಗಳಲ್ಲಿನ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ಹಾಗೂ ಸಂವಹನ ಕೊರತೆಯಿಂದ ಒಂದು ಸೇವೆ ಪಡೆಯುವುದಕ್ಕೂ ಸಾರ್ವಜನಿ ಕರು ಹಲವು ಬಾರಿ ಕೇಂದ್ರದ ಬಾಗಿಲು ತಟ್ಟುವಂತಾಗಿದೆ. ಕೆಲವು ಕೇಂದ್ರಗಳಲ್ಲಿನ ಸಿಬ್ಬಂದಿ ಜನಸ್ನೇಹಿಯಾಗಿ ಸೇವೆ ನೀಡದಿರುವ ಬಗ್ಗೆಯೂ ದೂರುಗಳು ಕೇಳಿಬಂದಿವೆ. ರಾಜಾಜಿನಗರದ ಬೆಂಗಳೂರು ಒನ್ ಕೇಂದ್ರವು ಮೊದಲ ಮಹಡಿಯಲ್ಲಿದ್ದು, ದಿವ್ಯಾಂಗರಿಗೆ ಸಮಸ್ಯೆಯಾಗುತ್ತಿದೆ. ವಿಶೇಷಚೇತನರಿಗೆ ಮಾಹಿತಿ ನೀಡುವ ಹಾಗೂ ಆದ್ಯತೆಯ ಮೇಲೆ ಅವರಿಗೆ ಸೇವೆ ನೀಡುವ ಜನಸ್ನೇಹಿ ವಾತಾವರಣ ಅಲ್ಲಿಲ್ಲ. ಇಂತಹ ಹಲವು ಕೇಂದ್ರಗಳು ನಗರದಲ್ಲಿವೆ.
“ಕೇಂದ್ರಗಳಲ್ಲಿ ಯಾವೆಲ್ಲ ಸೇವೆಗಳನ್ನು ನೀಡಲಾಗುತ್ತದೆ ಎನ್ನುವುದರ ಬಗ್ಗೆ ಡಿಜಿಟಲ್ ನಾಮಫಲಕಗಳನ್ನು ಅಳವಡಿಸಬೇಕು. ಇದರಲ್ಲಿ ನಿರ್ದಿಷ್ಟ ಸೇವೆಯ ಅವಧಿ ಹಾಗೂ ಆ ಸೇವೆಯನ್ನು ಕೇಂದ್ರದಲ್ಲಿ ಯಾವ ಅವಧಿಯಲ್ಲಿ ನೀಡುತ್ತಾರೆ ಎಂಬ ಮಾಹಿತಿ ಇರಬೇಕು. ಈ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಆದರೆ, ಈಗ ಯಾವ ಕೇಂದ್ರಗಳಲ್ಲಿಯೂ ಈ ಮಾಹಿತಿ ಇಲ್ಲ. ಯಾವುದಕ್ಕೆ ಯಾವ್ಯಾವ ದಾಖಲೆ ಬೇಕು ಎಂಬ ವಿವರಣೆಗಳೂ ಇಲ್ಲ. ಹೀಗಾಗಿ, ಲೆಕ್ಕಕ್ಕುಂಟು ಸೇವೆಗಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತೆ ಗೀತಾ ಗಿರೀಶ್ ಆರೋಪಿಸುತ್ತಾರೆ.
“ಆಧಾರ್’ ತಿದ್ದುಪಡಿಯೇ ಸಮಸ್ಯೆ: ಉದ್ದೇಶಿತ ಕೇಂದ್ರಗಳಲ್ಲಿ ಪದೇ ಪದೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ “ಆಧಾರ್’ ನೋಂದಣಿ ಮಾಡಿಸಿಕೊಳ್ಳಲು ಸಾರ್ವಜನಿಕರು ಪರದಾಡುವಂತಾಗಿದೆ. ನೋಂದಣಿ, ಅಕ್ಷರ ದೋಷ ಸರಿಪಡಿಸುವುದು, ಮೊಬೈಲ್ ಸಂಖ್ಯೆ ಮತ್ತು ವಿಳಾಸ ಸೇರಿಸುವುದು ಅಥವಾ ಬದಲಾಯಿಸುವುದಕ್ಕೆ ಸಂಬಂಧಿಸಿದಂತೆ ವಿವಿಧ ಕೇಂದ್ರಗಳು ಸಿಬ್ಬಂದಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಟೋಕನ್ ನೀಡಲಾಗುತ್ತಿದೆ. ಆಧಾರ್ ಕಾರ್ಡ್ ಸೇವೆ ನೀಡುವ ಸಂದರ್ಭದಲ್ಲಿ ಒನ್‌ಟೈಮ್ ಪಾಸ್‌ವರ್ಡ್ ಅವಶ್ಯವಿದ್ದು, ತಾಂತ್ರಿಕ ಸಮಸ್ಯೆಯಿಂದ ಪಾಸ್‌ವರ್ಡ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದ ಸರದಿಯಲ್ಲಿ ನಿಂತು, ಉಳಿದವರೂ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ, ಇದಕ್ಕೆ ಹೆಚ್ಚುವರಿ ಸಿಬ್ಬಂದಿಯನ್ನೂ ನೇಮಿಸಿಲ್ಲ.
ಬೆಸ್ಕಾಂ ಮಿತ್ರದಲ್ಲೇ ಬಿಲ್ ಪಾವತಿಸಿ!: ಬೆಂಗಳೂರು ಒನ್ ಕೇಂದ್ರಗಳಲ್ಲಿ ನಿಗದಿತ ಅವಧಿಯಲ್ಲಿ ಸಾರ್ವಜನಿಕರಿಗೆ ಸೇವೆ ಸಿಗದೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದೆ. ಈ ನಡುವೆ ಸೇವೆಯ ಬಗ್ಗೆ ಅಪಪ್ರಚಾರವೂ ನಡೆಯುತ್ತಿದೆ. ಬೆಸ್ಕಾಂ, ಜಲಮಂಡಳಿ ಸಿಬ್ಬಂದಿ ತಮ್ಮ ಇಲಾಖೆಯ ಆ್ಯಪ್‌ಗ್ಳನ್ನೇ ಬಳಸಿ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಬಿಲ್ ಪಾವತಿಸಿದರೆ ಹಣ ವರ್ಗಾವಣೆ ವಿಳಂಬವಾಗುತ್ತದೆ ಎಂದು ಹೇಳುತ್ತಿದ್ದಾರೆ! “ಬೆಂಗಳೂರು ಒನ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲಾಗಿತ್ತು. ಆದರೆ, “ಬೆಸ್ಕಾಂ ಮಿತ್ರದಲ್ಲಿ ಬಿಲ್ ಪಾವತಿಸಿದರೆ, ಪ್ರಕ್ರಿಯೆ ಬೇಗ ಆಗುತ್ತದೆ ಎಂದು ಬೆಸ್ಕಾಂ ಸಿಬ್ಬಂದಿ ಹೇಳುತ್ತಾರೆ. ಆದರೆ, ಆ ಕೇಂದ್ರಗಳು ನೀಡುತ್ತಿರುವುದೂ ಸರ್ಕಾರದ ಸೇವೆಗಳನ್ನು. ಹೀಗಿರುವಾಗ, ಹೇಗೆ ತಡವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ’ ಎಂದು ರಾಜಾಜಿನಗರದ ನಿವಾಸಿ ಕವಿತಾ ಹೇಳಿದರು.
ಆನ್‌ಲೈನ್ ಪರಿಣಾಮ; ಕೇಂದ್ರಗಳಿಗೆ ಬೇಡಿಕೆ ಕುಸಿತ: ಮೊಬೈಲ್‌ನಲ್ಲಿಯೇ ಆನ್‌ಲೈನ್ ಸೇವೆಗಳು ದೊರೆಯುತ್ತಿ ರುವು ದರಿಂದ ಬೆಂಗಳೂರು ಒನ್ ಕೇಂದ್ರಗಳಿಗೆ ಬೇಡಿಕೆ ಕಡಿಮೆ ಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಭೇಟಿ ನೀಡುವ ಗ್ರಾಹಕರ ಸಂಖ್ಯೆಯಲ್ಲಿ ಶೇ. 25ರಷ್ಟು ಕುಸಿತ ಕಂಡುಬಂದಿದೆ. 2017-18ರಲ್ಲಿ ನಗರದ ಪ್ರಮುಖ ಬಡಾವಣೆಯೊಂದರ ಬೆಂಗಳೂರು ಒನ್ ಕೇಂದ್ರಕ್ಕೆ ಮಾಸಿಕ ಅಂದಾಜು 60 ಸಾವಿರದಷ್ಟು ವಿವಿಧ ಇಲಾಖೆಗಳ ಶುಲ್ಕ ಪಾವತಿ ಗಳಾಗುತ್ತಿದ್ದವು. ಸದ್ಯಶುಲ್ಕ ಪಾವತಿ ಪ್ರಮಾಣ 39 ಸಾವಿರಕ್ಕೆ ಇಳಿಕೆಯಾಗಿದೆ. ಆನ್‌ಲೈನ್ ವ್ಯವಹಾರ ಹೆಚ್ಚಾದಂತೆ ಇತ್ತ ಆಗಮಿಸುವವರ ಸಂಖ್ಯೆಯೂ ಕುಗ್ಗಿದೆ. ಯುವಕರು ಮೊಬೈಲ್ ಆ್ಯಪ್‌ಗ್ಳ ಮೂಲಕವೇ ನೀರು, ವಿದ್ಯುತ್ ಬಿಲ್ ಪಾವತಿಸುತ್ತಿದ್ದು, ಹಿರಿಯ ನಾಗರಿಕರು, ಗೃಹಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೀಗಾಗಿ, ಶುಲ್ಕ ಪಾವತಿ ಪ್ರಮಾಣ ಶೇ.25 ರಷ್ಟು ಕುಗ್ಗಿದೆ’ ಎನ್ನುತ್ತಾರೆ ಬೆಂಗಳೂರು ಒನ್ ಸಿಬ್ಬಂದಿ. ಇದು ಉತ್ತಮ ಬೆಳವಣಿಗೆ ಕೂಡ.
ವೇತನ ಕಡಿಮೆ; ಸೌಲಭ್ಯಗಳೂ ಇಲ್ಲ: ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್) ಅಧೀನದಲ್ಲಿ ಬರುವ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಕ್ಕೆ ಸಿಬ್ಬಂದಿಯನ್ನು ಸಿಎಂಎಸ್ ಕಂಪ್ಯೂಟರ್ ಎಂಬ ಸಂಸ್ಥೆಯು ಪೂರೈಸುತ್ತಿದೆ. ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೂ, ಮಧ್ಯಾಹ್ನ 1-7ರವರೆಗೆ ಎರಡು ಪಾಳಿಯಲ್ಲಿ ಇಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ತಲಾ ಒಬ್ಬರು ನಿತ್ಯ 250ರಿಂದ 500 ಬಿಲ್ಲಿಂಗ್ ಮಾಡುತ್ತಾರೆ. ತಿಂಗಳ 30 ದಿನವೂ ಸೇವೆ ಸಲ್ಲಿಸುತ್ತವೆ.
ಜನರ ನಿರೀಕ್ಷೆಗಳು
-ಮತದಾರರ ಗುರುತಿನಚೀಟಿ ವಿತರಣೆ ಹಾಗೂ ತಿದ್ದುಪಡಿ ಸೇವೆ.
-ಪಾನ್ ಕಾರ್ಡ್, ಪಾಸ್‌ಪೋರ್ಟ್ ಸೇವೆ.
-ಶುಲ್ಕ ಪಾವತಿಗೆ ಪೇಟಿಎಂ ಆ್ಯಪ್ ಸೌಲಭ್ಯ ಮಾತ್ರವಿದ್ದು, ಫೋನ್ ಪೇ ಹಾಗೂ ಗೂಗಲ್ ಪೇ ಸೌಲಭ್ಯ ಇರಬೇಕು.
-ಜನನ ಮತ್ತು ಮರಣ ಪ್ರಮಾಣಪತ್ರ ಸೇವೆ ಹಾಗೂ ವಾಹನ ಮಾಹಿತಿ ಪತ್ತೆ (ಆರ್‌ಸಿ ಎಕ್ಸ್‌ಟ್ರ್ಯಾಕ್) ಸೇವೆ ಪುನಾರಂಭಿಸಬೇಕು.
ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೌಕರ್ಯ ಹೆಚ್ಚಿಸುವ ಬೇಡಿಕೆ ಬಂದಿಲ್ಲ. ಸೇವೆಗಳ ಅಗತ್ಯತೆ ಇದ್ದರೆ, ಖಂಡಿತ ವಾಗಿಯೂ ನೀಡಲಾಗುವುದು.
-ಎಂ.ಗೌತಮ್‌ಕುಮಾರ್, ಮೇಯರ್
ವಾರದಿಂದ ಆರೋಗ್ಯ ಕಾರ್ಡ್‌ಗಾಗಿ ಬೆಂಗಳೂರು ಒನ್ ಕೇಂದ್ರಕ್ಕೆ ಬರುತ್ತಿದ್ದು, ಸರ್ವರ್ ಸಮಸ್ಯೆ ಎಂದು ಹೇಳುತ್ತಿದ್ದಾರೆ. ನಿತ್ಯ ಕುಟುಂಬ ಸಮೇತ ಬಂದು ಸರದಿಯಲ್ಲಿ ನಿಂತು ಸಾಕಾಗಿದೆ.
-ಸುರೇಶ್, ಕೆಂಪಾಪುರ ನಿವಾಸಿ
ಆರೋಗ್ಯ ಕಾರ್ಡ್ ಮಾಡಿಸಿಲು ತಿಂಗಳಿಂದ ಅಲೆಯುತ್ತಿದ್ದೇನೆ. ತಾಂತ್ರಿಕ ಸಮಸ್ಯೆ ಇದೆ ನಾಳೆ ಬನ್ನಿ, ಹಬ್ಬದ ದಿನ ಬನ್ನಿ ಎನ್ನುವ ಉತ್ತರ ನೀಡುತ್ತಿದ್ದಾರೆ.
-ಪಾಂಡುರಂಗ ಪೈ, ರಾಜಾಜಿನಗರ ನಿವಾಸಿ
ಹಿರಿಯ ನಾಗರಿಕರ ಗುರುತಿನ ಚೀಟಿ ಮೂರು ತಿಂಗಳು ತಡವಾಗಿ ಸಿಕ್ಕಿದೆ. ನಿತ್ಯ ಬಂದು ವಿಚಾರಿಸಿ ಕೊಂಡು ಹೋಗುತ್ತಿದ್ದೆ. ಕಾರಣ ಕೇಳಿದರೆ, ಇಲಾಖೆ ಸ್ಪಂದಿಸುತ್ತಿಲ್ಲ ಎನ್ನುತ್ತಿದ್ದರು.
-ಮೋಹನ್, ಹೆಬ್ಬಾಳ ನಿವಾಸಿ
ಶುಲ್ಕ ಪಾವತಿ ಸೇವೆಗಳು ಉತ್ತಮವಾಗಿದ್ದು, ಕೇಂದ್ರದಲ್ಲಿ ಮೂಲಸೌಕರ್ಯ ಕೊರತೆ ಇದೆ. ಜತೆಗೆ ಸಿಬ್ಬಂದಿ ಸಂಖ್ಯೆ ಹೆಚ್ಚಿಸಿ ತ್ವರಿತ ಸೇವೆ ನೀಡುವಂತಾಗಬೇಕು.
-ಮಲ್ಲಿಕಾರ್ಜುನ್, ಆರ್.ಟಿ.ನಗರ ನಿವಾಸಿ
ಬಿಲ್ ಪಾವತಿ ಸೇವೆ ಉತ್ತಮವಾಗಿದೆ. ಆಧಾರ್ ಮತ್ತು ಆಯುಷ್ಮಾನ್ ಕಾರ್ಡ್ ಸೇರಿದಂತೆ ಇತರ ಸೇವೆಗಳು ತ್ವರಿತವಾಗಿ ದೊರೆಯುವಂತಾಗಬೇಕು. ಯೋಜನೆಗಳ ವಿವರ ನೀಡಬೇಕು.
-ಮಲ್ಲಿಕಾರ್ಜುನ್, ಮಲ್ಲೇಶ್ವರ ನಿವಾಸಿ
* ಜಯಪ್ರಕಾಶ್ ಬಿರಾದಾರ್/ ಹಿತೇಶ್ ವೈ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Bengaluru: ಬಿಷಪ್ ಕಾಟನ್ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್: ಆತಂಕ
Bengaluru: ಮನೆಯ ಬಾಲ್ಕನಿಯಲ್ಲಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ದಂಪತಿ ಬಂಧನ
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
MUST WATCH
ಹೊಸ ಸೇರ್ಪಡೆ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.